ಮಂಗಳೂರು: ಮಂಗಳೂರಿನ ಪುರಾಣ ಪ್ರಸಿದ್ದ, ಐತಿಹಾಸಿಕ ಕದ್ರಿ ದೇಗುಲಕ್ಕೆ(Kadri Shree Manjunatha Temple) ಅಪರಿಚಿತರು ಬೈಕ್‌ನೊಂದಿಗೆ ನುಗ್ಗಿರುವ ಘಟನೆ ನಡೆದಿದೆ. ಮೂವರು ಯುವಕರು ಬೈಕ್ನೊಂದಿಗೆಯೇ ದೇವಾಲಯದ ಆವರಣ ಪ್ರವೇಶಿಸಿದ್ದಾರೆ. ಅನುಮಾನಾಸ್ಪದವಾಗಿ ದೇಗುಲ ಪ್ರವೇಶಿಸಿದವರನ್ನು ಸ್ಥಳೀಯರು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಸೈಗೋಳಿ ನಿವಾಸಿಗಳಾದ ಹಸನ್ ಶಾಹಿನ್, ಜಾಫರ್, ಫಾರೂಕ್‌ನನ್ನು ಕದ್ರಿ ಪೊಲೀಸರಿಗೆ ಒಪ್ಪಿಸಲಾಗಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕದ್ರಿ ಠಾಣೆಯಲ್ಲಿ ವಶಕ್ಕೆ ಪಡೆದಿರುವವರ ತೀವ್ರ ವಿಚಾರಣೆ ನಡೆಯುತ್ತಿದೆ. ಈ ಹಿಂದೆ ಶಂಕಿತ ಉಗ್ರ ಶಾರಿಕ್ ಕದ್ರಿ ದೇಗುಲ ಟಾರ್ಗೆಟ್ ಮಾಡಿದ್ದ. ಕದ್ರಿ ದೇಗುಲದ ಆವರಣದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಲಾಗುತ್ತಿದೆ.
ಕಳೆದ ವರ್ಷ ನಡೆದ ಮಂಗಳೂರು ಆಟೋ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಉಗ್ರ ಶಾರಿಕ್ ತಾನು ಮುಸ್ಲಿಮನಾಗಿದ್ರೂ ತನ್ನ ಕುಕ್ಕೃತ್ಯಗಳನ್ನ ಸಾಧಿಸೋಕೆ ಅಪ್ಪಟ ಹಿಂದೂ ವೇಶ ಹಾಕಿದ್ದ. ಹಿಂದೂಗಳ ರೀತಿ ವೇಷ ಹಾಕಿಕೊಂಡು ಕರಾವಳಿ ಭಾಗದ 3 ಪ್ರಸಿದ್ಧ ದೇವಾಲಯಗಳನ್ನು ಟಾರ್ಗೆಟ್ ಮಾಡಿದ್ದ. ಈ ಪೈಕಿ ಕದ್ರಿಯ ದೇಗುಲವೂ ಒಂದು.
ಇದನ್ನೂ ಓದಿ: ಮೂಡುಶೆಡ್ಡೆ ಮತಗಟ್ಟೆಯಲ್ಲಿ ಮಾರಾಮಾರಿ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಮಂಗಳೂರಿನ ಕದ್ರಿಯ ಮಂಜುನಾಥಸ್ವಾಮಿ ದೇವಸ್ಥಾನದ ಲಕ್ಷ ದೀಪೋತ್ಸವದಲ್ಲಿ ಬಾಂಬ್ ಸ್ಫೋಟಿಸಲು ಶಾರಿಕ್ ಪ್ಲ್ಯಾನ್ ಮಾಡಿದ್ದನಂತೆ. ಕುದ್ರೋಳಿಯಲ್ಲಿರುವ ಗೋಕರ್ಣನಾಥೇಶ್ವರ ದೇಗುಲ ಹಾಗೂ ಮಂಗಳಾದೇವಿ ದೇವಾಲಯಕ್ಕೂ ಸ್ಕೆಚ್ ಹಾಕಿದ್ದ ಎಂಬ ಬಗ್ಗೆ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಶಿವನ ಡಿಪಿ ಬೆನ್ನತ್ತಿದಾಗ ಶಂಕಿತ ಉಗ್ರ ಶಾರಿಕ್ ಸಂಚು ಬಯಲಾಗಿತ್ತು. ಸದ್ಯ ಉಗ್ರ ಶಾರಿಕ್ ಪೊಲೀಸರ ಕಸ್ಟಡಿಯಲ್ಲಿದ್ದಾನೆ.
ಶಂಕಿತ ಉಗ್ರ ಶಾರಿಕ್ನಿಂದ ಹಿಂದೂ ದೇಗುಲಗಳ ಟಾರ್ಗೆಟ್ ವಿಚಾರಕ್ಕೆ ಸಂಬಂಧಿಸಿ ಕದ್ರಿ ಮಂಜುನಾಥ ದೇಗುಲ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರತಿಕ್ರಿಯೆ ನೀಡಿದ್ದು ಮಂಜುನಾಥನ ಶಕ್ತಿ ಅವನ ಕೃತ್ಯಕ್ಕೆ ತಡೆ ನೀಡಿದೆ. ಸ್ಫೋಟ ಸಂಭವಿಸಿದ್ದರೆ ಸಾಕಷ್ಟು ಅಮಾಯಕರಿಗೆ ತೊಂದರೆ ಆಗುತ್ತಿತ್ತು. ಅವನಿಗೆ ಯಾಕೆ ಈ ಮನಸ್ಥಿತಿ ಬಂತೋ ನನಗೆ ಗೊತ್ತಿಲ್ಲ. ಮಂಜುನಾಥನ ಸಾನಿಧ್ಯದಲ್ಲಿ ಅಂತಹ ಅವಘಡ ನಡೆಯಲು ಬಿಡಲ್ಲ. ಇಲ್ಲಿನ ಮಂಜುನಾಥನ ಬೆಳಕಿನಲ್ಲಿ ಕತ್ತಲು ಕವಿಯಲು ಸಾಧ್ಯವಿಲ್ಲ ಎಂದಿದ್ದರು.
ಕದ್ರಿ ದೇಗುಲಕ್ಕೆ ಅಪರಿಚಿತರು ಬೈಕ್‌ನೊಂದಿಗೆ ನುಗ್ಗಿರುವುದರಿಂದ ಹಲವು ಅನುಮಾನಗಳು ವ್ಯಕ್ತವಾಗಿವೆ. ಅಲ್ಲದೆ ದಿ ಕೆರಳಾ ಸ್ಟೋರಿ ಸಿನಿಮಾ, ಚುನಾವಣೆಗಳು ನಡೆದಿರುವುದರಿಂದ ನಾನಾ ಆಯಾಮಗಳಲ್ಲಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಮಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:06 am, Fri, 12 May 23