ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಕಂಡ ಕಳಂಕ ರಹಿತ ಅಪರೂಪದ ನಾಯಕ. ಇಂತಹ ನಾಯಕನ ಬಗ್ಗೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಕೇವಲವಾಗಿ ಮಾತನಾಡುವುದು ಸರಿಯಲ್ಲ. ಸಿದ್ದರಾಮಯ್ಯರಲ್ಲಿ ಕ್ಷಮೆಯಾಚಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಆಗ್ರಹಿಸಿದರು. ಬಿಜೆಪಿಯವರದ್ದು ಜನ ಸಂಕಲ್ಪಯಾತ್ರೆ ಅಲ್ಲ, ಜನ ವಂಚನೆಯಾತ್ರೆ. 40% ಕಮಿಷನ್ ಹಣದಲ್ಲಿ ಬಿಜೆಪಿ ಜನ ಸಂಕಲ್ಪಯಾತ್ರೆ ಮಾಡುತ್ತಿದೆ. ಬಿಜೆಪಿ ನೀಡಿದ್ದ ಆಶ್ವಾಸನೆಯಲ್ಲಿ ಶೇ.9ರಷ್ಟು ಮಾತ್ರ ಈಡೇರಿಸಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡಲು ಬಿಜೆಪಿ ನಾಯಕರಿಗೆ ನೈತಿಕತೆಯಿಲ್ಲ. ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಭಕ್ತರು ಎಚ್ಚರಿಕೆಯಿಂದ ಮಾತಾಡಲಿ. ರಾಹುಲ್ ಗಾಂಧಿಗೆ ಪ್ರಧಾನಿಯಾಗುವ ಅವಕಾಶವಿದ್ದರೂ ಆಗಲಿಲ್ಲ. ಭಾರತ್ ಜೋಡೋ ಯಾತ್ರೆಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಹುಲ್ ಗಾಂಧಿ ಬಗ್ಗೆ ಹಗುರವಾಗಿ ಮಾತಾಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ನಾಯಕರಿಗೆ ಧ್ರುವನಾರಾಯಣ ಆಗ್ರಹಿಸಿದರು.
ಮಾಜಿ, ಹಾಲಿ ಸಿಎಂಗೆ ಸಿದ್ದರಾಮಯ್ಯ ಸವಾಲ್
ಜನಸಂಕಲ್ಪ ಯಾತ್ರೆಗೆ ಹೊರಟಿರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಎರಡೇ ಎರಡು ಸವಾಲು ಹಾಕಿದ್ದಾರೆ. ಕಾರು ಬಿಟ್ಟು ಎಡವದೆ 4 ಕಿ.ಮೀ. ನಡೆದುಕೊಂಡು ಹೋಗಿ. ಸಿದ್ದರಾಮಯ್ಯ ಎಂಬ ಹೆಸರೇಳದೆ 5 ನಿಮಿಷ ಭಾಷಣ ಮಾಡಿ ಎಂದು ಸವಾಲು ಹಾಕಿದ್ದಾರೆ. ಬೊಮ್ಮಾಯಿಗೆ ಏಕಾಂಗಿಯಾಗಿ ಯಾತ್ರೆಗೆ ಹೊರಡುವ ಧೈರ್ಯ ಇಲ್ಲ. ಸಿಎಂ ಬೊಮ್ಮಾಯಿಗೆ ಜನ ಕಲ್ಲು ಹೊಡೆಯುತ್ತಾರೆಂಬ ಭಯ ಇದೆ. ಅದಕ್ಕಾಗಿ ರಕ್ಷಣೆಗೆ ಜೊತೆಯಲ್ಲಿ BSY ಕರೆದುಕೊಂಡು ಬಂದಿದ್ದಾರೆ. #ಬಡಾಯಿ ಬೊಮ್ಮಾಯಿ. ಸಿಎಂ ಸ್ಥಾನವನ್ನು ಕಿತ್ತುಕೊಂಡಾಗ ಬಿಎಸ್ವೈ ಕಣ್ಣೀರು ಹಾಕಿದ್ದರು. ಬಹಿರಂಗವಾಗಿ ಬಿಎಸ್ವೈ ಕಣ್ಣೀರು ಹಾಕಿದ್ದನ್ನು ಜನ ನೋಡಿದ್ದಾರೆ ಎಂದು ಟ್ವೀಟ್ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ಬೆನ್ನಿಗೆ ಇರಿದವರು ಯಾರು ಎನ್ನುವುದೂ ಜನರಿಗೆ ಗೊತ್ತು. ಯಡಿಯೂರಪ್ಪನವರನ್ನು ಕರೆದುಕೊಂಡು ಬಂದ ಕೂಡಲೇ ಜನ ನಿಮ್ಮ ದ್ರೋಹವನ್ನು ಮರೆಯಲಾರರು. ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳುವಂತೆ @BSBommai ಅವರೊಬ್ಬ ‘ಎರಡುವರೆ ಸಾವಿರ ಕೋಟಿ ರೂಪಾಯಿಯ #PayCM’’ ಹೈಕಮಾಂಡ್ಗೆ ಸರಿಯಾಗಿ ಕಂತು ಪಾವತಿಯಾದರೆ ಮಾತ್ರ ಅವರು ಸುರಕ್ಷಿತ. ತಪ್ಪಿದರೆ ಮನೆಗೆ ತಿರುಗೇಟು ನೀಡಿದ್ದಾರೆ.
ವಿಜಯಪುರ ತಲುಪಿದ ಬಿಜೆಪಿ ಜನಸಂಕಲ್ಪ ಯಾತ್ರೆ
ರಾಜ್ಯದಲ್ಲಿ ಬಿಜೆಪಿಯ ಜನಸಂಕಲ್ಪ ಯಾತ್ರೆ ಮುಂದುವರೆದಿದ್ದು, ನಿನ್ನೆ (ಮಂಗಳವಾರ) ರಾಯಚೂರಲ್ಲಿದ್ದ ಬಿಜೆಪಿ ನಾಯಕರು ಇಂದು ವಿಜಯಪುರ ತಲುಪಿದರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಗೋವಿಂದ ಕಾರಜೋಳ ಅವರು ಜಿಲ್ಲೆಯ ಕಮಲಾಪುರದಲ್ಲಿರುವ ದಲಿತರ ಮನೆಗೆ ಭೇಟಿ ಎಲ್ಲಮ್ಮ ಎನ್ನುವವರ ಮನೆಯಲ್ಲಿ ಬೆಳಗಿನ ತಿಂಡಿ ಸೇವಿಸಿದರು. ತಿಂಡಿಯ ರೂಪದಲ್ಲಿ ಗಣ್ಯರಿಗೆ ಈ ಭಾಗದ ಜನಪ್ರಿಯ ತಿಂಡಿಯಾಗಿರುವ ವಗ್ರಾಣಿ (ಸುಸಲಾ ಅಂತಲೂ ಕರೆಸಿಕೊಳ್ಳುವ ಹಸಿ ಮಂಡಕ್ಕಿಯಲ್ಲಿ ಮಾಡುವ ಸ್ವಾದಿಷ್ಟ ತಿಂಡಿ) ಮತ್ತು ಮಿರ್ಚಿ ಭಜ್ಜಿ ನೀಡಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:00 pm, Wed, 12 October 22