ಕರಾವಳಿ-ಬೆಂಗಳೂರು ವಂದೇ ಭಾರತ್ ಸಂಚಾರ: ಮೊದಲ ದಿನವೇ ಟಿಕೆಟ್ ಸೋಲ್ಡ್‌ಔಟ್; ಗೊಮಟೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಇಲ್ಲ

ಬೆಂಗಳೂರು-ಮಂಗಳೂರು-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ಯಶಸ್ವಿ ವಾಣಿಜ್ಯ ಸಂಚಾರ ಆರಂಭಿಸಿದೆ. ಮೊದಲ ದಿನವೇ ಪ್ರಯಾಣಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರೈಲು ಬಹುತೇಕ ಭರ್ತಿಯಾಗಿ ಸಂಚರಿಸಿದೆ. ಮಡಗಾಂವ್‌ನಿಂದ ಯಶವಂತಪುರಕ್ಕೆ ಸಂಪೂರ್ಣ ಭರ್ತಿಯಾಗಿದೆ. ಇದರ ಜೊತೆಗೆ, ಕರಾವಳಿ ಜನರ ಒತ್ತಾಯದ ಮೇರೆಗೆ ಗೊಮಟೇಶ್ವರ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿಯನ್ನು ಬದಲಿಸದೆ ಹಳೆಯ ಸಮಯದಲ್ಲೇ ಮುಂದುವರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಕರಾವಳಿ-ಬೆಂಗಳೂರು ವಂದೇ ಭಾರತ್ ಸಂಚಾರ: ಮೊದಲ ದಿನವೇ ಟಿಕೆಟ್ ಸೋಲ್ಡ್‌ಔಟ್; ಗೊಮಟೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಇಲ್ಲ
ವಂದೇ ಭಾರತ್​​​ ಎಕ್ಸ್​​​ಪ್ರಸ್​​​

Updated on: Nov 17, 2026 | 10:46 AM

ಮಂಗಳೂರು, ನ,17: ಕರ್ನಾಟಕದ ಕರಾವಳಿ, ಗೋವಾ ಹಾಗೂ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express) ಭಾನುವಾರದಿಂದ ತನ್ನ ಅಧಿಕೃತ ವಾಣಿಜ್ಯ ಸಂಚಾರವನ್ನು ಆರಂಭಿಸಿದೆ. ಕಳೆದ ಶುಕ್ರವಾರವಷ್ಟೇ ಉದ್ಘಾಟನಾ ವಿಶೇಷ ರೈಲು ಸಂಚಾರ ನಡೆಸಿತ್ತು. ವಾಣಿಜ್ಯ ಸಂಚಾರದ ಮೊದಲ ದಿನವೇ ಪ್ರಯಾಣಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕ ಎಲ್ಲಾ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿ ರೈಲು ಭರ್ತಿಯಾಗಿ ಸಂಚರಿಸಿದೆ.

ಯಶವಂತಪುರದಿಂದ ಮಡಗಾಂವ್ (ನಂ. 26655) ಹಾಗೂ ಮಡಗಾಂವ್‌ನಿಂದ ಯಶವಂತಪುರಕ್ಕೆ (ನಂ. 26656) ವಯಾ ಮಂಗಳೂರು ಜಂಕ್ಷನ್ ಮೂಲಕ ವಂದೇ ಭಾರತ್ ಎಕ್ಸ್‌ಪ್ರೆಸ್ ನಿಗದಿತ ಸಮಯಕ್ಕೆ ಸರಿಯಾಗಿ ಸಂಚರಿಸಿದೆ. ಮಾರ್ಗಮಧ್ಯೆ ಕೆಲವು ನಿಲ್ದಾಣಗಳಲ್ಲಿ 5-10 ನಿಮಿಷ ವಿಳಂಬವಾದರೂ, ಮುಂದಿನ ನಿಲ್ದಾಣಗಳಲ್ಲಿ ನಿಗದಿತ ಸಮಯವನ್ನು ಕಾಯ್ದುಕೊಂಡಿರುವುದು ಗಮನಾರ್ಹವಾಗಿದೆ.

Loading...

ಬೆಂಗಳೂರಿನಿಂದ ಆಗಮಿಸಿದ ವಂದೇ ಭಾರತ್ ಮತ್ತು ಮಂಗಳೂರಿನಿಂದ ತೆರಳುತ್ತಿದ್ದ ವೀಕ್ಲಿ ಮಂಗಳೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲಿಗೆ ಘಾಟ್ ಪ್ರದೇಶದ ಕಡಗರವಳ್ಳಿಯಲ್ಲಿ ಕ್ರಾಸಿಂಗ್ ನೀಡಲಾಯಿತು. ಅದೇ ರೀತಿ ಗೊಮಟೇಶ್ವರ ಎಕ್ಸ್‌ಪ್ರೆಸ್ ರೈಲು ಕೂಡ ನಿಗದಿತ ವೇಳಾಪಟ್ಟಿಯಂತೆ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸಿದೆ.

