ಧಾರವಾಡದ ಸಾವಿನ ರಸ್ತೆಯಲ್ಲಿ ಕಣ್ಣೀರ ಧಾರೆ: ಮೃತರಿಗೆ ವಿಭಿನ್ನ ರೀತಿಯಲ್ಲಿ ಶ್ರದ್ಧಾಂಜಲಿ

| Updated By: ರಾಜೇಶ್ ದುಗ್ಗುಮನೆ

Updated on: Feb 06, 2021 | 4:23 PM

ಧಾರವಾಡದ ಸಾಮಾಜಿಕ ಕಾರ್ಯಕರ್ತ ಹಾಗೂ ನ್ಯಾಯವಾದಿ ಪಿ.ಎಚ್. ನೀರಲಕೇರಿ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರು ಇಂದು ದಾವಣಗೆರೆಯಿಂದ ನೂರಾರು ವಾಹನಗಳಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದರು.

ಧಾರವಾಡದ ಸಾವಿನ ರಸ್ತೆಯಲ್ಲಿ ಕಣ್ಣೀರ ಧಾರೆ: ಮೃತರಿಗೆ ವಿಭಿನ್ನ ರೀತಿಯಲ್ಲಿ ಶ್ರದ್ಧಾಂಜಲಿ
ಧಾರವಾಡ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಶೃದ್ಧಾಂಜಲಿ ಕಾರ್ಯಕ್ರಮ
Follow us on

ಧಾರವಾಡ: ಅದು ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಪ್ರದೇಶ. ಅಲ್ಲಿದ್ದವರ ಕಣ್ಣಲ್ಲಿ ನೀರು ಜಿನುಗುತ್ತಲೇ ಇದ್ದವು. ಯಾರನ್ನು ಯಾರು ಸಂತೈಸಬೇಕು ಎನ್ನುವುದೇ ತಿಳಿಯದ ಸ್ಥಿತಿ ನಿರ್ಮಾಣವಾಗಿತ್ತು. ಖುಷಿ ಖುಷಿಯಾಗಿ ಬೈ ಬೈ ಎಂದು ಹೇಳಿ ಹೋಗಿದ್ದ ಮಹಿಳೆಯರು ಶಾಶ್ವತವಾಗಿ ಮರಳಿ ಬಾರದ ಲೋಕಕ್ಕೆ ಹೋಗಿದ್ದ ಜಾಗ ಅದಾಗಿತ್ತು. ಇಂದು ಮೃತಪಟ್ಟವರನ್ನು ನೆನೆದು, ಅವರಿಗೊಂದು ನಮನ ಸಲ್ಲಿಸಿ, ಸರ್ಕಾರಕ್ಕೆ ಇಂತಹ ಸ್ಥಳಗಳ ಬಗ್ಗೆ ಎಚ್ಚರಿಕೆ ಕೊಡುವ ಉದ್ದೇಶದೊಂದಿಗೆ ಧಾರವಾಡದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಜನವರಿ 15, 2021 ರ ಬೆಳಿಗ್ಗೆ ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಭೀಕರ ಅಪಘಾತವೊಂದು ನಡೆದಿತ್ತು. ಈ ಅಪಘಾತದಲ್ಲಿ 10 ಮಹಿಳೆಯರು ಸೇರಿ ಒಟ್ಟು 12 ಜನರು ಮೃತಪಟ್ಟಿದ್ದರು. ಈ ಘಟನೆ ರಾಷ್ಟ್ರಾದ್ಯಂತ ಸಂಚಲನ ಸೃಷ್ಟಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದರು. ಇದೀಗ ಈ ಅಗಲೀಕರಣಕ್ಕಾಗಿ ಬಗೆ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಂತಹದ್ದೇ ಒಂದು ಕಾರ್ಯಕ್ರಮ ಒಂದು ನಡೆದಿದ್ದು ಘಟನಾ ಸ್ಥಳದಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಅಪಘಾತ ಸ್ಥಳಕ್ಕೆ ಆಗಮಿಸಿದ ಮೃತರ ಕುಟುಂಬಸ್ಥರು:
ಆ ದಿನ ಮಹಿಳೆಯರು ಟೆಂಪೋ ಟ್ರಾವೆಲರ್ ಮೂಲಕ ಗೋವಾಕ್ಕೆ ಹೋಗುತ್ತಿದ್ದರು. ನಸುಕಿನ ಜಾವ ಮೂರು ಗಂಟೆಗೆ ದಾವಣಗೆರೆ ಬಿಟ್ಟಿದ್ದ ಅವರು ಸುಮಾರು 7 ಗಂಟೆ ಹೊತ್ತಿಗೆ ಧಾರವಾಡದ ಸಮೀಪ ಬಂದಿದ್ದರು. ಇನ್ನೇನು 1 ಕಿ.ಮೀ. ಸಾಗಿದ್ದರೆ ಧಾರವಾಡ ಸರ್ವಿಸ್ ರಸ್ತೆಯೊಳಗೆ ಬಂದು ಬಿಡುತ್ತಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಎದುರಿನಿಂದ ವೇಗವಾಗಿ ಬಂದಿದ್ದ ಮರಳು ತುಂಬಿದ ಟಿಪ್ಪರ್ ಟೆಂಪೋ ಟ್ರಾವೆಲರ್​ಗೆ ಡಿಕ್ಕಿ ಹೊಡೆದಿತ್ತು.

