ಹುಬ್ಬಳ್ಳಿ, ಅ.11: ಉತ್ತರ ಕರ್ನಾಟಕ ಜನರ ಪ್ರಮುಖ ಆಹಾರವಾಗಿರುವ ಜೋಳದ ರೊಟ್ಟಿಗೂ (Sorghum) ಬರದ ಎಫೆಕ್ಟ್ ತಟ್ಟಿದೆ. ಉತ್ತರ ಕರ್ನಾಟಕ ಮಂದಿಗೆ ಜೋಳದ ಖಡಕ್ ರೊಟ್ಟಿ, ಬಿಸಿ ರೊಟ್ಟಿ ಇಲ್ಲ ಅಂದ್ರೆ ಊಟನೇ ಸಂಪೂರ್ಣ ಎನಿಸದ್ದು, ಅಲ್ಲಿನ ಸಂಪ್ರದಾಯಿಕ ಖಾದ್ಯವಾಗಿ ಜೋಳದ ರೊಟ್ಟಿ ಗುರುತಿಸಿಕೊಂಡಿದೆ. ಅಲ್ಲದೆ ಅಲ್ಲಿಯ ಮುಖ್ಯ ಬೆಳೆ ಕೂಡ ಜೋಳ ಹಾಗೂ ಸೆಜ್ಜೆ. ಆದರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟು ರಾಜ್ಯದಲ್ಲಿ ಬರ (Drought) ಆವರಿಸಿದೆ. ಈ ಪರಿಣಾಮ ಉತ್ತರ ಕರ್ನಾಟಕದ ಜನರ ರೊಟ್ಟಿ ಪ್ರೀತಿಗೂ ಬರೆ ಬಿದ್ದಿದೆ.
ಪ್ರಸಕ್ತ ವರ್ಷದಲ್ಲಿ ‘ಹಸಿರು ಬರ’ ಆವರಿಸಿದ್ದು ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಉತ್ತರ ಕರ್ನಾಟಕ ಭಾಗದ ಪ್ರಮುಖ ಆಹಾರ ಧಾನ್ಯ ಜೋಳ ಬೆಲೆ ಏರಿಕೆಯಾಗಿದೆ. ಜೋಳದ ಬೆಲೆ ಶೇ.30ರಷ್ಟು ಏರಿಕೆಯಾಗಿರುವುದರಿಂದ ಖಾನಾವಳಿಯಲ್ಲಿ ಸಹಜವಾಗಿ ಊಟದ ಬೆಲೆ ಮೊದಲು ಇದ್ದ ಬೆಲೆಗಿಂತ 10 ರೂಪಾಯಿ ಜಾಸ್ತಿಯಾಗಿದೆ. ಒಂದು ರೊಟ್ಟಿ ಊಟಕ್ಕೆ ಸಾಮಾನ್ಯ ಖಾನಾವಳಿಗಳಲ್ಲೇ 90-100 ರೂ ಆಗಿದೆ. ಇದರಿಂದ ಖಾನಾವಳಿಗಳ ವ್ಯಾಪಾರದ ಮೇಲೂ ಹೊಡೆತ ಬೀಳುತ್ತಿದೆ. ಜೊತೆಗೆ ಜೋಳ ಉತ್ಪಾದನೆ ಕಡಿಮೆ ಆದ ಕಾರಣ ಜೋಳದಲ್ಲೂ ಉತ್ತಮ ಮಧ್ಯಮ ಕ್ವಾಲಿಟಿ ಜೋಳ ಮಿಶ್ರಣ ಮಾಡಿ ಮಾರಾಟ ಮಾಡುವ ಆತಂಕವಿದೆ. ಇದರಿಂದ ನಮಗೆ ಉತ್ತಮ ಕ್ವಾಲಿಟಿ ರೊಟ್ಟಿ ಕೊಡೋದಕ್ಕೆ ಕಷ್ಟವಾಗುತ್ತದೆ ಎಂದು ಖಾನಾವಳಿ ಮಾಲೀಕರರು ತಿಳಿಸಿದ್ದಾರೆ. ಕೆಲವು ಖಾನಾವಳಿಗಳು ರೊಟ್ಟಿಯ ಗಾತ್ರವನ್ನು ಕಡಿಮೆ ಮಾಡಲು ಯೋಜಿಸುತ್ತಿದ್ದಾರೆ. ಇನ್ನೊಂದೆಡೆ ನ್ಯಾಯಬೆಲೆ ಅಂಗಡಿಗಳಲ್ಲಿ ಜೋಳ ನೀಡಬೇಕೆಂಬ ಬೇಡಿಕೆ ಹೆಚ್ಚುತ್ತಿದೆ. ಇಂದಿರಾ ಕ್ಯಾಂಟೀನ್‌ಗಳಲ್ಲಿ ಜೋಳದ ರೊಟ್ಟಿಯನ್ನು ಪರಿಚಯಿಸಲು ಜನರು ಒತ್ತಾಯಿಸುತ್ತಿದ್ದಾರೆ.
