Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?

Srinivas Mata

|

Updated on:Feb 25, 2021 | 2:26 PM

ಚಿನ್ನದ ಮೇಲೆ ಹಣ ಹೂಡಿಕೆ ಮಾಡಿದವರು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದದ್ದು ಏನೆಂದರೆ, ಲಾಭಕ್ಕೆ ಹೇಗೆ ತೆರಿಗೆ ಹಾಕಲಾಗುತ್ತದೆ ಎಂಬ ಸಂಗತಿ. Taxation on gold ಬಗ್ಗೆ, ಅದರಲ್ಲೂ ವಿವಿಧ ರೀತಿಯ ಚಿನ್ನದ ಹೂಡಿಕೆಗೆ ತೆರಿಗೆ ಹೇಗೆ ಬೀಳುತ್ತದೆ ಎಂಬುದನ್ನು ತಿಳಿಯಿರಿ.

Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?
ಸಾಂದರ್ಭಿಕ ಚಿತ್ರ
Follow us


ಭಾರತೀಯರ ಪಾಲಿಗೆ ಚಿನ್ನ ಅಂದರೆ ಪ್ರತಿಷ್ಠೆ, ಆಪದ್ಧನ, ವರ್ಷಾವರ್ಷ ಇಷ್ಟಿಷ್ಟೇ ಒಟ್ಟು ಮಾಡುವ ಉಳಿತಾಯ. ಆದರೆ ಇತ್ತೀಚಿನ ವರ್ಷಗಳಲ್ಲಿ ಆಲೋಚನಾ ಕ್ರಮ ಬದಲಾಗಿದೆ. ರಿಯಲ್ ಎಸ್ಟೇಟ್, ಷೇರು, ಮ್ಯೂಚುವಲ್ ಫಂಡ್​​ಗಳು, ಸಣ್ಣ ಉಳಿತಾಯ ಯೋಜನೆಗಳ ರೀತಿಯಲ್ಲೇ ಚಿನ್ನದ ಮೇಲೆ ಕೂಡ ಹೂಡಿಕೆ ಮಾಡಲಾರಂಭಿಸಿದ್ದಾರೆ. ಯಾವಾಗ ಹೂಡಿಕೆ ಅನ್ನೋದು ಬರುತ್ತದೋ ಅದರ ಬೆನ್ನಿಗೆ ತೆರಿಗೆ ಕೂಡ ಬರುತ್ತದೆ. ಈ ಹಂತದಲ್ಲಿ ನಿಮಗೆ ಗೊತ್ತಾಗಬೇಕಾದ್ದೇನು ಅಂದರೆ, ಚಿನ್ನ ಅಂದಾಕ್ಷಣ ಗಟ್ಟಿಯೋ ಆಭರಣವೋ ಅಥವಾ ಕಾಗದದ ರೂಪದಲ್ಲಿ ಇಟ್ಟುಕೊಂಡಿರುವ ಚಿನ್ನವೋ ಒಂದೊಂದಕ್ಕೆ ಒಂದೊಂದು ಬಗೆಯಲ್ಲಿ ತೆರಿಗೆ ಬೀಳುತ್ತದೆ. ನೀವೇನಾದರೂ ಚಿನ್ನದಲ್ಲಿ ಇನ್ವೆಸ್ಟ್​​ಮೆಂಟ್ ಮಾಡಿದ್ದೀರಾ? ಅದು ಯಾವ ರೂಪದಲ್ಲಿದೆ? ಅದರಿಂದ ಲಾಭ ಬಂದಿದೆಯಾ? ಹಾಗಿದ್ದರೆ ಯಾವ ಬಗೆಯ ಹೂಡಿಕೆ ಮೇಲಿನ ಲಾಭಕ್ಕೆ ಅದ್ಯಾವ ರೀತಿ ತೆರಿಗೆಯನ್ನು ಭರಿಸಬೇಕಾಗುತ್ತದೆ ಎಂಬುದನ್ನು ತಿಳಿದುಬಿಡಿ.

