ಬದುಕಿನಲ್ಲಿ ಶುಭ ಕಾರ್ಯಗಳು ಆಗುತ್ತಿರಬೇಕು, ವೃದ್ಧಿ ಆಗುತ್ತಾ ಸಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಮನೆಗೆ ಚಿನ್ನ ಅಥವಾ ಬೆಳ್ಳಿ ಮೊದಲಾದ ವಸ್ತುಗಳನ್ನು ತಂದಲ್ಲಿ ಅದು ಹೆಚ್ಚಬೇಕು ಅಂತಲ್ಲವೇ ಅಂದುಕೊಳ್ಳುವುದು. ಈ ರೀತಿ ಅಂದುಕೊಳ್ಳುತ್ತಿರುವವರಿಗಾಗಿಯೇ ಈ ಲೇಖನದ ಮೂಲಕ ಒಂದು ಸಿಂಪಲ್ ಆದ ಯೋಗವೊಂದರ ಬಗ್ಗೆ ತಿಳಿಸುತ್ತಿದ್ದೇವೆ. ಆ ಯೋಗದ ಹೆಸರು ಗುರು- ಪುಷ್ಯ ಯೋಗ. ಚಿನ್ನ ಖರೀದಿ, ದಾನ- ಧರ್ಮ, ಗೃಹಪ್ರವೇಶ, ಪೂಜೆ- ಪುನಸ್ಕಾರ, ಪ್ರಮುಖವಾದ ಒಪ್ಪಂದಗಳಿಗೆ ಸಹಿ ಹಾಕುವುದಕ್ಕೆ ಬಹಳ ಉತ್ತಮವಾದ ದಿನ ಇದು. 2021ರ ಫೆಬ್ರವರಿ 25ಕ್ಕೆ ಗುರು- ಪುಷ್ಯ ಯೋಗ ಇದೆ. ಆ ದಿನದಂದು ಕೆಲ ಕಾರ್ಯಗಳನ್ನು ಮಾಡುವುದರಿಂದ ಉತ್ತಮ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ. ಹಾಗಾದರೆ ಆ ದಿನದ ವಿಶೇಷ ಏನು? ಅಂದು ಯಾವೆಲ್ಲಾ ಕಾರ್ಯಗಳನ್ನು ಮಾಡಬೇಕು, ಏನು ಮಾಡಿದರೆ ಒಳ್ಳೆಯದು ಎಂಬಿತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಏನಿದು ಗುರು-ಪುಷ್ಯ ಯೋಗ? ಪುಷ್ಯ ನಕ್ಷತ್ರದ ಅಧಿಪತಿ ಗುರು. ಆದ್ದರಿಂದ ಗುರುವಾರದ ದಿನ ಪುಷ್ಯ ನಕ್ಷತ್ರ ಇದ್ದಲ್ಲಿ ಅದನ್ನು ಗುರು- ಪುಷ್ಯ ಯೋಗ ಎನ್ನಲಾಗುತ್ತದೆ. ಒಂದು ತಿಂಗಳಲ್ಲಿ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಪುಷ್ಯ ನಕ್ಷತ್ರ ಬರುತ್ತದೆ. ಇನ್ನು ಆ ದಿನದಂದು ಗುರುವಾರವೂ ಇದೆಯೇ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಆದರೆ, ಆ ದಿನ ಸಂಕ್ರಮಣ ಸೇರಿದಂತೆ ಇತರ ವರ್ಜ್ಯ ತಿಥಿ, ನಕ್ಷತ್ರಗಳು ಬಂದಲ್ಲಿ ಶುಭ ಕಾರ್ಯಗಳನ್ನು ಮಾಡುವಂತಿಲ್ಲ. ಜ್ಯೋತಿಷಿ ವಿಠ್ಠಲ ಭಟ್ ಅವರು ಈ ಬಗ್ಗೆ ಟಿವಿ9 