ಹುಬ್ಬಳ್ಳಿಯ ಎಪಿಎಂಸಿಯ ಆಹಾರಧಾನ್ಯ ವ್ಯಾಪಾರಿ ಕಿಶೋರ್ ಮಾತನಾಡಿ, ಕಳೆದ ಎರಡು ತಿಂಗಳಲ್ಲಿ ದೇಶೀಯ ತಳಿಯ ಬಾರ್ಸಿಯ ಬೆಲೆ 15 ರೂ. ವರೆಗೆ ಏರಿಕೆ ಕಂಡಿದೆ. ಪ್ರತಿ ಕೆಜಿಗೆ 50 ರೂ.ಗೆ ಮಾರಾಟವಾಗುತ್ತಿತ್ತು. ಈಗ ಬೆಲೆ 60-65 ರೂ.ಗೆ ಏರಿದೆ. ಹೈಬ್ರಿಡ್ ಜೋಳದ ಬೆಲೆ ಕೆಜಿಗೆ 30 ರೂ. ಇದ್ದು ಈಗ 40-45 ರೂ.ಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಉತ್ತರಕರ್ನಾಟಕ ರೊಟ್ಟಿ ಪ್ರೀಯರು ನೆಮ್ಮದಿಯಿಂದ ರೊಟ್ಟಿ ಕೂಡ ತಿನ್ನದಂತಾಗಿದೆ. ಮಳೆ ಕೈಕೊಟ್ಟ ಹಿನ್ನೆಲೆ ಜೋಳದ ಆವಕದಲ್ಲಿ ಬಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದರಿಂದ ಜೋಳದ ಬೆಲೆ ಒಂದು ಕೆಜಿಗೆ 60-65 ರೂಗೆ ಏರಿದೆ. ಗ್ರಾಹಕರ ಬೇಡಿಕೆಯಷ್ಟು ಜೋಳ ಸಿಗುತ್ತಿಲ್ಲ. ಜೋಳ ಬೆಳೆದ ರೈತರು ತಮ್ಮ ಮನೆಗೆಂದು ಜೋಳ ಇಟ್ಟುಕೊಂಡಿದ್ದು ಮಾರೋದಿಲ್ಲ ಅಂತಿದ್ದಾರೆ. ಇದರಿಂದ ಗ್ರಾಹಕರ ಬೇಡಿಕೆಯಷ್ಟು ಕೊಡೋದಕ್ಕೆ ಆಗುತ್ತಿಲ್ಲ.
ಇದನ್ನೂ ಓದಿ: ಮಳೆ ನಂಬಿ ಜೋಳ ಬೆಳೆದ ರೈತರು ಕಂಗಾಲು; ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರ ಮನವಿ
ಇನ್ನು ಮತ್ತೊಂದೆಡೆ ಒಂದು ಜೋಳದ ರೊಟ್ಟಿಯನ್ನು 6 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಅದನ್ನು 10 ರೂ.ಗೆ ಹೆಚ್ಚಿಸಿದ್ದಾರೆ ಎಂದು ವಿದ್ಯಾನಗರ ಹುಬ್ಬಳ್ಳಿಯ ಖಾನಾವಳಿ ಮಾಲೀಕರೊಬ್ಬರು ಹೇಳಿದರು. ಬರಗಾಲದಿಂದಾಗಿ ರೈತರು ತಮ್ಮ ದೈನಂದಿನ ಅಗತ್ಯಗಳಿಗೆ ಜೋಳವನ್ನು ಮಾರಾಟ ಮಾಡುತ್ತಿಲ್ಲ. ಹಾಗಾಗಿ ಮಾರುಕಟ್ಟೆಯಿಂದ ಖರೀದಿಸುತ್ತಿದ್ದೇವೆ. ಮಾರುಕಟ್ಟೆಗೆ ಜೋಳದ ಪೂರೈಕೆಯೂ ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯ ಬಸವೇಶ್ವರ ಖಾನಾವಳಿ ಮಾಲಕ ಅಪ್ಪಣ್ಣ ನದಾಫ್ ಮಾತನಾಡಿ, ಜುಲೈ-ಆಗಸ್ಟ್ ನಲ್ಲಿ ಜೋಳವನ್ನು ಕೆಜಿಗೆ 35 ರೂ.ಗೆ ಖರೀದಿಸುತ್ತಿದ್ದೇವು. ಈಗ ಬೆಲೆ 60 ರೂ. ಆದ್ದರಿಂದ, ನಾವು ಒಂದೇ ರೊಟ್ಟಿಯ ಬೆಲೆಯನ್ನು 5-6 ರೂ.ನಿಂದ 10 ರೂ.ಗೆ ಹೆಚ್ಚಿಸಿದ್ದೇವೆ ಎಂದು ಅವರು ಹೇಳಿದರು.
ಬಾಗಲಕೋಟೆಯ ನವನಗರದ ಖಾನಾವಳಿ ಮಾಲೀಕರೊಬ್ಬರು, ರೊಟ್ಟಿಗಳ ಗಾತ್ರವನ್ನು ಕಡಿಮೆ ಮಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದರು. ನಾವು ದರವನ್ನು ಹೆಚ್ಚಿಸಿದರೆ, ಈಗಾಗಲೇ ಬರಗಾಲದಿಂದ ಸಂತ್ರಸ್ತರಾಗಿರುವ ಗ್ರಾಮೀಣ ಜನರು ಅದನ್ನು ಭರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ನಮ್ಮ ಕರ್ನಾಟಕ ಸೇನೆಯ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ಅಮೃತ್ ಇಜಾರಿ ಮಾತನಾಡಿ, ತಮ್ಮ ಕೆಲಸಗಳಿಗಾಗಿ ನಗರಗಳಿಗೆ ಭೇಟಿ ನೀಡುವ ಬಡವರಿಗೆ ಸಹಾಯ ಮಾಡಲು ಇಂದಿರಾ ಕ್ಯಾಂಟೀನ್‌ಗಳಲ್ಲಿ ರೊಟ್ಟಿಯನ್ನು ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಬಡವರು ಮನೆಯಲ್ಲೇ ರೊಟ್ಟಿ ತಯಾರಿಸುವಂತಾಗಲು ನ್ಯಾಯಬೆಲೆ ಅಂಗಡಿಗಳಿಗೂ ಜೋಳವನ್ನು ಪೂರೈಸಬೇಕು ಎಂದು ಅವರು ಹೇಳಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