ರೈತರ ಹಕ್ಕುಗಳ ರಕ್ಷಣೆ: ಬಸವಕಲ್ಯಾಣದಿಂದ ಬಳ್ಳಾರಿಯವರೆಗೆ 18 ದಿನಗಳ ರೈತರ ಕಾಲುನಡಿಗೆ ಚಳವಳಿ

‘ರೈತರಿಗೆ ಬೇಕಿರುವುದು ದುಡಿಮೆ. ರಿಯಾಯಿತಿ ಬೇಕಿಲ್ಲ, ಸಾಲಗಾರರಾಗಿ ಉಳಿಯುವುದು ಬೇಕಿಲ್ಲ. ಆತಂಕವಿಲ್ಲದೆ ತಮ್ಮ ಜಮೀನಿಗೆ ಕಟ್ಟಬೇಕಾಗಿರುವ ಕಂದಾಯವನ್ನು ಕಟ್ಟಲು ಆರ್ಥಿಕವಾಗಿ ಅವರು ಸುಭದ್ರರಾಗಲು ಇಚ್ಛಿಸುತ್ತಿದ್ದಾರೆ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ರೈತರು ಶ್ರಮಪಡಲು ಖಂಡಿತ ಹಿಂದೇಟು ಹಾಕುತ್ತಿಲ್ಲ.’  ಸ. ರಘುನಾಥ

ರೈತರ ಹಕ್ಕುಗಳ ರಕ್ಷಣೆ: ಬಸವಕಲ್ಯಾಣದಿಂದ ಬಳ್ಳಾರಿಯವರೆಗೆ 18 ದಿನಗಳ ರೈತರ ಕಾಲುನಡಿಗೆ ಚಳವಳಿ
ಬಸವಕಲ್ಯಾಣದಿಂದ ಬಳ್ಳಾರಿವರೆಗೆ ನಡೆದ ರೈತನಡಿಗೆ
Follow us
ಶ್ರೀದೇವಿ ಕಳಸದ
| Updated By: Digi Tech Desk

Updated on:Mar 25, 2021 | 7:12 PM

ದೆಹಲಿಯಲ್ಲಿ ನಡೆದ ರೈತಚಳವಳಿಗಳು, ಅಲ್ಲಿ ನಡೆದ ಅನಪೇಕ್ಷಿತ ಘಟನೆಗಳು ನಮ್ಮ ರಾಜ್ಯದ ರೈತರಲ್ಲಿಯೂ ತಲ್ಲಣ ಉಂಟುಮಾಡಿದ್ದವು. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಇದು ಹೆಚ್ಚು ಚಿಂತೆಗೀಡುಮಾಡಿತ್ತು. ಈ ಹಿನ್ನೆಲೆಯಲ್ಲಿ ನಂಜುಂಡಸ್ವಾಮಿ ಸ್ಥಾಪಿತ ಸಂಘ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮುಂದಾಳತ್ವದಲ್ಲಿ, ರೈತರಿಗೆ ಮರಣಶಾಸನವಾಗಿರುವ ಮೂರು ಕಾಯಿದೆಗಳನ್ನು ಹಿಂಪಡೆಯಲು ಆಗ್ರಹಿಸಿ ಬಸವಕಲ್ಯಾಣದಿಂದ ಬಳ್ಳಾರಿಯವರೆಗೆ 18 ದಿನಗಳ ಕಾಲ ಸುಮಾರು 420.ಕೀ.ಮೀ ರೈತನಡಿಗೆ ಚಳವಳಿಯು ನಡೆಯಿತು. ಮಾರ್ಚ್ 6ರಿಂದ 23ರವರೆಗೆ ನಡೆದ ಈ ಚಳವಳಿಗೆ ಸಾಹಿತಿ, ಚಿಂತಕ ಸ. ರಘುನಾಥ ಅವರು ಬೆನ್ನೆಲುಬಾಗಿದ್ದರು. ಈ ಸಂಚಾರದಲ್ಲಿ ರೈತಾಪಿಮಂದಿಯೊಂದಿಗೆ ಚರ್ಚಿಸಿ ಅವರ ಆಶಯ ಮತ್ತು ಸಮಸ್ಯೆಗಳೆಲ್ಲವನ್ನೂ ಕ್ರೋಢೀಕರಿಸಿದ ವರದಿರೂಪದ ಸಾರಾಂಶವನ್ನು ಇಲ್ಲಿ ನೀಡಲಾಗಿದೆ. 

ಬಸವಕಲ್ಯಾಣದಿಂದ ಬಳ್ಳಾರಿಯವರೆಗೆ ರೈತರು ಕಾಲುನಡಿಗೆಯಲ್ಲಿ ಹೊರಟರು. ಇದು ಕೇವಲ ರೈತಜಾಗೃತಿಯದಾಗಿತ್ತೇ ಹೊರತು ಯಾವುದೇ ವ್ಯಕ್ತಿಯ ವಿರುದ್ಧವಾಗಿರಲಿಲ್ಲ. ರೈತಸಮುದಾಯಕ್ಕೆ ಹಿತಕರವಲ್ಲದ, ಅಂಜಿಕೆ ಮತ್ತು ಒಳಭಯಗಳು ಕಾಡದ ಹಾಗೆ ಮಾಡುವುದು ಮತ್ತು ತನ್ನ ಜಮೀನು ಮತ್ತು ಕೃಷಿ ಬದುಕನ್ನು ಉಳಿಸಿಕೊಳ್ಳಲು ಪ್ರೇರಣೆ ನೀಡುವುದು ಇದರ ಉದ್ದೇಶವಾಗಿತ್ತು.

