ಬೆಂಗಳೂರು: ಕರ್ನಾಟಕ ರಾಜ್ಯದ ರೈತರು ಹಾಗೂ ಪಶುಸಾಕಣೆದಾರರು ಜಾನುವಾರುಗಳ ಆರೋಗ್ಯ ಮತ್ತು ಉತ್ಪಾದನೆ ಅಥವಾ ಈ ಸಂಬಂಧ ಯಾವುದೇ ಮಾಹಿತಿ, ಸಲಹೆಯನ್ನು ಪಡೆಯಲು ದೇಶದ ಮೊಟ್ಟಮೊದಲ ಸುಸಜ್ಜಿತ ಪ್ರಾಣಿ ಕಲ್ಯಾಣ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜೂನ್ 23 ಬುಧವಾರ ಮೊದಲ ಪ್ರಾಣಿ ಕಲ್ಯಾಣ ಸಹಾಯವಾಣಿಯ ವಾರ್ ರೂಮನ್ನು ಲೋಕಾರ್ಪಣೆ ಮಾಡಿದರು. ಬೆಂಗಳೂರಿನ ಹೆಬ್ಬಾಳದ ಪಶುಪಾಲನಾ ಭವನದಲ್ಲಿ, ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಆಯೋಗದಲ್ಲಿ (ಸಿಎಹೆಚ್‌ವಿಎಸ್) ವಾರ್ ರೂಮ್ ಸ್ಥಾಪಿಸಲಾಗಿದೆ.ಸುಮಾರು ರೂ. 45.00 ಲಕ್ಷ ವೆಚ್ವದಲ್ಲಿ ವಾರ್ ರೂಮ್ ನಿರ್ಮಾಣವಾಗಿದೆ. ಇನ್ನು ಈ ವೇಳೆ ಮಾತನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ ಸಹಾಯವಾಣಿ ಆರಂಭಿಸಿದ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಇಂತಹದೊಂದು ಸುಸಜ್ಜಿತ ಪ್ರಾಣಿ ಕಲ್ಯಾಣ ಸಹಾಯವಾಣಿ ಆರಂಭವಾಗಿದ್ದು ರೈತರು, ಸಾಕಾಣಿಕೆದಾರರು ತಮ್ಮ ಜಾನುವಾರುಗಳ ಆರೋಗ್ಯ ಹಾಗೂ ಉತ್ಪಾದಕತೆ ಹೆಚ್ಚಿಸಲು ಪ್ರಮುಖ ಪಾತ್ರವಹಿಸಲಿದೆ ಎಂದು ತಿಳಿಸಿದರು.
ಬೆಂಗಳೂರಿನ ಪಶು ಪಾಲನಾ ಭವನದಲ್ಲಿ ಪ್ರಾಣಿ ಕಲ್ಯಾಣ ಸಹಾಯವಾಣಿಗೆ (ವಾರ್ ರೂಮ್) ಚಾಲನೆ ನೀಡಿ ಮಾತನಾಡಿದ ಅವರು ದೇಶದ ಜಿಡಿಪಿಗೆ ಪಶುಸಂಗೋಪನೆ ಕೊಡುಗೆ ದೊಡ್ಡದು ಎಂದು ಹೇಳಿದರು.
