ಅಚ್ಚಿಗೂ ಮೊದಲು : ‘ಅನಾರ್ಕಲಿಯ ಸೇಫ್ಟಿ ಪಿನ್​‘ ಬಿಡಿಸಿಕೊಂಡು ಬಂದ ‘ಎವರ್​ಗ್ರೀನ್​‘ನ ಒಂದು ಎಸಳು

ಇದೇ ಭಾನುವಾರ 28ರಂದು ಅಂಕಿತ ಪುಸ್ತಕದಿಂದ ಬೆಳಗ್ಗೆ 10.30ಕ್ಕೆ ಹಿರಿಯ ಕಥೆಗಾರ, ಕವಿ ಜಯಂತ ಕಾಯ್ಕಿಣಿ ಅವರ ‘ಅನಾರ್ಕಲಿಯ ಸೇಫ್ಟಿ ಪಿನ್’ ಕಥಾ ಸಂಕಲನ ಮತ್ತು ‘ವಿಚಿತ್ರಸೇನನ ವೈಖರಿ’ ಕವಿತಾ ಸಂಕಲನ ವರ್ಚ್ಯುವಲ್​ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿವೆ. ಕೊರೊನಾ ಮತ್ತೆ ಹೆಚ್ಚಾದ ಕಾರಣಕ್ಕಾಗಿ, ಮೊದಲು ನಿಗದಿಯಾಗಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದಾಗಿದೆ. ಈ ಸಂದರ್ಭದಲ್ಲಿ ಅವರ ಹೊಸ ಕಥೆ ‘ಎವರ್​ಗ್ರೀನ್​’ನ ಆಯ್ದ ಭಾಗ ನಿಮ್ಮ ಓದಿಗೆ.

ಅಚ್ಚಿಗೂ ಮೊದಲು : ‘ಅನಾರ್ಕಲಿಯ ಸೇಫ್ಟಿ ಪಿನ್​‘ ಬಿಡಿಸಿಕೊಂಡು ಬಂದ ‘ಎವರ್​ಗ್ರೀನ್​‘ನ ಒಂದು ಎಸಳು
ಕಥೆಗಾರ ಜಯಂತ ಕಾಯ್ಕಿಣಿ
Follow us
ಶ್ರೀದೇವಿ ಕಳಸದ
| Updated By: ಡಾ. ಭಾಸ್ಕರ ಹೆಗಡೆ

Updated on:Mar 26, 2021 | 6:40 PM

ಈಗೀಗ ಓದುವವರು ಕಡಿಮೆ, ಬರೆಯುವವರೇ ಹೆಚ್ಚು; ದಶಕಗಳಿಂದ ಸಾಹಿತ್ಯ ವಲಯದಿಂದ ಕೇಳಿಬರುತ್ತಿರುವ ಪುನರಾವರ್ತಿತ ಸಾಲು ಇದು. ಹಾಗಿದ್ದರೆ ನಾವೇಕೆ ಓದುತ್ತೇವೆ, ನಾವೇಕೆ ಬರೆಯುತ್ತೇವೆ? ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com ಪರಿಕಲ್ಪನೆ : ಶ್ರೀದೇವಿ ಕಳಸದ

ಪುಸ್ತಕ : ಅನಾರ್ಕಲಿಯ ಸೇಫ್ಟಿ ಪಿನ್​ (ಕಥಾ ಸಂಕಲನ) ಲೇಖಕರು : ಜಯಂತ ಕಾಯ್ಕಿಣಿ ಮುಖಪುಟ ಕಲೆ : ರಾವ್ ಬೈಲ್ ಮುಖಪುಟ ವಿನ್ಯಾಸ : ಅಪಾರ ಬೆಲೆ : ರೂ. 175