ಯಾವ ರೀತಿಯಲ್ಲೆಲ್ಲ ಚಿನ್ನದ ಮೇಲೆ ಹೂಡಿಕೆ ಮಾಡಬಹುದು
ಡಿಜಿಟಲ್ ಚಿನ್ನ
ಚಿನ್ನದ ಗಟ್ಟಿ
ಡೆರಿವೆಟಿವ್ ಒಪ್ಪಂದಗಳು
ಕಾಗದದ ರೂಪದಲ್ಲಿನ ಚಿನ್ನ

ಚಿನ್ನದ ಮೇಲಿನ ಹೂಡಿಕೆ ಅಂದಾಕ್ಷಣ ಥಟ್ಟನೆ ನೆನಪಾಗೋದು ಗಟ್ಟಿಯ ರೂಪದ್ದು. ಅದು ಆಭರಣದ ರೂಪದಲ್ಲೇ ಇರಲಿ, ಬಾರ್ ಅಥವಾ ನಾಣ್ಯದ ರೂಪದಲ್ಲಿ ಇರಲಿ ಅದರ ಮೇಲೆ ಬರುವ ಲಾಭಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ. ಈ ಕಾರಣಕ್ಕೆ ಹೂಡಿಕೆಯನ್ನು ದೀರ್ಘಾವಧಿ ಬಂಡವಾಳ ಗಳಿಕೆ ಅಥವಾ ಲಾಂಗ್​​ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಮತ್ತು ಅಲ್ಪಾವಧಿ ಬಂಡವಾಳ ಗಳಿಕೆ ಅಥವಾ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಎಂದು ಎರಡು ರೀತಿ ವಿಂಗಡಿಸಲಾಗಿದೆ.

ಖರೀದಿ ಮಾಡಿದ 36 ತಿಂಗಳ ಒಳಗಾಗಿ ಆ ಆಸ್ತಿಯನ್ನು ಮಾರಾಟ ಮಾಡಿ, ಅದಕ್ಕೆ ಲಾಭ ಬಂದಿದ್ದಲ್ಲಿ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ (STCG) ಎಂದು ಪರಿಗಣಿಸಲಾಗುತ್ತದೆ. ಮೂರು ವರ್ಷದ ಅವಧಿ ಮೀರಿದರೆ ಅದನ್ನು ಲಾಂಗ್​​ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ (LTCG) ಎನ್ನಲಾಗುತ್ತದೆ. ಅಲ್ಪಾವಧಿಯಲ್ಲಿ ಗಳಿಸಿದ ಬಂಡವಾಳದ ಮೇಲಿನ ಲಾಭವನ್ನು ಹೂಡಿಕೆ ಮಾಡುವವರ ವಾರ್ಷಿಕ ಆದಾಯಕ್ಕೆ ಸೇರಿಸಿ, ಆದಾಯ ತೆರಿಗೆ ಸ್ಲ್ಯಾಬ್​​ನಲ್ಲಿ ಬರುವಷ್ಟು ಮೊತ್ತದ ತೆರಿಗೆ ಪಾವತಿಸಬೇಕಾಗುತ್ತದೆ.

ಅದೇ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ (LTCG) ಆದಲ್ಲಿ ಇಂಡೆಕ್ಸೇಷನ್ ಅನುಕೂಲದ ಜತೆ ರಿಟರ್ನ್ಸ್ ಮೇಲೆ 20 ಪರ್ಸೆಂಟ್ ತೆರಿಗೆ, ಜತೆಗೆ ಸರ್​​ಚಾರ್ಜ್ ಮತ್ತು 4 ಪರ್ಸೆಂಟ್ ಸೆಸ್ ಕಟ್ಟಬೇಕಾಗುತ್ತದೆ. ಚಿನ್ನವನ್ನು ಫಿಸಿಕಲ್ ಸ್ವರೂಪದಲ್ಲಿ ಖರೀದಿಸುವಾಗ ಜಿಎಸ್​​ಟಿ ಕೂಡ ಅನ್ವಯ ಆಗಿರುತ್ತದೆ.

