
ಬೆಳಗಾವಿ, ಅಕ್ಟೋಬರ್ 13: ಕರ್ನಾಟಕದೆಲ್ಲೆಡೆ ಸೈಬರ್ ವಂಚನೆಯ (Cyber Fraud) ಜಾಲ ಹೆಚ್ಚುತ್ತಿದೆ. ನಾನಾ ವಿಧದಲ್ಲಿ ಜನರನ್ನು ಮೂರ್ಖರನ್ನಾಗಿಸುವ ಈ ವಂಚಕರು, ಕೋಟಿಗಟ್ಟಲೆ ಹಣ ದೋಚುತ್ತಿದ್ದಾರೆ. ಕೇವಲ ಶ್ರೀಮಂತ ವ್ಯಕ್ತಿಗಳಿಗೆ ಮೋಸ ಮಾಡುತ್ತಿದ್ದವರು ಈಗ ಜನ ಸಾಮಾನ್ಯರನ್ನೂ ಬಿಡುತ್ತಿಲ್ಲ. ಈ ನಡುವೆ ರಾಜ್ಯದ ಹಲವೆಡೆ ಈಗ ಟ್ರಾಫಿಕ್ ಪೊಲೀಸರ ಹೆಸರಿನಲ್ಲಿ ಇ-ಚಲನ್ ಕಳುಹಿಸಿ ವಂಚಿಸುವ ಜಾಲ ತಲೆಯೆತ್ತಿದೆ. ಬೆಳಗಾವಿಯಲ್ಲಿ ವಾಹನ ಚಾಲಕರೊಬ್ಬರು 40,000 ರೂ.ಗಳನ್ನು ಕಳೆದುಕೊಂಡಿದ್ದಾರೆ.
ಸೈಬರ್ ವಂಚಕರು ಟ್ರಾಫಿಕ್ ಪೊಲೀಸರ ಹೆಸರಿನಲ್ಲಿ ಮೊದಲಿಗೆ ಮೊಬೈಲ್ ಫೋನ್ಗಳಿಗೆ APK ಫೈಲ್ವೊಂದನ್ನು ಕಳುಹಿಸುತ್ತಾರೆ. ಸಾಮಾನ್ಯವಾಗಿ ಅಧಿಕೃತವೋ ಅನಧಿಕೃತವೋ ಎಂದು ತಿಳಿಯದೆ ಲಿಂಕ್ ಮೇಲೆ ಒತ್ತಿದಾಗ ನಿಮ್ಮ ಫೋನ್ನ ಪೂರ್ತಿ ಡಾಟಾ ವಂಚಕರ ಕೈಗೆ ಸೇರುತ್ತದೆ. ಬ್ಯಾಂಕ್ ಖಾತೆಯ ವಿವರವೂ ಅವರ ಕೈಸೇರುವುದರಿಂದ ಖಾತೆಯಲ್ಲಿರುವಷ್ಟು ಹಣವನ್ನೂ ದೋಚುತ್ತಾರೆ.
ಬೆಳಗಾವಿಯಲ್ಲೂ ಹಲವು ಬಾರಿ ಚಾಲಕರಿಗೆ ಇಂತಹ ಸಂದೇಶಗಳು ಬಂದಿದ್ದು, ಟ್ರಾಫಿಕ್ ಪೊಲೀಸರೆಂದು ಹೇಳಿಕೊಂಡು ಮೋಸ ಮಾಡಲಾಗಿತ್ತು. ನೀವು ಇನ್ನೂ ಬಾಕಿಯಿರುವ ಟ್ರಾಫಿಕ್ ದಂಡವನ್ನು ಪಾವತಿಸಿಲ್ಲ, ಅದನ್ನು ಪಾವತಿಸಬೇಕಾದಲ್ಲಿ ಒಂದು ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಿ ಎಂದು APK ಪೈಲ್ ಒಂದನ್ನು ಕಳುಹಿಸುತ್ತಾರೆ. ಅದನ್ನು ಡೌನ್ಲೋಡ್ ಮಾಡಿಕೊಂಡವರ ಪೂರ್ತಿ ಡಾಟಾ ವಂಚಕರ ಕೈ ಸೇರುತ್ತದೆ. ಹೀಗೆ ಬೆಳಗಾವಿಯ ವಾಹನ ಚಾಲಕರೊಬ್ಬರು 40,000 ರೂ.ಗಳನ್ನು ಕಳೆದುಕೊಂಡಿದ್ದಾರೆ.
ಶಿವಮೊಗ್ಗದಲ್ಲಿಯೂ ಇಂಥದ್ದೇ ಪ್ರಕರಣಗಳು ನಡೆದಿದ್ದು, ನಿವಾಸಿಯೊಬ್ಬರು ಇತ್ತೀಚೆಗೆ ಸಂಚಾರ ದಂಡವನ್ನು ಪರಿಶೀಲಿಸಲು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಎರಡು ಬ್ಯಾಂಕ್ ಖಾತೆಗಳಿಂದ 1.5 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.
ಇದನ್ನೂ ಓದಿ Cyber Fraud: ದೇಶದ ವಿವಿಧೆಡೆ ಕೋಟಿ ಕೋಟಿ ದೋಚುತ್ತಿದ್ದ ಸೈಬರ್ ವಂಚಕರ ಜಾಲ ಭೇದಿಸಿದ ದಾವಣಗೆರೆ ಪೊಲೀಸ್
Published On - 1:44 pm, Mon, 13 October 25