ಅಚ್ಚಿಗೂ ಮೊದಲು ; ಒರೆಗಲ್ಲಿಗೆ ತಿಕ್ಕಿ ಚೊಕ್ಕವಾದರೆ ಚೊಕ್ಕಾಡಿ : ಸುಬ್ರಾಯರ ಅನುಭವಕಥನ ಬಿಡುಗಡೆ

‘ಗ್ರಾಮಾಂತರದಲ್ಲಿದ್ದೂ ಲೋಕಾಂತರವನ್ನು ಒಳಗೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟವರು ಈ ಕವಿ. ಸಾರ್ತ್ರ, ಕಮೂ ಮುಂತಾದವರು ನಮಗೆ ಗೊತ್ತಾಗುವ ಮೊದಲೇ ಅವರಿಗೆ ಗೊತ್ತಾಗುತ್ತಿದ್ದರು. ಅಡಿಗ, ಅನಂತಮೂರ್ತಿ, ಲಂಕೇಶರ ಸಂಪರ್ಕ ಅವರಿಗಿತ್ತು. ಲಂಕೇಶರ ಮೊದಲ ನಾಟಕವನ್ನು ಪ್ರಕಟಿಸಿದ್ದು ಚೊಕ್ಕಾಡಿಯವರೇ. ಸಾಹಿತ್ಯದ ಹೊಸ ವಿಚಾರಗಳನ್ನು ಚರ್ಚಿಸುವುದಕ್ಕೆ ಹಳ್ಳಿಯಲ್ಲಿ ಒಂದು ವಿಚಾರ ವೇದಿಕೆಯನ್ನೂ ಕಟ್ಟಿಕೊಂಡಿದ್ದರು. ಆದರೂ ಅವರೊಂದು ಶಕ್ತಿಕೇಂದ್ರವಾಗಿಯೋ, ಗಾಡ್‍ಫಾದರ್ ಆಗಿಯೋ ಅವರು ಬೆಳೆಯಲಿಲ್ಲ, ಅದು ಅವರಿಗೆ ಬೇಕಾಗಿಯೂ ಇರಲಿಲ್ಲ. ಇದೆಲ್ಲವನ್ನೂ ಅವರು ಊರವರನ್ನು ಎದುರು ಹಾಕಿಕೊಳ್ಳದೆ ಅವರನ್ನು ಜೊತೆಯಾಗಿಸಿಕೊಂಡೇ ಮಾಡಿದರು ಎನ್ನುವುದು ಮುಖ್ಯ.’ ಕೆ. ವಿ. ತಿರುಮಲೇಶ್

ಅಚ್ಚಿಗೂ ಮೊದಲು ; ಒರೆಗಲ್ಲಿಗೆ ತಿಕ್ಕಿ ಚೊಕ್ಕವಾದರೆ ಚೊಕ್ಕಾಡಿ : ಸುಬ್ರಾಯರ ಅನುಭವಕಥನ ಬಿಡುಗಡೆ
ಹಿರಿಯ ಕವಿ, ಸಾಹಿತಿಗಳಾದ ಸುಬ್ರಾಯ ಚೊಕ್ಕಾಡಿ ಮತ್ತು ಕೆ.ವಿ. ತಿರುಮಲೇಶ್
Follow us
ಶ್ರೀದೇವಿ ಕಳಸದ
|

Updated on:Mar 28, 2021 | 11:16 AM

ಈಗೀಗ ಓದುವವರು ಕಡಿಮೆ, ಬರೆಯುವವರೇ ಹೆಚ್ಚು; ದಶಕಗಳಿಂದ ಸಾಹಿತ್ಯ ವಲಯದಿಂದ ಕೇಳಿಬರುತ್ತಿರುವ ಪುನರಾವರ್ತಿತ ಸಾಲು ಇದು. ಹಾಗಿದ್ದರೆ ನಾವೇಕೆ ಓದುತ್ತೇವೆ, ನಾವೇಕೆ ಬರೆಯುತ್ತೇವೆ? ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com ಪರಿಕಲ್ಪನೆ : ಶ್ರೀದೇವಿ ಕಳಸದ

ಬೆಂಗಳೂರಿನ ವಿಕಾಸ ಪ್ರಕಾಶನದಿಂದ ಪ್ರಕಟವಾದ ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ಅನುಭವ ಕಥನ ‘ಕಾಲದೊಂದೊಂದೇ ಹನಿ’ ನಾಳೆ ಬೆಳಗ್ಗೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 10.30ಕ್ಕೆ ಬಿಡುಗಡೆಯಾಗಲಿದೆ. ಈ ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ.

