ಧಾರವಾಡ: ಮುಲ್ಲಾ, ಮುಜಾವರ್, ಖಾಜಿಗಳಿಗೂ ಈಗ ವಕ್ಫ್ ಸಂಕಷ್ಟ

| Updated By: ಗಣಪತಿ ಶರ್ಮ

Updated on: Nov 06, 2024 | 8:54 AM

ಕರ್ನಾಟಕದಲ್ಲಿ ಹಿಂದೂ ರೈತರ ಪಹಣಿಯಲ್ಲಿ ವಕ್ಫ್ ಹೆಸರು ಬಂದಿದ್ದಾಯ್ತು. ಆಮೇಲೆ ಮುಸ್ಲಿಂ ರೈತರ ಪಹಣಿಗಳನ್ನೂ ವಕ್ಫ್ ಹೆಸರು ನಮೂದಾಗಿರುವುದು ಬೆಳಕಿಗೆ ಬಂತು. ಇದೀಗ ಮುಸ್ಲಿಂ ಸಮಾಜಕ್ಕೆ ಗುರುಗಳಂತೆ ಇರುವ ಮುಲ್ಲಾ, ಮುಜಾವರ್, ಖಾಜಿಗಳ ಜಮೀನಿನ ಮೇಲೂ ವಕ್ಫ್ ಬೋರ್ಡ್ ಕಣ್ಣು ಹಾಕಿದೆ.

ಧಾರವಾಡ: ಮುಲ್ಲಾ, ಮುಜಾವರ್, ಖಾಜಿಗಳಿಗೂ ಈಗ ವಕ್ಫ್ ಸಂಕಷ್ಟ
ಧಾರವಾಡ: ಮುಲ್ಲಾ, ಮುಜಾವರ್, ಖಾಜಿಗಳಿಗೂ ಈಗ ವಕ್ಫ್ ಸಂಕಷ್ಟ
Follow us on

ಧಾರವಾಡ, ನವೆಂಬರ್ 6: ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ದಾಖಲಾತಿ ವಿಚಾರ ವಿಜಯಪುರ ಬಳಿಕ ಧಾರವಾಡ ಜಿಲ್ಲೆಯಲ್ಲಿಯೂ ಸದ್ದು ಮಾಡಿತ್ತು. ಮೊದಲು ಇದು ಹಿಂದೂ ರೈತರ ವಿಚಾರವಾಗಿತ್ತು. ಬಳಿಕ ಇದು ಮುಸ್ಲಿಂ ರೈತರ ಜಮೀನಿಗೂ ವಿಸ್ತರಿಸಿತ್ತು. ಇದೀಗ ಮುಸ್ಲಿಂ ಸಮಾಜಕ್ಕೆ ಸದಾ ಮಾರ್ಗದರ್ಶಿಗಳಾಗಿರುವ ಮುಲ್ಲಾ, ಮುಜಾವರ್, ಖಾಜಿ, ಮಕಾನದಾರ್​ಗಳ ಜಮೀನು ಪಹಣಿಯಲ್ಲಿಯೂ ವಕ್ಪ್ ಬೋರ್ಡ್ ಹೆಸರು ನಮೂದಾಗಿದೆ. ಇವರಿಗೆಲ್ಲ ಇನಾಮು ಕೊಟ್ಟ ಜಮೀನಾಗಿದ್ದರೂ ಕೂಡ, ಇನಾಮ್ ಕಾನೂನಿಗೆ ತಿದ್ದುಪಡಿಯಾದಾಗ ಇವರಿಗೆಲ್ಲ ಮಾಲೀಕತ್ವ ಸಿಕ್ಕಿತ್ತು. ಆದರೆ ಈಗ ನೂರಾರು ಮುಲ್ಲಾ, ಮುಜಾವರ್, ಖಾಜಿಗಳ ಸಾವಿರಾರು ಎಕರೆ ಜಮೀನುಗಳ ದಾಖಲೆಗಳಲ್ಲಿ ವಕ್ಫ್ ಹೆಸರು ನಮೂದಾಗಿದೆ. ಇದೀಗ ವಕ್ಫ್ ಬೋರ್ಡ್ ಇವರೆಲ್ಲರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರೋದಕ್ಕೆ ಮುಲ್ಲಾಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಜಮೀನು ಕಳೆದುಕೊಳ್ಳುವ ಭೀತಿಯಲ್ಲಿರುವ ತಮ್ಮ ಸಮಾಜದ ರೈತರಿಗೆ ಮಾರ್ಗದರ್ಶನ ಮಾಡಬೇಕಾದ ಗುರುಸ್ಥಾನದವರೇ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ನೂರಾರು ಮುಲ್ಲಾಗಳ ಜಮೀನಿಗೆ ಕಂಟಕ