ವಿಶೇಷ ರೀತಿಯಲ್ಲಿ ಧಾರವಾಡದಲ್ಲಿ ಶೃದ್ಧಾಂಜಲಿ ಸಲ್ಲಿಸಿದ ದೃಶ್ಯ

ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರು ಇಂದು ದಾವಣಗೆರೆಯಿಂದ ನೂರಾರು ವಾಹನಗಳಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದರು. ಧಾರವಾಡದ ಸಾಮಾಜಿಕ ಕಾರ್ಯಕರ್ತ ಹಾಗೂ ನ್ಯಾಯವಾದಿ ಪಿ.ಎಚ್. ನೀರಲಕೇರಿ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಘಟನಾ ಸ್ಥಳಕ್ಕೆ ಮೃತರ ಕುಟುಂಬಸ್ಥರು ಆಗಮಿಸಿದ ಬಳಿಕ ರಸ್ತೆಯಲ್ಲಿಯೇ ಮೃತರ ಫೋಟೋಗಳನ್ನುಇಡಲಾಯಿತು. ಬಳಿಕ ಶಾಸ್ತ್ರೋಕ್ತವಾಗಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಭಾವಚಿತ್ರಕ್ಕೆ ಪೂಜೆ ಮಾಡುವಾಗ ಬಿಕ್ಕಿ ಬಿಕ್ಕಿ ಅತ್ತ ಕುಟುಂಬಸ್ಥರು:
ರಾಷ್ಟ್ರೀಯ ಹೆದ್ದಾರಿ 4 ರ ಮಧ್ಯಭಾಗದಲ್ಲಿ ಮೃತರ ಭಾವಚಿತ್ರಗಳನ್ನು ಇಡಲಾಗಿದ್ದು, ಅದಕ್ಕೂ ಮುಂಚೆ ಕಾರ್ಯಕ್ರಮ ಆಯೋಜಕ ಪಿ.ಎಚ್. ನೀರಲಕೇರಿ ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಿಂದ ಘಟನಾ ಸ್ಥಳದವರೆಗೆ ಪಾದಯಾತ್ರೆ ಮೂಲಕ ಆಗಮಿಸಿದರು. ಅವರಿಗೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಸಾಥ್ ನೀಡಿದ್ದು, ಪಿ.ಎಚ್. ನೀರಲಕೇರಿ ಸ್ಥಳಕ್ಕೆ ಆಗಮಿಸಿ ಕೆಲ ಹೊತ್ತು ರಸ್ತೆ ಮಧ್ಯದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು.

ಕುಟುಂಬಸ್ಥರಿಂದ ನಮನ

ಬಳಿಕ ಮೃತರ ಕುಟುಂಬಸ್ಥರು ನೂರಾರು ವಾಹನಗಳಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಂತರ ನಡೆದಿದ್ದೇ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಮೃತರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವಾಗ ಪುರುಷರು ಬಿಕ್ಕಿ ಬಿಕ್ಕಿ ಅತ್ತರೆ, ಅವರನ್ನು ಜನರು ಸಂತೈಸುವುದೇ ಕಷ್ಟವಾಗಿ ಹೋಯಿತು. ಸುಮಾರು 2 ಗಂಟೆಗಳ ಕಾಲ ಈ ಕಾರ್ಯಕ್ರಮ ನಡೆಯಿತು. ಬಳಿಕ ಕಾರ್ಯಕ್ರಮದ ಕೊನೆಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ 2 ನಿಮಿಷಗಳ ಕಾಲ ಮೌನಾಚರಣೆ ಮಾಡಿದರು.

