ಸ್ವಉದ್ಯೋಗಕ್ಕೆಂದು ಅಗರಬತ್ತಿ ಯಂತ್ರ ಖರೀದಿಸಿದ ದಂಪತಿಗೆ ಕಂಪನಿ ಹೀಗಾ ಮೋಸ ಮಾಡೋದು, ದಂಪತಿ ಪಟ್ಟ ಪಡಿಪಾಟಲು ಏನು?

| Updated By: ಸಾಧು ಶ್ರೀನಾಥ್​

Updated on: Jul 28, 2023 | 1:04 PM

ದೋಷಯುಕ್ತ ಅಗರಬತ್ತಿ ಯಂತ್ರ ಮಾರಿ ಮೋಸ, ಕಂಪನಿಗೆ ದಂಡ ವಿಧಿಸಿದ ಗ್ರಾಹಕರ ಆಯೋಗ, ಗ್ರಾಹಕರಿಗೆ ಪರಿಹಾರ ನೀಡಲು ಆದೇಶ. ಜೊತೆಗೆ ದೂರುದಾರರ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿಯೂ ಪರಿಹಾರ ನೀಡುವಂತೆ ಹುಬ್ಬಳ್ಳಿ ಕಂಪನಿಗೆ ಆಯೋಗ ನಿರ್ದೇಶಿಸಿದೆ.

ಸ್ವಉದ್ಯೋಗಕ್ಕೆಂದು ಅಗರಬತ್ತಿ ಯಂತ್ರ ಖರೀದಿಸಿದ ದಂಪತಿಗೆ ಕಂಪನಿ ಹೀಗಾ ಮೋಸ ಮಾಡೋದು, ದಂಪತಿ ಪಟ್ಟ ಪಡಿಪಾಟಲು ಏನು?
ಅಗರಬತ್ತಿ ಯಂತ್ರ ಖರೀದಿಸಿದ ದಂಪತಿಗೆ ಕಂಪನಿ ಹೀಗಾ ಮೋಸ ಮಾಡೋದು
Follow us on

ಹುಬ್ಬಳ್ಳಿಯ (hubballi) ಉಣಕಲ್‌ನ ಅಂಬಿಕಾ ನಗರ ನಿವಾಸಿ ಸವಿತಾ ಮತ್ತು ಶೈಲೇಂದ್ರ ದಂಪತಿ ಸ್ವಯಂ ಉದ್ಯೋಗಕ್ಕೆಂದು ಹುಬ್ಬಳ್ಳಿಯ ರಾಜೇಂದ್ರ ನಗರದ ಸಾಯಿ ಸರ್ಚ್, ಸಪೋರ್ಟ್ ಕಂಪನಿಯವರಿಂದ 1.51 ಲಕ್ಷ ರೂ ಮೊತ್ತದ 6-ಜಿ ಅಟೋಮೆಟಿಕ್ ಅಗರಬತ್ತಿ ತಯಾರಿಸುವ ಯಂತ್ರವನ್ನು (Agarbatti And Incense Stick Making Machine) ಖರೀದಿಸಿದ್ದರು (consumer). ಯಂತ್ರ ಪಡೆದುಕೊಳ್ಳುವ ಪೂರ್ವದಲ್ಲಿ ತಯಾರಿಸಿದ ಅಗರಬತ್ತಿಗಳನ್ನು ತಾವೇ ಹಣ ಕೊಟ್ಟು ಪಡೆದುಕೊಳ್ಳುವುದಾಗಿಯೂ ಭರವಸೆ ನೀಡಿದ್ದರು. ಆದರೆ, ಯಂತ್ರ ಖರೀದಿಸಿದ ಕೆಲವೇ ತಿಂಗಳಲ್ಲಿ ದೋಷ ಉಂಟಾಗಿತ್ತು. ಅಲ್ಲದೆ ದೂರುದಾರರು ತಯಾರಿಸಿದ ಅಗರಬತ್ತಿಗಳ ಹಣವನ್ನು ಎದುರುದಾರ ಕಂಪನಿಯವರು ಸಕಾಲಕ್ಕೆ ಕೊಡದೇ ಸತಾಯಿಸುತ್ತಿದ್ದರು (cheat). ಈ ಹಿನ್ನೆಲೆಯಲ್ಲಿ ಸವಿತಾ-ಶೈಲೇಂದ್ರ ದಂಪತಿ ಗ್ರಾಹಕರ ನ್ಯಾಯಾಲಯದಲ್ಲಿ (Consumer Disputes Redressal Commission) ಕಂಪನಿ ವಿರುದ್ಧ ದೂರು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ಅವರ ನ್ಯಾಯಪೀಠವು ಅಗರಬತ್ತಿ ತಯಾರಿಸುವ ಯಂತ್ರ ಖರೀದಿಸಿದ ವರ್ಷದೊಳಗೆ ದೋಷ ಕಂಡು ಬಂದಿದೆ. ಆ ಬಗ್ಗೆ ದೂರಿದರೂ ಕಂಪನಿಯವರು ದೋಷ ಸರಿಪಡಿಸಲು ಕ್ರಮ ಕೈಗೊಳ್ಳದೇ ನುಣುಚಿಕೊಂಡಿದ್ದಾರೆ.

ಆದ್ದರಿಂದ ಸ್ವಯಂ ಉದ್ಯೋಗಕ್ಕೆಂದು ಖರೀದಿಸಿದ್ದ ಯಂತ್ರದ ಮೌಲ್ಯ ರೂ. 1.51 ಲಕ್ಷ ಮತ್ತು ಅಗರಬತ್ತಿ ಮಾರಿದ ಹಣ ರೂ. 12,495 ಸೇರಿ ಒಟ್ಟು ರೂ. ರೂ. 1.64 ಲಕ್ಷ ಮತ್ತು ಅದರ ಮೇಲೆ ಶೇ. 8 ರಂತೆ ಬಡ್ಡಿ ಲೆಕ್ಕ ಹಾಕಿ ಹಣ ಸಂದಾಯ ಮಾಡಲು ಆದೇಶಿಸಿದೆ.

ಜೊತೆಗೆ ದೂರುದಾರರ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ರೂ‌ 25,000 ಪರಿಹಾರ ಹಾಗೂ ರೂ. 10,000 ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಕಂಪನಿಗೆ ಆಯೋಗ ನಿರ್ದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.