ಲಾಕ್​ಡೌನ್​ನಲ್ಲಿ ಬಾಳೆ ಬೆಳೆದು 8 ಲಕ್ಷ ನಷ್ಟ; ಛಲ ಬಿಡದೇ ದ್ರಾಕ್ಷಿ ಬೆಳೆದು ಸ್ಪೂರ್ತಿಯಾದ ಯಾದಗಿರಿಯ ಯುವ ರೈತ

|

Updated on: Mar 16, 2021 | 2:33 PM

ಆರ್ಥಿಕವಾಗಿ ಸಾಕಷ್ಟು ಸಂಕಷ್ಟ ಎದುರಾದರೂ ಎದೆಗುಂದದೆ ಇದೀಗ ಯುವ ರೈತ ದ್ರಾಕ್ಷಿ ಬೆಳೆಯಲು ಮುಂದಾಗಿದ್ದಾರೆ. 8 ಎಕರೆ ಜಮೀನಿನಲ್ಲಿ ದ್ರಾಕ್ಷಿಯನ್ನು ಬೆಳೆದಿದ್ದು, ಬೆಳೆ ಉತ್ತಮವಾಗಿ ಬಂದಿದೆ.

ಲಾಕ್​ಡೌನ್​ನಲ್ಲಿ ಬಾಳೆ ಬೆಳೆದು 8 ಲಕ್ಷ ನಷ್ಟ; ಛಲ ಬಿಡದೇ ದ್ರಾಕ್ಷಿ ಬೆಳೆದು ಸ್ಪೂರ್ತಿಯಾದ ಯಾದಗಿರಿಯ ಯುವ ರೈತ
ಯುವ ರೈತ ತಮ್ಮಣ್ಣಗೌಡ ಪಾಟೀಲ್
Follow us on

ಯಾದಗಿರಿ: ಬಾಳೆ ಬೆಳೆದು ಮಾರಾಟ ಮಾಡಲಾಗದೆ 8 ಲಕ್ಷ  ನಷ್ಟ ಅನುಭವಿಸಿದ್ದ ಯುವ ರೈತನೋರ್ವ ಈಗ ದ್ರಾಕ್ಷಿ ಬೆಳೆಯುವ ಮೂಲಕ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿ ಎಲ್ಲರಿಗೆ ಸ್ಪೂರ್ತಿಯಾಗಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದ ಯುವ ರೈತ ತಮ್ಮಣ್ಣಗೌಡ ಪಾಟೀಲ್ ಅವರ ಪ್ರಯತ್ನ ನಿಜಕ್ಕೂ ರೈತರ ಪಾಲಿಗೆ ಆಶಾದಾಯಕ ಬೆಳವಣಿಗೆಯಾಗಿದೆ.

8 ಲಕ್ಷ ರೂ. ಆದಾಯಕ್ಕೆ ಹೊಡೆತ
ಮಹಾಮಾರಿ ಕೊರೊನಾ ಸೋಂಕು ದೇಶವ್ಯಾಪಿ ಆವರಿಸಿಕೊಂಡಿತ್ತು. ಇದನ್ನ ನಿಯಂತ್ರಣ ಮಾಡುವುದಕ್ಕಾಗಿಯೇ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಆದರೆ ಇದೇ  ಅವಧಿಯಲ್ಲಿ ಬಾಳೆ ಬೆಳೆ ಕೊಯ್ಲಿಗೆ ಬಂದಿತ್ತು. ಅದನ್ನ ಮಾರಾಟ ಮಾಡಲು ಆಗದೆ ಎಲ್ಲವೂ ಕೊಳೆತು ಹೋಗಿತ್ತು. ಇದರಿಂದಾಗಿ ರೈತನಿಗೆ 8 ಲಕ್ಷ  ಆದಾಯಕ್ಕೆ ಹೊಡೆತ ಬಿದ್ದಿತ್ತು. ಭಾರಿ ನಷ್ಟವನ್ನು ಅನುಭವಿಸಿದ ಕುಟುಂಬದವರಿಗೆ ಆಘಾತವೂ ಉಂಟಾಗಿತ್ತು.