ಈ ಹಿನ್ನೆಲೆಯಲ್ಲಿ ಹದಿನೆಂಟು ದಿನಗಳ ಈ ರೈತನಡಿಗೆ ಬಸವಕಲ್ಯಾಣದಿಂದ ಹೊರಟು ಬಳ್ಳಾರಿಗೆ ತಲುಪಿ ಮುಕ್ತಾಯಗೊಂಡಿತು. ಈ ನಡಿಗೆ ಒಂದು ಚಾರಿತ್ರಿಕವಾದದ್ದು ಎಂಬುದರಲ್ಲಿ ಸಂಶಯವಿಲ್ಲ. ಸುಮಾರು 420ಕ್ಕೂ ಹೆಚ್ಚು ಕಿ.ಮೀ. ದಾರಿಯನ್ನು ಕಾಲುನಡಿಗೆಯಲ್ಲಿಯೇ ಸಾಗುವುದು ಅದೂ ಈ ಬೇಸಿಗೆಯ ದಿನಗಳಲ್ಲಿ ಅಷ್ಟು ಸುಲಭದ್ದಲ್ಲ ಎಂದು ಮನವರಿಕೆಯಾಗಿದ್ದರೂ ಸಹ ನಿರ್ಣಯ ಗಟ್ಟಿಯಾಗಿತ್ತು. ರೈತರು ಉತ್ಸಾಹದಿಂದ ಪಾಲ್ಗೊಂಡರು. ಕರೂರಿನಲ್ಲಿ ನಡೆದ ಸಭೆಯಲ್ಲಿ ಆಹಾರ, ನೀರು ಇವುಗಳ ಕುರಿತು ಕೂಲಂಕಷವಾದ ಮಾತುಕತೆಗಳು ನಡೆದಾಗ ಅನೇಕ ರೈತರು ತಮ್ಮ ತಮ್ಮ ಮನೆಗಳಿಂದ ದವಸ ಧಾನ್ಯ, ಪಾತ್ರೆ ಪರಡಿ ಹೊಂದಿಸಿಕೊಂಡು ಟ್ರ್ಯಾಕ್ಟರುಗಳಲ್ಲಿ ಈ ಸರಂಜಾಮುಗಳನ್ನು ತುಂಬಿಕೊಂಡು ರೈತರು ತಾವಾಗಿಯೇ ನಿರ್ಧರಿಸಿಕೊಂಡು ಹೊರಟರು. ಮಾರ್ಚ್ 5ರಿಂದ 23ರವರೆಗಿನ ಹದಿನೆಂಟು ದಿನಗಳಿಗೆ ಸಾಕಾಗುವಷ್ಟು ಆಹಾರಧಾನ್ಯವನ್ನು ಕೇವಲ ಮೂರು ದಿನಗಳಲ್ಲಿ ಸ್ವಯಂಪ್ರೇರಣೆಯಿಂದ ಸಂಗ್ರಹಿಸಿದ್ದರು.

ಹೀಗೆ ಜಾಗನೂರು, ಕರೂರು, ಭೈರಾಪುರ, ಅಸುಂಡಿ, ಬಗ್ಗೂರು, ತಿಮ್ಮಾಪುರ ಸೇರಿ ಇನ್ನೂ ಕೆಲವು ಗ್ರಾಮಗಳವರು ಕಾಲುನಡಿಗೆಗೆ ಮುಂದಾದರು. 5ನೇ ತಾರೀಖು ಬಸವಕಲ್ಯಾಣದತ್ತ ಹೊರಡುವಾಗ ಸುಮಾರು 20 ಜನ ಮಹಿಳೆಯರು, 60 ಜನ ಪುರುಷರು ಸಂಘಟಿತರಾಗಿ ಕಾಲುನಡಿಗೆಗೆ ಸಿದ್ಧರಾದರು. ಎರಡು ಕುಟುಂಬಗಳು ತಾವಾಗಿಯೇ ಬಂದು ಸೇರಿಕೊಂಡವು. ಅವರು ಮಕ್ಕಳೂ ಮರಿಗಳನ್ನು  ಕಟ್ಟಿಕೊಂಡು ಪ್ರಯಾಣಕ್ಕೆ ಸಿದ್ಧರಾದರು. ಹಣಮಂತವಾಡಿ ಕಮಲಾಪುರ ಮಾರ್ಗವಾಗಿ ಹೊರಟು ಕಲಬುರ್ಗಿಯನ್ನು ತಲುಪಿ, ಅಲ್ಲಿಯ ರೈತ ಪ್ರಮುಖರನ್ನು ಭೇಟಿಮಾಡಿ ಬೆಂಬಲವನ್ನು ಕೋರಲಾಯಿತು. ಹಾಗೆ ಬೆಂಬಲಿಸಿದ ಅನೇಕ ರೈತರು ಈ ಕಾಲುನಡಿಗೆಯಲ್ಲಿ ಭಾಗವಹಿಸಲು ಸಮ್ಮತಿಸಿದರು. ಅಲ್ಲಿಯ ಎಪಿಎಂಸಿಯಲ್ಲಿ ನಡೆದ ಸಭೆಯಲ್ಲಿ ರೈತರು ವ್ಯಾಪಾರಿಗಳು, ದಲ್ಲಾಳಿಗಳು, ಕೂಲಿಕಾರರು, ಭಾಗವಹಿಸಿದರು. ಪ್ರತಿಯೊಬ್ಬರಲ್ಲಿಯೂ ಕೂಡ ಭವಿಷ್ಯದ ಬದುಕಿನ ಬಗ್ಗೆ ಆತಂಕ ವ್ಯಕ್ತವಾಯಿತು. ಗೆಲುವು ಸಿಕ್ಕುವವರಗೂ ಹೋರಾಟ ಮತ್ತು ಸಹಕಾರವನ್ನು ಕೊಡಲು ನಿರ್ಣಯಿಸಿದರು.

