ಬೆಂಗಳೂರು: ‘ರಮೇಶ್ ಜಾರಕಿಹೊಳಿ ವಿರುದ್ಧದ ವಿಡಿಯೋವನ್ನು ಪೊಲೀಸರಿಗೆ ತಿಳಿಸುವ ಮೊದಲೇ ರಷ್ಯಾದಲ್ಲಿ ಯುಟ್ಯೂಬ್ಗೆ ಅಪ್ಲೋಡ್ ಆಗಿತ್ತು. 17 ಸರ್ವರ್ ಬುಕ್ ಮಾಡಿದ್ದರು. ಅದಕ್ಕಾಗಿ 10 ರಿಂದ 15 ಕೋಟಿ ಖರ್ಚು ಮಾಡಿದ್ದರು. ಗಂಭೀರ ಷಡ್ಯಂತ್ರವನ್ನು ನನ್ನ ಅಣ್ಣನ ವಿರುದ್ಧ ನಡೆಸಲಾಗಿತ್ತು. ದಯವಿಟ್ಟು ಮಾಧ್ಯಮಗಳಲ್ಲಿ ಆ ಮಹಿಳೆಗೆ ಸಂತ್ರಸ್ತ ಮಹಿಳೆ ಎಂಬ ಪದ ಬಳಸಬೇಡಿ. 15 ಕೋಟಿ ಖರ್ಚು ಮಾಡಿ ರಮೇಶ್ ಜಾರಕಿಹೊಳಿ ಮಂತ್ರಿಗಿರಿ ತಪ್ಪಿಸಲು ಈ ಕೆಲಸ ಮಾಡಿದ್ದಾರೆ. ಸಿಡಿ ಕಟ್ ಮಾಡಿ ಎಡಿಟ್ ಮಾಡಿ ಹಾಕಿದ್ದಾರೆ. ಷಡ್ಯಂತ್ರ ಹೊರಗೆ ಬರಲು ಸಮಗ್ರ ತನಿಖೆ ಆಗಬೇಕು. ರಮೇಶ್ ಜಾರಕಿಹೊಳಿ ಮನೆಯಿಂದ ಹೊರಗೆ ಬಂದು ದೂರು ಕೊಡಬೇಕು’ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಮಹಿಳೆಗೆ ‘ನೀನು ಹೆದರಬೇಡ, 50 ಲಕ್ಷ ಹಣ, ದುಬೈನಲ್ಲಿ ಕೆಲಸ ಕೊಡಿಸ್ತೀವಿ’ ಅಂತ ಆಕೆಗೆ ಭರವಸೆ ಕೊಟ್ಟು ಈ ಕೆಲಸ ಮಾಡಿಸಿದ್ದಾರೆ ಆಂತ ನಮ್ಮ ಸೋರ್ಸ್ ಹೇಳುತ್ತದೆ. ನಾಳೆ ಒಂದು ದಿನ ಬಿಟ್ಟು ನಮ್ಮ ಸೋರ್ಸ್ ಮೂಲಕ ನಾವು ಕೆಲಸ ಮಾಡ್ತೀವಿ. ಮರ್ಯಾದೆ ಗೌರವ ಹೋದರೆ ಕಷ್ಟವಾಗುತ್ತೆ. ನಾವೂ ಈ ಕೇಸ್ ಫಾಲೊ ಮಾಡ್ತೀವಿ. ನಮ್ಮ ಸೋರ್ಸ್ ಮೂಲಕ ಕೆಲಸ ಮಾಡುತ್ತೇವೆ. ಇದು ಹನಿಟ್ರ್ಯಾಪ್ ಆಗಿದೆ. ಪ್ರಶ್ನೆಗಳನ್ನು ಯಾರೋ ಬರೆದುಕೊಟ್ಟಿದ್ದಾರೆ. ಅದನ್ನು ಆಕೆ ಕೇಳಿದ್ದಾಳೆ. ಐದು ರಾಜ್ಯಗಳಲ್ಲಿ ಚುನಾವಣೆ ನಡೀತಿದೆ. ನಮ್ಮ ಪಕ್ಷಕ್ಕೆ ಕೆಟ್ಟ ಹೆಸರು ತರಲು ಈ ಕೆಲಸ ಮಾಡಿದ್ದಾರೆ’ ಎಂದು ಅವರು ಆರೋಪಿಸಿದರು.
