
ಧಾರವಾಡ, ಡಿಸೆಂಬರ್ 03: ರಾಜ್ಯದಲ್ಲಿ ಸರಕಾರಿ ಉದ್ಯೋಗಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೂ, ಅದಕ್ಕೆ ಪೂರಕವೆಂಬ ರೀತಿ ನೇಮಕಾತಿಗಳು ನಡೆಯುತ್ತಿಲ್ಲ.ಇದರಿಂದಾಗಿ ಸರಕಾರಿ ಹುದ್ದೆ ಕನಸಿಟ್ಟುಕೊಂಡು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿರೋ ಯುವಕ-ಯುವತಿಯರು ನಿರಾಸೆ ಅನುಭವಿಸುತ್ತಿದ್ದಾರೆ. ಹೀಗಾಗಿ ಇತ್ತೀಚಿಗೆ ಉದ್ಯೋಗ ಆಕಾಂಕ್ಷಿಗಳ ಪ್ರತಿಭಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಇವುಗಳಿಗೆ ವಿದ್ಯಾಕಾಶಿ ಎಂದು ಕರೆಸಿಕೊಳ್ಳುವ ಧಾರವಾಡವೇ ವೇದಿಕೆಯಾಗಿ ಮಾರ್ಪಟ್ಟಿದೆ. ಅಷ್ಟಕ್ಕೂ ಇಲ್ಲೇ ಯಾಕೆ ಹೆಚ್ಚು ಹೋರಾಟಗಳು ನಡೆಯುತ್ತಿವೆ ಎಂಬುದನ್ನು ವಿಶ್ಲೇಷಿಸಿದಾಗ ಒಂದಿಷ್ಟು ಪ್ರಮುಖ ವಿಚಾರಗಳನ್ನು ನಾವು ಉಲ್ಲೇಖಿಸಬಹುದು.
ಕಳೆದ ಸೆಪ್ಟೆಂಬರ್ 25ರಂದು ಧಾರವಾಡದಲ್ಲಿ ನಡೆದಿದ್ದ ದೊಡ್ಡ ಪ್ರತಿಭಟನೆಯೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಇದುವರೆಗೂ ಧಾರವಾಡದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಪ್ರತಿಭಟನೆ ನಡೆದಿರಲಿಲ್ಲ. ಸುಮಾರು 8 ರಿಂದ 10 ಸಾವಿರ ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದರು. ರಾಜ್ಯದಲ್ಲಿ ಒಟ್ಟು 2.84 ಲಕ್ಷ ಹುದ್ದೆಗಳು ಖಾಲಿ ಇವೆ. ಇವುಗಳನ್ನು ತುಂಬಿದರೆ ಉದ್ಯೋಗಾಕಾಂಕ್ಷಿಗಳೊಂದಿಗೆ ಸರಕಾರಕ್ಕೂ ಸಾಕಷ್ಟು ಅನುಕೂಲವಾಗುತ್ತೆ. ರಾಜ್ಯ ಆರ್ಥಿಕ ಇಲಾಖೆಯಲ್ಲಿನ 9,536 ಹುದ್ದೆಗಳು ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಹುದ್ದೆಗಳು ಖಾಲಿ ಇವೆ. ಪೊಲೀಸ್ ನೇಮಕಾತಿ ಹೆಚ್ಚಿಸದ ಕಾರಣ ನೌಕರಿ ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳಿವೆ. ಉನ್ನತ ಶಿಕ್ಷಣ ಇಲಾಖೆ ನೇಮಕಾತಿ ವಿಚಾರವಾಗಿ ಸಚಿವರು ನ್ಯಾಯಾಲಯದ ಆದೇಶವನ್ನೂ ಪಾಲಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.
