ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಬರುವ ಮುನ್ನ ರಾಜ್ಯದಲ್ಲಿ 9 ಸಂಸದರಿದ್ದರು. ಈಗ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಸಂಸದರಿದ್ದಾರೆ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಕಿಡಿಕಾರಿದ್ದಾರೆ.
ದಿನೇಶ್ ಗುಂಡೂರಾವ್ ಸರಿ ಇದ್ದಿದ್ದರೆ ನಾವು ಪಕ್ಷ ಬಿಟ್ಟು ಆಚೆ ಬರುವ ಪ್ರಮೇಯ ಬರ್ತಾ ಇರಲಿಲ್ಲ. ಅವರು ನೆಟ್ಟಗೆ ಇದ್ದಿದ್ರೆ ಸಮ್ಮಿಶ್ರ ಸರ್ಕಾರ ಸರಿ ಇರ್ತಿತ್ತು. ಒಂದಂತೂ ಸತ್ಯ ದಿನೇಶ್ ಗುಂಡೂರಾವ್ ರಂತಹ ಅಧ್ಯಕ್ಷರು ಇರುವ ತನಕ ಕಾಂಗ್ರೆಸ್ ಸ್ಥಿತಿ ಹೀಗೇ ಇರುತ್ತೆ ಎಂದು ಬೆಂಗಳೂರಿನಲ್ಲಿ ಬಿ.ಸಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಚೇಲಾ ಎಂಬ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಬಿ.ಸಿ.ಪಾಟೀಲ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದವರು ಒಂದು ಕಡೆ ಇರಬಾರದು. ಒಬ್ಬರಿಗೊಂದು ರೀತಿ, ಮತ್ತೊಬ್ಬರಿಗೊಂದು ರೀತಿ ಮಾಡಬಾರದು. ಈಗ ನಾನು ಕಾಂಗ್ರೆಸ್ ಪಕ್ಷದಿಂದ ಹೊರಬಂದಿದ್ದೇನೆ. ಆ ವಿಚಾರ ಮಾತನಾಡುವುದು ಸರಿ ಹೋಗಲ್ಲ ಎಂದರು.
ಬಿಎಸ್ವೈ ಹೇಳಿಕೆ ಸ್ವಾಗತ:
ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಅವರ ಹೇಳಿಕೆಯಿಂದ ಸಂತೋಷವಾಗಿದೆ. ಬಿಜೆಪಿಗೆ ಸೇರುವ ಬಗ್ಗೆ ಅನರ್ಹ ಶಾಸಕರು ಒಟ್ಟಿಗೆ ಕುಳಿತು ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
Published On - 4:17 pm, Mon, 30 September 19