
ಮಂಗಳೂರು/ಬೆಂಗಳೂರು, ನವೆಂಬರ್ 2: ಆಟೋಗೆ ಕಾರು ಡಿಕ್ಕಿಯಾದ ಪರಿಣಾಮ ನಾಲ್ಕೂವರೆ ವರ್ಷದ ಮಗು ದಾರುಣವಾಗಿ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪರ್ಪುಂಜ ಕೊಯಿಲತ್ತಡ್ಕದಲ್ಲಿ ನಡೆದಿದೆ. ಘಟನೆಯಲ್ಲಿ ಆಟೋ ಚಾಲಕ ಸೇರಿ ಐವರು ಗಾಯಗೊಂಡಿದ್ದು, ಬಸ್ ಓವರ್ಟೇಕ್ ಮಾಡಲು ಹೋಗಿ ಆಟೋಗೆ ಕಾರು ಡಿಕ್ಕಿಯಾಗಿದೆ.
ಸುಳ್ಯ ಕಡೆಯಿಂದ ಪುತ್ತೂರಿನತ್ತ ತೆರಳುತ್ತಿದ್ದ ಕಾರು ಚಾಲಕ ಬಸ್ನ ಓವರ್ಟೇಕ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ಪುತ್ತೂರಿನಿಂದ ತಿಂಗಳಾಡಿ ಕಡೆಗೆ ತೆರಳುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಚಾಲಕ ಹನೀಫ್ ಬನ್ನೂರು ಅವರ ಮಗಳು ಶಜ್ವಾ ಫಾತಿಮಾ ಸಾವನ್ನಪ್ಪಿದ್ದಾಳೆ. ಹನೀಫ್, ಪತ್ನಿ, ಇಬ್ಬರು ಮಕ್ಕಳು ಮತ್ತು ಅತ್ತೆಗೆ ಗಾಯವಾಗಿದ್ದು, ಈ ಪೈಕಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಘಟನೆ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಶಾಂತಿನಗರದಲ್ಲಿ ಭೀಕರ ಅಪಘಾತ: ಬೈಕ್ ಸವಾರರ ಪಾಲಿಗೆ ಯಮನಾದ ಆ್ಯಂಬುಲೆನ್ಸ್
ಹೊಸಕೋಟೆ ನಗರದ ದೊಡ್ಡಕೆರೆ ಏರಿ ಬಳಿಯ ರಸ್ತೆಬದಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಹೆಣ್ಣು ಮಗು ಎಂಬ ಕಾರಣಕ್ಕೆ ರಸ್ತೆ ಬದಿ ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಮೃತಪಟ್ಟ ನವಜಾತ ಶಿಶುವಿನ ಶವವನ್ನು ಆಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹೊಸಕೋಟೆ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ಪುತ್ರನ ಸಾವಿನ ನಡುವೆಯೂ ದಾವಣಗೆರೆಯಲ್ಲಿ ತಾಯಿಯೊಬ್ಬರು ಸಾರ್ಥಕತೆ ಮೆರೆದಿದ್ದಾರೆ. ಬೈಕ್ ಅಪಘಾತದಲ್ಲಿ ಅ. 24ರಂದು ತೀವ್ರ ಗಾಯಗೊಂಡಿದ್ದ ನ್ಯಾಮತಿ ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಎನ್. ಕಿರಣ್ (24) ಮೆದುಳು ನಿಷ್ಕ್ರಿಯಗೊಂಡು ನಿಧನ ಹೊಂದಿದ್ದರು. ಮಗನ ಹೃದಯ, ಕಿಡ್ನಿ, ಲೀವರ್ನ ತಾಯಿ ಉಮಾ ಬೆಂಗಳೂರು ಹೆಚ್ಎಎಲ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಬಳಿಕ ನಿನ್ನೆ ಸಂಜೆ ನ್ಯಾಮತಿ ಪಟ್ಟಣದ ರುದ್ರಭೂಮಿಯಲ್ಲಿ ಕಿರಣ್ ಅಂತ್ಯ ಸಂಸ್ಕಾರ ನಡೆಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:22 am, Sun, 2 November 25