AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Theatre Day ; ಮತ್ತೊಂದ್ ನಾಟಕ ಬಂತ್ರಪೋ : ‘ಮರೋನಾ ವೈರಸ್‘

‘ಯಾರರೀ ಹೇಳಿದ್ದು ನಿಮಗೆ? ಗಾಂಧಾರಿ ಗಂಡನ ಪ್ರೀತಿಗೋಸ್ಕರ ಬಟ್ಟೆ ಕಟ್ಕೊಂಡ್ಳು ಕಣ್ಣಿಗೆ ಅಂತ. ತನ್ನ ತಂದೆ, ಹಣ-ರಾಜ್ಯದ ಆಸೆಗೋಸ್ಕರ ಒಬ್ಬ ಕುರುಡನಿಗೆ ಕೊಟ್ಟು ಮದುವೆ ಮಾಡುತ್ತಿದ್ದಾನೆ ಅಂತ ಕೋಪ ಹತಾಶೆ ದುಃಖದಿಂದ ಆಕೆ ಬಟ್ಟೆ ಕಟ್ಕೊಂಡಿದ್ದು. ಮುಂದೆ ಜನ ಎಲ್ಲಾ ಪತಿವ್ರತೆ ಅಂತ ಹೊಗಳಿದ್ರು ಅಂತ ಆಸೆಪಟ್ಟು ಅದನ್ನೇ ಮುಂದುವರೆಸಿದಳು.‘ ಸ್ನೇಹಾ ರಮಾಕಾಂತ

World Theatre Day ; ಮತ್ತೊಂದ್ ನಾಟಕ ಬಂತ್ರಪೋ : 'ಮರೋನಾ ವೈರಸ್‘
ಸೌಜನ್ಯ : ಅಂತರ್ಜಾಲ
ಶ್ರೀದೇವಿ ಕಳಸದ
|

Updated on:Mar 27, 2021 | 12:26 PM

Share

ಕೊರೊನಾದಿಂದ ಈವತ್ತು ಮೂಗು ಬಾಯಿ ಮುಚ್ಚಿಕೊಂಡೇ ಜೀವನ ಸಾಗಿಸುತ್ತಿದ್ದೇವೆ. ರೂಪಾಂತರಗೊಂಡ ವೈರಸ್​ನಿಂದಾಗಿ ಮುಂದೊಂದು ದಿನ ಕಣ್ಣು, ಕಿವಿಯನ್ನೂ ಮುಚ್ಚಿಕೊಂಡು ಓಡಾಡಬೇಕು ಎಂದು ಫರಮಾನು ಹೊರಡಿಸುವಂತಾದರೆ? ಹೀಗೊಂದು ಎಳೆಯನ್ನು ನಮ್ಮ ಬರಹಗಾರರಿಗೆ ತಲುಪಿಸಿ, ನಿಮ್ಮಲ್ಲಿ ಮೊಳೆತ ಆಲೋಚನೆಗಳಿಗೆ ಸಂಭಾಷಣೆಯ ರೂಪು ಕೊಡಿ ಎಂದು ಕೇಳಿಕೊಳ್ಳಲಾಯಿತು. ಇನ್ನು ನೀವುಂಟು ಅವರು ಸೃಷ್ಟಿಸಿದ ಪಾತ್ರಗಳುಂಟು ಮತ್ತು ‘ವಿಶ್ವ ರಂಗಭೂಮಿ ದಿನ’ವೂ ಉಂಟು.

ಪರಿಕಲ್ಪನೆ : ಶ್ರೀದೇವಿ ಕಳಸದ

ನಾಟಕ : ಮರೋನಾ ವೈರಸ್

ರಚನೆ : ಸ್ನೇಹಾ ರಮಾಕಾಂತ, ಬೆಂಗಳೂರು

ಕೇಶವ್ : (ಲಿವಿಂಗ್ ರೂಮಿನಲ್ಲಿ ಕೂತು ಚ್ಯಾನಲ್ ಬದಲಾಯಿಸುತ್ತಾ) ಕೇಳಿದ್ಯೇನೇ ಕರೋನಾ ಅಲೆ ಮತ್ತೆ ಬಂತಂತೆ, ಎಲ್ಲಾ ಕಡೆ ಅದೇ ಸುದ್ದಿ.

