- Kannada News Photo gallery Kodagu Huthari Habba: Coorg's Harvest Festival and Ancient Kodava Traditions
ಕೊಡಗಿನಲ್ಲಿ ಹುತ್ತರಿ ಹಬ್ಬದ ಸಂಭ್ರಮ: ಏನಿದರ ವಿಶೇಷ? ಚಿತ್ರಗಳಲ್ಲಿ ನೋಡಿ
ಕೊಡಗಿನಲ್ಲಿ ಇಂದು ಹುತ್ತರಿ ಹಬ್ಬದ ಸಂಭ್ರಮ ಮನೆಮಾಡಿದೆ. ಇದು ಹೊಸ ಅಕ್ಕಿ ಅಥವಾ ಸುಗ್ಗಿಯ ಹಬ್ಬ ಎಂದೇ ಪ್ರಸಿದ್ಧ. ಈ ಹಬ್ಬದಲ್ಲಿ ಭತ್ತದ ಗದ್ದೆಯಿಂದ ಧಾನ್ಯಲಕ್ಷ್ಮಿಯನ್ನು ಮನೆಗೆ ಸ್ವಾಗತಿಸಲಾಗುತ್ತದೆ. ಸಾಂಪ್ರದಾಯಿಕ ಉಡುಗೆ ತೊಟ್ಟು ಗಾಳಿಯಲ್ಲಿ ಗುಂಡು ಹಾರಿಸಿ ಅದ್ಧೂರಿಯಾಗಿ ಸಂಭ್ರಮಿಸಲಾಗುತ್ತದೆ. ಗೆಣಸಿನ ಖಾದ್ಯಗಳು ಹಾಗೂ ಹುತ್ತರಿ ಕೋಲಾಟದಂತಹ ಜನಪದ ಕಲೆಗಳು ಈ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ.
Updated on: Dec 05, 2025 | 2:23 PM

ಕೊಡಗು ಜಿಲ್ಲೆಯಾದ್ಯಂತ ಈಗ ಹುತ್ತರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೊಡಗಿನಲ್ಲಿ ಆಚರಿಸುವ ಕೆಲವು ಹಬ್ಬಗಳಲ್ಲಿ ಹುತ್ತರಿ ಹಬ್ಬ ಬಹಳ ಪ್ರಮುಖ. ಕೊಡಗಿನ ಸುಗ್ಗಿಹಬ್ಬ ಎಂದೇ ಹೆಸರಾಗಿರುವ ಹುತ್ತರಿ ಹಬ್ಬವನ್ನು ಮನೆಮನೆಗಳಲ್ಲಿ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಧಾನ್ಯಲಕ್ಷ್ಮಿಗೆ ಭಕ್ತಿ ಭಾವದೊಂದಿಗೆ ಭತ್ತದ ಗದ್ದೆಯಿಂದ ಮನೆಗಳಿಗೆ ತಂದು ತುಂಬಿಸಿಕೊಳ್ಳುವ ವಿಶೇಷ ಹಬ್ಬ ಹುತ್ತರಿ. ಕೊಡಗಿನವರ ಜನಪದ ಕಲೆಗಳು ಅನಾವರಣವಾಗುವುದು ಕೂಡ ಇದೇ ಹಬ್ಬದಲ್ಲಿ.

ಮುಂಗಾರು ಆರಂಭದಲ್ಲಿ ಗದ್ದೆಯನ್ನು ಉತ್ತು-ಬಿತ್ತಿ ಕಟಾವಿನ ಹಂತಕ್ಕೆ ತಂದ ಕೊಡಗಿನವರು, ಭೂ ದೇವಿಗೆ ಕೃತಜ್ಞತಾ ಪೂರ್ವಕವಾಗಿ ಹಬ್ಬವನ್ನು ಆಚರಿಸಿಸುತ್ತಾರೆ. ಹುತ್ತರಿ ಎಂದರೆ ಹೊಸ ಅಕ್ಕಿ ಎಂದರ್ಥ. ಕೊಡಗಿನಲ್ಲಿ ಇದು ಪುತ್ತರಿ ಹಬ್ಬ ಎಂದೇ ಫೇಮಸ್. ಭತ್ತದ ಗದ್ದೆಯಿಂದ ಧಾನ್ಯಲಕ್ಷ್ಮಿಯನ್ನು ವಿಜೃಂಭಣೆಯಿಂದ ಮನೆಗೆ ತಂದು ತುಂಬಿಸಿಕೊಳ್ಳುವುದೇ ಹುತ್ತರಿ ಹಬ್ಬದ ವಿಶೇಷ. ಕೇರಳದ ಓಣಂ ಹಬ್ಬ ಕಳೆದು ಸರಿಯಾಗಿ ಮೂರು ತಿಂಗಳಲ್ಲಿ ಈ ಹಬ್ಬ ನಡೆಯುತ್ತದೆ.