ಅಚ್ಛೀ ಖೇತಿ

ಹಣಮಂತವಾಡಿಯಲ್ಲಿ ರಾತ್ರಿ ತಂಗಿ ನಂತರ ಮೂಡ್ಬಿಗೆ ಬಂದು ಅಲ್ಲಿನ ವೃತ್ತದಲ್ಲಿ ಬೀದಿಬದಿಯ ವ್ಯಾಪಾರಿಗಳನ್ನು ಕುರಿತು, ರೈತರನ್ನುಕುರಿತು ಮಾತನಾಡುವಾಗ ಮೂಡ್ಬಿ ಗ್ರಾಮದ ಮಲ್ಲಪ್ಪ ಕಾಡಿ ಎಂಬತ್ತು ವರ್ಷ ದಾಟಿದ ವೃದ್ಧ ರೈತ ತಾನು ಮಾತನಾಡಬಯಸುವುದಾಗಿ ಮುಂದೆ ಬಂದರು. ಅಚ್ಛೀ ಖೇತಿ ಎಂದರೆ ಏನು ಎಂದು ತಿಳಿಸಿ ಅದಕ್ಕೆ ಸಂಬಂಧಿಸಿದ ಜಾನಪದ ಗೀತೆಯನ್ನೂ ಹಾಡಿದರು. ರೈತ ಹೊಲಕ್ಕೆ ಹೋಗಿ ಸಂಜೆ ತನ್ನ ದನಕರುಗಳೊಂದಿಗೆ ಮರಳಿ, ಮಡದಿ ಮಕ್ಕಳೊಂದಿಗೆ ನಗುನಗುತ್ತ ಇರುವುದೇ ಅಚ್ಛೇ ಖೇತಿ ಎನ್ನುವುದು ಅದರ ಭಾವ. ನೀರು ಕೊಟ್ಟು ಅಚ್ಛೀ ಖೇತಿ ಮಾಡಲು ಬಿಡಿ ಎಂಬ ಕರೆಯನ್ನು ಅವರು ಕೊಟ್ಟರು. ನೀರು ಕೊಡಿ, ರೈತರನ್ನು ಹೊಲಗದ್ದೆಗಳಲ್ಲಿ ಕೆಲಸ ಮಾಡಲು ಬಿಡಿ ಎಂಬ ಅವರ ಆಂತರ್ಯದ ಮಾತು ಮುಂದೆ ನಮ್ಮ ನಡಿಗೆಯಲ್ಲಿ ಉದ್ದಕ್ಕೂ ಪ್ರತಿಧ್ವನಿಸಿತು. ಮೂಡ್ಬಿಯಿಂದ ಕಮಲಾಪುರದಲ್ಲಿ ರುಕ್ಮಿಣಿ ದೇವಾಲಯದಲ್ಲಿ ತಂಗಿದ್ದು, ಅದಕ್ಕೆ ಮೊದಲು ಪಂಜನ್ನು ಹಿಡಿದು ರೈತನಡಿಗೆ ಕಮಲಾಪುರದ ಮುಖ್ಯಬೀದಿಗಳಲ್ಲಿ ಸಾಗಿ, ಅಲ್ಲಿನ ಬಜಾರಿನ ವೃತ್ತದಲ್ಲಿ ಸಭೆಯನ್ನು ಕೂಡ ನಡೆಸಲಾಯಿತು. ಈ ಸಭೆಯಲ್ಲಿ ಆಟೋ ಚಾಲಕರಿಂದ ಹಿಡಿದು, ಬೀದಿಬದಿಯ ಹಣ್ಣು, ತರಕಾರಿ, ಇಡ್ಲಿ, ಪಾನಿಪುರಿ ಮಾರುವ ರೈತರನ್ನೂ ಕೂಡ ಮುಂದಿನ ದಿನಗಳ ಕಷ್ಟಗಳ ಬಗ್ಗೆ ಎಚ್ಚರಿಸಿ ಅದಕ್ಕಾಗಿ ಹೋರಾಟದಲ್ಲಿ ಕೈಜೋಡಿಸಲು ಕರೆ ನೀಡಿತು.

karnataka farmers walkthon

ಬಸವಕಲ್ಯಾಣದಿಂದ ಶುರುವಾದ ರೈತನಡಿಗೆ

ಕೇಳಿಬಂದ ಮಕ್ಕಳ ಒಕ್ಕೊರಲು

ಪಂಜಿಗೆ ಬೇಕಾದ ಡೀಸಲ್​ ಅನ್ನು ಬೀದಿಬದಿಯ ಹಣ್ಣಿನ ವ್ಯಾಪಾರಿಯೊಬ್ಬರು ತಂದುಕೊಟ್ಟರು. ಹಾಗೆಯೇ ಯುವಕರು ತಮ್ಮ ಬೆಂಬಲವನ್ನು ಸೂಚಿಸಿದ್ದಲ್ಲದೆ ಬಾಯಾರಿದ ಕಾಲುನಡಿಗೆಯ ಜಾಥಾದ ರೈತರಿಗೆ ಮಜ್ಜಿಗೆಯನ್ನೂ ಸಹ ಕೊಟ್ಟು ತಮ್ಮ ಬೆಂಬಲವನ್ನು ಈ ರೀತಿ ವ್ಯಕ್ತಪಡಿಸಿದರು. ಮರುದಿನ ಹೊರಟಾಗ ಪೆದ್ದರಿಗಿ ದಾರಿಯಲ್ಲಿ ಕೆಲವರು ಹೆಂಗಸರು ಮತ್ತು ಗಂಡಸರು ಕಾಲ್ನಡಿಗೆಯಲ್ಲಿ ಸಾಗಿದ್ದಾಗ ಭಾವದ ಎಳೆ ಹುಟ್ಟಿತು. ಇವರೂ ನಮ್ಮೊಂದಿಗೆ ಬರಲು ಸಿದ್ಧರಾಗಿದ್ದಾರೆ, ಕಾಲ್ನಡಿಗೆಯಲ್ಲಿ ಭಾಗವಹಿಸಿದ್ದಾರೆ ಎಂದು ಭಾವಿಸಿದೆವು. ತೀರಾ ಹತ್ತಿರವಾಗಿ ವಿಚಾರಿಸಿದಾಗ, ಭಾಗ್ಯವತಿ ದೇವತೆಗೆ ಹರಕೆ ಹೊತ್ತು ಸಾಗಿರುವುದಾಗಿ ತಿಳಿಸಿದರು. ನಂತರ ತಲಖೋರಾ ಗ್ರಾಮವನ್ನು ತಲುಪಿ ಅಲ್ಲಿ ರೈತರೊಂದಿಗೆ ಸಮಾಲೋಚಿಸಿ ಮುಂದುವರಿದಾಗ ಶಾಲೆಯೊಂದು ಕಂಡಿತು. ಕಾಲುನಡಿಗೆಯಲ್ಲಿದ್ದ ರೈತರು ರಸ್ತೆಬದಿಯಲ್ಲಿ ವಿಶ್ರಾಂತಿ ಪಡೆದು ಉಪಹಾರ ಮುಗಿಸುವಾಗ ಶಾಲೆಯ ಮಕ್ಕಳಿಗೆ ಕಥೆಗಳನ್ನು ಹೇಳಲಾಯಿತು. ಈ ಚಳುವಳಿಯ ಉದ್ದೇಶ ಮತ್ತು ಭವಿಷ್ಯದಲ್ಲಿ ಅವರ ತಂದೆ-ತಾಯಿಯೂ ಆದ ರೈತರೂ ಆದ ಅವರ ಸ್ಥಿತಿಗತಿಗಳನ್ನು ಮನಗಾಣಿಸಿದಾಗ ಮತ್ತು ಆ ಮಕ್ಕಳು ಬೆಳೆದು ದೊಡ್ಡವರಾಗಿ ದೇಶದ ಸತ್​ಪ್ರಜೆಗಳಾಗಬೇಕು ಎಂದು ತಿಳಿಸಿದಾಗ ಒಕ್ಕೊರಲಿನಿಂದ ತಮ್ಮ ಗುರುಗಳ ಮೂಲಕ ತಾವು ಸತ್​ ಪ್ರಜೆಗಳಾಗುವ ಪ್ರಮಾಣ ವಚನವನ್ನು ಸತ್ಪ್ರೇರಣೆಯಿಂದ ಪಡೆದುಕೊಂಡರು. ನಡಿಗೆಯನ್ನು ಬಲಪಡಿಸುವಂತೆ ಅದಕ್ಕೆ ಪ್ರೇರಣೆಯಂತೆ ನಮಗೆ ಕಂಡಿತು.

