ಎತ್ತುಗಳಿಗೆ ಕೃತಜ್ಞತೆ ಹೇಳುವ ಕಾರ ಹುಣ್ಣಿಮೆ; ಏನಿದರ ವಿಶೇಷತೆ?

| Updated By: sandhya thejappa

Updated on: Jun 24, 2021 | 2:13 PM

ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮತ್ತು ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ರೈತರು ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಈ ಭಾರಿಯ ಕಾರ ಹುಣ್ಣಿಮೆಗೆ ಕೊರೊನಾದ ಎರಡನೇ ಅಲೆಯ ಕರಿನೆರಳು ಬಿದ್ದಿದೆ.

ಎತ್ತುಗಳಿಗೆ ಕೃತಜ್ಞತೆ ಹೇಳುವ ಕಾರ ಹುಣ್ಣಿಮೆ; ಏನಿದರ ವಿಶೇಷತೆ?
ಅಲಂಕಾರಗೊಂಡ ಎತ್ತುಗಳು
Follow us on

ಕಲಬುರಗಿ: ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ರೈತರು ಸಂಭ್ರಮದಿಂದ ಆಚರಿಸುವ ಹಬ್ಬ ಕಾರ ಹುಣ್ಣಿಮೆ. ಬೇಸಿಗೆ ಕಾಲ ಮುಗಿದು, ಮುಂಗಾರು ಹಂಗಾಮು ಪ್ರಾರಂಭವಾಗುವ ಹೊತ್ತಿಗೆ ಬರುವ ಕಾರ ಹುಣ್ಣಿಮೆ ರೈತರ ಮೊದಲ ಹಬ್ಬ ಅಂತಲೇ ಕರೆಯಲಾಗುತ್ತದೆ. ಬೇಸಿಗೆಯಲ್ಲಿ ಎತ್ತುಗಳಿಂದ ಭೂಮಿಯಲ್ಲಿ ಉಳುಮೆ ಮಾಡುವ ರೈತರು ನಂತರ ಕಾರ ಹುಣ್ಣಿಮೆ ಸಂದರ್ಭದಲ್ಲಿ ಅವುಗಳಿಗೆ ವಿಶ್ರಾಂತಿಯನ್ನು ನೀಡಿ, ನಂತರ ಮುಂಗಾರು ಮಳೆಯಾಗುತ್ತಿದ್ದಂತೆ ಮತ್ತೆ ಕೃಷಿಯಲ್ಲಿನ ಉಳುಮೆಗೆ ಎತ್ತುಗಳಿಗೆ ಗಳೆ ಕಟ್ಟುತ್ತಾರೆ. ಹೀಗಾಗಿ ಕಾರ ಹುಣ್ಣಿಮೆಯನ್ನು ಪ್ರತಿ ವರ್ಷ ರೈತರು ಸಂಭ್ರಮದಿಂದ ಆಚರಿಸುತ್ತಾರೆ.

ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮತ್ತು ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ರೈತರು ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಈ ಭಾರಿಯ ಕಾರ ಹುಣ್ಣಿಮೆಗೆ ಕೊರೊನಾದ ಎರಡನೇ ಅಲೆಯ ಕರಿನೆರಳು ಬಿದ್ದಿದೆ. ಹೀಗಾಗಿ ಅನೇಕ ಕಡೆ ಕಾರ ಹುಣ್ಣಿಮೆ ಅಂಗವಾಗಿ ನಡೆಯುತ್ತಿದ್ದ ಎತ್ತಿನ ಮೆರವಣಿಗೆಗಳು ರದ್ದಾಗಿವೆ. ಅನೇಕ ಸಂಪ್ರದಾಯಗಳಿಗೆ ಬ್ರೇಕ್ ಬಿದ್ದಿದೆ. ಆದರೂ ಗ್ರಾಮೀಣ ಭಾಗದಲ್ಲಿ ರೈತರು, ತಮ್ಮ ಜಾನುವಾರುಗಳಿಗೆ ಶೃಂಗಾರ ಮಾಡಿ ಸಂಭ್ರಮಿಸಿದ್ದಾರೆ.

