ಚಾಮರಾಜನಗರ: ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ ಬುಡಕಟ್ಟು ಜನರ ಪರಿಸ್ಥಿತಿ. ತಲತಲಾಂತರಗಳಿಂದ ಅರಣ್ಯದಲ್ಲಿ ವಾಸವಿರುವ ಸೋಲಿಗರಿಗೆ ಸರ್ಕಾರ ಹಕ್ಕು ಪತ್ರ ವಿತರಣೆ ಮಾಡಿದೆ. ಆದರೆ ಅರಣ್ಯ ಇಲಾಖೆಯವರು ಮಾತ್ರ ಸರ್ಕಾರದ ಯೋಜನೆಯನ್ನು ಅನುಷ್ಠಾನ ಮಾಡಲು ಸೋಲಿಗರಿಗೆ ಅವಕಾಶ ಕೊಡುತ್ತಿಲ್ಲ. ಅರಣ್ಯ ಇಲಾಖೆ ಈ ಕ್ರಮದಿಂದ ಸೋಲಿಗರು ಕಳೆದ ಒಂದು ದಶಕಗಳಿಂದ ಹೈರಾಣಾಗಿದ್ದು, ಎಲ್ಲರಂತೆ ನಮ್ಮನ್ನೂ ಬದುಕಲು ಬಿಡಿ ಎಂದು ಕಣ್ಣೀರಿಡುತ್ತಿದ್ದಾರೆ.
ಬಿಳಿಗಿರಿ ರಂಗನಾಥ ಬೆಟ್ಟ ಎಂದರೆ ಸೋಲಿಗರು.. ಸೋಲಿಗರು ಎಂದರೆ ಬಿಳಿಗಿರಿ ರಂಗನಾಥ ಬೆಟ್ಟ ಎಂಬ ಪರಿಸ್ಥಿತಿ ಇದೆ. ಶತಮಾನಗಳಿಂದ ನಾಡಿನ ಜನರ ಸಂಪರ್ಕವೇ ಇಲ್ಲದೇ ಬಿಳಿಗಿರಿ ರಂಗನ ಬೆಟ್ಟದಲ್ಲಿ ವಾಸವಾಗಿರುವವರು ಸೋಲಿಗರು. ಹೀಗಾಗಿ 1962 ಮತ್ತು 2009 ರಲ್ಲಿ ಬುಡಕಟ್ಟು ಜನರಿಗೆ ಸರ್ಕಾರ ಹಕ್ಕು ಪತ್ರ ವಿತರಣೆ ಮಾಡಿದೆ. ಅದರಲ್ಲೂ ಅರಣ್ಯ ಹಕ್ಕು ಕಾಯ್ದೆ ಜಾರಿಯಾದ ಮೇಲೆ ಸೋಲಿಗರು ತಮ್ಮ ಹಕ್ಕುಗಳನ್ನ ಭದ್ರಪಡಿಸಿಕೊಂಡಿದ್ದಾರೆ. ಬಿಳಿಗಿರಿ ರಂಗನ ಬೆಟ್ಟದಲ್ಲಿ ಒಟ್ಟು 620 ಎಕರೆ ಕಂದಾಯ ಭೂಮಿ ಇದೆ. ಇದರ ಪೈಕಿ ಬೆಟ್ಟದಲ್ಲಿ ಹೊಸಪೋಡು, ಯರಕನಗದ್ದೆ, ಮುತುಗದಗದ್ದೆ ಹಾಡಿಗಳಲ್ಲಿ ಸೋಲಿಗರು ವಾಸವಿದ್ದಾರೆ. 3 ಹಾಡಿಗಳಲ್ಲಿ ವಾಸವಾಗಿರುವ ಸುಮಾರು 150ಕ್ಕೂ ಸೋಲಿಗ ಕುಟುಂಬಗಳಿಗೆ 128 ಎಕರೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಇವರ ಪೈಕಿ ಕೆಲವರು ನೈಸರ್ಗಿಕವಾಗಿ ಕಾಫಿ ಬೆಳೆದಿದ್ದರೆ, ಮತ್ತೇ ಕೆಲವರು ಜೋಳ, ರಾಗಿ ಸೇರಿದಂತೆ ತರಕಾರಿ ಬೆಳೆಗಳನ್ನ ಬೆಳೆಯುತ್ತಿದ್ದಾರೆ.
