ಲ್ಯಾಪ್‌ಟಾಪ್‌, ಟ್ಯಾಬ್‌ ತಯಾರಿಸಲು ರಾಜ್ಯದಲ್ಲಿ ಹೂಡಿಕೆ ಪ್ರಸ್ತಾವನೆ ಇಟ್ಟ ಡಿಕ್ಸನ್‌ ಕಂಪನಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 25, 2021 | 9:36 PM

ಕಂಪನಿಯು 10ರಿಂದ 15 ಎಕರೆಯಷ್ಟು ಭೂಮಿಗೆ ಬೇಡಿಕೆ ಇಟ್ಟಿದೆ. ಇಎಸ್‌ಡಿಎಂ ನೀತಿಯ ಪ್ರಕಾರ ಬೆಂಗಳೂರಿನ ಹೊರಭಾಗದಲ್ಲಿ ಕಂಪನಿ ತನ್ನ ಘಟಕವನ್ನು ಸ್ಥಾಪನೆ ಮಾಡಿದರೆ ಸರಕಾರದಿಂದ ಸಿಗಲಿರುವ ಎಲ್ಲ ಸಬ್ಸಿಡಿ, ಪ್ರಯೋಜನಗಳು ದೊರೆಯಲಿವೆ.

ಲ್ಯಾಪ್‌ಟಾಪ್‌, ಟ್ಯಾಬ್‌ ತಯಾರಿಸಲು ರಾಜ್ಯದಲ್ಲಿ ಹೂಡಿಕೆ ಪ್ರಸ್ತಾವನೆ ಇಟ್ಟ ಡಿಕ್ಸನ್‌ ಕಂಪನಿ
Follow us on

ಬೆಂಗಳೂರು: ಲ್ಯಾಪ್‌ಟಾಪ್‌, ಟ್ಯಾಬ್‌ ಇತ್ಯಾದಿ ಎಲೆಕ್ಟ್ರಾನಿಕ್‌ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ನೊಯ್ಡಾ ಮೂಲದ ಡಿಕ್ಸನ್‌ ಕಂಪನಿ, ರಾಜ್ಯದಲ್ಲಿ ತಯಾರಿಕಾ ಘಟಕ ಆರಂಭ ಮಾಡಲು ಮುಂದೆ ಬಂದಿದೆ. ಈ ಬಗ್ಗೆ ಐಟಿ- ಬಿಟಿ, ಎಲೆಕ್ಟ್ರಾನಿಕ್ ಖಾತೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಕಂಪನಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.

ಬೆಂಗಳೂರಿನಲ್ಲಿಂದು ‌ಅಶ್ವತ್ಥನಾರಾಯಣ ಅವರ ಮುಂದೆ ಪ್ರಸ್ತಾವನೆ ಇಟ್ಟ ಡಿಕ್ಸನ್‌ ಕಂಪನಿಯ ಕಾರ್ಯಕಾರಿ ಅಧ್ಯಕ್ಷ ಸುನಿಲ್ ವಚಾನಿ, ಅಗತ್ಯವಾದ ಜಾಗ ಹಾಗೂ ಇತರೆ ಅಂಶಗಳ ಬಗ್ಗೆ ಬೇಡಿಕೆ ಇಟ್ಟಿದ್ದಾರೆ. ಕಂಪನಿಯ ಪ್ರಸ್ತಾವನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಶ್ವತ್ಥನಾರಾಯಣ ಅವರು ಜಮೀನು ಕೊಡುವ ಭರವಸೆ ನೀಡಿದ್ದಾರೆ.

ಎಲೆಕ್ಟ್ರಾನಿಕ್ಸ್‌ ವ್ಯವಸ್ಥೆ ಮತ್ತು ಅಭಿವೃದ್ಧಿ ನಿರ್ವಹಣಾ (ಇಎಸ್‌ಡಿಎಂ) ಇಲಾಖೆಯ ವ್ಯಾಪ್ತಿಯಲ್ಲಿ ಈ ಯೋಜನೆ ಕಾರ್ಯಗತವಾಗಲಿದೆ. ಕೋಲಾರ ಜಿಲ್ಲೆಯ ಮಾಸ್ತೇನಹಳ್ಳಿ, ಮಿಂಡೇನಹಳ್ಳಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹರಳೂರು, ರಾಮನಗರ ಜಿಲ್ಲೆಯ ಹಾರೋಹಳ್ಳಿ ಈ ಜಾಗಗಳ ಪೈಕಿ ಯಾವುದಾದರೂ ಒಂದು ಸ್ಥಳದಲ್ಲಿ ತಯಾರಿಕಾ ಘಟಕವನ್ನು ಡಿಕ್ಸನ್‌ ಕಂಪನಿ ಸ್ಥಾಪನೆ ಮಾಡಲು ಜಮೀನು ನೀಡಲಾಗುವುದು ಎಂದು ‌ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ಕಂಪನಿಯು 10ರಿಂದ 15 ಎಕರೆಯಷ್ಟು ಭೂಮಿಗೆ ಬೇಡಿಕೆ ಇಟ್ಟಿದೆ. ಇಎಸ್‌ಡಿಎಂ ನೀತಿಯ ಪ್ರಕಾರ ಬೆಂಗಳೂರಿನ ಹೊರಭಾಗದಲ್ಲಿ ಕಂಪನಿ ತನ್ನ ಘಟಕವನ್ನು ಸ್ಥಾಪನೆ ಮಾಡಿದರೆ ಸರ್ಕಾರದಿಂದ ಸಿಗಲಿರುವ ಎಲ್ಲ ಸಬ್ಸಿಡಿ, ಪ್ರಯೋಜನಗಳು ದೊರೆಯಲಿವೆ. ಸ್ಥಳೀಯರಿಗೆ ಉದ್ಯೋಗ ನೀಡುವ ಬಗ್ಗೆಯೂ ಕಂಪನಿಗೆ ಮನವರಿಕೆ ಮಾಡಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಸುಮಾರು 30 ಸಾವಿರ ಕೋಟಿಗೂ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಡಿಕ್ಸನ್‌ ಕಂಪನಿ, ಲ್ಯಾಪ್‌ಟಾಪ್‌, ಟ್ಯಾಬ್‌, ಡೆಸ್ಟಾಪ್‌, ಸಿಎಫ್‌ಎಲ್ ಬಲ್ಬ್‌ಗಳು, ಎಲ್‌ಇಡಿ ಟೀವಿಗಳು, ಸಿಸಿಟಿವಿ, ವಾಷಿಂಗ್‌ ಮಷಿನ್‌ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ತಯಾರಿಕೆಯಲ್ಲಿ ಹೆಸರುವಾಸಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅತುಲ್‌ ಲಾಲ್‌, ಐಟಿ- ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಡಿಸಿಎಂ ಕಾರ್ಯದರ್ಶಿ ಪಿ.ಪ್ರದೀಪ, ಐಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ ಸರಕಾರದ ಹಿರಿಯ ಅಧಿಕಾರಿಗಳು ಇದ್ದರು.

ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?