ಬಳಿಕ ಮಾತನಾಡಿದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್, ದಿನದ 24 ಗಂಟೆಯೂ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ಬೆಂಗಳೂರಿನ ಪಶುಪಾಲನಾ ಭವನದಲ್ಲಿ ಆರಂಭವಾಗಿರುವ ಪ್ರಾಣಿ ಕಲ್ಯಾಣ ಸಹಾಯವಾಣಿ (ವಾರ್ ರೂಮ್ ) ರೈತರ ಆಪತ್ಬಾಂಧವ ಎಂದರು. ಪಶುಸಂಗೋಪನೆ ಇಲಾಖೆಯ ಜಾನುವಾರು ಆರೋಗ್ಯ ಸೇವೆಗಳು ರೈತರ ಮನೆ ಬಾಗಿಲನ್ನು ತಲುಪಿವೆ. ಜಾನುವಾರುಗಳ ಆರೋಗ್ಯ ಕಾಪಾಡುವಲ್ಲಿ ಇಲಾಖೆ ಹೆಚ್ಚು ಶ್ರಮವಹಿಸುತ್ತಿದೆ. ಈಗ ಉದ್ಘಾಟನೆಗೊಂಡ ಪ್ರಾಣಿ ಕಲ್ಯಾಣ ಸಹಾಯವಾಣಿ ಉಪಯೋಗವನ್ನು ಎಲ್ಲ ರೈತರು ಪಡೆದುಕೊಳ್ಳಬೇಕು ಎಂದು ಸಚಿವರು ರೈತರಲ್ಲಿ ಸಚಿವರು ಮನವಿ ಮಾಡಿದರು.
ಸಹಾಯವಾಣಿಯ ವಿಶೇಷತೆಗಳು
-ರೈತರು, ಪಶುಪಾಲಕರು (8277100200) ಪ್ರಾಣಿ ಕಲ್ಯಾಣ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಪಶು ಆರೈಕೆ ಸಂಬಂಧ ಮಾಹಿತಿ ಪಡೆಯಬವುದು.
-ಮುಖ್ಯವಾಗಿ ಕುರಿ, ಮೇಕೆ, ಮೊಲ, ಹಂದಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ ಬಗ್ಗೆ ಮಾಹಿತಿ ಪಡೆಯಬಹುದು.
-ತುರ್ತು ಸಮಯದಲ್ಲಿ ಅಪಘಾತ ಹಾಗೂ ಇತರೆ ಕಾಯಿಲೆಗಳಿಂದ ನರಳುತ್ತಿರುವ ರಾಸುಗಳಿಗೆ ತಕ್ಷಣಕ್ಕೆ ಪಶು ವೈದ್ಯರು ದೊರೆಯದಿದ್ದಾಗ ಚಿಕಿತ್ಸೆ ಬಗ್ಗೆ ಸಲಹೆ.
-ಕರ್ನಾಟಕ ಗೋ ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ ಜಾರಿಗೊಳಿಸುವ ಸಂಬಂಧ ಸಲಹೆ ಹಾಗೂ ಮಾಹಿತಿಯನ್ನು ಈ ಸಹಾಯವಾಣಿಯಿಂದ ಪಡೆಯಬಹುದು.
-ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶುಪಾಲನಾ ಭವನದ 6ನೇ ಮಹಡಿಯಲ್ಲಿ ಪ್ರಾಣಿ ಕಲ್ಯಾಣ ಸಹಾಯವಾಣಿ ಸ್ಥಾಪಿಸಲಾಗಿದೆ.
-ಜಾನುವಾರುಗಳ ರೋಗ, ಪ್ರಕೃತಿ ವಿಕೋಪ ಮತ್ತು ಮಾನವನಿಂದ ಜಾನುವಾರುಗಳಿಗೆ ಉಂಟಾಗಬಹುದಾದ ಹಾನಿ ಮತ್ತು ಕ್ರೌರ್ಯಗಳಿಂದ ಜಾನುವಾರುಗಳನ್ನು ರಕ್ಷಿಸಲು ಹಾಗೂ ಅವುಗಳ ಅರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ 24/7 ಪ್ರಾಣಿ ಕಲ್ಯಾಣ ಸಹಾಯವಾಣಿಯು ಕಾರ್ಯನಿರ್ವಹಿಸಲಿದೆ.