ವೆಬ್ ಜೊತೆಗೆ ಮಾತನಾಡಿ, “ವಾಹನ ಖರೀದಿಗೆ, ಭೂಮಿ ಖರೀದಿಗೆ ವೈಯಕ್ತಿಕ ತಾರಾನುಕೂಲ ನೋಡಿಕೊಳ್ಳ ಬೇಕಾಗುತ್ತದೆ. ಆದರೆ ಚಿನ್ನ- ಬೆಳ್ಳಿ ಖರೀದಿ, ಬಟ್ಟೆ ಖರೀದಿ- ಧಾರಣೆ, ಆರೋಗ್ಯಕ್ಕೆ ಸಂಬಂಧಿಸಿದ ಔಷಧೋಪಚಾರ, ಕ್ಷೇತ್ರ ದರ್ಶನ, ಗುರುದೋಷ ಪರಿಹಾರಕ್ಕೆ ಈ ದಿನ ಬಹಳ ಉತ್ತಮ,” ಎಂದರು. ಜೊತೆಗೆ, ಹೊಸ ಕೋರ್ಸ್ ಸೇರುವುದಕ್ಕೆ, ತರಗತಿಗಳಿಗೆ ಹೋಗಲು ಶುರು ಮಾಡುವುದಕ್ಕೆ, ಆಹಾರ ಪಥ್ಯ, ಜಿಮ್- ಯೋಗ ಆರಂಭಿಸುವುದಕ್ಕೆ ಕೂಡ ಈ ದಿನ ಬಹಳ ಉತ್ತಮ ಎಂದು ಅವರು ಹೇಳಿದರು.
2021ರಲ್ಲಿ ಗುರು-ಪುಷ್ಯ ಯೋಗ ಇರುವ ದಿನಗಳಿವು: 25-2-2021 1-10-2021 28-10-2021 25-11-2021
ತಾರಾನುಕೂಲ ಎಂದರೇನು? ತಾರಾನುಕೂಲ ಅಂದರೇನು ಎಂಬುದು ಕೆಲವರ ಪ್ರಶ್ನೆ ಆಗಿರಬಹುದು. ಹಾಗೆಂದರೆ ಆಯಾ ದಿನದ ನಕ್ಷತ್ರವು ವ್ಯಕ್ತಿಯ ನಕ್ಷತ್ರಕ್ಕೆ ಹೊಂದಾಣಿಕೆ ಆಗುವುದು. ಅಂತೆಯೇ, ಗುರು ಪುಷ್ಯ ಯೋಗ ಇರುವ ದಿನದಂದು ಇರುವ ನಕ್ಷತ್ರವು ನಿಮ್ಮ ನಕ್ಷತ್ರಕ್ಕೆ ಅನುಕೂಲಕರವಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಂಡು ಮುಂದುವರೆಯುವುದು ಒಳ್ಳೆಯದು. ಇದಕ್ಕಾಗಿ ಒಮ್ಮೆ ಜ್ಯೋತಿಷಿಗಳನ್ನು ಭೇಟಿ ಆಗುವುದು ಉತ್ತಮ. ಆದರೆ ಚಿನ್ನ, ಬೆಳ್ಳಿ, ಹೊಸ ಬಟ್ಟೆಗಳ ಖರೀದಿ ಮತ್ತು ಧಾರಣೆಗೆ, ತೀರ್ಥ ಕ್ಷೇತ್ರ ದರ್ಶನ, ದಾನ- ಧರ್ಮ ಕಾರ್ಯಗಳು ಸೇರಿದಂತೆ ಪೂಜೆ- ಪುನಸ್ಕಾರಗಳನ್ನು ಗುರು ಪುಷ್ಯ ಯೋಗದಂದು ಮಾಡಲು ಯಾವುದೇ ಅಡ್ಡಿ ಇಲ್ಲ.
ಜ್ಯೋತಿಷಿ ವಿಠ್ಠಲ ಭಟ್
ಇದನ್ನೂ ಓದಿ: ವಿಷ್ಣುವನ್ನು ಹರಿ ಎಂದು ಏಕೆ ಕರೆಯುತ್ತಾರೆ? ಗುರುವಾರ ಪೂಜಿಸಲು ಇಲ್ಲಿವೆ ಕಾರಣಗಳು
ಫೆ 25ಕ್ಕೆ ಗುರು ಪುಷ್ಯ ಯೋಗ! ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿದೆ ಮಾಹಿತಿ