ಸರಸು: (ಅಡುಗೆ ಮನೆಯಿಂದ) ಅಯ್ಯೋ ಯಾಕ್ ಬಂತಂತೆ. ಹೋದ ವರ್ಷದ ತರಹ ಈ ವರ್ಷಾನೂ ಎಲ್ಲಾ ಹಬ್ಬಗಳನ್ನಾ ಆಚರಿಸಿಕೊಂಡು ಹೋಗ್ತೀನಿ ಅಂತ ಇಲ್ಲೇ ಆ ಕರೋನಾ ಕೂತ್ಕೊಂಬಿಟ್ರೆ ಕಷ್ಟ!

ಕೇಶವ್: ನಿನಗಿದು ಜೋಕಾ? ಇದು ಸೀರಿಯಸ್ ವಿಷ್ಯ, ಭಯ ಪಡೋ ವಿಷ್ಯಾ! ಛೆ, ಏನ್​ ಜನಾನೋ ನಮ್ಮ ಜನಾ ಎಲ್ಲದರಲ್ಲೂ ಮನೋರಂಜನೇನೇ ಬಯಸ್ತಾರೆ.

ಸರಸು: ಅಯ್ಯೋ ನೀವ್ಬಿಡಿ ಯಾವಾಗ್ಲೂ ಹರಳೆಣ್ಣೆ ಕುಡಿದವರ ತರಹ ಮುಖ ಮಾಡ್ಕೊಂಡ್ ಇರ್ತೀರಾ. ಏನ್ ಗೊತ್ತಾ? ನಗನಗತಾ ಇದ್ರೆ ಕರೋನಾ ಹತ್ರಕ್ಕೇ ಬರೋಲ್ವಂತೆ.

(ಕೇಶವ್ ಹಣೆ ಚಚ್ಚಿಕೊಳ್ಳುತ್ತಾ ಮತ್ತೆ ಚ್ಯಾನಲ್ ಬದಲಾಯಿಸುತ್ತಾನೆ. ಇದಕ್ಕಿದ್ದ ಹಾಗೆ ಅಡುಗೆ ಮನೆಯಿಂದ ಏನೋ ಜೋರಾಗಿ ಬಿದ್ದ ಸದ್ದು)

ಕೇಶವ್: ಏನಾಯ್ತೇ ಏನ್ ಸದ್ದು ಅದು?

ಸರಸು: ಅಯ್ಯೋ ಬೇಗ ಬನ್ನಿ ಹಾಲಿನ ಪಾತ್ರೆ ಜೊತೆ ನಾನು ಕೆಳಗೆ ಬಿದ್ದಿದ್ದೀನಿ.

(ಒಳಗಡೆ ಬಂದ ಕೇಶವನಿಗೆ ಕಂಡಿದ್ದು ಚೆಲ್ಲಿದ್ದ ಹಾಲು. ಪಕ್ಕದಲ್ಲೇ ಮೊಗಚಿದ ಹಾಲಿನ ಪಾತ್ರೆ ಮತ್ತು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದ ಸರಸು)

ಕೇಶವ್: ಏನಾಯ್ತೆ, ಹೇಗ್ ಬಿತ್ತು ಇದೇನಿದು ಕಣ್ಣಿಗೆ ಯಾಕೆ ಬಟ್ಟೆ ಕಟ್ಕೊಂಡಿದ್ಯಾ ಎದ್ದೇಳು.

(ಮೆಲ್ಲಗೆ ಕೈಕೊಟ್ಟು ಅವಳನ್ನ ಎಬ್ಬಿಸುತ್ತಾ)

ಸರಸು : ಅಯ್ಯೋ ಕಾಲು ಉಳುಕ್ತೋ ಏನೋ ತುಂಬಾ ನೋವು (ಕುಂಟುತ್ತಾ ಕೇಶವ್ ಕೈ ಹಿಡಿದು ಲಿವಿಂಗ್ ರೂಮ್ನ ಸೋಫಾ ಮೇಲೆ ಬಂದು ಕೂತಳು ಕಣ್ಣಿಗೆ ಕಟ್ಟಿದ್ದ ಬಟ್ಟೆ ತೆಗೆಯುತ್ತಾ)