ಚಿಕನಗಾಂವ್​ ತಾಂಡಾ ಕೆರೆಕಟ್ಟೆ ಎತ್ತರ ಹೆಚ್ಚಳಕ್ಕೆ ಸಲಹೆ

ಚಿಕನಗಾಂವ್ ತಾಂಡಾ ತಲುಪಿದೆವು. ಅಲ್ಲಿಯ ಯುವಕ-ಯುವತಿಯರೆಲ್ಲ ಕೆಲಸ ಹುಡುಕಿಕೊಂಡು ಮುಂಬೈಗೆ ಹೋಗಿರಲು ಕಾರಣ ಬೆಳೆನಾಶ. ಸೋನಾಬಾಯಿ ಎಂಬಾಕೆ ತನ್ನ ಮಕ್ಕಳ ಓದು ಮತ್ತು ಸಮುದಾಯದವರ ಉದ್ಯೋಗ ವಲಸೆಯಿಂದ ನೊಂದು ಆತಂಕಕ್ಕೆ ಒಳಗಾಗಿರುವುದನ್ನು ಹಂಚಿಕೊಂಡರು. ಅಲ್ಲಿಯೇ ರಸ್ತೆಬದಿಯಲ್ಲಿಯೇ ಸುತ್ತು ಎತ್ತರವಾದ ಗುಡ್ಡಗಳ ನಡುವೆ ಒಂದು ಕೆರೆ ಸಹ ಕಂಡಿತು. ಆ ಮಳೆ ಮೂಲದ ಪ್ರದೇಶಗಳು  ಬಹಳ ವಿಶಾಲವಾಗಿದ್ದವು. ಆದರೆ ಕೆರೆಕಟ್ಟೆಯನ್ನು ಗಮನಿಸಿದಾಗ ಎತ್ತರ ಸಾಲದು ಎನ್ನಿಸಿತು. ಇನ್ನೂ ಐದು ಅಡಿಯಷ್ಟು ಕೆರೆಕಟ್ಟೆಯನ್ನು ಎತ್ತರಿಸಿದರೆ, ಕೆಳಗಿನ ಸುಮಾರು ಹತ್ತು ಹಳ್ಳಿಗಳಿಗೆ ಬೇಸಾಯಕ್ಕೆ ಕುಡಿಯಲು ನೀರು ಸಾಕಾಗಬಹುದು ಎನ್ನಿಸಿತು.

ಕಲಬುರ್ಗಿಯಲ್ಲಿ ಎಪಿಎಂಸಿಯಲ್ಲಿ ಸಭೆ ಮುಗಿದ ನಂತರ ಅಲ್ಲಿಂದ ಕಾಲುನಡಿಗೆಯಲ್ಲಿ ಹೊರವಲಯದಲ್ಲಿ ಇದ್ದ ಕೊಟ್ಟೂರು ಮಠಕ್ಕೆ ಹೋದೆವು. ವಸಂತ ಪಾಟೀಲ್, ಎ. ಆರ್. ಪಾಟೀಲ ಇಂಥವರ ಸಹಕಾರ ನಮಗೆ ಸಿಕ್ಕಿತು. ಅವರು ಯಾವುದೇ ರಾಜಕೀಯ ವಿಷಯಗಳನ್ನು ಪ್ರಸ್ತಾಪ ಮಾಡದೆ, ಯಾವುದೇ ಪಕ್ಷವನ್ನು ಪ್ರತಿನಿಧಿಸದೆ ಬೇಷರತ್ತಾಗಿ ಚಳವಳಿಯನ್ನು ಬೆಂಬಲಿಸಿದರು. ಮುಖ್ಯವೃತ್ತಗಳಲ್ಲಿ ಈ ಕುರಿತು ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ ಕಾನೂನಿನ ಬಗ್ಗೆ ವಿವರವಾಗಿ ಪ್ರಸ್ತಾಪಿಸಲಾಯಿತು.

karnataka farmers walkthon

ರೈತರೊಂದಿಗೆ ಸಮಾಲೋಚನೆ ನಡೆಸುತ್ತಿರುವ ಸ. ರಘುನಾಥ.

ಕೃಷಿ ಕ್ಷೇತ್ರ ಸಂಸ್ಕೃತಿ ಬೇಡ

ಸಣ್ಣ ರೈತನ ಮೇಲೆ ಯಾವುದೇ ರೀತಿಯ ಒತ್ತಡವನ್ನು ಹೇರಬಾರದು. ಮುಕ್ತವಾಗಿ ರೈತ ತನಗೆ ಅಗತ್ಯವಾದ ಬೆಳೆಗಳನ್ನು ಬೆಳೆಯಲು ಅವಕಾಶ ಕಲ್ಪಿಸಬೇಕು. ಫಾರಂ ಕಲ್ಚರ್​, ಅಂದರೆ ಸಾವಿರಾರು ಎಕರೆಗಳನ್ನು ಒಂದು ಕೃಷಿ ಕ್ಷೇತ್ರವನ್ನಾಗಿಸಿ ಯಂತ್ರಗಳ ಮೂಲಕ ಕೃಷಿ ಕಾರ್ಯಗಳನ್ನು ನಡೆಸುವುದು ಬೇಡ ಎಂಬುದು ಎಲ್ಲೆಡೆಯಿಂದ ಕೇಳಿಬಂದಿತು. ಇದಲ್ಲದೆ, ಬದುರಹಿತ ಕೃಷಿನೆಲವನ್ನು ಅವಲೋಕಿಸುವುದು ಈ ಕಾರ್ಪೊರೇಟ್ ವ್ಯವಸ್ಥೆಯ ಇನ್ನೊಂದು ಹುನ್ನಾರವೆಂದು ಭಾವಿಸಿದ್ದೂ ರೈತರ ತಲ್ಲಣಕ್ಕೆ ಕಾರಣವಾಗಿತ್ತು. ಈ ತಲ್ಲಣಗಳ ನಿವಾರಣೆ ಮತ್ತು ಸಂಬಂಧಿಸಿದ ಕಾನೂನನ್ನು ಹಿಂಪಡೆದು ಎಪಿಎಂಸಿಗಳನ್ನು ಜೀವಂತವಾಗಿ ಉಳಿಸುವುದು ಇನ್ನೊಂದು ಮಗ್ಗುಲಿನ ಬೇಡಿಕೆಯಾಗಿತ್ತು.