ಡಿಜಿಟಲ್ ಚಿನ್ನದ ಮೇಲಿನ ಹೂಡಿಕೆ
ತೆರಿಗೆ ಲೆಕ್ಕಾಚಾರಕ್ಕೆ ಬರುವುದಾದರೆ ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಹಾಗೂ ಫಿಸಿಕಲ್ ಚಿನ್ನದ ಮೇಲಿನ ಹೂಡಿಕೆ ಮೇಲಿನ ಲಾಭ ಎರಡೂ ಒಂದೇ. ಯುವಜನರು ಚಿನ್ನದ ಮೇಲೆ ಹೂಡಿಕೆ ಮಾಡುವುದಕ್ಕೆ ಆರಿಸಿಕೊಳ್ಳುತ್ತಿರುವ ಪಾಪ್ಯುಲರ್ ವಿಧಾನ ಇದು. ನಾನಾ ಮೊಬೈಲ್ ವ್ಯಾಲೆಟ್​​ಗಳ ಮೂಲಕ ಡಿಜಿಟಲ್ ಚಿನ್ನದ ಮೇಲೆ ಹಣ ಹಾಕಬಹುದು. ಇದರಲ್ಲಿ ಕನಿಷ್ಠ ಹೂಡಿಕೆ ಮೊತ್ತ ಒಂದು ರೂಪಾಯಿ.

ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ (LTCG) ಆದಲ್ಲಿ ಡಿಜಿಟಲ್ ಚಿನ್ನಕ್ಕೆ ರಿಟರ್ನ್ಸ್ ಮೇಲೆ 20 ಪರ್ಸೆಂಟ್ ತೆರಿಗೆ, ಜತೆಗೆ ಸರ್​​ಚಾರ್ಜ್ ಮತ್ತು 4 ಪರ್ಸೆಂಟ್ ಸೆಸ್ ಕಟ್ಟಬೇಕಾಗುತ್ತದೆ. 36 ತಿಂಗಳಿಗಿಂತ ಕಡಿಮೆ ಅವಧಿಯದ್ದಾದರೆ ರಿಟರ್ನ್ಸ್​​ಗೆ ನೇರವಾಗಿ ತೆರಿಗೆ ಬೀಳಲ್ಲ.

ಕಾಗದ ರೂಪದ ಚಿನ್ನದಲ್ಲಿ ಹೂಡಿಕೆ
ಮ್ಯೂಚುವಲ್ ಫಂಡ್​​ಗಳು, ಎಕ್ಸ್​​​ಚೇಂಜ್ ಟ್ರೇಡೆಡ್ ಫಂಡ್​​ಗಳು (ಇಟಿಎಫ್) ಮತ್ತು ಸವರನ್ ಗೋಲ್ಡ್ ಬಾಂಡ್​​ಗಳು (ಎಸ್​​ಜಿಬಿ) ಇವುಗಳನ್ನು ಪೇಪರ್ ಚಿನ್ನದ ಹೂಡಿಕೆಗಳು ಎನ್ನಲಾಗುತ್ತದೆ. ಇಂಥ ಹೂಡಿಕೆಗಳಲ್ಲಿ ಚಿನ್ನವು ಕಾಗದದ ರೂಪದಲ್ಲಿರುತ್ತದೆ, ಗಟ್ಟಿಯೋ ಅಥವಾ ಆಭರಣದ ರೀತಿ ಫಿಸಿಕಲ್ ರೂಪದಲ್ಲಿ ಅಲ್ಲ. ಕಣ್ಣಿಗೆ ಕಾಣುವುದಿಲ್ಲ, ಕೈಯಿಂದ ಮುಟ್ಟಲು ಸಾಧ್ಯವಿಲ್ಲ.