ಕೇಶವ್ : ( ಸರಸು ಕಾಲನ್ನು ಪರೀಕ್ಷಿಸುತ್ತಾ) ಅದ್ ಸರಿ ಮಿಲ್ಕ್ ಶೇಕ್ ಮಾಡ್ತೀನಿ ಅಂತ ಒಳಗೆ ಹೋದವಳು ಕಣ್ಣಿಗೆ ಯಾಕೆ ಗಾಂಧಾರಿ ತರಹ ಬಟ್ಟೆ ಕಟ್ಕೊಂಡಿದೀಯಾ? ತನ್ನ ಕುರುಡು ಗಂಡನ ಮೇಲಿನ ಪ್ರೀತಿಗೆ, ತಾನೂ ಬಟ್ಟೆ ಕಟ್ಕೊಂಡಿದ್ಲು. ನೀನ್ಯಾಕೆ ಕಟ್ಕೊಂಡಿದೀಯಾ? ನನಗೆ ಕಣ್ಣು ಕಾಣಿಸತ್ತಲ್ಲ.

ಸರಸು : (ಕೋಪಗೊಂಡಂತೆ ನಟಿಸಿದ್ದು) ಯಾರ್ರೀ ಹೇಳಿದ್ದು ನಿಮಗೆ ಗಾಂಧಾರಿ ಪ್ರೀತಿಗೋಸ್ಕರ ಬಟ್ಟೆ ಕಟ್ಕೊಂಡ್ಳು ಕಣ್ಣಿಗೆ ಅಂತ. ತನ್ನ ತಂದೆ, ಹಣ-ರಾಜ್ಯದ ಆಸೆಗೋಸ್ಕರ ಒಬ್ಬ ಕುರುಡನಿಗೆ ಕೊಟ್ಟು ಮದುವೆ ಮಾಡುತ್ತಿದ್ದಾನೆ ಅಂತ ಕೋಪ ಹತಾಶೆ ದುಃಖದಿಂದ ಆಕೆ ಬಟ್ಟೆ ಕಟ್ಕೊಂಡಿದ್ದು. ಮುಂದೆ ಜನ ಎಲ್ಲಾ ಪತಿವ್ರತೆ ಅಂತ ಹೊಗಳಿದ್ರು ಅಂತ  ಆಸೆಪಟ್ಟು ಅದನ್ನೇ ಮುಂದುವರೆಸಿದಳು.

ಕೇಶವ್: (ಹಣೆ ಚಚ್ಚಿಕೊಳ್ಳುತ್ತಾ) ಅಯ್ಯೋ ಅಯ್ಯೋ ನಿನ್ನ ಹತ್ರ ವಾದ ಮಾಡೋಕ್ ಆಗುತ್ತೇ? ಗಾಂಧಾರಿ ವಿಷಯ ಹೇಗಾದ್ರೂ ಇರಲಿ ನೀ ಯಾಕೆ ಕಣ್ಣಿಗ್ ಬಟ್ಟೆ ಕಟ್ಕೊಂಡ್ ಕೆಲಸ ಮಾಡೋಕ್ ಹೋದೆ ಅಡುಗೆ ಮನೇಲಿ ಅದನ್ನ ಹೇಳು.

ಸರಸು: ಅಲ್ರೀ ಇವತ್ತೇನೋ ಅದೇನೋ ಕರೋನ ಬಂತು ಎಲ್ಲಾರು ಮೂಗಿಗೆ ಬಾಯಿ ಮುಚ್ಕೊಳಿ ಬಟ್ಟೆ ಸುತ್ಕೊಳಿ ಅಂತ ಸರಕಾರ ಅದೇಶ ಹೊರಡಸ್ತು. ನಾಳೆ ಇನ್ಯಾವುದೋ ವೈರಾಣು ಮರೋನಾ ಅಂತ ಬಂದು ಅದು ಸೀದಾ ಕಣ್ಣಿನ ಮೇಲೆ ದಾಳಿ ಮಾಡುತ್ತೆ. ಕಿವಿ ಮೂಲಕ ಒಳಗೆ ಹೋಗತ್ತೆ ಆದರಿಂದ ಎಲ್ಲಾರು ಕಣ್ಣು ಮುಚ್ಚಿಕೊಳ್ಳಬೇಕು, ಥೋ ಅಲ್ಲಾ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳಬೇಕು ಅಂತ ಸರಕಾರ ಆದೇಶ ಹೊರಡಿಸಿದ್ರೆ ಪ್ರಾಕ್ಟೀಸ್​ ಇಲ್ಲದೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓಡಾಡೋಕ್ಕೆ ಆಗುತ್ತಾ? ಅಂತ ಟ್ರಯಲ್ ನೋಡ್ತಿದೀನಿ.