ಈಗ ನೂರಾರು ಮುಲ್ಲಾ, ಮುಜಾವರ, ಖಾಜಿಗಳ ಸಾವಿರಾರು ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ವಕ್ಪ್ ಬೋರ್ಡ್ ಮುಂದಾಗಿದೆ. ಇದು ಸಹಜವಾಗಿ ಮುಲ್ಲಾಗಳಲ್ಲಿ ಆಕ್ರೋಶ ಹುಟ್ಟುಹಾಕಿದೆ. ಪರಿಣಾಮವಾಗಿ ಧಾರವಾಡದಲ್ಲಿ ಇದೀಗ ಧರ್ಮ ಗುರುಗಳೇ ವಕ್ಫ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿರುವ ವಕ್ಫ್ ಪ್ರಕರಣ ಇದೀಗ ಮುಸ್ಲಿಂ ಸಮುದಾಯಕ್ಕೂ ಕಂಠಕವಾಗಿ ಪರಿಣಮಿಸಿದೆ. ಇದನ್ನೆಲ್ಲ ನೋಡಿದರೆ ವಕ್ಪ್ ಬೋರ್ಡ್ ಪ್ರಹಾರಕ್ಕೆ ಯಾರೂ ಹೊರತಿಲ್ಲ ಅನ್ನುವಂತಾಗಿದೆ. ಅನೇಕ ಸಾಮಾನ್ಯ ಜನರ ಜಮೀನು ಕಬಳಿಸುವ ತಂತ್ರ ಎಂದು ಅಂದುಕೊಳ್ಳುತ್ತಿದ್ದ ಈ ನಡೆ ಇದೀಗ ಮುಸ್ಲಿಂ ಸಮಾಜದ ಮುಲ್ಲಾಗಳ ಕಡೆಗೂ ಹೊರಳಿರುವುದು ಮತ್ತೊಂದು ಎಡವಟ್ಟಿಗೆ ಕಾರಣವಾಗಿರೋದಂತೂ ಸತ್ಯ.

ಇದನ್ನೂ ಓದಿ: ಧಾರವಾಡ ಮುಸ್ಲಿಂ ರೈತರ ಜಮೀನಿನ ಮೇಲೂ ವಕ್ಫ್ ಕಣ್ಣು: 20ಕ್ಕೂ ಹೆಚ್ಚು ರೈತರಿಂದ ಆಕ್ರೋಶ

ಧಾರವಾಡದ ನವಲಗುಂದದ 20ಕ್ಕೂ ಹೆಚ್ಚು ಮುಸ್ಲಿಂ ರೈತರ ಆಸ್ತಿ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಕೆಲವು ದಿನಗಳ ಹಿಂದಷ್ಟೇ ಬೆಳಕಿಗೆ ಬಂದಿತ್ತು. ಇದರಿಂದ ಮುಸ್ಲಿಮರಲ್ಲಿಯೂ ವಕ್ಫ್ ಬಗ್ಗೆ ಆಕ್ರೋಶ ಮೂಡಿತ್ತು. ಮುಸ್ಲಿಂ ರೈತರು ವಕ್ಫ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