ಏನಿದು ಕಾರ ಹುಣ್ಣಿಮೆ

ದೇಶಕ್ಕೆ ರೈತ ಬೆನ್ನೆಲುಬಾದರೆ, ರೈತರಿಗೆ ಮಾತ್ರ ಎತ್ತುಗಳೇ ಬೆನ್ನೆಲುಬು. ಎತ್ತುಗಳು ರೈತರ ಬೆನ್ನೆಲುಬಾಗಿ ಕೃಷಿ ಭೂಮಿಯಲ್ಲಿ ದುಡಿಯುತ್ತವೆ. ಯಂತ್ರಗಳು ಇರಲಿ. ಇರದಿರಲಿ ರೈತರ ಜಮೀನಿನಲ್ಲಿ ಅತಿ ಹೆಚ್ಚು ದುಡಿಯುವುದು ಎತ್ತುಗಳು. ಇತ್ತೀಚೆಗೆ ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಾಗುತ್ತಿದೆ. ಆದರೂ ಕೂಡಾ ಗ್ರಾಮೀಣ ಭಾಗದಲ್ಲಿ ಇಂದಿಗೂ ಕೃಷಿಗೆ ಎತ್ತುಗಳೇ ಆಧಾರ. ಹೀಗಾಗಿ ರೈತರು ಎತ್ತುಗಳನ್ನು ಪೂಜನೀಯ ಭಾವದಿಂದ ಕಾಣುತ್ತಾರೆ. ಪ್ರತಿ ವರ್ಷ ರೈತರು ಉಳುಮೆಗೆ ಎತ್ತುಗಳನ್ನು ಬಳಸುತ್ತಾರೆ. ಬೇಸಿಗೆಯ ಸುಡು ಬಿಸಿಲಿನಲ್ಲಿ ಎತ್ತುಗಳಿಂದ ಉಳುಮೆ ಮಾಡುವ ರೈತರು, ಕಾರ ಹುಣ್ಣಿಮೆಯ ದಿನದಂದು ಎತ್ತುಗಳಿಗೆ ತಮ್ಮ ಕೃತಜ್ಞತೆಯನ್ನು ಸಮರ್ಪಿಸುತ್ತಾರೆ. ಅವುಗಳನ್ನು ಪೂಜೆ ಮಾಡಿ, ಅವುಗಳ ಸೇವೆಯನ್ನು ಸ್ಮರಿಸುತ್ತಾರೆ.