ಸಂಭ್ರಮಕ್ಕೆ ಕೊಳ್ಳಿಯಿಟ್ಟಿದ್ದ ಕೊರೊನಾ
ಬಾಳೆ ಬೆಳೆ ಬಂದಾಗ ಇಡೀ ಕುಟುಂಬದಲ್ಲಿ ಸಂಭ್ರಮ ಮನೆಮಾಡಿತ್ತು. ಆದರೆ ಇವರ ಸಂಭ್ರಮಕ್ಕೆ ಕೊರೊನಾ ಕೊಳ್ಳಿಯಿಟ್ಟಿತ್ತು. ಎಲ್ಲವೂ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತಾಗಿತ್ತು. ಬಾಳೆ ಬೆಳೆ ಮಾರಾಟ ಮಾಡಲು ಆಗದೆ ಎಲ್ಲವೂ ಕೊಳೆತುಹೋದ ಕಾರಣ ಆದಾಯಕ್ಕೆ ಕತ್ತರಿ ಬಿದ್ದು ಕುಟುಂಬಕ್ಕೆ ಎಲ್ಲಿಲ್ಲದ ನಿರಾಸೆ ಉಂಟಾಗಿತ್ತು. ಬಾಳೆ ಬೆಳೆಯನ್ನೆ ನಂಬಿಕೊಂಡಿದ್ದ ಕುಟುಂಬಕ್ಕೆ ಮುಂದಿನ ಜೀವನದ ಬಗ್ಗೆ ಯೋಚಿಸಿದಾಗೆಲ್ಲ ಭಯ ಶುರುವಾಗುತ್ತಿತ್ತು.

ವಿಜಯಪುರ ಜಿಲ್ಲೆಯ ತಿಕೋಟದಿಂದ ಆಗಾಗ ಕೃಷಿ ತಜ್ಞರನ್ನ ಕರೆಸುತ್ತಿದ್ದಾರೆ. ತಜ್ಞರ ಸಲಹೆ ಮತ್ತು ಮಾರ್ಗಸೂಚಿಗಳನ್ನು ಪಡೆದುಕೊಂಡು ಆಗಾಗ ದ್ರಾಕ್ಷಿ ಬೆಳೆಗೆ ರಸಗೊಬ್ಬರ ಮತ್ತು ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ

ದ್ರಾಕ್ಷಿಗೆ 25 ಲಕ್ಷ ರೂ. ಖರ್ಚು
ಆರ್ಥಿಕವಾಗಿ ಸಾಕಷ್ಟು ಸಂಕಷ್ಟ ಎದುರಾದರೂ ಎದೆಗುಂದದೆ ಇದೀಗ ಯುವ ರೈತ ದ್ರಾಕ್ಷಿ ಬೆಳೆಯಲು ಮುಂದಾಗಿದ್ದಾರೆ. 8 ಎಕರೆ ಜಮೀನಿನಲ್ಲಿ ದ್ರಾಕ್ಷಿಯನ್ನು ಬೆಳೆದಿದ್ದು, ಬೆಳೆ ಉತ್ತಮವಾಗಿ ಬಂದಿದೆ. ಇದಕ್ಕಾಗಿ ಸುಮಾರು 25 ಲಕ್ಷ  ಖರ್ಚು ಮಾಡಿದ್ದಾರೆ. ಬೆಳೆ ಬೆಳೆಯುವುದಕ್ಕಾಗಿಯೇ ಮತ್ತೊಮ್ಮೆ 10 ಲಕ್ಷ  ಕೈಸಾಲ ಮಾಡಿದ್ದಾರೆ. ಈ ಬಾರಿ ಆದಾಯದ ನಿರೀಕ್ಷೆ ಕೂಡ ಉತ್ತಮವಾಗಿ ಇಟ್ಟುಕೊಂಡಿದ್ದಾರೆ.

