ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮೂರು ದಿನಗಳ ಹಿಂದೆ ಬಡವರು ನ್ಯಾಯಾಲಯಕ್ಕೆ ಹೋಗಿ ಪ್ರಯೋಜನವಿಲ್ಲ ಎಂದು ಹೇಳಿದ್ದರು. ಈ ಹೇಳಿಯು ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ. ನ್ಯಾಯಾಲಯಗಳಲ್ಲಿ ಬಡವರಿಗೆ ನ್ಯಾಯ ಸಿಗುತ್ತಿಲ್ಲವೆ ಎನ್ನುವ ಪ್ರಶ್ನೆ ಹಲವರಲ್ಲಿ ಮೂಡುವುದು ಸಹಜ. ಟಿವಿ9 ಡಿಜಿಟಲ್ ಸಂವಾದದಲ್ಲಿ ಈ ಕುರಿತು ಸುಪ್ರಿಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ , ಕರ್ನಾಟಕ ಬಾರ್ ಕೌನ್ಸಿಲ್ ಮಾಜಿ ಮುಖ್ಯಸ್ಥ ಪಿ.ಪಿ. ಹೆಗ್ಡೆ ಮತ್ತು ಟಿವಿ9ನ ಕಾನೂನು ವರದಿಗಾರರಾದ ರಮೇಶ್ ಚರ್ಚಿಸಿದರು. ಆ್ಯಂಕರ್ ಮಾಲ್ತೇಶ್ ಕಾರ್ಯಕ್ರಮ ನಡೆಸಿಕೊಟ್ಟರು.
ಸಂವಾದದ ಆರಂಭದಲ್ಲಿ ಮಾತನಾಡಿದ ಟಿವಿ9 ಕಾನೂನು ವರದಿಗಾರ ರಮೇಶ್, ರಂಜನ್ ಗೊಗೊಯ್ ಹೇಳಿರುವ ಮಾತು ನೂರಕ್ಕೆ ನೂರು ನಿಜ. ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳೇ ಈ ಮಾತು ಹೇಳುವಾಗ ನಾವು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಅವರು ಕಾರ್ಯನಿರ್ವಹಿಸುವ ಕಾಲಕ್ಕೆ ಈ ಕುರಿತು ಒಂದಷ್ಟು ಸುಧಾರಣೆಗಳನ್ನು ತಂದಿದ್ದರೆ ಅಥವಾ ಈ ಬಗ್ಗೆ ಕ್ರಮಕೈಗೊಂಡಿದ್ದರೆ ಹೆಚ್ಚು ಸೂಕ್ತವಾಗಿರುತ್ತಿತ್ತು. ಕರ್ನಾಟಕ ಹೈಕೋರ್ಟ್ನಲ್ಲಿ 46 ನ್ಯಾಯಾಧೀಶರಿದ್ದು, ಪ್ರತಿ ನಿತ್ಯ 200 ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಹಳೆಯ ಕೇಸ್ಗಳ ಕಡೆ ಗಮನ ಕೋಡಲು ಅಥವಾ ಹೊಸ ಕೇಸ್ಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ ಎಂದರು.
ನ್ಯಾಯಾಲಯಗಳಲ್ಲಿ ಪ್ರಕರಣಗಳು ವರ್ಷಗಟ್ಟಲೆ ಬಾಕಿ ಉಳಿಯುವ ಕಾರಣ, ಜನರು ರೌಡಿಗಳ ನೆರವು ಪಡೆಯಲು ಅಥವಾ ಅಧಿಕಾರಿಗಳಿಗೆ ಲಂಚ ನೀಡಲು ಮುಂದಾಗುತ್ತಾರೆ. ಸಾರ್ವಜನಿಕರು ಅಡ್ಡದಾರಿ ಹಿಡಿಯಲು ಪ್ರಾರಂಭಿಸುತ್ತಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನ ಹರಿಸಿ ಕ್ರಮತೆಗೆದುಕೊಳ್ಳುವುದು ಅಗತ್ಯ ಎಂದು ರಮೇಶ್ ಹೇಳಿದ್ದಾರೆ.