ಕಾರ ಹುಣ್ಣಿಮೆಯಂದು ರೈತರು ಎತ್ತುಗಳ ಮೈ ತೊಳೆದು, ಅವುಗಳಿಗೆ ಬಣ್ಣ ಹಚ್ಚುತ್ತಾರೆ. ಅವುಗಳ ಕೊರಳಲ್ಲಿ ಗೆಜ್ಜೆ ಸರ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಹಾಕುತ್ತಾರೆ. ಹೋಳಿಗೆ ಸೇರಿದಂತೆ ವಿವಿಧ ರೀತಿ ಸಿಹಿ ಅಡುಗೆಯನ್ನು ಮನೆಯಲ್ಲಿ ಮಾಡುತ್ತಾರೆ. ತಮ್ಮ ಮನೆಯಲ್ಲಿರುವ ಎತ್ತುಗಳಿಗೆ ಹೋಳಿಗೆ ಸೇರಿದಂತೆ ಸಿಹಿ ತಿನಿಸುಗಳನ್ನು ತಿನಿಸುತ್ತಾರೆ. ನಂತರ ದೇವಸ್ಥಾನಗಳಿಗೆ ಎತ್ತುಗಳನ್ನು ಓಯ್ದು, ಕರಿ ಹರಿದು, ಎತ್ತುಗಳಿಗೆ ಏನು ತೊಂದರೆಯಾಗದಂತೆ ದೇವರಲ್ಲಿ ಸ್ಮರಿಸಿ ಬರುತ್ತಾರೆ. ಕಾರ ಹುಣ್ಣಿಮೆಯ ದಿನ ಎತ್ತುಗಳನ್ನು ಪೂಜನೀಯ ಭಾವದಿಂದ ರೈತರು ಕಾಣುತ್ತಾರೆ. ಅನೇಕ ಕಡೆ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ಮಾಡಲಾಗುತ್ತದೆ. ಅನೇಕ ಕಡೆ ಕಾರ ಹುಣ್ಣಿಮೆಯ ಸಂದರ್ಭದಲ್ಲಿ ಎತ್ತಿನ ಬಂಡಿಯನ್ನು ಓಡಿಸಲಾಗುತ್ತದೆ. ಕೊಬ್ಬರಿ ಹೋರಿಯನ್ನು ಓಡಿಸುವ ಸಂಪ್ರದಾಯವಿದೆ. ರೈತರು ಎತ್ತುಗಳಿಗೆ ಪೂಜೆ ಮಾಡಿದ್ರೆ, ಗೌಳಿ ಸಮಾಜದವರು ತಮ್ಮ ಜೀವನಕ್ಕೆ ಆಧಾರವಾಗಿರುವ ಎಮ್ಮೆ, ಹಸುಗಳನ್ನು ಪೂಜಿಸುತ್ತಾರೆ. ರೈತರು ಕೂಡಾ ಎತ್ತುಗಳ ಜೊತೆ ತಮ್ಮ ಮನೆಯಲ್ಲಿರುವ ಬೇರೆ ರಾಸುಗಳಿಗೆ ಕೂಡಾ ಪೂಜೆ ಮಾಡುತ್ತಾರೆ. ಸಿಹಿ ತಿನಿಸುಗಳನ್ನು ತಿನ್ನಿಸುತ್ತಾರೆ.

ಸಿಂಗಾರಗೊಂಡ ಎತ್ತುಗಳು

ಕೊರೊನಾ ಕರಿನೆರಳು
ಈ ಭಾರಿ ಕೊರೊನಾದ ಹಿನ್ನೆಲೆಯಲ್ಲಿ ಕಾರ ಹುಣ್ಣಿಮೆ ಆಚರಣೆಗೆ ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಮತ್ತೊಂದಡೆ ರೈತರು ಕೂಡಾ ಈ ಭಾರಿ ಕೊರೊನಾದಿಂದಾಗಿ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಸರಳವಾಗಿ ಕಾರ ಹುಣ್ಣಿಮೆಯನ್ನು ಆಚರಿಸಿದ್ದಾರೆ. ಮನೆಯಲ್ಲಿಯೇ ಎತ್ತುಗಳಿಗೆ ಪೂಜೆ ಮಾಡಿ ಸುಮ್ಮನಾಗಿದ್ದಾರೆ. ಅನೇಕ ಕಡೆ ಗ್ರಾಮಸ್ಥರು ಸೇರಿ ಹಬ್ಬ ಆಚರಿಸಲು ಜಿಲ್ಲಾಡಳಿತ ಪರವಾನಗಿಯನ್ನು ನೀಡಿಲ್ಲ. ಕಲಬುರಗಿ ಜಿಲ್ಲೆಯ ಶಹಬಾದ್ ತಾಲೂಕಿನ ಭಂಕೂರು ಗ್ರಾಮದಲ್ಲಿ ಸುಪ್ರಸಿದ್ಧ ಕಾರ ಹುಣ್ಣಿಮೆ ನಡೆಯುತ್ತಿತ್ತು. ಆದರೆ ಈ ಭಾರಿ ಕೊರೊನಾದ ಹಿನ್ನೆಲೆಯಲ್ಲಿ ಕಾರ ಹುಣ್ಣಿಮೆ ಆಚರಣೆಗೆ ಅವಕಾಶವನ್ನು ಜಿಲ್ಲಾಡಳಿತ ನೀಡಿಲ್ಲ. ಮತ್ತೊಂದಡೆ ರೈತರು ಕೂಡಾ ಈ ಭಾರಿ ಕೊರೊನಾದಿಂದಾಗಿ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಸರಳವಾಗಿ ಕಾರ ಹುಣ್ಣಿಮೆಯನ್ನು ಆಚರಿಸಿದ್ದಾರೆ.