8 ಎಕರೆ ಜಮೀನಿನಲ್ಲಿ ದ್ರಾಕ್ಷಿಯನ್ನು ಬೆಳೆದಿದ್ದಾರೆ

ಮತ್ತೊಂದು ಪ್ರಯತ್ನ
ನಾಸಿಕ್​ನ ತ್ಯಾಮಸೋನ್ ಎಂಬ ತಳಿಯ ದ್ರಾಕ್ಷಿಯನ್ನು ತಮ್ಮಣ್ಣ ಅವರು ಬೆಳೆಯುತ್ತಿದ್ದಾರೆ.  ಉತ್ತಮವಾಗಿ ಫಸಲು ಬರಲಿ ಎಂಬ ಉದ್ದೇಶ ಇಟ್ಟುಕೊಂಡು ವಿಜಯಪುರ ಜಿಲ್ಲೆಯ ತಿಕೋಟದಿಂದ ಆಗಾಗ ಕೃಷಿ ತಜ್ಞರನ್ನು ಕರೆಸುತ್ತಿದ್ದಾರೆ. ತಜ್ಞರ ಸಲಹೆ ಮತ್ತು ಮಾರ್ಗಸೂಚಿಗಳನ್ನು ಪಡೆದುಕೊಂಡು ಆಗಾಗ ದ್ರಾಕ್ಷಿ ಬೆಳೆಗೆ ರಸಗೊಬ್ಬರ ಮತ್ತು ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಕೃಷಿಯಲ್ಲಿ ಸ್ವಲ್ಪ ನಷ್ಟವಾದರು ಸಾಕು ಅದರಿಂದ ವಿಮುಖರಾಗುತ್ತಾರೆ. ಆದರೆ ಈ ಯುವರೈತ 8 ಲಕ್ಷ ನಷ್ಟ ಅನುಭವಿಸಿದರೂ ಛಲ ಬಿಡದೇ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿರುವುದು ನಿಜಕ್ಕೂ ಉತ್ತಮ ನಿರ್ಧಾರ ಎಂಬ ಭಾವನೆ ಗ್ರಾಮದಲ್ಲಿ ವ್ಯಕ್ತವಾಗಿದೆ.

‘ಬಾಳೆ ಬೆಳೆ ಕೈಗೆ ಬಂದಾಗ ದೇಶವ್ಯಾಪಿ ಕೊರೊನಾ ವೈರಸ್ ಹರಡಿತ್ತು. ಆಗಾ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿತ್ತು. ಇದರಿಂದ ಬೆಳೆದ ಬಾಳೆಯನ್ನು ಮಾರಾಟ ಮಾಡಲಾಗದೆ ಕೊಳೆತು ಹೋಗಿತ್ತು. ಇದರಿಂದ ಸುಮಾರು 8 ಲಕ್ಷ ನಷ್ಟ ಅನುಭವಿಸಿದ್ದೇನೆ. ಆದರೆ ಇದೀಗ ದ್ರಾಕ್ಷಿ ಬೆಳೆಗೆ ಮುಂದಾಗಿದ್ದು, 25 ಲಕ್ಷ ರೂ. ಖರ್ಚಾಗುತ್ತಿದೆ. ಈಗಾಗಲೆ 10 ಲಕ್ಷ ಕೈಸಾಲ ಮಾಡಿದ್ದು, ಮುಂದೆ ಬ್ಯಾಂಕ್ನಿಂದ 10 ಲಕ್ಷ  ಸಾಲ ಪಡೆಯುತ್ತೇನೆ’ ಎಂದು ಯುವ ರೈತ ತಮ್ಮಣ್ಣಗೌಡ ಪಾಟೀಲ್ ತಿಳಿಸಿದರು.

ಇದನ್ನೂ ಓದಿ

ನುಸಿ ಹುಳುವಿನಿಂದ ಹಾಳಾದ ಹೂ ಬೆಳೆ: ಬೆಳೆಯನ್ನು ಕೆಡಿಸಿದ ಚಿತ್ರದುರ್ಗದ ರೈತರು

ಚನ್ನಗಿರಿ ಶಾಸಕರ ಮನೆ ಅಂಗಳದಲ್ಲಿ ಬೆಳೆಸಿದ್ದ ಗಂಧದ ಮರ ಕಳ್ಳತನ

Published On - 1:30 pm, Tue, 16 March 21