ಇದನ್ನೂ ಓದಿ: ಸರ್ಕಾರಿ ಶಾಲೆಗಳ ಎಲ್ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಇನ್ಮುಂದೆ ಸಿಗಲಿದೆ ಮೊಟ್ಟೆ, ಹಾಲು, ಬಾಳೆಹಣ್ಣು
ಇದೇ ರೀತಿಯ ಮತ್ತೊಂದು ಹೋರಾಟಕ್ಕೆ ಡಿ. 1ರಂದು ಕರೆ ನೀಡಲಾಗಿತ್ತು. ಜನಸಾಮಾನ್ಯರ ವೇದಿಕೆ ಹಾಗೂ ಇತರ ಸಂಘಟನೆಗಳ ನೇತೃತ್ವದಲ್ಲಿ ಸುಮಾರು 30 ಸಾವಿರ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಸಿದ್ಧತೆ ನಡೆದಿತ್ತು. ಆದರೆ ಹಿಂದೆ ನಡೆದಿದ್ದ ಪ್ರತಿಭಟನೆ ವೇಳೆ ನಡೆದಿದ್ದ ಕೆಲ ಅಹಿತರಕರ ಘಟನೆಗಳ ನೆಪವಿಟ್ಟುಕೊಂಡು ಪೊಲೀಸರು ಸಂಘಟಕರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಈ ವೇಳೆ ಸಂಘಟಕರು ನೀಡಿದ ಉತ್ತರಗಳು ಸಮರ್ಪಕವಾಗಿಲ್ಲ ಎಂದು ಹೇಳಿ ಹೋರಾಟಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಇದನ್ನೇ ಸವಾಲಾಗಿ ಸ್ವೀಕರಿಸಿ, ನಗರದ ಶ್ರೀನಗರ ವೃತ್ತದ ಬಳಿಯಿಂದ ಹೋರಾಟಕ್ಕೆ ಮುಂದಾಗಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಘಟನೆ ಬಳಿಕ ಧಾರವಾಡದಲ್ಲಿಯೇ ಏಕೆ ಇಷ್ಟೊಂದು ಉದ್ಯೋಗಾಕಾಂಕ್ಷಿಗಳು ಇದ್ದಾರೆ ಎನ್ನುವುದರ ಬಗ್ಗೆಯೂ ಚರ್ಚೆಗಳು ಶುರುವಾಗಿವೆ. ಅಸಲಿಗೆ ಇದರ ಹಿಂದೆ ಇರೋದು ವಿದ್ಯಾಕಾಶಿಯಲ್ಲಿರೋ ಕೋಚಿಂಗ್ ಸೆಂಟರ್ಗಳು.
ಧಾರವಾಡ ನಗರದ ಸಪ್ತಾಪುರ, ಜಯನಗರ, ಶ್ರೀನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಕೋಚಿಂಗ್ ಸೆಂಟರ್ಗಳಿವೆ. ಈ ಕೋಚಿಂಗ್ ಸೆಂಟರ್ಗಳಿಗೆ ಅನುಗುಣವಾಗಿ ಪಿಜಿಗಳು ಕೂಡ ಸಾವಿರಾರು ಸಂಖ್ಯೆಯಲ್ಲಿವೆ. ನಾಡಿನ ವಿವಿಧ ಕಡೆಗಳಿಂದ ಬರೋ ಸಾವಿರಾರು ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಇಲ್ಲಿಯೇ ನೆಲಸಿ, ಕೋಚಿಂಗ್ ಸೆಂಟರ್ಗಳಲ್ಲಿ ತರಬೇತಿ ಪಡೆಯುತ್ತಾರೆ. ಇವುಗಳ ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ಹಾಗೂ ಹುಬ್ಬಳ್ಳಿಯಲ್ಲಿ ಕಾನೂನು ವಿಶ್ವವಿದ್ಯಾಲಯಗಳಿವೆ. ಹಲವು ಖಾಸಗಿ ಯೂನಿವಸರ್ಸಟಿಗಳೂ ಇವೆ. ಹಲವಾರು ವರ್ಷಗಳಿಂದ ಧಾರವಾಡದಲ್ಲಿ ಇದ್ದುಕೊಂಡು, ತಿಂಗಳಿಗೆ ಕನಿಷ್ಠ ಏಳೆಂಟು ಸಾವಿರ ರೂಪಾಯಿ ಖರ್ಚು ನಿಭಾಯಿಸುತ್ತಿರೋ ವಿದ್ಯಾರ್ಥಿಗಳ ಆಕ್ರೋಶ ಇತ್ತೀಚೆಗೆ ಆಗಾಗ ಸ್ಫೋಟಿಸುತ್ತಲೇ ಇದೆ. ಹೀಗಾಗಿ ಇಲ್ಲಿ ಪ್ರತಿಭಟನೆ ನಡೆಸಿದರೆ ಒಂದೇ ಕರೆಗೆ ಸಾವಿರಾರು ಯುವಕರು ಸುಲಭವಾಗಿ ಒಂದೆಡೆ ಸೇರುತ್ತಾರೆ. ಒಂದು ಅಂದಾಜಿನ ಪ್ರಕಾರ ಧಾರವಾಡದಲ್ಲಿ ಸುಮಾರು 80 ಸಾವಿರ ಉದ್ಯೋಗಾಕಾಂಕ್ಷಿಗಳಿದ್ದಾರೆ. ಅವರೆಲ್ಲ ಬಹುತೇಕ ಹೊರಗಿನ ಜಿಲ್ಲೆಗಳಿಂದ ಬಂದವರು ಅನ್ನೋದಿಲ್ಲಿ ಗಮನಾರ್ಹ.