ಕಾರ ಹುಣ್ಣಿಮೆ ರೈತರಿಗೆ ಸಂಭ್ರಮದ ಹಬ್ಬ. ಆದರೆ ಕೊರೊನಾದಿಂದ ಸಂಭ್ರಮ ಕಡಿಮೆಯಾಗಿದೆ. ಹೀಗಾಗಿ ಮನೆಯಲ್ಲಿಯೇ ಎತ್ತುಗಳಿಗೆ ಶೃಂಗಾರ ಮಾಡಿ, ಪೂಜೆ ಮಾಡಿ, ಮನೆ ಮುಂದೆಯೇ ಕರಿ ಹರಿಯುತ್ತಿದ್ದೇವೆ. ಕಳೆದ ಎರಡು ವರ್ಷಗಳಿಂದ ಕೂಡಾ ಕಾರ ಹುಣ್ಣಿಮೆಗೆ ಕೊರೊನಾ ಅಡ್ಡಿಯಾಗುತ್ತಿದೆ ಎಂದು ರೈತ ಶರಣು ಅಭಿಪ್ರಾಯಪಟ್ಟರು.

ಪ್ರತಿ ವರ್ಷ ನಮ್ಮ ಗ್ರಾಮದಲ್ಲಿ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಆದರೆ ಕೊರೊನಾದಿಂದಾಗಿ ಕಳೆದ ವರ್ಷ ಕೂಡಾ ಜಿಲ್ಲಾಡಳಿತ ಕಾರ ಹುಣ್ಣಿಮೆ ದಿನದಂದು ನಡೆಯುವ ವಿವಿಧ ಆಚರಣೆಗಳಿಗೆ ಅವಕಾಶ ನೀಡಿರಲಿಲ್ಲ. ಈ ಭಾರಿ ಕೂಡಾ ಅವಕಾಶ ನೀಡಿಲ್ಲ. ಹೀಗಾಗಿ ಕಳೆದ ಎರಡು ವರ್ಷಗಳಿಂದ ಕಾರ ಹುಣ್ಣಿಮೆ ಸಂಭ್ರಮ ಕಡಿಮೆಯಾಗಿದೆ ಎಂದು ಭಂಕೂರು ಗ್ರಾಮದ ನಿವಾಸಿ ಈರಣ್ಣ ಹೇಳಿದರು.

ಇದನ್ನೂ ಓದಿ

ಬೆಂಗಳೂರಿನಲ್ಲಿ ಗಗನಕ್ಕೇರಿ ಕುಳಿತ ತರಕಾರಿ ರೇಟ್! ಮುಂದೆ ಇನ್ನೂ ದುಬಾರಿ; ಕೊರೊನಾ 3ನೇ ಅಲೆ ಆತಂಕದಲ್ಲಿ ತರಕಾರಿ ಬೆಳೆಯುತ್ತಿಲ್ಲ ರೈತರು

ಮುಂಗಾರು ಜೋರು, ಅನ್​ಲಾಕ್ ಜಾರಿ, ಗರಿಗೆದರಿದ ರೈತ ಚಟುವಟಿಕೆ, ಬಿತ್ತನೆಬೀಜ ಖರೀದಿಗೆ ಕಿಕ್ಕಿರಿದು ಜಮಾಯ್ಸಿದ ರೈತರು!

(Specialty of Kara Hunnime festival celebrated by the farmers in North Karnataka)