ಕೇಶವ್: ಅಯ್ಯೋ ರಾಮ ನೀನೋ ನಿನ್ನ ಕಲ್ಪನೇನೋ. ಫೇಸ್ಬುಕ್ ಅಲ್ಲಿ ಸೈನ್ಸ್ ಫಿಕ್ಶನ್ ಬರೀ ನಾಲ್ಕು ಲೈಕ್ ಬರಬಹುದು. ಬೇಡದ್ದೆಲ್ಲ ಯೋಚನೆ ಮಾಡತಿರ್ತೀಯಾ. ನಿನಗೇ ಹೊಳಿಯತ್ತಲ್ಲ ಇಂಥಾ ಯೋಚನೆಗಳು. ನೋಡೀಗ ಮರೋನಾ ವೈರಾಣು ಅಂತಾ ಈಗ ಕಾಲಿಗೆ ಪೆಟ್ಟು ಮಾಡ್ಕೊಂಡ್ಯಲ್ಲಾ.

ಸರಸು: ನಿಮಗೆ ಒಂದು ಚೂರು ಅಲರ್ಟ್ನೆಸ್​ ಮತ್ತೆ ಪ್ರಿಪೇರ್ಡ್​ನೆಸ್ ಇಲ್ಲ. ಎಲ್ಲಾದಕ್ಕೂ ಪೂರ್ವಸಿದ್ಧತೆ ಇದ್ದಾಗಲೇ ಜೀವನ ಸುಖವಾಗಿರೋದು ತಿಳ್ಕೊಳಿ. ಆದ್ರೂ ರೀ ಕಣ್ಣಿಗೆ ಬಟ್ಟೆ ಕಟ್ಕೊಂಡಾಗ್ಲೇ ಗೊತ್ತಾಗಿದ್ದು ಬೆಳಕಿಲ್ಲದೇ ಇರದಿದ್ರೆ ಎಷ್ಟು ಕಷ್ಟ ಅಂತ.

ಕೇಶವ್: ಹೌದು ಬೇಬಿ, ಏನ್ ಇಲ್ಲದೇ ಇದ್ರೂ ಕಷ್ಟಾನೇ. ಬೆಳಕಿಲ್ಲದೆ ಇದ್ರೂ ಕಷ್ಟ ಕತ್ತಲೆ ಇಲ್ಲದಿದ್ರೂ ಕಷ್ಟ. ಸದ್ಯಕ್ಕೆ ಮನೇಲಿ ಹಾಲ್ ಇಲ್ವಲ್ಲ ಇರೋ ಹಾಲೆಲ್ಲ ಚೆಲ್ ಹೋಯ್ತಲ್ಲ ಅದೂ ಕಷ್ಟವೇ.