ಇವತ್ತು ನಾನೇ ರಮೇಶ್ ಜಾರಕಿಹೊಳಿಯನ್ನು ಭೇಟಿ ಮಾಡ್ತೀನಿ. ಧೈರ್ಯವಾಗಿ ಹೊರಗೆ ಬರಲು ಮನವೊಲಿಸ್ತೀನಿ. ದಿನೇಶ್ ಕಲ್ಲಹಳ್ಳಿ ವಿರುದ್ಧ ಕಾನೂನು ಹೋರಾಟ ನಡೆಸುವ ಬಗ್ಗೆ ನಂತರ ಯೋಚಿಸ್ತೀವಿ. ಲಾಯರ್ ಜೊತೆಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತಗೊಳ್ತೀವಿ ಎಂದು ಬಾಲಚಂದ್ರ ಜಾರಕಿಹೊಳಿ ಮುಂದಿನ ತಮ್ಮ ನಡೆಗಳ ಬಗ್ಗೆ ಸುಳಿವು ನೀಡಿದರು.
ನಾನು ವಿಡಿಯೋ ನೋಡಿಲ್ಲ
ವಿಡಿಯೊ ನಾನು ಈವರೆಗೆ ನೋಡಿಲ್ಲ. ಇದು ಹನಿಟ್ರ್ಯಾಪ್ ಇರಬಹುದು ಅಥವಾ ಫೇಕ್ ಇರಬಹುದು. ನನ್ನ ಪ್ರಕಾರ ಇದು ಫೇಕ್ ವಿಡಿಯೊ. ಹನಿಟ್ರ್ಯಾಪ್ಗೆ ಪ್ರಯತ್ನ ಪಟ್ಟಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ದಿನೇಶ್ ಕಲ್ಲಹಳ್ಳಿ ಮಿಸ್ಗೈಡ್ ಆಗಿರಬಹುದು
ದಿನೇಶ್ ಕಲ್ಲಹಳ್ಳಿಯೂ ಇದರಲ್ಲಿ ಮಿಸ್ಗೈಡ್ ಆಗಿರಬಹುದು. ಅವರಿಗೆ ಸಂಪೂರ್ಣ ಮಾಹಿತಿ ಕೊಡದೇ ದಾರಿತಪ್ಪಿಸಿದ್ದಾರೆ ಆಂತ ನನಗೆ ಅನ್ನಿಸುತ್ತೆ. ದಿನೇಶ್ ಕಲ್ಲಹಳ್ಳಿಯನ್ನು ತಮ್ಮ ಉದ್ದೇಶಕ್ಕೆ ಬಳಸಿಕೊಂಡಿರಬಹುದು.
ರಮೇಶ್ ಜಾರಕಿಹೊಳಿ ಅವರು ದೂರು ಕೊಡೋಕೆ ಆಗದಿದ್ದರೆ ನಮಗೆ ಹೇಳಲಿ. ನಾವು ದೂರು ಕೊಡ್ತೀವಿ. ಮುಖ್ಯಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.ಸಿಬಿಐ ತನಿಖೆ ಆಗಬೇಕು. ಕಾಣದ ಕೈಗಳು ಹೊರಗೆಬರಬೇಕು. ಸಂತ್ರಸ್ತೆ ಮಹಿಳೆ ಅಂತ ನೀವು ಹೇಳ್ತಿದ್ದೀರಿ. ಬಹಳ ದಿನಗಳಿಂದ ಈ ಬಗ್ಗೆ ಚರ್ಚೆ ಆಗಿದೆ. ನನ್ನ ಸೋರ್ಸ್ ಮೂಲಕ ನಾನೂ ಪರಿಶೀಲಿಸಿದೆ.ನಮ್ಮ ಸೋರ್ಸ್ ಮೂಲಕ ತಿಳಿದ ಮಾಹಿತಿಯಿದು’ ಎಂದು ಅವರು ಹೇಳಿದರು. ನಮ್ಮ ಕುಟುಂಬ, ಬಿಜೆಪಿಗೆ ಮುಜುಗರ ತರಲೆಂದು ಈ ಕೆಲಸ ಮಾಡಿದ್ದಾರೆ. ರಾಜಕೀಯ ಪಕ್ಷದವರು ಮಾತ್ರವೇ ಅಲ್ಲ, ಬೇರೆಯವರೂ ಇದರಲ್ಲಿ ಇದ್ದಾರೆ.
ದಿನೇಶ್ ಕಲ್ಲಹಳ್ಳಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೂರು ಹಿಂಪಡೆದ ಬೆನ್ನಲ್ಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಕೆ.ಕೆ.ಗೆಸ್ಟ್‌ಹೌಸ್‌ನಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹಲವು ಪ್ರಮುಖ ದಾಖಲೆಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
Published On - 5:12 pm, Sun, 7 March 21