ಮಂದಿರಕ್ಕೆ ದೇಣಿಗೆ ಸಂಗ್ರಹ, ಟೂಲ್ ಕಿಟ್, ಪೆಟ್ರೋಲ್​ ದರ ಏರಿಕೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದೇನು?

HD Kumaraswamy Press Meet | ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ವಿಚಾರಕ್ಕೆ ಸಂಬಂಧಿಸಿ, ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದಾರೆ.

  • TV9 Web Team
  • Published On - 15:59 PM, 17 Feb 2021
ಮಂದಿರಕ್ಕೆ ದೇಣಿಗೆ ಸಂಗ್ರಹ, ಟೂಲ್ ಕಿಟ್, ಪೆಟ್ರೋಲ್​ ದರ ಏರಿಕೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದೇನು?
ಹೆಚ್​.ಡಿ ಕುಮಾರಸ್ವಾಮಿ

ಬೆಂಗಳೂರು: ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ವಿಚಾರಕ್ಕೆ ಸಂಬಂಧಿಸಿ, ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ಕುರಿತಂತೆ ಮಾತನಾಡಿದ ಅವರು, ಬೀದಿ ಬೀದಿಯಲ್ಲಿ ಪೋಲಿ ಪುಂಡರು ಹಣ ಸಂಗ್ರಹಿಸುತ್ತಿದ್ದಾರೆ. ಇದನ್ನು ತಡೆಯುವುದು ಸರ್ಕಾರದ ಜವಾಬ್ದಾರಿ. ಅವರಿಗೆ ದೇಣಿಗೆ ಸಂಗ್ರಹಿಸಲು ಅನುಮತಿ ನೀಡಿರುವರು ಯಾರು? ಅವರು ಹಣ ಸಂಗ್ರಹಿಸಿ ಮಂದಿರ ನಿರ್ಮಾಣಕ್ಕೆ ಕೊಡುತ್ತಿದ್ದಾರಾ? ಎಂದು ಪ್ರಶ್ನೆ ಒಡ್ಡಿದ್ದಾರೆ.

ನಾವು ಚಿಲ್ಲರೆ ರಾಜಕಾರಣ ಮಾಡಿಕೊಂಡು ಬಂದವರಲ್ಲ. ನಾವು ಸ್ವಾಭಿಮಾನದಿಂದ ಬದುಕಿದ್ದೇವೆ. ನಾವು ಯಾವುದೇ ಕಾರಣಕ್ಕೂ ಬೆಂಕಿ ಹಚ್ಚುವ ಕೆಲಸ ಮಾಡುವವರಲ್ಲ. ಬೆಂಕಿ ಹಚ್ಚುವ ಸಂಸ್ಕೃತಿ ನಿಮ್ಮದು. ಬೆಂಕಿ ಆರಿಸುವ ಸಂಸ್ಕೃತಿ ನಮ್ಮದು. ದೇಣಿಗೆ ಸಂಗ್ರಹಿಸುವುದಕ್ಕೆ ನಮ್ಮ ಮನೆಗೆ ಬರುತ್ತಿದ್ದಾರೆ. ಏನಪ್ಪ ಇದು? ಎಂದು ಪ್ರಶ್ನಿಸಿದರೆ ನನಗೆ ಬೆದರಿಕೆ ಹಾಕುತ್ತಾರೆ. ದೇಶದ ಪ್ರತೀಕ ಎಂದು ನನಗೇ ಬೆದರಿಕೆ ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯವೂ ಇಲ್ಲ. ನಾನು ಚುನಾವಣೆ ದೃಷ್ಟಿಯಿಂದ ಯಾವುದೇ ಹೇಳಿಕೆ ನೀಡಿಲ್ಲ. ರಾಜ್ಯದ ಸಮಸ್ಯೆಗಳ ಬಗ್ಗೆ ಮಾತ್ರ ನಾನು ಚರ್ಚೆ ಮಾಡುತ್ತೇನೆ. ದೇಶದಲ್ಲಿ ಮಾಧ್ಯಮಗಳಿಗೂ ಸ್ವಾತಂತ್ರ್ಯವಿಲ್ಲ. ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಇಲ್ಲದಂತಾಗಿದೆ. ದೇಣಿಗೆ ಸಂಗ್ರಹಿಸಿದ ಬಗ್ಗೆ ಯಾರಾದ್ರೂ ಲೆಕ್ಕವನ್ನ ಕೊಡುತ್ತಿದ್ದಾರಾ? ಲೇಬಲ್ ಇಲ್ಲದೆ ಹಲವರು ದೇಣಿಗೆಯನ್ನು ಸಂಗ್ರಹಿಸುತ್ತಿದ್ದಾರೆ. ಇದರ ಬಗ್ಗೆ ಸರಿಪಡಿಸಿಕೊಳ್ಳಿ ಎಂದು ನಾನು ಹೇಳಿದ್ದೇನೆ. ನಾನು ಹೇಳಿರುವುದರಲ್ಲಿ ಏನಾದರೂ ತಪ್ಪು ಇದೆಯಾ? ಎಂದು ಪ್ರಶ್ನಿಸಿದ್ದಾರೆ.