ಪ್ರತಿಯೊಬ್ಬ ಬಡವ ಕೂಲಿಕಾರ ಇವರು ಅವಲಂಬಿಸಿರುವ ರೈತ ತನ್ನ ತನ್ನ ಅವಲಂಬಿತನ ಕಲ್ಯಾಣವನ್ನು ಬಯಸುತ್ತಿದ್ದಾನೆ. ಸಬ್ಸಿಡಿ, ಬೆಂಬಲ ಬೆಲೆ ಇತ್ಯಾದಿ ರೈತನ ಬದುಕಿಗೆ ರೈತನ ಬದುಕಿನ ಉದ್ಧಾರಕ್ಕೆ ಪೂರಕವಲ್ಲ. ಮತ್ತೆ ಮತ್ತೆ ಪುನರಾವರ್ತಿಸಿ ಹೇಳುವ ಮಾತೆಂದರೆ ಸಂಪೂರ್ಣವಾಗಿ ಸಾಲಮುಕ್ತವಾಗಿ ಕೃಷಿ ಬದುಕನ್ನು ನಡೆಸಿ ದೇಶದ ಸಂಪತ್ತನ್ನು ಹೆಚ್ಚಿಸಲು ಅವನಿಗೆ ಸಂಪೂರ್ಣ ಆರ್ಥಿಕ ಸಬಲತೆಯನ್ನು ಕೊಡಬೇಕಾದದ್ದು ಸರ್ಕಾರದ ಕರ್ತವ್ಯ ಮಾತ್ರವಲ್ಲ ಸಹಕರಿಸಬೇಕಾಗಿರುವುದು ನಗರವಾಸಿಗಳು. ಅವರು ರೈತನ ಬೆಂಬಲವಾಗಿ ನಿಂತರೆ ನಾಳೆ ಪೌಷ್ಠಿಕವಾದ ಆಹಾರವನ್ನು ತಮಗೆ ತಮ್ಮ ಮಕ್ಕಳಿಗೆ ಒದಗಿಸಲು ಸಾಧ್ಯವಾಗುತ್ತದೆ ಎಂಬುದು ರೈತನ ಮನೋಭಾವ. ಇದನ್ನು ಗೌರವಿಸಬೇಕು. ಕಾನೂನುಗಳು ತಿದ್ದುಪಡಿ ಮತ್ತು ಜಾರಿಗೊಳ್ಳಲು ಸಿದ್ಧವಿರುವ ಕಾನೂನುಗಳ ಬಗ್ಗೆ ರೈತನ ಅನುಮಾನಗಳನ್ನು ಪರಿಹರಿಸಬೇಕೇ ಹೊರತು ಗೊಂದಲವನ್ನುಂಟು ಮಾಡಬಾರದು. ಜೊತೆಗೆ ಅವನಿಗೆ ಕೈಗಾರಿಕೆಗಳಿಗೆ ಯಾವ ರೀತಿಯ ಗಟ್ಟಿ ಭದ್ರತೆಯನ್ನು ಒದಗಿಸಿದೆಯೋ ಅದೇ ರೀತಿ ಒದಗಿಸಬೇಕು.

ಬೆಳೆವಿಮೆ

ಬೆಳೆವಿಮೆ ಖಾಸಗೀ ವಿಮಾ ಸಂಸ್ಥೆಗಳಿಗೆ ಹೋಗಬಾರದು. ಅದು ಭಾರತೀಯ ಜೀವವಿಮೆ ರೀತಿಯಲ್ಲಿಯೇ ಕಾರ್ಯ ನಿರ್ವಹಿಸಬೇಕು. ಖಾಸಗೀಕರಣಕ್ಕೆ ಕೃಷಿ ಮತ್ತು ಶಿಕ್ಷಣ ಒಳಪಡಬಾರದು ಎನ್ನುವುದು ಎಲ್ಲ ಕೂಲಿಕಾರರ, ಬಡವರ ಬೇಡಿಕೆ. ಈ ಬೇಡಿಕೆ ಈಡೇರಿಸುವಂಥ ಭಾರತದ ಪ್ರತಿಯೊಬ್ಬ ನಾಯಕನೂ ಚಿಂತಿಸಬೇಕಿದೆ. ಕೃಷ್ಣದೇವರಾಯ, ಎಲ್ಲಿ ರೈತನ ಬದುಕು ಸುಭದ್ರವಾಗಿರುವುದಿಲ್ಲವೋ ಅಲ್ಲಿ ಸಾಮ್ರಾಜ್ಯ ಉಳಿಯುವುದಿಲ್ಲ ಎಂದಿದ್ದಾನೆ. ಇನ್ನೊಂದು ಮಾತನ್ನು ಅಮುಕ್ತಮಾಲ್ಯದಲ್ಲಿ, ಅರಸನ ಕೈಯಲ್ಲಿ ಮೂಡಿದ ಖಡ್ಗದ ರೇಖೆಗಳಿಗಿಂತ ರೈತನ ಹೆಗಲ ಮೇಲೆ ಮೂಡಿದ ನೇಗಿಲ ರೇಖೆಗಳು ಶ್ರೇಷ್ಠ ಎಂದಿದ್ದಾನೆ. ಎಲ್ಲವನ್ನೂ ನಿಯಂತ್ರಿಸಲು ಹೊರಟಿರುವ, ತನ್ನ ಅಧೀನಕ್ಕೆ ತೆಗೆದುಕೊಳ್ಳಲು ಹೊರಟಿಸುವ ರಾಜಕೀಯ ವ್ಯವಸ್ಥೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಒಬ್ಬ ನಿರಂಕುಶ ಚಕ್ರವರ್ತಿಯೇ ಇದನ್ನು ಹೇಳಿದ್ದಾನೆ ಎಂದಮೇಲೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವ ನಾವು ಈ ನಿಲುವಿಗೆ ಬರದೇ ಹೋದರೆ ಭಾರತಮಾತೆಗೆ ಮಾಡಿದ ಅವಮಾನ ಅಲ್ಲವೆ?

