ಹುಬ್ಬಳ್ಳಿ: ವಾಹನಗಳ ನಂಬರ್ ಪ್ಲೇಟ್ ಮೇಲೆ ಏನೇನೋ ಬರೆಸುವವರು ಅನೇಕರು ಇರುತ್ತಾರೆ. ನಿಯಮಗಳ ಪ್ರಕಾರ ಆ ರೀತಿ ಬರೆದುಹಾಕುವಂತಿಲ್ಲ. ಆದರೆ, ಧಾರವಾಡದಲ್ಲೊಬ್ಬರು (Dharawad) ವ್ಯಕ್ತಿ ದ್ವಿಚಕ್ರ ವಾಹನದ ಹಿಂಭಾಗದಲ್ಲಿ ನೋಂದಣಿ ಸಂಖ್ಯೆ ಬದಲಿಗೆ ಡಿಫೆಕ್ಟಿವ್ ನಂಬರ್ ಪ್ಲೇಟ್ ಹಾಕಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅವರಿಗೆ ಹುಬ್ಬಳ್ಳಿ ಧಾರವಾಡ ಪೊಲೀಸರು ನೋಟಿಸ್ ಅನ್ನೂ ನೀಡಿದ್ದಾರೆ. ವಿಷಯ ಅದಲ್ಲ. ನಂಬರ್ ಪ್ಲೇಟ್ ಮೇಲೆ ಏನೇನೋ ಬರೆಯಬೇಡಿ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸಲು ಅನುಸರಿಸಿರುವ ವಿಭಿನ್ನ ವಿಧಾನ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಧಾರವಾಡದ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದ ಹಿಂಬದಿಯಲ್ಲಿ ನೋಂದಣಿ ಸಂಖ್ಯೆ ಬದಲಿಗೆ ‘ನನ್ನಾಕಿ’ ಎಂದು ಬರೆದಿದ್ದಾರೆ. ಇದನ್ನು ಗಮನಿಸಿದ ಧಾರವಾಡ ಪೊಲೀಸರು ದ್ವಿಚಕ್ರ ವಾಹನ ವಶಪಡಿಸಿಕೊಂಡು ನೋಟಿಸ್ ಜಾರಿ ಮಾಡಿದ್ದಾರೆ.
ನಂತರ ದ್ವಿಚಕ್ರ ವಾಹನ ಹಾಗೂ ಆರೋಪಿಯ ಫೋಟೊವನ್ನು ಹುಬ್ಬಳ್ಳಿ ಧಾರವಾಡ ಸಿಟಿ ಪೊಲೀಸ್ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಬೈಕ್ ನಂಬರ್ ಪ್ಲೇಟ್ ಜಾಗದಲ್ಲಿರುವ ಬರಹವನ್ನು ಅಳಿಸಿ ನೋಂದಣಿ ಸಂಖ್ಯೆ ಹಾಕಿಸಿರುವ ಫೋಟೊವನ್ನೂ ಪೋಸ್ಟ್ ಮಾಡಿದ್ದು, ಜತೆಗೆ ಬರಹವೊಂದನ್ನೂ ಪೋಸ್ಟ್ ಮಾಡಿದ್ದಾರೆ.
ಹುಬ್ಬಳ್ಳಿ ಧಾರವಾಡ ಸಿಟಿ ಪೊಲೀಸ್ ಫೇಸ್ಬುಕ್ ಪೇಜ್ನಲ್ಲಿ ಬರೆದಿರುವ ಬರಹ ಹೀಗಿದೆ;
‘ನನ್ನಾಕಿ…
ಹೃದಯದಲ್ಲಿರಲಿ…
ಗಾಡಿ ನಂಬರ್ ಪ್ಲೇಟ್ ಮೇಲಲ್ಲ..
ಡಿಫೆಕ್ಟಿವ್ ನಂಬರ್ ಪ್ಲೇಟ್ ಹಾಕಿ ಸಂಚರಿಸುತ್ತಿದ್ದ ಬೈಕ್ ಅನ್ನು ಧಾರವಾಡ ಸಂಚಾರ ಪೊಲೀಸರು ವಶಪಡಿಸಿಕೊಂಡು ಕೋರ್ಟ್ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮ ಜರುಗಿಸಿದ್ದು, ಬೈಕ್ಗೆ ನಂಬರ್ ಪ್ಲೇಟ್ ಹಾಕಿಸಿ ಸವಾರನಿಗೆ ಕಾನೂನು ತಿಳುವಳಿಕೆ ಹೇಳಲಾಗಿರುತ್ತದೆ’ ಎಂದು ಫೇಸ್ಬುಕ್ ಪೇಜ್ನಲ್ಲಿ ಬರೆಯಲಾಗಿದೆ.
ಸದ್ಯ ಈ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