ಇದನ್ನೂ ಓದಿ: ಶಾಲೆಗಳ ಸುತ್ತಮುತ್ತ ಬೀದಿ ನಾಯಿ ಉಪಟಳ ತಡೆಯಲು ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ವಿಳಂಬ ಆಗ್ತಿರೋದು ಉದ್ಯೋಗಾಂಕ್ಷಿಗಳ ಮೇಲೆ ಮಾತ್ರವಲ್ಲದೆ ಇತರರ ಮೇಲೂ ಪರಿಣಾಮ ಬೀರುತ್ತಿದೆ. ಒಂದು ವೇಳೆ ಸರಕಾರ ಹುದ್ದೆಗಳಿಗೆ ಅರ್ಜಿ ಕರೆಯದಿದ್ದರೆ ಕೋಚಿಂಗ್ ಸೆಂಟರ್ಗಳಿಗೆ ಯಾರೂ ಬರಲ್ಲ. ಹೀಗಾಗಿ ಅವುಗಳು ನಿಧಾನವಾಗಿ ತಮ್ಮ ಕಾರ್ಯವನ್ನು ಸ್ಥಗಿತಗೊಳಿಸುತ್ತವೆ. ಹೀಗೆ ಅವರು ಸ್ಥಗಿತಗೊಂಡರೆ ಪೇಯಿಂಗ್ ಗೆಸ್ಟ್ಗಳು ಕೂಡ ಕಣ್ಣು ಮುಚ್ಚುತ್ತವೆ. ಇದರೊಂದಿಗೆ ಈ ಪ್ರದೇಶದಲ್ಲಿನ ಹೋಟೆಲ್, ಬುಕ್ ಸ್ಟಾಲ್ ಸೇರಿದಂತೆ ಅನೇಕ ಅಂಗಡಿಗಳು ನಷ್ಟ ಅನುಭವಿಸುತ್ತವೆ. ಇವೆಲ್ಲ ಒಂದರ ಮೇಲೊಂದು ಅವಲಂಬಿತವಾಗಿರೋ ವ್ಯಾಪಾರಗಳು.
ಇನ್ನು ಈ ಬಗ್ಗೆ ಟಿವಿ9 ಡಿಜಿಟಲ್ ಜೊತೆಗೆ ಮಾತನಾಡಿದ ಧಾರವಾಡದ ಕರ್ನಾಟಕ ಕ್ಲಾಸಿಕ್ ಎಜುಕೇಶನ್ ಪ್ರೈವೇಟ್ ಲಿಮಿಟೆಡ್ ಮಾಲಿಕ ಲಕ್ಷ್ಮಣ ಉಪ್ಪಾರ್, ಸರ್ಕಾರ ಹಲವಾರು ವರ್ಷಗಳಿಂದ ಯಾವುದೇ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಒಂದು ವೇಳೆ ಸರಕಾರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸದೇ ಇದ್ದರೆ ನಮ್ಮ ಬಳಿಗೆ ವಿದ್ಯಾರ್ಥಿಗಳು ಬರೋದೇ ಇಲ್ಲ. ಬಹುತೇಕ ಕೋಚಿಂಗ್ ಸೆಂಟರ್ಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ವಿದ್ಯಾರ್ಥಿಗಳು ಬರದೇ ಇದ್ದರೆ ಕಟ್ಟಡದ ಮಾಲಿಕರಿಗೆ ನಾವು ಬಾಡಿಗೆ ನೀಡೋದಾದರೂ ಹೇಗೆ? ಇನ್ನು ನಮ್ಮೊಂದಿಗೆ ಫ್ಯಾಕಲ್ಟಿ ಟೀಮ್ ಕೂಡ ಇರುತ್ತೆ. ಅವರಿಗೆಲ್ಲ ನಮ್ಮ ಕೋಚಿಂಗ್ ಸೆಂಟರ್ಗಳೇ ಆಸರೆ. ಆದರೆ ಇದೀಗ ಅವರು ಕೂಡ ಸಮಸ್ಯೆಗೆ ಸಿಲುಕಿದ್ದಾರೆ. 7-8 ವರ್ಷ ಅಧ್ಯಯನ ಮಾಡಿಯೂ ಕೆಲಸ ಸಿಗದೇ ಹೋದರೆ ಆ ವಿದ್ಯಾರ್ಥಿಗಳು ಮಾನಸಿಕ ಕಾಯಿಲೆಗಳಿಗೆ ತುತ್ತಾಗಿ, ಆತ್ಮಹತ್ಯೆಗಳಂಥ ನಿರ್ಧಾರಕ್ಕೆ ಬರುತ್ತಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ವಿಚಾರ. ಹೀಗಾಗಿ ಸರಕಾರ ಪ್ರತಿವರ್ಷ ಖಾಲಿ ಇರೋ ಹುದ್ದೆಗಳ ಭರ್ತಿ ಮಾಡಿದರೆ ಕೋಚಿಂಗ್ ಸೆಂಟರ್ಗಳಿಂದ ಹಿಡಿದು ಸಣ್ಣಪುಟ್ಟ ವ್ಯಾಪಾರಿಗಳವರೆಗೆ ಎಲ್ಲರೂ ನೆಮ್ಮದಿಯಾಗಿ ಜೀವನ ಸಾಗಿಸಬಹುದು ಎಂದಿದ್ದಾರೆ.
