ಧಾರವಾಡ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ (Hubballi-Dharwad Municipal Corporation) 22ನೇ ಅವಧಿಯ ನೂತನ ಮೇಯರ್ ಆಗಿ (Mayor) ಆಯ್ಕೆಯಾದ ಬಿಜೆಪಿಯ ವೀಣಾ ಭರದ್ವಾಡ ಅವರಿಗೆ ಕೇಂದ್ರ ಸಚಿವ ಪಲ್ಹಾದ್ ಜೋಶಿಯವರು ಶುಭ ಹಾರೈಸಿದರು. ಹು-ಧಾ ಮೇಯರ್ ಆಗಿ ಆಯ್ಕೆಗೊಂಡ ಬಳಿಕ ನೂತನ ಮೇಯರ್ ಹಾಗೂ ಉಪಮೇಯರ್ಗೆ ಶುಭ ಹಾರೈಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು “ಅವಳಿ ನಗರದ ಜನತೆಗೆ ನಮ್ಮ ಆಡಳಿತದ ಮೇಲೆ ಅಪಾರ ವಿಶ್ವಾಸ ಹಾಗೂ ನಂಬಿಕೆ ಇದೆ. ಅವರ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಬೇಕಿದೆ. ಸಾರ್ವಜನಿಕರ ನಿರೀಕ್ಷೆಗಳನ್ನು ಪೂರೈಸಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳಲಿದ್ದೀರಿ ಎಂಬ ನಂಬಿಕೆ ಇದೆ. ಅತ್ಯಂತ ಯಶಸ್ವಿ ಅವಧಿ ನಿಮ್ಮದಾಗಿರಲಿ ಎಂದು ಪ್ರಲ್ಹಾದ ಜೋಶಿಯವರು (Pralhad Joshi) ಶುಭ ಹಾರೈಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಶುಭಾಶಯ ಸ್ವೀಕರಿಸಿ ಮಾಧ್ಯಮಗಳ ಜೊತೆ ಮಾತನಾಡಿದ ನೂತನ ಮೇಯರ್ ವೀಣಾ ಭರದ್ವಾಡ ಅವರು, “ಮೇಯರ್ ಆಗಿ ನನ್ನನ್ನು ಆಯ್ಕೆ ಮಾಡಿರುವುದು ತುಂಬಾ ಸಂತಸ ತಂದಿದೆ. ಅವಳಿ ನಗರದ ಜನತೆ ನಮ್ಮಿಂದ ಸಾಕಷ್ಟು ಉತ್ತಮ ಆಭಿವೃದ್ಧಿ ನಿರೀಕ್ಷೆ ಮಾಡಿದ್ದಾರೆ. ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಸಾಕಷ್ಟು ಸವಾಲುಗಳಿದ್ದು, ಪ್ರಮುಖವಾಗಿ ಅಭಿವೃದ್ದಿ ಕಾರ್ಯಗಳತ್ತ ಗಮನ ಹರಿಸುತ್ತೇನೆ. ಕುಂಠಿತಗೊಂಡ ಅಭಿವೃದ್ದಿ ಕಾರ್ಯಗಳು ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
ರಾಜ್ಯದ ಎರಡನೇಯ ಬೃಹತ್ ಮಹಾನಗರ ಪಾಲಿಕೆಯಾದ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ 22ನೇಯ ಮಹಾಪೌರರಾಗಿ ಚುನಾಯಿತರಾದ ಶ್ರೀಮತಿ ವೀಣಾ ಚೇತನ್ ಬರದ್ವಾಡ
ಹಾಗೂ ಉಪಮಹಾಪೌರರಾಗಿ ಚುನಾಯಿತರಾದ ಶ್ರೀ ಸತೀಶ್ ಸುರೇಂದ್ರ ಹಾನಗಲ್
ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. pic.twitter.com/7ovmgeaNnl— Pralhad Joshi (@JoshiPralhad) June 20, 2023
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಒಟ್ಟು 82 ಸದಸ್ಯರ ಬಲ ಹೊಂದಿದೆ. ಅಧಿಕಾರ ಪಡೆದುಕೊಳ್ಳಲು 46 ಸಂಖ್ಯಾಬಲ ಬೇಕಿತ್ತು. ಬಿಜೆಪಿ ಕಾರ್ಪೊರೇಟರ್ಗಳ ಸಂಖ್ಯೆ 39 ಇದ್ದು, ಕಾಂಗ್ರೆಸ್ 33, ಪಕ್ಷೇತರ 6, AIMIM 3, ಜೆಡಿಎಸ್ 1 ಸ್ಥಾನ ಹೊಂದಿದೆ. ಇನ್ನು 8 ಜನಪ್ರತಿನಿಧಿಗಳು, 4 ಶಾಸಕರು, 1 ಸಂಸದ, 3 ಎಂಎಲ್ಸಿ ಪಾಲಿಕೆ ವ್ಯಾಪ್ತಿಯ ಜನಪ್ರತಿನಿಧಿಗಳು ಸೇರಿಸಿ ಒಟ್ಟು 90 ಮತಗಳಿದ್ದವು.
ಬಿಜೆಪಿ ಮೇಯರ್ ಅಭ್ಯರ್ಥಿ ಪರ 46 ಮತಗಳು ಚಲಾವಣೆಯಾಗಿದ್ದು, ಕಾಂಗ್ರೆಸ್ನ ಸುವರ್ಣ ಅವರು 37 ಮತ ಪಡೆಯುವುರೊಂದಿಗೆ ಸೋಲು ಕಂಡರು. ಇದರೊಂದಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಿಜೆಪಿ ಪಾಲಾಗಿದೆ. ಸತೀಶ ಹಾನಗಲ್ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 5:56 pm, Tue, 20 June 23