ಅಂತೂ ಸುಬ್ರಾಯ ಚೊಕ್ಕಾಡಿಯವರ ಬಹು ನಿರೀಕ್ಷಿತ ಆತ್ಮಕಥೆ ಬರುತ್ತಾ ಇದೆ, ಬಂತು! ಇದನ್ನು ಬರೆಯಲು ಅವರನ್ನು ಪ್ರೇರೇಪಿಸಿದವರಲ್ಲಿ ನಾನೂ ಒಬ್ಬ; ಕ್ರೆಡಿಟ್‍ನಲ್ಲಿ ಒಂದು ರವಷ್ಟು ನನಗೂ ಇರಲಿ ಎನ್ನುವುದಕ್ಕೆ ಈ ಆತ್ಮಪ್ರತ್ಯಯದ ಮಾತು! ಸಾಹಿತಿ, ಅಧ್ಯಾಪಕ, ಕೃಷಿಕ, ಗೃಹಸ್ಥ ಎಂಬೀ ಬಹುಮುಖಿ ವ್ಯಕ್ತಿ ನಮಗೆ ಸಾಹಿತಿಯೆಂದೇ ಪರಿಚಿತರು. ಕವಿತೆ, ನಾಟಕ, ಲೇಖನ ಪ್ರಕಾರಗಳಲ್ಲಿ ಸರಿಸಮಾನ ಸಾಧನೆಗಳನ್ನು ಅವರು ಮಾಡಿದ್ದರೂ, ಅವರ ಮುಖ್ಯ ಕೊಡುಗೆಯಿರುವುದು ಕವಿಯಾಗಿ. ಅರವತ್ತರ ದಶಕದಲ್ಲಿ ನವ್ಯ ಚಳುವಳಿಯ ಪ್ರಾದುರ್ಭಾವದ ಕಾಲದಲ್ಲಿ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ ಹಳ್ಳಿಗಾಡಿನ ಕವಿ ಚೊಕ್ಕಾಡಿ. ನನ್ನಂಥವರು ಹಳ್ಳಿ ಬಿಟ್ಟು ಪಟ್ಟಣ ಸೇರಿದರೆ ಚೊಕ್ಕಾಡಿ ತನ್ನ ಹುಟ್ಟೂರನ್ನು ಬಿಡಲಿಲ್ಲ. ಆದರೆ ಕಾಸರಗೋಡಿನ (ಈಗಿಲ್ಲದ) ಎಂ. ವ್ಯಾಸ, (ಈಗಿಲ್ಲದ) ಎಂ. ಗಂಗಾಧರ ಭಟ್ಟ, ನಾನು ಹಾಗೂ ನೆರೆಯ ಸುಳ್ಯದ ಚೊಕ್ಕಾಡಿ ನಮ್ಮ ಕೋಶಾವಸ್ಥೆಯಲ್ಲಿ ಆಗಾಗ ಬೆರೆಯುವುದಿತ್ತು. ಆಗ ಬಹಳ ಮುಂಚೂಣಿಯಲ್ಲಿದ್ದವರು ಚೊಕ್ಕಾಡಿ. ‘ಗೋಕುಲ’ ಪತ್ರಿಕೆಯಲ್ಲಿ ಅವರ ಅಸಮ ಸಾಲುಗಳ ಉದ್ದುದ್ದ ಕವಿತೆಗಳು ಪ್ರಕಟವಾಗಿ ನಮ್ಮನ್ನು ಬೆರಗುಗೊಳಿಸುತ್ತಿದ್ದುವು. ‘ಎಲಾ!’ ಎಂದೆನಿಸುತ್ತಿತ್ತು. ಇವು ನಮಗೆ ಸಾಹಿತ್ಯದ ಸಾಧ್ಯತೆಗಳನ್ನು ತೋರಿಸಿ ಕೊಟ್ಟವು ಎನ್ನಬೇಕು. ಹೀಗೆ ದೂರದ ನವ್ಯವನ್ನು ನಮಗೆ ಹತ್ತಿರವಾಗಿ ಮಾಡಿದವರು ಈ ಚೊಕ್ಕಾಡಿ. ಹೀಗೆ ನಾವೆಲ್ಲರೂ ಎಲ್ಲೇ ಇದ್ದರೂ ಇರದಿದ್ದರೂ ನಮಗಿರುವುದು ಒಂದೇ ಪರ್ಗೆಟೋರಿಯೋ, ಒಟ್ಟಿಗೇ ಬಿದ್ದಿರುತ್ತೇವೆ, ಸ್ವರ್ಗಕ್ಕೆ ಹೋಗುವುದಾದರೆ ಎಲ್ಲರೂ ಒಟ್ಟಿಗೇ ಹೋಗುತ್ತೇವೆ, ಇಲ್ಲದಿದ್ದರೆ ಇಲ್ಲ. ಕೆ.ವಿ. ತಿರುಮಲೇಶ್, ಹಿರಿಯ ಸಾಹಿತಿ