ಮಡಗಾಂವ್‌ನಿಂದ ಯಶವಂತಪುರಕ್ಕೆ ಸಂಚರಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎಲ್ಲಾ ಸೀಟುಗಳು ಸಂಪೂರ್ಣ ಭರ್ತಿಯಾಗಿದ್ದರೆ, ಯಶವಂತಪುರದಿಂದ ಮಡಗಾಂವ್‌ಗೆ ತೆರಳಿದ ರೈಲು ಬಹುತೇಕ ಭರ್ತಿಯಾಗಿ ಕೆಲವೇ ಸೀಟುಗಳು ಬಾಕಿ ಉಳಿದಿದ್ದವು. ರೈಲು ಉಡುಪಿ ನಿಲ್ದಾಣಕ್ಕೆ ಆಗಮಿಸಿದಾಗ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ರೈಲ್ವೆ ಯಾತ್ರಿ ಸಮಿತಿಯವರು ಸಿಹಿ ಹಂಚಿ ಸಂಭ್ರಮಿಸಿದರು.

ಇದನ್ನೂ ಓದಿ: ಪಿಂಕ್ ಲೈನ್ ಮೆಟ್ರೋದಿಂದ ಇತರ ಲೈನ್​ಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಳ: ಬನ್ನೇರುಘಟ್ಟ ರಸ್ತೆಯಲ್ಲಿ ಟ್ರಾಫಿಕ್ ಇಳಿಕೆ

ಕರಾವಳಿ ಪ್ರಯಾಣಿಕರಿಗೆ ಬಿಗ್ ರಿಲೀಫ್: ಗೊಮಟೇಶ್ವರ ಎಕ್ಸ್‌ಪ್ರೆಸ್ ವೇಳಾಪಟ್ಟಿ ಸದ್ಯ ಬದಲಿಲ್ಲ

ವಂದೇ ಭಾರತ್ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ, ಮಂಗಳೂರು-ಬೆಂಗಳೂರು ನಡುವೆ ನಿತ್ಯ ಓಡಾಡುವ ಗೊಮಟೇಶ್ವರ ಎಕ್ಸ್‌ಪ್ರೆಸ್ (ನಂ. 16576) ಹಗಲು ರೈಲಿನ ಸಮಯವನ್ನು ಬೆಳಗ್ಗೆ 7 ಗಂಟೆಯ ಬದಲು 11 ಗಂಟೆಗೆ ಬದಲಾಯಿಸಲು ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿತ್ತು. ಇದಕ್ಕೆ ಕರಾವಳಿ ಭಾಗದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಮಂಗಳೂರು ಭೇಟಿ ವೇಳೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ರೈಲ್ವೆ ಸಂಘಟನೆಗಳ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಎಂಎಲ್‌ಸಿ ಕಿಶೋರ್ ಕುಮಾರ್, ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಗೊಮಟೇಶ್ವರ ಎಕ್ಸ್‌ಪ್ರೆಸ್ ವೇಳಾಪಟ್ಟಿ ಬದಲಾವಣೆಯನ್ನು ರೈಲ್ವೆ ಇಲಾಖೆ ಕೈಬಿಟ್ಟಿದ್ದು, ಹಳೆಯ ಸಮಯದಲ್ಲೇ ಸಂಚಾರ ಮುಂದುವರಿಯಲಿದೆ.

ಘಟ್ಟದ ತಪ್ಪಲು, ಕರಾವಳಿ ಹಾಗೂ ಬಯಲುಸೀಮೆಯ ನಡುವೆ ಆಹ್ಲಾದಕರ ಪ್ರಯಾಣ

ಯಶವಂತಪುರದಿಂದ ಮಡಗಾಂವ್‌ವರೆಗೆ ಸುಮಾರು 850 ಕಿ.ಮೀ. ದೂರವನ್ನು ಕ್ರಮಿಸುವ ಈ ವಂದೇ ಭಾರತ್ ಎಕ್ಸ್‌ಪ್ರೆಸ್, ಹಾಸನ, ಸಕಲೇಶಪುರ, ಮಂಗಳೂರು, ಉಡುಪಿ, ಮುರ್ಡೇಶ್ವರ, ಗೋಕರ್ಣ ಮತ್ತು ಕಾರವಾರದಂತಹ ಪ್ರಮುಖ ನಗರಗಳು ಹಾಗೂ ಪ್ರವಾಸಿ ತಾಣಗಳನ್ನು ಸಂಪರ್ಕಿಸಲಿದೆ. ಯಶವಂತಪುರದಿಂದ ಮಡಗಾಂವ್‌ವರೆಗೆ ಸುಮಾರು 850 ಕಿ.ಮೀ. ದೂರವನ್ನು ಕ್ರಮಿಸುವ ಈ ವಂದೇ ಭಾರತ್ ಎಕ್ಸ್‌ಪ್ರೆಸ್, ಹಾಸನ, ಸಕಲೇಶಪುರ, ಮಂಗಳೂರು, ಉಡುಪಿ, ಮುರ್ಡೇಶ್ವರ, ಗೋಕರ್ಣ ಮತ್ತು ಕಾರವಾರದಂತಹ ಪ್ರಮುಖ ನಗರಗಳು ಹಾಗೂ ಪ್ರವಾಸಿ ತಾಣಗಳನ್ನು ಸಂಪರ್ಕಿಸಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:45 am, Tue, 17 November 26

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us