-ಪ್ರಾಣಿ ಕಲ್ಯಾಣ ಸಹಾಯವಾಣಿಯು ದೂರವಾಣಿ/ ವಾಟ್ಸಪ್ ಟ್ವಿಟರ್/ಪೇಸ್ಬುಕ್/ಇನ್ಸ್ಟಾಗ್ರಾಂ/ಇ- ಮೇಲ್‌ಇತ್ಯಾದಿಗಳ ಮೂಲಕ ಸ್ವೀಕರಿಸಿದ ಕರೆ /ದೂರು/ ಪ್ರಶ್ನೆಗಳ ಸಂಖ್ಯೆಗಳು ಮತ್ತು ಈ ಕುರಿತಂತೆ ಕೈಗೊಂಡ ಕ್ರಮಗಳ ಕುರಿತು ಇಲಾಖೆಯ ವೆಬ್ಸೈಟ್ನಲ್ಲಿ ದೈನಂದಿನ ಅಂಕಿ ಅಂಶಗಳನ್ನು ಪ್ರಕಟಿಸಲಾಗುತ್ತದೆ.
-ರೈತರಿಗೆ ಹೆಚ್ಚು ಉಪಯುಕ್ತ
-ಇಲಾಖೆಯಲ್ಲಿ ದೊರೆಯುವ ತಾಂತ್ರಿಕ ವಿಷಯಗಳ ಬಗ್ಗೆ ಮಾಹಿತಿ
-ಇಲಾಖೆಯಲ್ಲಿ ಅನುಷ್ಟಾನಗೊಳ್ಳುವ ಅರ್ಥಿಕ ಹಾಗೂ ಸಾಮಾಜಿಕ ಕಾರ್ಯಕ್ರಮದ ಬಗ್ಗೆ ಮಾಹಿತಿ
-ವಿವಿದ ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳ ಬಾರದಂತೆ ಮುಂಜಾಗ್ರತೆ ಕ್ರಮವಾಗಿ ಚುಚ್ಚುಮದ್ದು ಹಾಕಿಸಬೇಕಾಗಿರುವ ವಿವರ
-ಬ್ಯಾಂಕುಗಳಿಂದ ವಿವಿಧ ಸಾಲ ಸೌಲಭ್ಯದ ಬಗ್ಗೆ ಮಾಹಿತಿ
-ಲಾಭದಾಯಕವಾಗಿ ಹೈನುಗಾರಿಕೆ ನಡೆಸಲು ಅಗತ್ಯವಿರುವ ಮೇವಿನ ಬೆಳೆಗಳ ಬಗ್ಗೆ ಮಾಹಿತಿ
-ತುರ್ತು ಸಮಯದಲ್ಲಿ ಅಪಘಾತ ಹಾಗೂ ಇತರೆ ಖಾಯಿಲೆಗಳಿಂದ ನರಳುತ್ತಿರುವ ರಾಸುಗಳಿಗೆ ಚಿಕಿತ್ಸೆ ನೀಡಲು ಪಶುವೈದ್ಯರು ದೊರೆಯಿದ್ದಾಗ ಚಿಕಿತ್ಸೆ ಬಗ್ಗೆ ಸಲಹೆ ನೀಡುವುದು.
-ತುರ್ತು ಚಿಕಿತ್ಸೆಗಾಗಿ ಬಂದ ಕರೆಗಳಿಗೆ ಹತ್ತಿರವಿರುವ ಪಶುವೈದ್ಯ ಸಂಸ್ಥೆಯ ಸಿಬ್ಬಂದಿ /ಅಧಿಕಾರಿಗಳಿಗೆ ವರ್ಗಾಯಿಸಿ ಚಿಕಿತ್ಸೆ ನೀಡಲು ಮತ್ತು ಕ್ರಮ ತೆಗೆದುಕೊಳ್ಳಲು ಸಂಬಂಧಿಸಿದವರಿಗೆ ಸೂಚಿಸುವುದು ಹಾಗೂ ಅನುಪಾಲನೆ ಮಾಡುವುದು
-ಪಶುಪಾಲನಾ ಇಲಾಖೆಗೆ ಸಂಬಂಧಿಸಿದ ಇತರೆ ಕರೆಗಳಿಗೆ ಸಮಂಜಸವಾದ ಮಾಹಿತಿಯನ್ನು ನೀಡುವುದು.