ಈ ಹೂಡಿಕೆಗಳ ಪೈಕಿ ಮ್ಯೂಚುವಲ್ ಫಂಡ್ ರಿಟರ್ನ್ಸ್ ಮತ್ತು ಚಿನ್ನದ ಇಟಿಎಫ್​ಗಳ ಮೇಲಿನ ಗಳಿಕೆಗೆ ಚಿನ್ನದ ಗಟ್ಟಿಯ ಮೇಲಿನ ರಿಟರ್ನ್ಸ್​​ಗೆ ಹೇಗೆ ತೆರಿಗೆ ಹಾಕಲಾಗುತ್ತದೋ ಅದೇ ರೀತಿ ಬೀಳುತ್ತದೆ. ಆದರೆ ಸವರನ್ ಗೋಲ್ಡ್ ಬಾಂಡ್​​ಗಳಿಗೆ ಬೇರೆ ರೀತಿ ತೆರಿಗೆ ಲೆಕ್ಕಾಚಾರ ಇದೆ. ಉದಾಹರಣೆಗೆ, ಫಿಸಿಕಲ್ ಚಿನ್ನದ ಮೇಲಿನ ಹೂಡಿಕೆ ರೀತಿಯಲ್ಲೇ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್​​ಗೆ ಮ್ಯೂಚುವಲ್ ಫಂಡ್​​ಗಳು ಅಥವಾ ಇಟಿಎಫ್​ಗಳಿಗೆ 20 ಪರ್ಸೆಂಟ್ ತೆರಿಗೆ ಮತ್ತು 4 ಪರ್ಸೆಂಟ್ ಸೆಸ್ ಬೀಳುತ್ತದೆ.

ಇನ್ನು 36 ತಿಂಗಳ ಒಳಗಿನ ಅಲ್ಪಾವಧಿಯ ಗಳಿಕೆ ಮೇಲೆ ನೇರವಾಗಿ ತೆರಿಗೆ ಕಟ್ಟುವ ಅಗತ್ಯ ಇಲ್ಲ. ಈ ಆದಾಯವನ್ನು ಹೂಡಿಕೆದಾರರ ಇತರ ಮೂಲಗಳಿಂದ ಪಡೆದ ಗಳಿಕೆಗೆ ಸೇರಿಸಲಾಗುತ್ತದೆ. ಆ ನಂತರ ಆ ವ್ಯಕ್ತಿಗೆ ಅನ್ವಯ ಆಗುವ ಸ್ಲ್ಯಾಬ್​​ನಲ್ಲಿ ತೆರಿಗೆ ಹಾಕಲಾಗುತ್ತದೆ. ಇನ್ನು ಸವರನ್ ಗೋಲ್ಡ್ ಬಾಂಡ್​​ಗಳ ಮೇಲೆ ಪ್ರತಿ ವರ್ಷ ಬರುವ 2.5 ಪರ್ಸೆಂಟ್ ಬಡ್ಡಿಯನ್ನು ಇತರ ಮೂಲಗಳಿಂದ ಪಡೆದ ಆದಾಯ ಎಂದು ಪರಿಗಣಿಸಿ, ನಿಯಮಕ್ಕೆ ಅನುಸಾರ ತೆರಿಗೆ ಹಾಕಲಾಗುತ್ತದೆ.