ಈ ಎಲ್ಲ ಆಶಯಗಳನ್ನು ಅರಿವನ್ನು ಪ್ರಚುರಪಡಿಸುತ್ತ ಜೇವರಗಿ, ಮಸ್ಕಿ, ಸಿಂಧನೂರು, ಸಿರಗುಪ್ಪ, ಲಿಂಗಸಗೂರು ಕಡೆಗೆ 16ನೇ ತಾರೀಖಿಗೆ ಹೆಜ್ಜೆ ಹಾಕಲಾಯಿತು. ಇಬ್ರಾಹಿಂಪುರದಲ್ಲಿ ಒಳ್ಳೆಯ ಸ್ಪಂದನೆ ಸಿಕ್ಕಿತು. ಒಟ್ಟು ಕಾಲನಡಿಗೆಯ ಸಾರಾಂಶದಲ್ಲಿ ಕೇಳಿ ಬಂದಿದ್ದು, ನಮ್ಮ ಭೂಮಿ ನಮಗೆ ಉಳಿದುಕೊಳ್ಳಬೇಕು. ನಮ್ಮ ಪೀಳಿಗೆಗೆ ರೈತಸಂಸ್ಕೃತಿ ವರ್ಗಾಯಿಸಬೇಕು. ಬೇಸಾಯಕ್ಕೆ ನೀರು ಕೊಡಿ. ನಮ್ಮನ್ನು ಹೊಲಕ್ಕೆ ಕೆಲಸಕ್ಕೆ ಬಿಡಿ. ಕಾರ್ಪೊರೇಟ್ ಸಂಸ್ಥೆಗಳಿಗೆ ನಮ್ಮನ್ನು ಗುಲಾಮರನ್ನಾಗಿ ಮಾಡಬೇಡಿ ಮತ್ತು ಬೆಲೆಯನ್ನು ನಿಗದಿ ಮಾಡುವಲ್ಲಿ ಅನುಮಾನಗಳಿವೆ. ವ್ಯಾಪಾರಿ ಜನ ಲಾಭ ಇಟ್ಟುಕೊಳ್ಳದೆ ಬೆಲೆ ನಿಗದಿ ಮಾಡುವುದಿಲ್ಲ. ಇದರಿಂದಾಗಿ ಆಹಾರ ಅಭಾವ ತಂದುಕೊಂಡಂತಾಗುತ್ತದೆ.

karnataka farmers walkthon

ರೈತರೊಂದಿಗೆ ಮಾತುಕತೆಯಲ್ಲಿ

ರೈತರ ಮಕ್ಕಳಾಗಿಯೇ ಇರುವೆವು 

ರೈತನ ಶ್ರಮ ಸಮಾಜಕ್ಕೆ ಹಂಚಿಕೆಯಾಗಬೇಕು. ಉಗ್ರಾಣಗಳಲ್ಲಿ ಸಂಗ್ರಹಗೊಂಡು ಬೆಲೆಗಳನ್ನು ಏರಿಸಿ ಕೆಲ ವ್ಯಕ್ತಿಗಳಿಗೆ ಲಾಭ ಆಗಬಾರದು. ಮಧ್ಯಮ, ಕೆಳಮಧ್ಯಮ ವರ್ಗದವರಿಗೆ ನ್ಯಾಯಬೆಲೆಯಲ್ಲಿ ದವಸ ಧಾನ್ಯ ಸಿಗಬೇಕು. ದಲ್ಲಾಳಿ ಮತ್ತು ಗ್ರಾಹಕರ ಮಧ್ಯೆ ಅಂತರ ಜಾಸ್ತಿ ಇರಬಾರದು. ಯಾವುದೇ ರೀತಿಯಾದ ಕೃತಕ ಆಹಾರ ಅಭಾವವನ್ನು ದೇಶದಲ್ಲಿ ಸೃಷ್ಟಿ ಮಾಡಿ ದಿನನಿತ್ಯ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ದಾಸ್ತಾನು ಮಾಡಬಾರದು. ಇದರ ಜೊತೆಯಲ್ಲಿ ರೈತಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಕಲ್ಪಿಸಬೇಕು. ದೊಡ್ಡ ಮಳಿಗೆಗಳಿಂದ ಬೀದಿಬದಿಯ ವ್ಯಾಪಾರಿಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ವಿಚಾರದ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ನಾವು ರೈತರ ಮಕ್ಕಳಾಗಿಯೇ ಇರಬೇಕು ಅಂತಲೇ ಬಯಸುತ್ತೇವೆ. ಶಿಕ್ಷಣ ಮತ್ತು ಉದ್ಯೋಗದ ವಿಷಯದಲ್ಲಿ ಗುತ್ತಿಗೆ ನೌಕರರರಾಗುವುದು ಇಷ್ಟವಿಲ್ಲ. ಒಟ್ಟಾರೆಯಾಗಿ ನಮಗೆ ಗೊಂದಲವಿದೆ. ನಾವು ಯಾರ ಮಾತನ್ನು ನಂಬುವುದು? ಯಾರು ನಕಲಿ, ಅಸಲಿ ಎನ್ನುವುದು ತಿಳಿಯಬೇಕು. ಯಾರನ್ನು ಯಾರು ಆರೋಪಿಸುತ್ತಿದ್ದಾರೆ ಯಾಕಾಗಿ ಎನ್ನುವುದರ ಬಗ್ಗೆ ಸ್ಪಷ್ಟತೆ ಬೇಕು ಎಂದು ಚರ್ಚಿಸಿದರು. ಇದೆಲ್ಲ ಗೊಂದಲವನ್ನೂ ಹೋಗಲಾಡಿಸುವ ಜವಾಬ್ದಾರಿ ರೈತಸಂಘಟನೆ, ಹೊರಾಟಗಾರರ ಮೇಲೆ ಇದೆ ಎಂದು ಹಳ್ಳಿಗರು ವ್ಯಕ್ತಪಡಿಸಿದರು.

