ವಿಜಯಪುರ: ಗೋಹತ್ಯೆ ನಿಷೇಧ ಕಾನೂನು ಅಡಿಯ ನಿರ್ದೇಶನಗಳನ್ನು ಯಾವುದೇ ಲೋಪವಿಲ್ಲದೆ ಪಾಲಿಸುವುದರ ಜೊತೆಗೆ ಯಾವುದೇ ಸಮುದಾಯಕ್ಕೆ ನೋವು ಆಗದ ರೀತಿಯಲ್ಲಿ ಕಾರ್ಯನಿರ್ವಹಿಸಿ, ತಪ್ಪು ಸಂದೇಶ ರವಾನೆಯಾಗದಂತೆ ತಮ್ಮ ಕರ್ತವ್ಯ ನಿಭಾಯಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಪಶುವೈದ್ಯರಿಗೆ ಖಡಕ್ ಸಂದೇಶ ನೀಡಿದ್ದಾರೆ.
ನಗರದ ಖಾಸಗಿ ಹೊಟೇಲ್‍ದಲ್ಲಿಂದು ಪಶು ವೈದ್ಯರಿಗಾಗಿ ಆಯೋಜಿಸಲಾಗಿದ್ದ ತಾಂತ್ರಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಡಿಸಿ ಪಿ.ಸುನೀಲ ಕುಮಾರ್ ಅವರು ಗೋ ಹತ್ಯೆ ನಿಷೇಧ ಕಾನೂನಿನ ಪರಿಣಾಮಕಾರಿ ಅನುಷ್ಠಾನದಲ್ಲಿ ತಮ್ಮ ಕಡೆಯಿಂದ ಯಾವುದೇ ರೀತಿಯ ತಪ್ಪು ಮತ್ತು ವೈಷಮ್ಯ ಹುಟ್ಟಿಸುವಂತಹ ಕಾರ್ಯ ಆಗಬಾರದೆಂದು ಪಶುವೈದ್ಯರಿಗೆ ಸಲಹೆ ನೀಡಿದರು. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಪಾರದರ್ಶಕ ರೀತಿಯಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೆ ಒಂದೇ ಒಂದು ತಪ್ಪು ಆಗದಂತೆ ಮತ್ತು ಸುಳ್ಳು ವದಂತಿ ಹರಡದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಸಲಹೆ ನೀಡಿದರು.
ಅರ್ಹರಿಗೆ ಸರ್ಕಾರದ ಸೌಲಭ್ಯ ತಲುಪಬೇಕು:
ಜಿಲ್ಲೆಯಲ್ಲಿ ಅನ್ನದಾತರಿಗೆ, ಅರ್ಹ ರೈತರಿಗೆ ಸರ್ಕಾರದ ಸೌಲಭ್ಯಗಳು ನಿಜ ರೀತಿಯಲ್ಲಿ ತಲುಪುವಂತಾಗಬೇಕು. ರೈತರು ಪಾರಂಪರಿಕ ವ್ಯವಸಾಯದಲ್ಲಿ ಹೆಚ್ಚು ಆಸಕ್ತಿ ತೋರುವುದರಿಂದ ರಾಸಾಯನಿಕಗಳ ಬಳಕೆ ಮಾಡದ ಬಗ್ಗೆ ಹಾಗೂ ಸಾವಯವ ಕೃಷಿ ಕೈಗೊಳ್ಳುವ ಬಗ್ಗೆ ಮತ್ತು ಪಶುಗಳ ಆರೈಕೆಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆಯೂ ಅವರಿಗೆ ಮನವರಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಪಶು ವೈದ್ಯರೆಲ್ಲರೂ ಹಾಗೂ ಪಶು ಸಂಗೋಪನೆ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹೆಚ್ಚು ಕಾರ್ಯನಿರ್ವಹಿಸಿ ಸಾಧನೆ ಮಾಡುವಂತೆ ಡಿಸಿ ಸುನೀಲ ಕುಮಾರ ಸಲಹೆ ನೀಡಿದರು.
ರೈತರ ಜೀವನೋಪಾಯ ಸುಧಾರಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಮತ್ತು ರೈತರನ್ನು ಕಡೆಗಣಿಸದಂತೆ ಸಲಹೆ ನೀಡಿದರು. ಸಿಬ್ಬಂದಿ ಮತ್ತು ಅಧಿಕಾರಿಗಳ ಕೊರತೆಗಳ ಮಧ್ಯೆಯೂ ರಾಷ್ಟ್ರೀಯ ಕೃತಕ ಗರ್ಭಧಾರಣೆ ಹಾಗೂ ಮೈತ್ರಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಸಾಧನೆ ಮಾಡಿ ದೇಶದಲ್ಲಿಯೇ ನಮ್ಮ ರಾಜ್ಯ ಆರನೇ ಕ್ರಮಾಂಕಕ್ಕೆ ಬಂದಿರುವುದರಿಂದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಜಿಲ್ಲಾಧಿಕಾರಿ ಸುನೀಲ ಕುಮಾರ್ ಅಭಿನಂದಿಸಿದರು.
ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಗೆ ಮೂಲಸೌಕರ್ಯ ಒದಗಿಸಲು ಗಮನ:
15 ನೇ ಹಣಕಾಸು ಅನುದಾನದ ಅಡಿಯಲ್ಲಿ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಗೆ ಮೂಲಸೌಕರ್ಯ ಒದಗಿಸಲು ಅನುದಾನ ಒದಗಿಸುವ ಬಗ್ಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಡಿಸಿ ಕಾರ್ಯಕ್ರಮಲ್ಲಿ ತಿಳಿಸಿದರು. ನಂತರ ಪಶುಪಾಲನೆ ಕುರಿತು ಕಿರು ಕೈಪಿಡಿಯನ್ನೂ ಬಿಡುಗಡೆ ಮಾಡಲಾಯಿತು.
ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಪಶು ವಿಜ್ಞಾನಿ ಗಿರೀಶ ಪಾಟೀಲ್ ದೇಶದ ಜಿಡಿಪಿಯಲ್ಲಿ ಡೈರಿ ಉದ್ಯಮ ಹಾಗೂ ಮಾಂಸ ಉದ್ಯಮದಿಂದ 7.2 ಲಕ್ಷ ಕೋಟಿ ರೂಪಾಯಿ ಆದಾಯ ಬರುತ್ತಿದೆ. ಈ ಪೈಕಿ ಮಾಂಸ ಉದ್ಯಮದಿಂದ 2.2 ಲಕ್ಷ ಕೋಟಿ ರೂಪಾಯಿ ಆದಾಯ ಬರುತ್ತಿದೆ. ಇತ್ತೀಚೆಗೆ ಮಾಂಸ ಉತ್ಪನ್ನ ಸರಬರಾಜು ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಾಗಿದ್ದು, ಮಾಂಸ ಉತ್ಪನ್ನ ಮಾರಾಟ ಮತ್ತು ನಿರ್ವಹಣೆಯಲ್ಲಿ ವಿಶೇಷ ಗಮನ ನೀಡುವ ಅಗತ್ಯವಿದೆ ಎಂದು ಹೇಳಿದರು.
ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ:
ಜಿಲ್ಲೆಯಲ್ಲಿ 14 ಲಕ್ಷ ಜಾನುವಾರುಗಳಿದ್ದು, ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು 576 ಇವೆ. ಇವುಗಳ ಪೈಕಿ 263 ಹುದ್ದೆಗಳಲ್ಲಿ ಮಾತ್ರ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಶೇಕಡಾ 50 ರಷ್ಟು ಸಿಬ್ಬಂದಿ ಕೊರತೆಯಿದೆ ಎಂದು ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ಪ್ರಾಣೇಶ ಜಹಾಗೀರದಾರ ಸಭೆಯಲ್ಲಿ ತಿಳಿಸಿದರು.
ಇಲಾಖೆಯ ಸಿಬ್ಬಂದಿ ಮತ್ತು ವಾಹನಗಳಿಗೆ ಅನ್ಯ ಕರ್ತವ್ಯಕ್ಕೆ ನಿಯೋಜಿಸದಂತೆ ಸಭೆಯಲ್ಲಿ ಮನವಿ ಮಾಡಿಕೊಂಡರು. ಇಷ್ಟೆಲ್ಲ ಇಲ್ಲಗಳ ಮಧ್ಯೆ ಜಾನುವಾರುಗಳಿಗೆ ಕಿವಿಯೋಲೆ ಹಾಕಿ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಶೇ. 82 ರಷ್ಟು ಸಾಧನೆ ಮಾಡಲಾಗಿದೆ ಎಂದು ಡಾ. ಪ್ರಾಣೇಶ ಜಹಾಗೀರದಾರ ವಿವರಿಸಿದರು.
ಹಕ್ಕಿ ಜ್ವರ ಭೀತಿ, ಕಟ್ಟೆಚ್ಚರ:
ಜಿಲ್ಲೆಯಲ್ಲಿ ಹಕ್ಕಿಜ್ವರ ನಿಯಂತ್ರಣಕ್ಕೆ ವಿಶೇಷ ಗಮನ ನೀಡಲಾಗಿದೆ. ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಆಧಿಕಾರಿಗಳು ಹಾಗೂ ಸಿಬ್ಬಂದಿ ಜಿಲ್ಲೆಯ ಎಲ್ಲಾ ಕೋಳಿ ಫಾರ್ಮ್‍ಗಳಿಗೆ ನಿರಂತರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಪ್ರದೇಶದಲ್ಲಿಯೂ ಹಕ್ಕಿ ಜ್ವರ ಕಂಡು ಬಂದಿಲ್ಲ.
ಜನರು ಯಾವುದೇ ಕಾರಣಕ್ಕೂ ಭೀತಿಗೆ ಒಳಗಾಗಬಾರದು ಎಂದು ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಆಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಧಾರವಾಡ ವಲಯದ ಜಂಟಿ ನಿರ್ದೇಶಕರಾದ ಡಾ.ಪಂಪಾಪತಿ, ಡಾ.ಚೌಧರಿ, ಡಾ. ಸತೀಶ ಸೇರಿದಂತೆ ಜಿಲ್ಲೆಯ ಇತರೆ ಪಶುವೈದ್ಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಸತ್ತ ಹಕ್ಕಿಗಳ ವರದಿ ನೆಗೆಟೀವ್, ಹಕ್ಕಿ ಜ್ವರದ ಭೀತಿ ಬೇಡ: ಜಿಲ್ಲಾಧಿಕಾರಿ ಲತಾ ಅಭಯ