-ಕರ್ನಾಟಕ ಗೋ ಹತ್ಯೆ ಪ್ರತಿಭಂದಕ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ ಜಾರಿಗೊಳಿಸುವ ಸಂಬಂಧ ಸೂಕ್ತ ಸಲಹೆ ಹಾಗೂ ಮಾಹಿತಿಯನ್ನು ನೀಡುವುದು.
-ಇಲಾಖೆಯ 4212 ಸಂಸ್ಥೆಗಳು, 2900 ಪಶು ವೈಧ್ಯರು ಮತ್ತು 2200 ಇತರೇ ಸಿಬ್ಬಂದಿ ಮೂಲಕ ಸೇವೆ ಲಭವಾಗಲಿದೆ.
-ಬೀಡಾಡಿ ದನ ಹಾಗೂ ಇತರೆ ಪ್ರಾಣಿಗಳ ಬಗ್ಗೆ ಸಾರ್ವಜನಿಕರು ನೀಡುವ ದೂರನ್ನು ಆಧರಿಸಿ ಹತ್ತಿರದ ಪಶುವೈದ್ಯರು ಚಿಕಿತ್ಸೆ ನೀಡುವಂತೆ ನೋಡಿಕೊಳ್ಳುವುದು.
-ತಂತ್ರಜ್ಞಾನ ಬಳಸಿ ಗೋಶಾಲೆಗಳ ನಿರ್ವಹಣೆ ಮತ್ತು ಮಾಹಿತಿ ನೀಡುವುದು.
-ಪಶುಸಂಜೀವಿನಿ, ಅಂಬುಲೇಟರಿ ಕ್ಲಿನಿಕ್ ಗಳನ್ನು ತಜ್ಞ ವೈದ್ಯರೊಂದಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು.
-ತಜ್ಞರೊಂದಿಗೆ ಜಾನುವಾರುಗಳ ಆರೋಗ್ಯ, ಆಹಾರ, ಔಷಧಿಗಳ ಕುರಿತು ಸಂವಹನ ನಡೆಸುವ ವ್ಯವಸ್ಥೆ
-ಚಿಕಿತ್ಸಾಲಯಗಳಲ್ಲಿ ವೈದ್ಯರ ಲಭ್ಯತೆಯನ್ನು ತಂತ್ರಜ್ಞಾನ ಆಧಾರಿತವಾಗಿ ತಿಳಿಸುವ ವ್ಯವಸ್ಥೆ.
-ಲಭ್ಯ ತಂತ್ರಜ್ಞಾನವನ್ನು ಬಳಸಿ ವಿವಿಧ ಮಾಧ್ಯಮಗಳ ಮೂಲಕ ರೈತರಿಗೆ ಮಾಹಿತಿ ತಲುಪಿಸುವುದು ಹಾಗೂ ರೈತರಿಗೆ ಅವರ ಕುಂದುಕೊರತೆಗಳ ಬಗ್ಗೆ ದೂರವಾಣಿ ಮೂಲಕ ನೀಡುವ ಮಾಹಿತಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ರವಾನಿಸಿ ಸೂಕ್ತ ಪರಿಹಾರವನ್ನು ಒದಗಿಸುವುದು.
ಇದನ್ನೂ ಓದಿ: ಪ್ರತಿವರ್ಷ 2 ಲಕ್ಷ ಗೋವುಗಳ ರಕ್ಷಣೆ ಮಾಡಬೇಕಿದೆ, ಈ ಇಲಾಖೆಯಲ್ಲೇ ಮುಂದುವರೆಯುವ ಇಚ್ಛೆಯಿದೆ: ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್
Published On - 2:59 pm, Thu, 24 June 21