ಉದ್ಯೋಗ ವಲಸೆ ಮತ್ತು ಬೆಳೆನಾಶ 

ಗ್ರಾಮೀಣ ಉದ್ಯೋಗ ವಲಸೆ ಬಗ್ಗೆ ಇಲ್ಲಿರುವವರಿಗೆ ಅಸಮಾಧಾನವಿದೆ. ತಾಂಡಾಗಳ ದೊಡ್ಡ ಸಮಸ್ಯೆ, ಯುವಕಯುವತಿಯರು ಮುಂಬೈನಂಥ ಪಟ್ಟಣಗಳಿಗೆ ವಲಸೆ ಹೋಗಿರುವುದರಿಂದ ಬೇಸಾಯ ನೆಲಕಚ್ಚಿದೆ. ಮೆಣಸಿನಕಾಯಿ, ತೊಗರೆಬೆಳೆ ನಾಶವಾಗಿದೆ. ಕಲಬುರ್ಗಿಯಿಂದ ಬಳ್ಳಾರಿತನಕ ಪರಿಸ್ಥಿತಿ ಹೀಗೇ ಮುಂದುವರಿದಿದೆ. ಸೋಯಾಗೆ ಒಳ್ಳೆಯ ಬೆಲೆ ಕೊಟ್ಟಿಲ್ಲ. ಮೆಣಸಿನಕಾಯಿ ಅರ್ಧಭಾಗ ಹಾನಿಗೊಳಗಾಗಿದೆ. ಒಂದು ಎಕರೆಗೆ 30 ಕ್ವಿಂಟಲ್ ಬದಲಾಗಿ 15 ಕ್ವಿಂಟಲ್​ ಇಳುವರಿ ಬಂದಿದೆ. ಮೆಣಸಿನಕಾಯಿ ಬೆಳೆಗಾರ ನಷ್ಟದಲ್ಲಿದ್ದಾರೆ. ಆದರೆ ಪ್ರಗತಿಪರ ರೈತರು ಲಾಭ ಕಂಡುಕೊಂಡಿದ್ದಾರೆ. ಲಂಬಾಣಿ ತಾಂಡಾಗಳು, ಕನಮನ ತಾಂಡಾ, ಮೂಡ್ಬಿ, ಗುಲಬರ್ಗದ ಹತ್ತಿರ ಹತ್ತು ತಾಂಡಾಗಳಿವೆ. ಮಳೆನೀರಿನ ಆಶ್ರಿತ ಪ್ರದೇಶವದು. ಮಧ್ಯದಲ್ಲಿ ಎಂಟು ಅಡಿ ಕಟ್ಟೆ ಕಟ್ಟಿದಾರೆ. ಇನ್ನೊಂದು ಐದಡಿಗೆ ಏರಿಸಿದರೆ ಹತ್ತು ತಾಂಡಾಗಳಿಗೆ ಕುಡಿಯುವ ನೀರು ಮತ್ತು ಬೇಸಾಯಕ್ಕೆ ಸಹಾಯವಾಗುತ್ತದೆ ಎನ್ನುವುದು ಗಮನಾರ್ಹ.

ಒಂದು ಎಕರೆಯಲ್ಲಿ ಎರಡೂವರೆ ಮೂರು ಲಕ್ಷದವರೆಗೆ ಲಾಭವಾದರೆ ಮಾತ್ರ ಮುಂದಿನ ಬೆಳೆಯನ್ನು ನಿಶ್ಚಿಂತೆಯಿಂದ ಇಡಬಲ್ಲೆ ಎನ್ನುತ್ಥಾನೆ ಒಬ್ಬ ರೈತ. ನಾನು ಒಂದು ಲುಂಗಿ ಬನಿಯನ್ ಕೊಂಡುಕೊಳ್ಳಾಗಲಿಲ್ಲ ಈ ವರ್ಷ. ಹೆಂಡತಿ ಮಕ್ಕಳಿಗೆ ಒಂದು ಸಿಹಿ ಊಟ ಕೊಡಿಸಲು ಆಗಲಿಲ್ಲ ಎಂದು ಇನ್ನೊಬ್ಬ. ಈ ಊರಿನಲ್ಲಿ ಭೂಮಿ ಕಳೆದುಕೊಂಡರೆ ಇನ್ನೊಂದು ಊರಲ್ಲಿ ಕೂಲಿ ಮಾಡುವುದಕ್ಕೆ ಹೋಗುತ್ತೇವೆ. ಕೃಷಿಯನ್ನೇ ಕಳೆದುಕೊಂಡರೆ ಮುಂದೆ ಹೇಗೆ? ಹಾಗಾಗಿ ಬೃಹತ್ ಕೃಷಿ ಕ್ಷೇತ್ರಗಳಿಗೆ, ಗುತ್ತಿಗೆ ಬೇಸಾಯಕ್ಕೆ ರೈತರ ವಿರೋಧವಿದೆ. ಅವರು ಹೇಳಿದ ಬೆಳೆ ಬೇಕಾಗುತ್ತದೆ. ನಮಗೆ ಬೇಕಾದ ಬೆಳೆಯನ್ನು ಬೆಳೆಯುವ ಸ್ವಾತಂತ್ರ್ಯ ಬೇಕು. ಕಾಲಕಾಲಕ್ಕೆ ವ್ಯಾಪಾರಿಗಳು ಸರಿಯಾದ ನಿಗದಿಮಾಡಿ ರೈತರ ಅಭಿಪ್ರಾಯದಲ್ಲಿ ಬೆಲೆ ನಿಗದಿಯಾಗಬೇಕು. ಉತ್ಪಾದನೆ, ಖರ್ಚು ಮತ್ತು ಲಾಭಾಂಶ ಒಂದಕ್ಕೊಂದಕ್ಕೆ ಸಂಬಂಧ ಇರಬೇಕು. ಅಂತರ ಹೆಚ್ಚು ಇರಬಾರದು ಅನ್ನುವುದು 480 ಕಿ.ಮೀ ಕಾಲ್ನಡಿಗೆಯಲ್ಲಿ ಕೇಳಿಬಂದ ಜನಾಭಿಪ್ರಾಯ ಇದು.