ಅತ್ಯಂತ ಸೃಜನಶೀಲ ಮನಸ್ಸು ಮಾತ್ರ ಸದಾ ಪರಿವರ್ತನಶೀಲ ಜಗತ್ತಿನ ಚಲನೆಯನ್ನು ಸೆರೆಹಿಡಿಯಬಲ್ಲದು. ಆ ಚಲನೆಯೊಳಗಿನ ಕಂಪನವನ್ನು ಕಾಣಬಲ್ಲದು. ಜಯಂತರ ಕಥೆಗಳ ಸಂವೇದನೆ ಜಡಜಗತ್ತನ್ನು ಭೇದಿಸಿ ಅದರೊಳಗಿನ ಜೀವತಂತುಗಳನ್ನು ಮೀಟುವುದು ಸುಳ್ಳಲ್ಲ. ಆದ್ದರಿಂದಲೇ ಅವರನ್ನು ಓದುವುದೆಂದರೆ ವಿಶಿಷ್ಟವಾದ ಸೆಳೆತ. ಚಲನಶೀಲತೆಗೆ ಯಾವತ್ತಿಗೂ ಸಿದ್ಧಚೌಕಟ್ಟುಗಳೆಂದರೆ ಅಲರ್ಜಿ. ಜಯಂತರದು ಅಂಥ ಚಲನಶೀಲ ಹಾಗೂ ಸೃಜನಶೀಲ ದರ್ಶನ. ಅವರ ಕಥೆಗಳು ಲೋಕವನ್ನು ಗ್ರಹಿಸುವ ಹೊಸಕ್ರಮವೊಂದನ್ನು ಕಾಣಿಸುವಷ್ಟು ಸಶಕ್ತ. ಇದನ್ನೇ ನಾವು ಮೀಮಾಂಸೆ ಎನ್ನಬಹುದು. ಆದರೆ, ಇದು ಸಿದ್ಧಗೊಂಡಿರುವ ಮೀಮಾಂಸೆಯಲ್ಲ. ‘ಆಗುತ್ತಲಿರುವ’ ಮೀಮಾಂಸೆ. ಕಟ್ಟುವುದಕ್ಕಿಂತ ಆಗುವುದು ಅವರ ಕಥೆಗಳಿಗೆ ಬಹುಮುಖ್ಯ. ರಚನೆಯಾಗುವುದೆಲ್ಲ ಮರುಕ್ಷಣಕ್ಕೆ ನಿರಚನಗೊಳ್ಳುವ, ಬದುಕಿನ ಕ್ಷಣಭಂಗುರತೆಯನ್ನು ಅರಿಯುವ ದಾರಿಗಳನ್ನು ಅವರ ಕಥೆಗಳು ಸದ್ದಿಲ್ಲದೇ ನಿರ್ಮಿಸುತ್ತವೆ. ಸಿದ್ಧಾಂತಗಳಲ್ಲಿ ಜಡಗೊಂಡ ಮನಸ್ಥಿತಿಯನ್ನು ಕೊಡವಿನೋಡಿದರೆ ಮಾತ್ರ ಜಯಂತರ ಬರವಣಿಗೆಯಲ್ಲಿನ ದರ್ಶನವು ಗೋಚರಿಸುತ್ತದೆ. ಡಾ. ಗೀತಾ ವಸಂತ, ಕವಿ, ಕಥೆಗಾರರು

ಜಯಂತರ ಗದ್ಯ ಇಬ್ಬರು ಸಂವೇದನಾಶೀಲ ಗೆಳೆಯರ ನಡುವಿನ ದಿನನಿತ್ಯದ ಮಾತುಕತೆಯಂತೆ ನೇರ, ಸರಳ ಹಾಗೂ ಭಾವಪೂರ್ಣ. ಈ ಬರಹಗಳು ನಾವು ಸಾಮಾನ್ಯವೆಂದು ಭಾವಿಸುವ ಘಟನೆ-ವಿಚಾರಗಳ ಅಸಾಮಾನ್ಯತೆಯನ್ನೂ ಮತ್ತು ನಾವು ಕ್ಲಿಷ್ಟ ಹಾಗೂ ಅಸಾಮಾನ್ಯ ಎಂದು ಭಾವಿಸುವ ಸಂಗತಿಗಳ ಆಳದಲ್ಲಿರುವ ಸಾಮಾನ್ಯ ಅಂಶಗಳನ್ನೂ ಗುರುತಿಸಿ, ನಾವೂ ಅವುಗಳನ್ನು ಗುರುತಿಸುವಂತೆ ಪ್ರಚೋದಿಸುತ್ತವೆ. ಡಾ. ಸಿ.ಎನ್​. ರಾಮಚಂದ್ರನ್, ವಿಮರ್ಶಕರು 

