ಹುಬ್ಬಳ್ಳಿ: ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಇಂಡಿಗೋ ವಿಮಾನದ ಟೈರ್ ಪಂಕ್ಚರ್ ಆಗಿದೆ. ಪ್ರಮಾದದಲ್ಲಿ ಯಾವುದೇ ಪ್ರಯಾಣಿಕರಿಗಾಗಲಿ ಅಥವಾ ಸಿಬ್ಬಂದಿಗಾಗಲಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಕಣ್ಣೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಇಂಡಿಗೋ ಎಟಿಆರ್ 6ಇ-7979 ವಿಮಾನವು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಸೋಮವಾರ ರಾತ್ರಿ ಇಳಿಯುವಾಗ ಟೈರ್ ಪಂಕ್ಚರ್ ಆಗಿದೆ. ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಎಲ್ಲ ಪ್ರಯಾಣಿಕರನ್ನು ತಕ್ಷಣ ಸುರಕ್ಷಿತವಾಗಿ ಇಳಿಸಲಾಯಿತು. ಮಂಗಳವಾರ ಬೆಳಗಿನ ಜಾವ 2 ಗಂಟೆಯ ವೇಳೆಗೆ ರನ್ವೇ ಅನ್ನು ಮತ್ತೆ ಸಿದ್ಧಗೊಳಿಸಲಾಗಿದೆ. ವಿಮಾನವನ್ನು ನಿರ್ವಹಣೆ ಚೆಕ್ ಅಪ್ಗಾಗಿ ಬಿಡಲಾಗಿದೆ ಎಂದು ಇಂಡಿಗೋ ಏರ್ಲೈನ್ಸ್ ಸಂಸ್ಥೆಯ ಅಧಿಕಾರಿಗಳು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಸೋಮವಾರ ರಾತ್ರಿ ಇಂಡಿಗೋ ಎಟಿಆರ್ 6ಇ-7979 ವಿಮಾನವು ಮೊದಲು 8 ಗಂಟೆ 3 ನಿಮಿಷಕ್ಕೆ ಇಳಿಯಲು ಯತ್ನಿಸಿತು. ಆದರೆ ಭಾರೀ ಪ್ರಮಾಣದಲ್ಲಿ ಅಡ್ಡ ಗಾಳಿ ಬೀಸಿದಾಗ ವಿಮಾನ ಇಳಿಯುವುದು ಸಾಧ್ಯವಾಗದೇ ಹೋಯಿತು. ತಕ್ಷಣವೇ ಮತ್ತೆ ಮೇಲಕ್ಕೆ ಹಾರಿದ ವಿಮಾನ ಆಗಸದಲ್ಲಿ ಸುತ್ತು ಹಾಕತೊಡಗಿತು. ಮತ್ತೆ 8 ಗಂಟೆ 35 ನಿಮಿಷಕ್ಕೆ ಇಳಿಯಿತು. ವೇಗವಾಗಿ ಇಳಿದಿದ್ದರೆ ಪರಿಣಾಮ ಮತ್ತು ಜೋರು ಗಾಳಿಯಿಂದಾಗಿ ವಿಮಾನದ ಟೈರೊಂದು ಸಿಡಿಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹುಬ್ಬಳ್ಳಿ ನಿಲ್ದಾಣದಲ್ಲಿ ವಿಮಾನ ಸಂಚಾರ ಈಗ ಮೊದಲಿನಂತಿದ್ದು, ಪ್ರಕರಣವನ್ನು ಎಟಿಎಸ್ ಗಮನಕ್ಕೆ ತರಲಾಗಿದೆ ಎಂದೂ ಅವರು ಹೇಳಿದ್ದಾರೆ.
(Hubballi-bound Indigo plane from kannur Tyre Bursts While Landing in Hubballi airport Passengers and crew Safe)
Published On - 1:08 pm, Tue, 15 June 21