2 ಎಕರೆಗೂ ಅಧಿಕವಾಗಿರುವ ಸೋಲಿಗರಿಗೆ 2010 ರಿಂದ ಇಚೇಗೆ ಸರ್ಕಾರ ವಾಲ್ಮೀಕಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆ ಅಡಿ ಬೋರ್ವೆಲ್ ನೀಡಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸೋಲಿಗರ ಜಮೀನಿನಲ್ಲಿ ಬೋರ್ವೆಲ್ ಕೊರೆಯಲು ಬಿಡುತ್ತಿಲ್ಲ. ಬಿಳಿಗಿರಿ ರಂಗನ ಬೆಟ್ಟದಲ್ಲಿ ಇರುವ ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಮೊದಲು ಪೋಡಿ ನಿರ್ಮಾಣ ಮಾಡಿ ಯಾವ ಜಮೀನು ಯಾರಿಗೆ ಸೇರಿದೆ ಎಂಬುದರ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಹದ್ದುಬಸ್ತು ಮಾಡಲಿ. ಆ ನಂತರ ಬೋರ್ವೆಲ್ ಕೊರೆಸಿ ಎಂದು ಅರಣ್ಯಾಧಿಕಾರಿಗಳು ಹೇಳುತ್ತಿದ್ದಾರೆ. ಇದರ ಫಲವಾಗಿ ಕಳೆದ 9 ವರ್ಷಗಳಲ್ಲಿ 17ಕ್ಕೂ ಹೆಚ್ಚು ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆ ಅಡಿ ಬೋರ್ವೆಲ್ ಮಂಜೂರಾಗಿದ್ದರೂ ಬೋರ್ ಕೊರೆಸಲು ಅವಕಾಶ ಸಿಗದೇ ವಾಪಸ್ ಹೋಗಿವೆ.
ಸೋಲಿಗರಿಗೆ ಸೇರಿದ ಕಂದಾಯ ಭೂಮಿಯಲ್ಲಿ ಬೋರ್ವೆಲ್ ಕೊರೆಯಲು ಅವಕಾಶ ನೀಡದೇ ಇರುವ ಅರಣ್ಯ ಇಲಾಖೆ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಕೇಳಿದರೆ ಸೋಲಿಗರ ಜನಾಂಗದವರಿಗೆ ಅರಣ್ಯ ಹಕ್ಕು ಕಾಯ್ದೆ ಅಡಿ ಜಮೀನು ವಿತರಣೆ ಮಾಡಲಾಗಿದೆ. ಜೊತೆಗೆ ಆರ್ಟಿಸಿಯಲ್ಲಿ ಫಲಾನುಭವಿಗಳ ಹೆಸರು ಬರುತ್ತಿದ್ದು, ಅವರು ಮಾಡುವ ಬೆಳೆಯ ಬಗ್ಗೆಯೂ ಮಾಹಿತಿ ಇದೆ. ಬಿಆರ್ಟಿಯಲ್ಲಿ ದುರಸ್ತು ಆಗಬೇಕಾಗಿರುವುದು ಕೇವಲ ಕಂದಾಯ ಇಲಾಖೆ ಜಾಗ. ಅರಣ್ಯ ಇಲಾಖೆ ಅಧಿಕಾರಿಗಳು ಅನಾವಶ್ಯಕವಾಗಿ ಸೋಲಿಗರಿಗೆ ತೊಂದರೆ ಕೊಡುವುದು ತಪ್ಪು. ಗಂಗಾ ಕಲ್ಯಾಣ ಯೋಜನೆ ಅಡಿ ಬೋರ್ವೆಲ್ ಕೊರೆಸಲು ಅರಣ್ಯ ಇಲಾಖೆ ಹಸ್ತಕ್ಷೇಪ ಮಾಡುತ್ತಿದ್ದರೆ ಅವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ
ರೈತರ ಹಕ್ಕುಗಳ ರಕ್ಷಣೆ: ಬಸವಕಲ್ಯಾಣದಿಂದ ಬಳ್ಳಾರಿಯವರೆಗೆ 18 ದಿನಗಳ ಕಾಲ ನಡೆದ ರೈತರ ನಡಿಗೆ ಮುಕ್ತಾಯ
ಅಗ್ನಿ ಅವಘಡ; ಬಳ್ಳಾರಿಯಲ್ಲಿ ಕೋಟಿ ಕೋಟಿ ಮೌಲ್ಯದ ಕಾಟನ್ ಸುಟ್ಟು ಕರಕಲು
Published On - 2:21 pm, Thu, 25 March 21