ಸರಸು: ಹೌದು ರೀ ಮಧ್ಯಾಹ್ನ ಕಾಫೀಗೂ ಹಾಲಿಲ್ಲ. ಮೊದಲು ಆ ಕೊನೆ ಅಂಗಡಿಯಿಂದ ಹಾಲು ತಂದ್ಬಿಡಿ ಅವನು ಹನ್ನೆರಡರ ಅಂಗಡಿ ತೆಗೆಯೋದಂತೆ. ಅವನದ್ದು  ಸ್ಲೋವ್ ಲಾಕ್ಡೌನ್. ಕರೋನ ಅವನ ಅಂಗಡಿಗೆ ಮಧ್ಯಾಹ್ನ ಹನ್ನೆರಡು ಗಂಟೆ ನಂತ್ರಾನೇ ವಿಸಿಟ್ ಮಾಡುತ್ತೆ ಅನ್ನೋ ಹಾಗೆ ಆಡ್ತಿದ್ದ ನಿನ್ನೆ. ಹಾಲು ತಂದು ಹಾಗೆ ಅಡುಗೆ ಮನೆ ಸ್ವಲ್ಪ್ ಕ್ಲೀನ್ ಮಾಡ್ಬಿಡಿ. ಯಾಕೋ ಕಾಲು ತುಂಬಾ ನೋಯ್ತಾ ಇದೆ. ಮನೇಲಿ ಅಯೊಡೆಕ್ಸ್ ಮುಗಿದೋಗಿದೆ ಹಾಲು ತರುತ್ತಾ ಮೆಡಿಕಲ್ ಸ್ಟೋರ್​ನಿಂದ ತಂದ್ಬಿಡಿ.

ಕೇಶವ್: ಏಯ್ ನಾ ಲಾಗಿನ್ ಆಗ್ಬೇಕು ಕಣೇ ಕೆಲಸ ತುಂಬಾ ಇದೆ. ಪ್ರಾಜೆಕ್ಟ್ ಡೆಡ್​ಲೈನ್​ ಮೀಟ್ ಆಗ್ಬೇಕು. ದಿನಾ ಏನಾದ್ರೊಂದು ಹೇಳ್ತಾನೆ ಇರುತ್ತೀಯಾ ಈ ವರ್ಕ್ ಫ್ರಂ ಹೋಮ್ ನಿಂತು ಆಫೀಸಿಗೆ ಬಾ ಅಂದ್ರೆ ಸಾಕಾಗಿದೆ ನನಗೆ.

ಸರಸು: (ಅಳುಮುಖ ಮಾಡಿಕೊಳ್ಳುತ್ತಾ) ಇಷ್ಟೇನಾ ನನ್ನ ಮೇಳೆ ಪ್ರೀತಿ. ನಾ ಬಿದ್ರೂ ನಿನಗೆ ಯೋಚನೆ. ನಾಳೆ ಆ ಕಣ್ಣಿಗೆ ಬಟ್ಟೆ ಕಟ್ಕೊಳೋವಂಥ ವೈರಸ್ ದಾಳಿ ಮಾಡಿದ್ರೆ ಅಂತ ಯೋಚಿಸೋದೂ ತಪ್ಪು ಅಂತೀಯಾ?

ಕೇಶವ್: ಆಯ್ತು ಮಾರಾಯ್ತಿ ನೀ ಹೇಳಿದಂಗೆ ಆಗಲಿ. ನಿನ್ನ ಹತ್ರ ವಾದ ಮಾಡ್ತಾ ನಿಂತರೆ ಇನ್ನೂ ಲೇಟ್ ಆಗುತ್ತೆ. ಮೊದಲು ಹಾಲು ತರ್ತೀನಿರು.

world theatre day

ಸೌಜನ್ಯ : ಅಂತರ್ಜಾಲ

ಸರಸು: ಹಾಗೇ ಅಯೋಡೆಕ್ಸ್ ಮರೀಬೇಡಿ. ಹಾ ಮಾಸ್ಕ್ ಹಾಕೊಂಡು ಮೊಬೈಲ್ ತಗೊಂಡ್ ಹೋಗಿ. ಅಲ್ಲಿ ಎರಡು ಹೊಸ ಮಾಸ್ಕ್ ಇಟ್ಟಿದ್ದೀನಿ. ಆಚೆ ಮನೆ ಗೀತಾ ಕೊಟ್ಟಳು ಅವಳ ತಂಗಿ ನಿಶ್ಚಿತಾರ್ಥ ಆಯ್ತಂತೆ. ನಮ್ಮ ಕಡೆಯವರಿಗೆಲ್ಲ ಎನ್ 95 ಮಾಸ್ಕ್ ಸ್ಯಾನಿಟೈಸರ್ ಬಾಟ್ಲು ಕೊಡಬೇಕು ಅಂತ ವರನ ತಂದೆ ತಾಯಿ ಡಿಮ್ಯಾಂಡ್ ಮಾಡಿದ್ರಂತೆ. ಇವರು ಒಳ್ಳೆ ಕಡೆ ಸಂಬಂಧ ಅಂತ ಎಲ್ಲಾ ಪೂರೈಸಿದರಂತೆ. ತುಂಬಾ ಮಾಸ್ಕ್ ಮಿಕ್ಕಿದೆ ನೀನೊಂದೆರಡು ಇಟ್ಕೋ ಅಂತ ನನಗೆ ಕೊಟ್ಟಳು ಅದನ್ನೇ ಹಾಕೊಂಡು ಹೋಗಿ.