achchigoo modhalu

ಕಲೆ : ಎಸ್. ವಿಷ್ಣುಕುಮಾರ್

‘ಎವರ್​ಗ್ರೀನ್’​ನ ಆಯ್ದ ಭಾಗ…

ಕಾಗದದ ಮೇಲೆ ಒಂಟಿಕಾಲಲ್ಲಿ ಚಲಿಸುತ್ತಿದ್ದ ವಾಕ್ಯವೊಂದು ಹಠಾತ್ತನೆ ನಿಂತಂತೆ, ವಿಲೋಮ, ಕಂಠೀರವ ಸ್ಟುಡಿಯೋದ ಗೇಟಿನ ಸೆಕ್ಯುರಿಟಿಯವನ ಇಶಾರೆ ನೋಡಿ ನಿಂತ. ‘ಎವರ್​ಗ್ರೀನ್​ ಹೀರೋ ಶರತ್ಚಂದ್ರ ಅವರ ಶೂಟಿಂಗ್ ಯಾವ ಫ್ಲೋರ್?’ ಎಂದು ಕೇಳಿದ. ಸೆಕ್ಯುರಿಟಿಯವ ‘ನೀವ್ಯಾರು?’ ಎಂದಿದ್ದಕ್ಕೆ ‘ಅವರ ಸಂಬಂಧಿ, ಅವರೇ ಕರೆದಿದ್ದಾರೆ, ಅವರಿಗೇ ಅರ್ಜಂಟ್ ಕೆಲಸ ಇದೆ’ ಎಂದು ಅವಸರದಲ್ಲಿ ನುಡಿದು ಹೆಲ್ಮೆಟ್ ಎಡಗೈಗೆ ವರ್ಗಾಯಿಸಿ, ಬಲಗೈಯಿಂದ ಸಹಿ ಮಾಡಿದ. ಗಾರ್ಡ್ ನಿರುಕಿಸಿ ನೋಡುತ್ತ ಒಳಗೆ ಬಿಟ್ಟ. ಸಾಲಾಗಿ ಅಲ್ಲಲ್ಲಿ ನಿಂತ ಜನರೇಟರ್ ಲಾರಿಗಳು, ನೀರಿನ ಟ್ಯಾಂಕರುಗಳು, ನಟ ನಟಿಯರ ವಿಶ್ರಾಂತಿಗೆಂದು ನಿಲ್ಲಿಸಿರುವ ಮೂರ್ಖದರ್ಪದ ‘ಕಾರವಾನ್’ಗಳು ಮತ್ತು ಗುಂಪು ಗುಂಪಾಗಿ ಒಟ್ಟಿಗಿದ್ದೂ ಒಟ್ಟಿಗಿಲ್ಲದವರಂತೆ ಕಾಣುವ ಜನಗಳು… ಬಿ ಫ್ಲೋರಿನ ಎದುರಿನ ಚಟುವಟಿಕೆ ನೋಡಿದರೆ ಅಲ್ಲಿಯೇ ಶೂಟಿಂಗ್ ಇದ್ದಂತಿತ್ತು. ನೀಳ ನಿಲುವಿನ ಖಚಿತ ನಡಿಗೆಯ ಚಿಗುರು ಗಡ್ಡದ ವಿಲೋಮನನ್ನು ಯಾರೂ ತಡೆಯಲಿಲ್ಲ. ಸೆರೆಮನೆಯಂಥ ದೊಡ್ಡ ದಿಡ್ಡಿ ಬಾಗಿಲಿನ ಇನ್ನೊಂದು ಪುಟ್ಟ ಬಾಗಿಲಲ್ಲಿ ತಲೆ ತಗ್ಗಿಸಿ ಹೊಕ್ಕು ವಾಯರುಗಳ ನಡುವೆ ಕಾಲಿಡುತ್ತಿರುವಾಗಲೇ ‘ಲೈಟ್ಸ್ ಆಫ್’ ಎಂಬ ಘೋಷಣೆಯಾಗಿ ಎಲ್ಲ ಪ್ರಖರ ದೀಪಗಳೂ ಆರಿ ಕತ್ತಲಾವರಿಸಿತು. ಒಂದೆರಡು ಮಂಕು ದೀಪಗಳಿಗೆ ಕಣ್ಣು ಹೊಂದಿಕೊಳ್ಳುತ್ತಿರುವಾಗ ಶಾಟ್ ಮುಗಿಸಿದ ಶರತ್ಚಂದ್ರ ಬೆವರುತ್ತ ಏದುಸಿರುಬಿಡುತ್ತ ಪಕ್ಕದಲ್ಲಿದ್ದ ಕಬ್ಬಿಣದ ಕುರ್ಚಿಗೆ ಬಂದು ಕೂರುತ್ತಿದ್ದರು. ‘ಕಾರವಾನ್​ಗೆ ಹೋಗಿ ಸಾರ್’ ಎಂದು ಅಸಿಸ್ಟೆಂಟ್ ಡೈರೆಕ್ಟರ್ ಹೇಳುವಾಗ, ‘ಇರು ಒಂದಿಷ್ಟು ಇಲ್ಲೇ ಸುಧಾರಿಸಿಕೊಂಡು ಹೋಗುತ್ತೇನೆ’ ಎನ್ನುವಂತೆ ಸನ್ನೆ ಮಾಡಿದರು. ಹೀರೋಯಿನ್​ಗಳಂತೆ ಕಾಣುವ ಒಂದಿಬ್ಬರು ತಂತಮ್ಮ ಸ್ಮಾರ್ಟ್ ಫೋನನ್ನು ಸ್ವಿಚ್ ಆನ್ ಮಾಡುತ್ತ ತಮ್ಮ ಕಾರವಾನ್ ಕಡೆಗೆ ಮಿನುಗು ಉಡುಪಿನಲ್ಲಿ ಮಿಂಚುತ್ತ ಓಡಿದರು. ಸಾಮಾನ್ಯವಾಗಿ ‘ಬ್ರೇಕ್’ ಆದಾಗ ಚಲನವಲನ ಮಾತುಕತೆ ಗೌಜು ಇರುತ್ತದೆ. ಆದರೆ ಇಲ್ಲೊಂದು ಅಸಹಜವಾದ ನಿಶ್ಶಬ್ದವಿತ್ತು. ಏಕೆಂದರೆ ಎಲ್ಲರೂ ತಂತಮ್ಮ ಮೊಬೈಲ್​ಗಳೆಂಬ ಹಾಲಿನ ಬಾಟಲಿಗೆ ಅಂಟಿಕೊಂಡ ಶಿಶುವಾಗಿದ್ದರು. ಡಿಜಿಟಲ್ ಕೊಳಗಳಲ್ಲಿ ಗಾಳ ಹಾಕಿ ಕೂತಿದ್ದರು. ನಿಂತಲ್ಲಿ ಕುಂತಲ್ಲಿ ತಾವಿದ್ದ ಭಂಗಿಗಳಲ್ಲೇ ವಿಗ್ರಹಗಳಾಗಿ ಹೋದಂತೆ ಮೊಬೈಲ್ ವಶರಾಗಿದ್ದರು. ಮೊಬೈಲಿನ ಬೆಳಕಲ್ಲಿ ಪ್ರತಿ ಮೊಗವೂ ಕ್ಷೀಣವಾಗಿ ಬಿಳಿಚಿಕೊಂಡಿತ್ತು.