ನ್ಯಾಯಾಲಯಗಳಿಗೆ ಮೂಲಸೌಕರ್ಯ ಬೇಕು
ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನ ಹರಿಸಬೇಕಾಗಿದೆ. ಮುಖ್ಯನ್ಯಾಯಮೂರ್ತಿ ಜೊತೆಗೆ ಕೇಂದ್ರ ಸರ್ಕಾರ ಮಾತನಾಡಿ ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ಸುಧಾರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಏಕೆ ಇಷ್ಟು ಪ್ರಕರಣಗಳು ಬಾಕಿ ಉಳಿದಿವೆ ಎಂಬ ಬಗ್ಗೆ ನ್ಯಾಯಾಲಯದ ಜೊತೆಗೆ ಕೇಂದ್ರ ಸರ್ಕಾರ ಕೂತು ಮಾತುಕತೆ ನಡೆಸಿ ಸುಧಾರಣೆ ತರಬೇಕಾಗಿದೆ. ಆದರೆ ಇಂತಹ ಜವಾಬ್ದಾರಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಕ್ಕೆ ಇಲ್ಲ. ಅಧೀನ ನ್ಯಾಯಾಲಯಗಳಲ್ಲಿನ ನ್ಯಾಯಧೀಶರ ಸಂಖ್ಯೆಯನ್ನು ಹೆಚ್ಚಿಸಬೇಕು. ಹಾಗೂ ಸರ್ವೊಚ್ಛ ನ್ಯಾಯಾಲಯಗಳಲ್ಲಿ 5 ನಿಮಿಷದ ಕೇಸ್ಗಳನ್ನು 1 ಗಂಟೆ ನಡೆಸುತ್ತಿರುವ ಕುರಿತು ಗಮನಹರಿಸಿ ನ್ಯಾಯಾಧೀಶರಿಗೆ ತರಬೇತಿ ನೀಡಬೇಕು ಎಂದು ಸುಪ್ರೀಂಕೋರ್ಟ್ನ ನಿವೃತ ನ್ಯಾಯಮೂರ್ತಿಗಳಾದ ಗೋಪಾಲ್ ಗೌಡ ಹೇಳಿದರು.
ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ನ ಮಾಜಿ ಮುಖ್ಯಸ್ಥ ಪಿ.ಪಿ. ಹೆಗ್ಡೆ ಮಾತನಾಡಿ, ಈಗಿನ ನ್ಯಾಯಾಲಯ ವ್ಯವಸ್ಥೆಯಲ್ಲಿ ನ್ಯಾಯದಾನ ತಡವಾಗುತ್ತಿರುವುದು ನಿಜ. ಆದರೆ ಕೆಲವು ಸುಧಾರಣೆಗಳು ಕೂಡ ಇತ್ತೀಚಿನ ದಿನಗಳಲ್ಲಿ ಜಾರಿಗೆ ಬಂದಿದೆ. ನಮ್ಮಂತಹ ದೇಶಗಳಲ್ಲಿ ಸರ್ಕಾರಗಳು ಮೊದಲು ಮೂಲಸೌಕರ್ಯಗಳಾದ ಆಹಾರ, ಶಿಕ್ಷಣ ನೀಡಲು ಗಮನ ಹರಿಸುತ್ತವೆ. ನಂತರದಲ್ಲಿ ನ್ಯಾಯ ವ್ಯವಸ್ಥೆ ಕಡೆ ಗಮನಹರಿಸುತ್ತವೆ ಎಂದು ಹೇಳಿದರು.
ಇದನ್ನೂ ಓದಿ: Tv9 Facebook Live | ಬಿಬಿಎಂಪಿ ಹೊಸ ಪಾರ್ಕಿಂಗ್ ನೀತಿ; ವರವೋ? ಬರೆಯೋ?
Published On - 10:15 pm, Wed, 17 February 21