karnataka farmers walkthon

ರೈತಸಂಸ್ಕೃತಿಯ ರಕ್ಷಣೆಗಾಗಿ

ರೈತಮಹಿಳೆಯರ ಆತಂಕ

ಮಹಿಳೆಯರ ಧ್ವನಿ ವಿಶೇಷವಾಗಿ ಕೇಳಿಬಂದಿತು. ಸಂಸಾರದ ನಿರ್ವಹಣೆ ರೈತ-ಸಾಮಾನ್ಯ ಮಹಿಳೆಯದಾಗಿದೆ. ಪುರುಷನಿಗಿಂತ ಹೆಚ್ಚು ಆತಂಕಗೊಂಡಿರುವುದು ರೈತಮಹಿಳೆ. ಸೌದೆಯನ್ನು ಕಿತ್ತುಕೊಂಡು ಅನಿಲವನ್ನು ಕೊಟ್ಟರು. ಅನಿಲದ ಬೆಲೆ ಜಾಸ್ತಿಯಾಯಿತು. ದಿನಸಿ ಅಂಗಡಿಗಳಲ್ಲಿ ವಸ್ತುಗಳ ಬೆಲೆ ಏರುತ್ತಿದೆ. ಆದರೆ ನಮ್ಮ ಆದಾಯ ಒಂದೇ ತೆರನಾಗಿದೆ. ನಾವು ಬೆಲೆ ಏರಿಕೆಗೆ ಹೇಗೆ ಹೊಂದಿಕೊಳ್ಳುವುದು ಎನ್ನುವುದೇ ನಮ್ಮ ಪ್ರಶ್ನೆ ಎನ್ನುತ್ತಿದ್ಧಾರೆ. ದೇಶ ಅಂದರೆ ಮಣ್ಣಲ್ಲ, ದೇಶ ಅಂದರೆ ಜನ. ಇದು ಜನಾಭಿಪ್ರಾಯ ಮತ್ತು ನಡಿಗೆಯಲ್ಲಿ ಕೇಳಿಬಂದ ಅನುಭವ.

ಸರಿಯಾದ ರೀತಿಯಲ್ಲಿ ಸಂಘಟಿಸಿ ಒಗ್ಗೂಡಿಸಿದರೆ ಮಹಿಳೆಯರ ಧ್ವನಿ ರೈತಚಳಿವಳಿಯಲ್ಲಿ ಕೇಳಿಬರುತ್ತದೆ. ಇಲ್ಲವಾದಲ್ಲಿ ಮುಷ್ಟಿ ಬಿಗಿಯುತ್ತಾರೆ. ಇದು ಅವರ ಮನೋಭಾವ. ಹಾಗಾಗಿ ಅವರಿಗೆ ನಿರ್ಭೀತಿಯಿಂದ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಅವಕಾಶವನ್ನು, ಸ್ವಾತಂತ್ರ್ಯವನ್ನು, ಪರಿಸರವನ್ನು ಕಲ್ಪಿಸಬೇಕಾಗಿದೆ. ಇಡೀ ಬದುಕು ದಿನದಿಂದ ದಿನ ಬಡತನದತ್ತ ಹೋಗುತ್ತಿದೆ ಎನ್ನುವ ಆತಂಕದಲ್ಲಿ ಅವರಿದ್ದಾರೆ. ಬಹುಮುಖ್ಯವಾಗಿ ಕೂಲಿ ಮತ್ತು ರೈತಮಹಿಳೆಯ ಸಂಸಾರಗಳಿಗೆ ಸರ್ವಋತು ವಸತಿ ಸೌಲಭ್ಯವಿಲ್ಲ.

ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಜಿ.ಜಿ. ಹಳ್ಳಿ ನಾರಾಯಣಸ್ವಾಮಿ. ಕಾರ್ಯಾಧ್ಯಕ್ಷ ಕರೂರು ಮಾಧವರೆಡ್ಡಿ, ಜಾಗನೂರು ಸಿರಿವಾರದ ಭೂ ಹೋರಾಟದ ನಾಯಕ ವಕೀಲ ಮಲ್ಲಿಕಾರ್ಜುನರೆಡ್ಡಿ. ಅಸುಂಡಿ ಲೇಪಾಕ್ಷಿ, ಹುಲಿಗೆಪ್ಪ, ಹುಲಿಗೆಯ್ಯ, ಜಾಗನೂರು ಲಕ್ಷ್ಮಮ್ಮ, ಜಾಗನೂರು ಪೆದ್ದಲಕ್ಷ್ಮಮ್ಮ, ನಾಗವೇಣಿ, ಶಶಿಕಲಾ, ದುರ್ಗಮ್ಮ, ಶಾರದಮ್ಮ, ಚಾಗನೂರು ಚಿರಂಜೀವಿ, ಶೇಖರ, ಮೋಕಾ ಹನುಮಂತಪ್ಪ ಮುಂತಾದವರು ಹದಿನೆಂಟು ದಿನ ಅವಿಶ್ರಾಂತವಾಗಿ ನಡಿಗೆಯಲ್ಲಿ ಭಾಗವಹಿಸಿದ್ದರು. ಉಳಿದಂತೆ ಆಯಾ ಹಳ್ಳಿಗರು ತಮಗೆ ಸಾಧ್ಯವಾದಷ್ಟು ಒಳಗೊಳ್ಳುತ್ತಿದ್ದರು.

ಇದು ರೈತರು ತಮ್ಮ ಆಹಾರ ಧಾನ್ಯಗಳನ್ನು ತಾವೇ ಬಳಸಿ ತಮಗೆ ಅಗತ್ಯವಾದ ಆಹಾರ ಮತ್ತು ಚಹಾವನ್ನು ರಸ್ತೆಬದಿ ತಯಾರಿಸಿಕೊಳ್ಳುತ್ತಿದ್ದರು. ಮಠಗಳು, ದೇವಸ್ಥಾನ, ದರ್ಗಾಗಳು ಇವರ ವಿಶ್ರಾಂತಿ ತಾಣಗಳಾಗಿದ್ದವು. ರಾತ್ರಿ ಹೊತ್ತು. ಕೆಲವು ಗ್ರಾಮಗಳಲ್ಲಿ ಜನರೇ ಇದನ್ನು ಕಾಲನಡಿಗೆಯಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಂಡರು. ಹಣಮಂತವಾಡಿ, ಇಬ್ರಾಹಿಂಪೂರ ಕಡೆಗಳಲ್ಲಿ ಹನ್ನೆರಡು ಗಂಟೆತನಕ ಚರ್ಚಿಸಲಾಗುತ್ತಿತ್ತು. ವಿಶ್ರಾಂತಿ ಮಕ್ಕಳಿಗೆ ಕಥೆಗಳನ್ನು ಹೇಳುವುದು. ಕಾಲೇಜು ಮಕ್ಕಳನ್ನು ಸಂದರ್ಶಿಸುವುದನ್ನು ಮಾಡಲಾಗುತ್ತಿತ್ತು.

ಇದನ್ನೂ ಓದಿ : ರೈತರ ದಿಲ್ಲಿ ಚಲೋ ಪ್ರತಿಭಟನೆ ರಾಜಕೀಯ ಸ್ವರೂಪ ಪಡೆಯಲಾರಂಭಿಸಿದೆ! 

Published On - 1:27 pm, Thu, 25 March 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