ಮೃತರ ಕುಟುಂಬಸ್ಥರು ಹೇಳಿದ್ದು ಏನು?
ಈ ಘಟನೆಯಲ್ಲಿ ಮೃತಪಟ್ಟಿದ್ದ ಪ್ರೀತಿ ಎನ್ನುವ ಮಹಿಳೆಯ ಪತಿ ಡಾ. ರವಿಕುಮಾರ್, ಯಾರಿಗೂ ಇಂತಹ ನೋವು ಬರಬಾರದು. ಇಲ್ಲಿ ನಾವು ಯಾರನ್ನೂ ದೂಷಿಸಲು ಬಂದಿಲ್ಲ. ನಮ್ಮವರನ್ನು ಕಳೆದುಕೊಂಡ ನೋವಿನಿಂದ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಂದಿದ್ದೇವೆ. ಈ ರಸ್ತೆಯಲ್ಲಿ ಇಷ್ಟೊಂದು ಸಾವು-ನೋವು ಸಂಭವಿಸಿದರೂ ಇದುವರೆಗೂ ಅಗಲೀಕರಣಕ್ಕೆ ಸರಕಾರ ಮುಂದಾಗಿಲ್ಲ ಎಂದರೆ ಹೇಗೆ? ಮುಂದಿನ ದಿನಗಳಲ್ಲಾದರೂ ಸರಕಾರ ಈ ರಸ್ತೆಯನ್ನು ಅಗಲೀಕರಣ ಮಾಡಿ, ಸಾವುಗಳನ್ನು ತಡೆಯಲಿ ಎಂದು ಮನವಿ ಮಾಡಿಕೊಂಡರು.

ಶ್ರದ್ಧಾಂಜಲಿ ಇದೇ ಮೊದಲಲ್ಲ:
ಹೀಗೆ ಶ್ರದ್ಧಾಂಜಲಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಇದೇ ಮೊದಲಲ್ಲ. ಘಟನೆ ನಡೆದು ಒಂಭತ್ತನೇ ದಿನಕ್ಕೆ ಧಾರವಾಡದ ಕೆಲಗೇರಿ ಬಡಾವಣೆಯ ಜನರು ಮೃತರ ಪುಣ್ಯತಿಥಿ ಮಾಡಿದ್ದರು. ಅಂದು ಬಡಾವಣೆಯ ಜನರೆಲ್ಲಾ ಆಗಮಿಸಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿ ಹೋಗಿದ್ದರು. ಬಳಿಕ ಕಳೆದ ವಾರ ಧಾರವಾಡದ ನಮ್ ನಮ್ಮಂದಿ ಅನ್ನುವ ಕಲಾವಿದರ ಬಳಗ ಮೃತರ ಆತ್ಮಕ್ಕೆ ಶಾಂತಿ ಕೋರಿ ಘಟನಾ ಸ್ಥಳದಲ್ಲಿಯೇ ಕುಂಚ ನಮನ ಎನ್ನುವ ಕಾರ್ಯಕ್ರಮ ನಡೆಸಿತ್ತು. ಈ ವೇಳೆ ಜಿಲ್ಲೆಯ ಪ್ರಸಿದ್ಧ ಕಲಾವಿದರು ಆಗಮಿಸಿ, ಘಟನಾ ಸ್ಥಳದಲ್ಲಿಯೇ ಕುಳಿತು ಮೃತರ, ಘಟನೆಯ ಚಿತ್ರ ಬಿಡಿಸುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದರು.

ಇದೀಗ ಮೃತರ ಕುಟಂಬಸ್ಥರನ್ನು ಕರೆಸಿ, ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಆಯೋಜಕರು ಸರ್ಕಾರವನ್ನು ಎಚ್ಚಿರಿಸುವ ಕಾರ್ಯಕ್ರಮವನ್ನು ಮಾಡಿದ್ದಾರೆ. ಅದು ಎಷ್ಟರಮಟ್ಟಿಗೆ ಸರ್ಕಾರದ ಕಣ್ಣು ತೆರೆಸುತ್ತದೆಯೋ ಕಾದು ನೋಡಬೇಕಿದೆ.

Dharwad road accident ಧಾರವಾಡ ಅಪಘಾತ; ಗಂಟಲುಬ್ಬಿ ಕಣ್ಣೀರಾದ ಗೆಳತಿ ಹಂಚಿಕೊಂಡ ಒಡನಾಡಿಗಳ ನೆನಪು