ದೇವರ ಅನುಗ್ರಹದಿಂದ ಪ್ರಧಾನಿಯಾಗಿದ್ದೇನೆಂದು ನಮ್ಮ ತಂದೆ ಹೆಚ್.ಡಿ. ದೇವೇಗೌಡರು ಶೃಂಗೇರಿಯಲ್ಲಿ ದೇವರ ಸಮ್ಮುಖದಲ್ಲಿ ಹೇಳಿದ್ದಾರೆ. ನಾನು ಸಮಾಜ ಒಡೆಯುವುದಕ್ಕಾಗಿ ರಾಜಕೀಯಕ್ಕೆ ಬಂದಿಲ್ಲ. ನಾನು ಯಾವುದೇ ಧರ್ಮ ರಾಜಕಾರಣವನ್ನು ಮಾಡುವುದಿಲ್ಲ. ಪಾರದರ್ಶಕವಿಲ್ಲದೆ ದೇಣಿಗೆ ಸಂಗ್ರಹ ನಿಲ್ಲಿಸುವಂತೆ ಆಗ್ರಹಿಸುತ್ತೇನೆ. ಪಾರದರ್ಶಕವಾಗಿ ಎಷ್ಟು ದೇಣಿಗೆಯನ್ನಾದರೂ ಸಂಗ್ರಹ ಮಾಡಲಿ. ರಾಮನ ಹೆಸರಿನಲ್ಲಿ ದುರ್ಬಳಕೆಯಾಗಬಾರದು ಎಂದು ಮಾತನಾಡಿದ್ದಾರೆ.

ಇದನ್ನೂ ಓದಿ: ರಾಮ ಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ: ಸಿದ್ದರಾಮಯ್ಯ!

ದೇಶದಲ್ಲಿ ಎಲ್ಲವೂ ಆನ್‌ಲೈನ್ ಆಗಿದೆ ಎಂದು ಹೇಳಿಬಿಟ್ಟಿದ್ದಾರೆ. ದೇಣಿಗೆಯನ್ನು ಸಹ ಆನ್‌ಲೈನ್‌ನಲ್ಲೇ ಸಂಗ್ರಹ ಮಾಡಲಿ. ಅದರ ಬಗ್ಗೆ ಬೀದಿ ಬೀದಿಯಲ್ಲಿ ಜಾಹೀರಾತು ಕೂಡ ನೀಡಲಿ. ಅದು ಬಿಟ್ಟು ಮನೆಗೆ ಏಕೆ ಸ್ಟಿಕ್ಕರ್‌ಗಳನ್ನು ಅಂಟಿಸುತ್ತೀರಿ? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ದಿಶಾ ರವಿ ಬಂಧನದ ಬಗ್ಗೆ ಮಾತನಾಡುತ್ತ, ‘ಟೂಲ್ ಕಿಟ್’ ಮಾಡುವುದನ್ನು ಮೊದಲು ಬ್ಯಾನ್ ಮಾಡಲಿ. ದಿಶಾ ರವಿ ಬ್ಯಾಕ್‌ಗ್ರೌಂಡ್ ಏನೆಂದು ನನಗೆ ಗೊತ್ತಿಲ್ಲ. ಹೋರಾಟ ಮಾಡಿಕೊಂಡು ಬಂದ ಹೆಣ್ಣುಮಗಳೆಂದು ಬರೆದಿದ್ದಾರೆ. ನಮ್ಮ ಹಕ್ಕುಗಳನ್ನು ಮೊಟಕುಗೊಳಿಸುವುದಕ್ಕೆ ಹೋಗಿದ್ದಾರೆ. ನಮ್ಮ ಸ್ವಾತಂತ್ರ್ಯವನ್ನು ಅಪಹರಣ ಮಾಡಲು ಹೊರಟಿದ್ದಾರೆ. ಇದು ಅಘೋಷಿತ ತುರ್ತು ಪರಿಸ್ಥಿತಿಯಾಗಿದೆ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದರು. ಈಗ ಇರುವವರು ಅಘೋಷಿತ ತುರ್ತು ಪರಿಸ್ಥಿತಿ ಹೇರಿದ್ದಾರೆ. ನಾನು ದೇಶವನ್ನು ರಕ್ಷಣೆ ಮಾಡುತ್ತೇನೆ ಜಾಗಟೆ ಹೊಡೆಯಲ್ಲ. ನನ್ನ ಜವಾಬ್ದಾರಿ ಏನಿದೆ ಎಂದು ಅದನ್ನು ನಿಭಾಯಿಸುತ್ತೇನೆ. ಸಾಮಾಜಿಕ ಜಾಲತಾಣಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಪೆಟ್ರೋಲ್ ದರ ಏರಿಕೆ ಬಗ್ಗೆ ಮಾತನಾಡಿದ ಅವರು, ಪೆಟ್ರೋಲ್ ದರ 15 ದಿನದಲ್ಲಿ 100 ರೂಪಾಯಿ ಮಾಡಿದ್ದೀರಿ? ಇದಾ ನಿಮ್ಮ ಸಾಧನೆ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಗ್ಯಾಸ್ ದರ ಕೂಡ ದುಬಾರಿಯಾಗಿದೆ. ಬಡವರು ಗ್ಯಾಸ್ ಸಿಲಿಂಡರ್ ಹೇಗೆ ಖರೀದಿಸಬೇಕು? ದೇಶದ ಮುಗ್ಧ ಜನರ ಜತೆ ಚೆಲ್ಲಾಟವಾಡುತ್ತಿದ್ದಾರೆ. ಇದೇನಾ ನೀವು ರೈತರನ್ನು ಉದ್ಧಾರ ಮಾಡುವುದು ಎಂದು ಕಿಡಿ ಕಾರಿದ್ದಾರೆ.