ಹಿರಿಯ ನಾಯಕನಟ ಶರತ್ಚಂದ್ರ ಮಾತ್ರ ಕೈಗನ್ನಡಿ ಹಿಡಿದುಕೊಂಡು ಇನ್ನೆಲ್ಲೋ ಶೂನ್ಯದಲ್ಲಿ ನೋಟವಿಟ್ಟು ಕೂತಿದ್ದರು. ಆ ಪರಿಸರದ ಜೊತೆಗಿನ ಕಾರ್ಯ ಕಾರಣದ ನಂಟೂ ಹುಸಿದು ಹೋದಂಥ ಒಂದು ಅಪ್ರತಿಭ ವಲಯದಲ್ಲಿದ್ದರು. ತಾರುಣ್ಯವನ್ನು ಕಾಯ್ದುಕೊಳ್ಳುವಲ್ಲೇ, ಇನ್ನೂ ತರುಣರಾಗಿ ತೋರುವುದರಲ್ಲೇ, ಅವರ ಚೈತನ್ಯವೆಲ್ಲ ಬಸಿದು ಹೋದಂತಿತ್ತು. ಲೈಟ್ ಬಾಯ್ಸ್, ಉಪ ನಿರ್ದೇಶಕರು, ನೃತ್ಯ ತಂಡದವರು, ತಾಂತ್ರಿಕ ವರ್ಗದವರು, ಟೀ ಹುಡುಗರು, ಟಚ್ಅಪ್ ಹುಡುಗರು ಎಲ್ಲರೂ ಸಹಜವಾದ ತಾರುಣ್ಯದಲ್ಲಿದ್ದರೆ, ಶರತ್ಚಂದ್ರ ಮಾತ್ರ ಒಂದು ಆರೋಪಿತ ತಾರುಣ್ಯದ ಭಾರದಲ್ಲಿ ಬಸವಳಿದಿದ್ದರು. ಕೈಗನ್ನಡಿಯಲ್ಲಿ, ಎಷ್ಟು ನಕ್ಕರೆ ನಿರಿಗೆ ಬೀಳುತ್ತದೆ, ಎಷ್ಟು ನಕ್ಕರೆ ಬೀಳುವುದಿಲ್ಲ, ಯಾವ ಕಾಲರ್ ಸ್ಟೈಲಿನಲ್ಲಿ ಕೊರಳಿನ ಮುಪ್ಪು ತೋರುವುದಿಲ್ಲ ಎಂಬುದನ್ನು ತಾಲೀಮು ಮಾಡಿ ನೋಡುತ್ತಿದ್ದರು. ನಿರ್ಜೀವ ಕ್ಯಾಮರಾದೆಡೆಗೆ ಬೀರುವಂಥ ಶುಷ್ಕನಗುವನ್ನು ತಮ್ಮೆಡೆಗೇ ಬೀರಿ ಬೀರಿ ನೋಡುತ್ತಿದ್ದರು. ವಿಲೋಮ ನಿಂತಲ್ಲೇ ಇನ್ನೂ ಸ್ತಬ್ಧನಾಗಿಬಿಟ್ಟ. ತನ್ನ ದುಪ್ಪಟ್ಟು ವಯಸ್ಸಿನ ಈ ಪ್ರಿಯ ಪಪ್ಪ ಕ್ಯಾಮರಾದೆದುರು ತನ್ನ ವಯಸ್ಸಿನವನಾಗಿರಲು ನಡೆಸಿರುವ ಹೋರಾಟದ ಆಳದ ತಬ್ಬಲಿತನ ಒಮ್ಮೆಲೇ ವಿಲೋಮನ ಅನುಭವಕ್ಕೆ ಢಾಳಾಗಿ ಬಂದಂತಾಯ್ತು. ಮನೆಯಲ್ಲಿದ್ದರೂ ಕೃತಕ ತಲೆಗೂದಲಿನ ವಿಗ್ಗನ್ನು ತೆಗೆಯದ, ದಿನಾ ಎರಡು ಬಾರಿ ಶೇವ್ ಮಾಡಿಕೊಳ್ಳುವ, ವಿಲೋಮನಿಗಿಂತ ಟ್ರೆಂಡೀಯಾದ ಶೂ, ಪ್ಯಾಂಟು, ಟೀ ಶರ್ಟುಗಳನ್ನು ಬಿಗಿಯಾಗಿ ಸಾಕ್ಸಿನಂತೆ ತೊಟ್ಟುಕೊಳ್ಳುವ, ನರ್ಸರಿ ಕೆಜಿ ದಿನಗಳ ನಂತರ ವಿಲೋಮನನ್ನೂ, ಅವನ ತಂಗಿ ವಿಭಾಳನ್ನೂ, ಯಾವ ಸಾರ್ವಜನಿಕ ಸಮಾರಂಭಗಳಿಗೂ ಕರೆದೊಯ್ಯದ, ಪಿಯುಸಿ ದಾಟಿದ ಮೇಲಂತೂ ಯಾವ ಹಿಲ್ ಸ್ಟೇಶನ್ ಲೊಕೇಶನ್​ಗೂ ಕರದೊಯ್ಯದ ಈ ಅಪ್ಪನ ಹುಸಿ ತಾರುಣ್ಯದ ಈ ಪಾಡು ಅವನಿಗಂಟಿದ ಒಂದು ಶಾಪದಂತೆ ಭಾಸವಾಗತೊಡಗಿತು. ಮನೆಯಲ್ಲಿ ಮಕ್ಕಳ ಸಿ.