ಈ ಹಬ್ಬವನ್ನು ಜಿಲ್ಲೆಯ ಹಲವೆಡೆ ಹಗಲು ಆಚರಣೆ ಮಾಡಿದರೆ ಮತ್ತೆ ಕೆಲವೆಡೆ ರಾತ್ರಿ ಆಚರಣೆ ಮಾಡುತ್ತಾರೆ. ಇನ್ನೂ ಮನೆಗಳನ್ನು ಸುಣ್ಣ ಬಣ್ಣದಿಂದ ತಳಿರು ತೋರಣಗಳಿಂದ ಶೃಂಗಾರಗೊಳಿಸಲಾಗಿರುತ್ತದೆ. ಇಂದು ಕೊಡಗು ಜಿಲ್ಲೆಯಾದ್ಯಂತ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಈ ಹಬ್ಬದಂದು ಸಾಂಪ್ರದಾಯಿಕ ಉಡುಪಿನಲ್ಲಿ ಮಹಿಳೆಯರು ಮತ್ತು ಪುರುಷರು ಕಂಗೊಳಿಸಿದರೆ, ಮತ್ತೊಂದೆಡೆ ಗಾಳಿಯಲ್ಲಿ ಗುಂಡು ಹಾರಿಸಿ ಭತ್ತದ ಗದ್ದೆಗೆ ಪೂಜೆ ಸಲ್ಲಿಸುವುದರ ಮೂಲಕ ತಮ್ಮ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತಾರೆ.

ಹಬ್ಬದ ದಿನ ಮೊದಲು ಮನೆಯಲ್ಲಿ ನೆರೆಕಟ್ಟಿ ,ದೇವರಿಗೆ ನೈವೇಧ್ಯ ಅರ್ಪಿಸಿ ಹಿರಿಯರ ಮೂಲಕ ಮೆರವಣಿಗೆಯಲ್ಲಿ ಭತ್ತದ ಗದ್ದೆಗೆ ತೆರಳಲಾಗುತ್ತದೆ. ಇಲ್ಲಿ ಭತ್ತದ ಗದ್ದೆಗೆ ಪೂಜೆ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿ ಎಲ್ಲಾರು ಒಟ್ಟಾಗಿ ಭತ್ತದ ಕದಿರನ್ನು ಮನೆಗಳಿಗೆ ತರುತ್ತಾರೆ. ಮಹಿಳೆಯರು ಹಾಗೂ ಪುರುಷರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಕದಿರು ಹಿಡಿದು ಪೊಲೀ...ಪೊಲೀ ದೇವಾ ಎಂದು ದೇವರನ್ನ ಸ್ಮರಿಸುತ್ತಾ ಮನೆಗಳಗೆ ಬರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

ವಿಶೇಷವಾಗಿ ಹಬ್ಬದಲ್ಲಿ ತಂಬಿಟ್ಟು ಹಾಗೂ ಹುತ್ತರಿ ಗೆಣಸಿನ ಖಾದ್ಯಗಳನ್ನು ತಯಾರಿಸಿ ಭೋಜನ ಮಾಡಲಾಗುತ್ತದೆ. ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಮತ್ತು ವಿವಿಧ ಸಂಘ ಸಂಸ್ಥೆಗಳು ಕೂಡ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ಅಲ್ಲದೆ ಹುತ್ತರಿ ಕೋಲಾಟ ಹಾಗೂ ಕೊಡವರ ವಿವಿಧ ಜನಪದ ಕಲೆಗಳ ಪ್ರದರ್ಶನವಾಗುವುದು ಇದೇ ಹುತ್ತರಿ ಹಬ್ಬದಲ್ಲಿ. ಗ್ರಾಮ ಗ್ರಾಮಗಳಲ್ಲಿ ಜನತೆ ಒಟ್ಟಾಗಿ ಸೇರಿ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಾರೆ.



