ನುಸಿ ಹುಳುವಿನಿಂದ ಹಾಳಾದ ಹೂ ಬೆಳೆ: ಬೆಳೆಯನ್ನು ಕೆಡಿಸಿದ ಚಿತ್ರದುರ್ಗದ ರೈತರು
ಹೂವಿನೂರು ಎಂದೇ ಖ್ಯಾತಿ ಗಳಿಸಿದ ಹುಣಸೇಕಟ್ಟೆ ಭಾಗದಲ್ಲಿ ಬಹುತೇಕ ರೈತರು ಹೂ ಬೆಳೆಗೆ ಅವಲಂಬಿತರಾಗಿದ್ದಾರೆ. ನೂರಾರು ಎಕರೆ ಪ್ರದೇಶದಲ್ಲಿ ಸೇವಂತಿಗೆ, ಚಾಂದಿನಿ, ಪೂರ್ಣಿಮಾ ಸೇರಿ ಇತರೆ ಹೂಗಳನ್ನು ಬೆಳೆಯಲಾಗುತ್ತದೆ. ಆದರೆ ಇತ್ತೀಚೆಗೆ ಕಣ್ಣಿಗೆ ಕಾಣದ ಕ್ರಿಮಿ ನುಸಿ ಹುಳುವಿನಿಂದಾಗಿ ಹೂ ಬೆಳೆ ಸಂಪೂರ್ಣ ಹಾಳಾಗುತ್ತಿದೆ.
ಚಿತ್ರದುರ್ಗ: ಕೋಟೆನಾಡಿನ ಹುಣಸೇಕಟ್ಟೆ ಗ್ರಾಮ ಹೂವಿನೂರು ಎಂದೇ ಖ್ಯಾತಿ ಗಳಿಸಿದೆ. ಆದರೆ ನುಸಿ ಹುಳು ಎಂಬ ಕ್ರಿಮಿ ಹೂವಿನ ಜೊತೆಗೆ ಹೂ ಬೆಳೆಗಾರರ ಬದುಕನ್ನೇ ಬರಿದಾಗಿಸುತ್ತಿದೆ. ಇದರ ಪರಿಣಾಮ ಹೂ ಬೆಳೆಗಾರರು ಕೃಷಿಯಿಂದಲೇ ವಿಮುಖರಾಗುವ ದುಸ್ಥಿತಿ ನಿರ್ಮಾಣವಾಗಿದೆ.
ಹೂವಿನೂರು ಎಂದೇ ಖ್ಯಾತಿ ಗಳಿಸಿದ ಹುಣಸೇಕಟ್ಟೆ ಭಾಗದಲ್ಲಿ ಬಹುತೇಕ ರೈತರು ಹೂ ಬೆಳೆಗೆ ಅವಲಂಬಿತರಾಗಿದ್ದಾರೆ. ನೂರಾರು ಎಕರೆ ಪ್ರದೇಶದಲ್ಲಿ ಸೇವಂತಿಗೆ, ಚಾಂದಿನಿ, ಪೂರ್ಣಿಮಾ ಸೇರಿ ಇತರೆ ಹೂಗಳನ್ನು ಬೆಳೆಯಲಾಗುತ್ತದೆ. ಆದರೆ ಇತ್ತೀಚೆಗೆ ಕಣ್ಣಿಗೆ ಕಾಣದ ಕ್ರಿಮಿ ನುಸಿ ಹುಳುವಿನಿಂದಾಗಿ ಹೂ ಬೆಳೆ ಸಂಪೂರ್ಣ ಹಾಳಾಗುತ್ತಿದೆ. ಹೀಗಾಗಿ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಬೆವರು ಸುರಿಸಿ ಬೆಳೆದಿದ್ದ ಬೆಳೆಯನ್ನು ರೈತರೇ ಕೆಡಿಸಿದ್ದಾರೆ. ಹುಣಸೇಕಟ್ಟೆ ಗ್ರಾಮದ ಅನೇಕ ರೈತರು ಮೂರು ದಶಕಗಳಿಂದ ಹೂವಿನ ಬೆಳೆಯನ್ನೇ ಅವಲಂಬಿಸಿದ್ದಾರೆ. ಆದರೆ ನುಸಿ ಹುಳುವಿನಿಂದ ಹೂ ಬೆಳೆಯನ್ನು ನಂಬಿದ್ದ ರೈತರಿಗೆ ದಿಕ್ಕು ತೋಚದಂತಾಗಿದೆ. ಆದರೆ ಸಂಕಷ್ಟಕ್ಕೆ ಈಡಾಗಿರುವ ರೈತರಿಗೆ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಕ್ಯಾರೆ ಅಂದಿಲ್ಲ ಎಂದು ರೈತರು ಕಿಡಿ ಕಾರುತ್ತಿದ್ದಾರೆ.
ಹೂಬೆಳೆ ಉಳಿಸಿಕೊಳ್ಳಲು ಎಕರೆಗೆ 80 ರಿಂದ 90 ಸಾವಿರ ರೂಪಾಯಿ ಮೌಲ್ಯದ ಔಷಧಿ ಸಿಂಪಡಿಸಿದ್ದೇವೆ. ಹೂ ಬೆಳೆ ಸಿಕ್ಕಿದ್ದು ಮಾತ್ರ 10 ಸಾವಿರ ಮೌಲ್ಯದ್ದಾಗಿದೆ. ನಿಷೇಧಿತ ಕೆಲ ಬಯೋ ಕಂಪನಿಯ ಔಷಧಿಗಳನ್ನೇ ಅಂಗಡಿಯವರು ನೀಡುತ್ತಾರೆ. ಅದರಿಂದೇನೂ ಪ್ರಯೋಜನ ಆಗುತ್ತಿಲ್ಲ. ಅಧಿಕಾರಿಗಳು, ವಿಜ್ಞಾನಿಗಳು ಯಾರೂ ಈ ಬಗ್ಗೆ ಸಲಹೆ ನೀಡಿಲ್ಲ. ಹೀಗಾಗಿ ಅನಿವಾರ್ಯದಿಂದ ಬೆಳೆದಿದ್ದ ಬೆಳೆ ಕೆಡಿಸುತ್ತಿದ್ದೇವೆ ಎಂದು ರೈತ ಕಾಂತರಾಜ್ ಹೇಳಿದರು.
ರೈತರಿಗೆ ಒಂದಲ್ಲ ಒಂದು ಸಮಸ್ಯೆ ಸದಾ ಕಾಡುತ್ತಿರುತ್ತದೆ. ಈಗ ಜಿಲ್ಲೆಯ ರೈತರು ಹೂ ಬೆಳೆಯಿಂದ ಕಂಗಾಲಾಗಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಹೂ ಬೆಳೆಗಾರರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ
ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ, ಸರ್ಕಾರ ರೈತರ ಜೊತೆ ಸದಾ ಇರುತ್ತದೆ: ಕಂದಾಯ ಸಚಿವ ಆರ್.ಅಶೋಕ್