ಸವರನ್ ಗೋಲ್ಡ್ ಬಾಂಡ್ ಹೂಡಿಕೆಗೆ ಎಂಟು ವರ್ಷಗಳ ನಂತರ ಹೂಡಿಕೆದಾರರು ಪಡೆಯುವ ರಿಟರ್ನ್ಸ್ ಸಂಪೂರ್ಣವಾಗಿ ತೆರಿಗೆರಹಿತ ಆಗಿರುತ್ತದೆ. ಒಂದು ವೇಳೆ ಮೆಚ್ಯೂರಿಟಿಗೂ (ಪರಿಪಕ್ವತೆ) ಮುನ್ನವೇ ಹೂಡಿಕೆ ವಾಪಸ್ ಪಡೆದುಕೊಂಡರೆ ಎಸ್​ಜಿಬಿ ರಿಟರ್ನ್ಸ್​​ಗೆ ವಿವಿಧ ತೆರಿಗೆ ದರ ಅನ್ವಯ ಆಗುತ್ತದೆ. ಸಾಮಾನ್ಯವಾಗಿ ಸವರನ್ ಗೋಲ್ಡ್ ಬಾಂಡ್​​ಗಳು 5 ವರ್ಷದ ಲಾಕಿಂಗ್ ಅವಧಿಯೊಂದಿಗೆ ಬರುತ್ತದೆ. ಅಷ್ಟರೊಳಗೆ ಹೂಡಿಕೆ ಹಿಂಪಡೆಯುವುದಕ್ಕೆ ಆಗಲ್ಲ. ಐದು ವರ್ಷದ ನಂತರ, ಮೆಚ್ಯೂರಿಟಿಗೂ ಮುಂಚೆ ಹಣ ವಾಪಸ್ ತೆಗೆದುಕೊಂಡರೆ ರಿಟರ್ನ್ಸ್ ಅನ್ನು ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್​ ಎಂದು ಪರಿಗಣಿಸಿ 20 ಪರ್ಸೆಂಟ್ ತೆರಿಗೆ ಮತ್ತು 4 ಪರ್ಸೆಂಟ್ ಸೆಸ್ ಬೀಳುತ್ತದೆ.

ಚಿನ್ನದ ಡೆರಿವೇಟಿವ್ ಮೇಲೆ ಬಂದ ರಿಟರ್ನ್ಸ್
ಚಿನ್ನವು ಡೆರಿವೇಟಿವ್ ಒಪ್ಪಂದದಲ್ಲಿ ಆಸ್ತಿಯಂತೆ ಇರುತ್ತದೆ. ಈ ಆಸ್ತಿಗೆ ತೆರಿಗೆ ನಿಯಮಗಳು ಪ್ರತ್ಯೇಕವಾಗಿವೆ. ಇದು ಮೂಲಭೂತವಾಗಿ ವ್ಯಾಪಾರ- ವ್ಯವಹಾರಕ್ಕೆ ದೊರೆಯುತ್ತದೆ.

ಉದಾಹರಣೆಗೆ, ಒಟ್ಟಾರೆ ವಹಿವಾಟು ಒಂದು ವರ್ಷದಲ್ಲಿ 2 ಕೋಟಿ ರೂಪಾಯಿಗಿಂತ ಕಡಿಮೆಗೆ ಮಿತಿ ಆಗಿದ್ದಲ್ಲಿ ರಿಟರ್ನ್ಸ್​​ನ 6 ಪರ್ಸೆಂಟ್ ತೆರಿಗೆ ಬೀಳುತ್ತದೆ. ಚಿನ್ನದ ಡೆರಿವೇಟಿವ್ ಮೇಲಿನ ರಿಟರ್ನ್ಸ್ ಅನ್ನು ವ್ಯವಹಾರದ ಆದಾಯ ಎಂದು ಕ್ಲೇಮ್ ಮಾಡಿಕೊಳ್ಳಬಹುದು. ಇದರಿಂದ ಇಂತಹ ವ್ಯವಹಾರಗಳ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ.

ತಜ್ಞರು ಹೇಳುವ ಪ್ರಕಾರ, ತಮ್ಮ ಲೆಕ್ಕಾಚಾರದ ಪುಸ್ತಕದಲ್ಲಿ ದಾಖಲೆಯನ್ನು ಇಡಬೇಕು. ಹಾಗಿದ್ದಲ್ಲಿ ಮಾತ್ರ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 44AD ಅಡಿಯಲ್ಲಿ ಅನುಕೂಲ ಸಿಗುತ್ತದೆ.

ಇದನ್ನೂ ಓದಿ: Guru Pushya Yoga: ಫೆ.25ಕ್ಕೆ ಗುರು-ಪುಷ್ಯ ಯೋಗ, ಏನಿದರ ವಿಶೇಷ?


ತಾಜಾ ಸುದ್ದಿ

Related Stories

Click on your DTH Provider to Add TV9 Kannada