ಕೇಶವ್: ಓಹ್ ಇದು ಬೇರೆ ಡಿಮ್ಯಾಂಡ್​ ಮಾಡ್ತಾರ ಹುಡುಗನ್ನ ಕಡೆಯವರು ಈಗ ಮದುವೇಲಿ? ನಮ್ಮವರಿಗೆಲ್ಲ ವ್ಯಾಕ್ಸಿನ್​ ಚುಚ್ಚಿಸಿ ಅಂತಾರೇನೋ ಇನ್ನು. ಇರಲಿ ನನಗೆ ಲೇಟ್ ಆಗ್ತಿದೆ. ಆಯ್ತು ಮರಾಯ್ತಿ ಮಾಸ್ಕ್ ಹಾಕೊಂಡು ಹೋಗ್ತೀನಿ. ಸದ್ಯ ಕಣ್ಣಿಗೆ ಬಟ್ಟೆ ಕಿವಿಗೆ ಹತ್ತಿ ಬೇಡವಲ್ಲ? ಮರೋನಾ ಬರಲ್ವಲ್ಲ?

ಸರಸು (ಹುಸಿಮುನಿಸು ತೋರಿಸುತ್ತಾ) : ನಿಮಗೆ ನನ್ನ ಛೇಡಿಸೋದು ಅಂದರೆ ಬಹಳ ಖುಷಿ. ಲೇಟಾಯ್ತು ಅಂದ್ರಲ್ಲ ಮೊದಲು ಹೋಗಿ. ಕಣ್ಣಿಗೆ ಸದ್ಯಕ್ಕೆ ಬಟ್ಟೆ ಏನ್ ಬೇಡ ಕೂಲಿಂಗ್ ಗ್ಲಾಸ್ ಹಾಕೊಂಡ್ ಹೋಗಿ ಬಿಸಿಲು ಜಾಸ್ತಿ ಇದೆ.

ಕೇಶವ್: ಎಸ್ ಬಾಸ್. ಆದರೂ ವರ್ಕ್ ಫ್ರಂ ಹೋಮ್ ಅಂದರೆ ಹೋಮ್ ವರ್ಕ್ ಆಗೋಗಿದೆ ನನಗೆ.

ಸರಸು: (ಜೋರಾಗಿ ನಗುತ್ತಾ) ಜೋ ಬೀಬಿ ಸೇ ಕರೆ ಪ್ಯಾರ್ ಓ ವರ್ಕ್ ಫ್ರಂ ಹೋಮ್ ಸೆ ಕೈಸೆ ಕರೇ ಇನ್ಕಾರ್

(ಕೇಶವ್ ಪೆಚ್ಚುಮೋರೆಯಿಂದ ಹೊರಹೋಗುತ್ತಾನೆ ಸರಸು ಪಕ್ಕದಲ್ಲಿದ್ದ ಕಣ್​ಬಟ್ಟೆಯನ್ನು ಬಿಸಾಕಿ ಪ್ರಸನ್ನವದನಳಾಗಿ ಮೊಬೈಲ್ ಕೈಗೆ ಎತ್ತಿಕೊಳ್ಳುತ್ತಾಳೆ.)

ಇದನ್ನೂ ಓದಿ : World Theatre Day ; ಕೇಳ್ರಪ್ಪೋ ಕೇಳ್ರಿ ಹೊಸಾ ನಾಟಕ ಬಂದೇತಿ : ‘ಬಲ‘ವಂತದ ಆತ್ಮಭರ್ಜರಿ 

Published On - 12:04 pm, Sat, 27 March 21