ರಾಹುಲ್, ಪ್ರಿಯಾಂಕಾಗೆ ಬೇಳೆ, ಬಟಾಣಿಗೂ ವ್ಯತ್ಯಾಸ ಗೊತ್ತಿಲ್ಲ: ಬೆಂಗಳೂರಿನಲ್ಲಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

| Updated By: ganapathi bhat

Updated on: Apr 06, 2022 | 7:54 PM

ಕಾಂಗ್ರೆಸ್​ನವರಿಗೆ ರೈತರ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ರಾಹುಲ್, ಪ್ರಿಯಾಂಕಾಗೆ ಬೇಳೆ, ಬಟಾಣಿಗೂ ವ್ಯತ್ಯಾಸ ಗೊತ್ತಿಲ್ಲ ಎಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

ರಾಹುಲ್, ಪ್ರಿಯಾಂಕಾಗೆ ಬೇಳೆ, ಬಟಾಣಿಗೂ ವ್ಯತ್ಯಾಸ ಗೊತ್ತಿಲ್ಲ: ಬೆಂಗಳೂರಿನಲ್ಲಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್
ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಪಕ್ಷ ಬಲಗೊಳಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್​ ಪಕ್ಷದಲ್ಲಿ ನಾಯಕತ್ವ ವಿಫಲವಾಗಿದೆ. ಕಾಂಗ್ರೆಸ್​ನಲ್ಲಿ ನಾಯಕತ್ವವೇ ಇಲ್ಲ. ಕಾಂಗ್ರೆಸ್, ಪಕ್ಷ ಸಂಘಟನೆಗೆ ಶ್ರಮವೂ ಹಾಕುತ್ತಿಲ್ಲ. ಬಿಜೆಪಿ ಪಕ್ಷದ ಬಲದ ಕುರಿತು ನಮಗೆ ವಿಶ್ವಾಸವಿದೆ ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

ಗುರುವಾರ (ಫೆ.18) ಹಾಸನದಲ್ಲಿ ಬಿಜೆಪಿ ಪ್ರಕೋಷ್ಟಗಳ ಬೃಹತ್ ಸಮಾವೇಶ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದಾರೆ. ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಅವರು, ನಗರದ ಕುಮಾರಕೃಪಾ ಗೆಸ್ಟ್ ಹೌಸ್​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ವೇಳೆ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ರಾಹುಲ್ ಗಾಂಧಿ ನಾಯಕತ್ವ ವಿಫಲವಾಗಿದೆ. ಸಂಸತ್​​ನಲ್ಲಿ ರಾಹುಲ್​ ಗಾಂಧಿ ಮಾತಾಡಿದ್ದು ಜನ ನೋಡಿದ್ದಾರೆ. ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕತ್ವ ಗೊಂದಲದಲ್ಲಿದೆ ಎಂದು ಅರುಣ್ ಸಿಂಗ್ ಕಾಂಗ್ರೆಸ್ ನಾಯಕತ್ವವನ್ನು ಟೀಕಿಸಿದ್ದಾರೆ.

ನಾವು ರೈತರ ಆದಾಯ ದ್ವಿಗುಣಗೊಳಿಸಲು ಮುಂದಾಗಿದ್ದೇವೆ. ಕಾಂಗ್ರೆಸ್​ನವರಿಗೆ ರೈತರ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ರಾಹುಲ್, ಪ್ರಿಯಾಂಕಾಗೆ ಬೇಳೆ, ಬಟಾಣಿಗೂ ವ್ಯತ್ಯಾಸ ಗೊತ್ತಿಲ್ಲ. ಎಂದಾದರೂ ಅವರು ಕೃಷಿ ಭೂಮಿಗೆ ಹೋಗಿ ನೋಡಿದ್ದಾರಾ? ರೈತರ ಕಷ್ಟ ಅವರಿಗೆ ಏನೇನೂ ಗೊತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಅರುಣ್ ಸಿಂಗ್ ಕುಟುಕಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ವಿಚಾರವಾಗಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಅರುಣ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿಯವರ ಹೇಳಿಕೆ ತೀರಾ ಹಾಸ್ಯಾಸ್ಪದ.. ಅವರ ಮನಸ್ಥಿತಿ ಏನು? ಕುಮಾರಸ್ವಾಮಿ ಯಾಕೆ ಇಷ್ಟು ಸಣ್ಣಮನಸ್ಥಿತಿ ತೋರಿಸುತ್ತಿದ್ದಾರೆ? ಅವರಿಗೆ ಚಂದಾ ಹಣ ಸಿಗುವುದಿಲ್ಲ ಎಂದು ಯೋಚನೆ ಅಷ್ಟೇ ಎಂದು ಹೆಚ್.ಡಿ.ಕೆ. ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾವು ಪರಿಷತ್​ನಲ್ಲಿ JDS ಜತೆ ಮೈತ್ರಿ ಮಾಡಿಕೊಂಡಿರಲಿಲ್ಲ. ಜೆಡಿಎಸ್​​​ನವರೇ ನಮ್ಮ ಅಭ್ಯರ್ಥಿಯನ್ನು ಮೊದಲು ಬೆಂಬಲಿಸಿದರು. ನಂತರ ನಾವು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿದೆವು ಅಷ್ಟೇ ಎಂದು ಅರುಣ್ ಹೇಳಿಕೆ ನೀಡಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿಯಲ್ಲಿ ಆಂತರಿಕವಾಗಿ ಮುಜುಗರ ತರುವಂಥಾ ಹೇಳಿಕೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅರುಣ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ನಾಯಕರು ವೈಯಕ್ತಿಕ ಸ್ವಾರ್ಥ ದೂರ ಇಡಬೇಕು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಗೋಹತ್ಯೆ ನಿಷೇಧ ಕಾಯ್ದೆಯನ್ನು ಬಿ.ಎಸ್. ಯಡಿಯೂರಪ್ಪ ಜಾರಿಗೆ ತಂದಿದ್ದಾರೆ. ಇಂಥ ಮೂಲ ವಿಷಯಗಳನ್ನು ಬಿಜೆಪಿ ಜಾರಿಗೆ ತರುತ್ತಿದೆ. ಈ ಬಗ್ಗೆ ಬಿಜೆಪಿ ನಾಯಕರು ವೈಯಕ್ತಿಕ ಸ್ವಾರ್ಥಗಳನ್ನು ದೂರ ಇಡಬೇಕು. ಪಕ್ಷದ ಎಲ್ಲಾ ಕಾರ್ಯಕರ್ತರೂ ಯೋಚನೆ ಮಾಡಬೇಕು ಎಂದು ಯತ್ನಾಳ್​​ ಹೇಳಿಕೆ ಕುರಿತು ಅರುಣ್​ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಮಂದಿರಕ್ಕೆ ದೇಣಿಗೆ ಸಂಗ್ರಹ, ಟೂಲ್ ಕಿಟ್, ಪೆಟ್ರೋಲ್​ ದರ ಏರಿಕೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದೇನು?

Greta Thunberg toolkit | ಕೇಂದ್ರ ಸರ್ಕಾರಕ್ಕೆ ಭಯ ಶುರುವಾಗಿದೆ; ದಿಶಾ ರವಿ ಬಂಧನ ಖಂಡಿಸಿದ ರಾಹುಲ್ ಗಾಂಧಿ

Published On - 10:19 pm, Wed, 17 February 21