ಇ.ಟಿ. ರ್ಯಾಂಕಿಂಗ್​ಗಾಗಿ ಪರಿತಪಿಸುವ ಅಪ್ಪ, ಸೆಟ್ಟಲ್ಲಿ ಹಾಡಿ ಮರ ಸುತ್ತಿ ಕೈಯಲ್ಲಿ ನವಿಲುಗರಿ ಹಿಡಿದು ನಾಯಕಿಯ ಗಲ್ಲ ನೇವರಿಸಿ ಪ್ರೇಮದಲ್ಲಿ ಬೀಳುವ ಯುವಕ. ಈ ಎರಡು ಲೋಕಗಳ ನಡುವಿನ ನಿತ್ಯ ಸಂಚಾರ ಎಷ್ಟು ದಣಿಸಿರಬಹುದು ಅವನನ್ನು. ಇದರಲ್ಲಿ ಯಾವ ಪಾತ್ರ ಅವನ ಆತ್ಮಕ್ಕೆ ಅಂಟಿರಬಹುದು. ಅಥವಾ ಎರಡರಿಂದಲೂ ತಪ್ಪಿಸಿಕೊಂಡು ಓಡುತ್ತಿರುತ್ತಾನೋ. ಮತ್ತೆ ಮತ್ತೆ ಮನೆಯಲ್ಲಿ ಹಠಾತ್ತನೆ ಅವನು ‘ಛೆ’ ಎಂದು ಉದ್ಗರಿಸಿ ತಲೆ ಕೊಡವುತ್ತಾನೆ ಏಕೆ. ಅಥವಾ ತಕ್ಷಣ ಅರೆನಿದ್ದೆಯಲ್ಲಿ ಎದ್ದವನಂತೆ ಡೈನಿಂಗ್ ಟೇಬಲ್ ಮೇಲೆ ಅಪರಿಚಿತರಿಗೆ ಕೊಡುವಂಥ ಸದ್ದಿಲ್ಲದ ವಿಚಿತ್ರ ಮಳ್ಳು ಮುಗುಳುನಗೆ ಯಾಕೆ ಕೊಡುತ್ತಾನೆ. ಅವನೊಮ್ಮೆ ಜೋರಾಗಿ ಮೈಮರೆತು ರೇಗಾಡುವಾಗ ಅಮ್ಮ ‘ಮೆಲ್ಲ… ಮೆಲ್ಲ… ಗ್ಲಾಮರ್ ಹೋದೀತು… ಗ್ಲಾಮರ್ ಹೋದೀತು… ನಾಳೆ ಪ್ರೆಸ್ ಮೀಟ್ ಇದೆ ಅಂತೀರಿ’ ಎಂದು ಎಚ್ಚರಿಸಿದ್ದು ವ್ಯಂಗ್ಯವೋ ಅಥವಾ ಸಂಸಾರದ ಅಸ್ಪಷ್ಟ ಅಭದ್ರತೆಯ ಆತಂಕವೋ.

***

ಪೂರ್ಣ ಓದಿಗೆ ಮತ್ತು ಬಿಡುಗಡೆಯ ನಂತರ ಈ ಕಥಾ ಸಂಕಲನ ಖರೀದಿಸಲು : ankitapustaka.com ಫೋನ್ : 080-26617100/26617755

ಇದನ್ನೂ ಓದಿ : New Book; ಅಚ್ಚಿಗೂ ಮೊದಲು: 3019 AD- ಗತಕಾಲವು ಸದಾ ನಮ್ಮೊಂದಿಗೇ ಇರುತ್ತದೆ 

Published On - 1:13 pm, Fri, 26 March 21

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