ಇನ್ನು ಉದ್ಯೋಗಾಕಾಂಕ್ಷಿಯಾಗಿರೋ ಶರಣು ಸಾಲಿಮನಿ, ನಾನು ವಿಜಯಪುರ ಜಿಲ್ಲೆಯವನು. ಕಳೆ ಐದು ವರ್ಷಗಳಿಂದ ಇಲ್ಲಿಯೇ ಪೇಯಿಂಗ್ ಗೆಸ್ಟ್ನಲ್ಲಿದ್ದುಕೊಂಡು ಓದುತ್ತಿದ್ದೇನೆ. ತಿಂಗಳಿಗೆ ಕನಿಷ್ಟ 8 ಸಾವಿರ ರೂಪಾಯಿ ಖರ್ಚಾಗುತ್ತೆ. ಊರಲ್ಲಿ ನಾಲ್ಕು ಎಕರೆ ಜಮೀನಿದ್ದು, ಅದನ್ನು ತಂದೆ ನೋಡಿಕೊಳ್ಳುತ್ತಾರೆ. ಪ್ರತಿ ತಿಂಗಳು ಅವರೇ ಹಣವನ್ನು ಕಳಿಸುತ್ತಾರೆ. ನಾನು ಕೆಎಎಸ್ ಅಧಿಕಾರಿಯಾಗಬೇಕು ಅನ್ನೋದು ಅವರ ಆಸೆ. ಆದರೆ ಸರಕಾರ ಮಾತ್ರ ಯಾವುದೇ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸುತ್ತಿಲ್ಲ. ಇದರಿಂದಾಗಿ ಮುಂದೇನು ಮಾಡಬೇಕೆಂದು ತೋಚದೆ ಪರದಾಡುತ್ತಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಬಂದಿರೋ ಪ್ರಿಯದರ್ಶಿನಿ, ನಾನು ಇಲ್ಲಿಯೇ ಡಿಗ್ರಿ, ಮಾಸ್ಟರ್ ಡಿಗ್ರಿ ಮುಗಿಸಿದ್ದೇನೆ. ಅದಾಗಿ ನಾಲ್ಕು ವರ್ಷಗಳಾಗಿವೆ. ನಾನು ಸರಕಾರಿ ಹುದ್ದೆಯನ್ನು ಪಡೆಯಬೇಕೆನ್ನೋದು ನನ್ನ ತಂದೆ-ತಾಯಿಯ ಆಸೆ. ಹೀಗಾಗಿ ಸರಕಾರ ನೌಕರಿ ಪಡೆದೇ ನಾನು ಮರಳಿ ಬರುತ್ತೇನೆ ಅಂತಾನೂ ಪೋಷಕರಿಗೆ ಹೇಳಿದ್ದೇನೆ. ಅಲ್ಲದೇ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಹುದ್ದೆಯನ್ನು ಗಿಟ್ಟಿಸಿಕೊಳ್ಳುವ ಬುದ್ಧಿವಂತಿಕೆಯೂ ನನ್ನಲ್ಲಿದೆ. ಆದರೆ ಸರಕಾರ ಮಾತ್ರ ಯಾವುದೇ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಮನೆಯಲ್ಲಿ ಇದೀಗ ಮದುವೆ ಮಾಡಿಕೊಳ್ಳುವಂತೆ ದುಂಬಾಲು ಬಿದ್ದಿದ್ದಾರೆ. ಆದರೆ ನನಗೆ ನನ್ನದೇ ಆದ ಕನಸುಗಳಿವೆ ಎಂದು ನೋವು ತೋಡಿಕೊಂಡಿದ್ದಾರೆ. ಬಾಗಲಕೋಟೆಯಿಂದ ಬಂದಿರೋ ಫಕೀರೇಶ ಇಂಗಳಗಿ ಕೂಡ ತಾನು ಎಎಸ್ ಅಧಿಕಾರಿಯಾಬೇಕೆನ್ನೋದು ಅಪ್ಪನ ಆಸೆ. ನಿತ್ಯ 10 ಗಂಟೆ ಅಭ್ಯಾಸ ಮಾಡುತ್ತಿದ್ದೇನೆ. ಇನ್ನೊಂದೆರಡು ವರ್ಷಗಳು ಕಳೆದರೆ ನನ್ನ ವಯೋಮಿತಿ ಮುಗಿದು ಹೋಗಲಿದೆ. ಆಗ ಊರಿಗೆ ಹೋಗಿ ಕೃಷಿ ಮಾಡಲು ಕೂಡ ಸಾಧ್ಯವಾಗಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