ಕೃತಿ : ‘ಕಾಲದೊಂದೊಂದೇ ಹನಿ’ ; ಸುಬ್ರಾಯ ಚೊಕ್ಕಾಡಿಯವರ ಅನುಭವಕಥನ.  ನಿರೂಪಣೆ : ಅಂಜನಾ ಹೆಗಡೆ ಮುಖಪುಟ ಫೋಟೋ : ಕೆ. ಶಿವಸುಬ್ರಹ್ಮಣ್ಯ ಮುಖಪುಟ ವಿನ್ಯಾಸ : ಜಿ. ಅರುಣ ಕುಮಾರ್ ಪ್ರಕಾಶನ : ವಿಕಾಸ ಪ್ರಕಾಶನ

ಹಲವು ವರ್ಷಗಳ ಕಾಲ ನಾನು ಓದುತ್ತಾ ಬಂದಿರುವ ಸುಬ್ರಾಯ ಚೊಕ್ಕಾಡಿಯವರ ಯಾವ ಪದ್ಯವೂ ನನಗೆ ಕಳಪೆ ಎನ್ನಿಸಿದ್ದಿಲ್ಲ. ಅವರಿಂದ ನಾನು ಹಿಗ್ಗುತ್ತಲೇ ಬೆಳೆದಿದ್ದೇನೆ. ಎಲ್ಲ ಪದ್ಯಗಳಲ್ಲೂ ಸ್ಪಷ್ಟತೆಗಾಗಿ ಕೆಲಸ ಮಾಡುವ ಕಸುಬುಗಾರಿಕೆ ಇರುತ್ತದೆ. ತಾನು ಹೇಳಿದ್ದು ಕೊನೆಯ ಪಕ್ಷ ತನಗಾದರೂ ಸ್ಪಷ್ಟವಾಗಿ ಇರಬೇಕೆಂದು ಬಯಸುವುದು ಶಿಷ್ಟಾಚಾರದ ಒಂದು ಅಗತ್ಯ ನಡೆವಳಿಕೆ ಎಂದು ನಾನು ತಿಳಿದಿದ್ದೇನೆ. ಚೊಕ್ಕಾಡಿ ಈ ಶಿಷ್ಟಾಚಾರವನ್ನು ಎಲ್ಲಿಯೂ ಬಿಡುವುದಿಲ್ಲ. ಇದಕ್ಕೆ ಕಾರಣ ಅವರಲ್ಲಿ ನಾವು ಕಾಣುವ ಎರಡು ದೊಡ್ಡ ಗುಣಗಳು: ಅವು ವಿನಯ ಮತ್ತು ಪ್ರಾಮಾಣಿಕತೆ. ಆ ಎರಡು ಗುಣಗಳು ಇವೆಯೆಂದು ಗ್ಯಾರಂಟಿ ಆದಮೇಲೆಯೇ ನಾವು ಕವಿಯನ್ನು ನಮ್ಮ ಒಳಗಿನಿಂದ ಆಲಿಸಲು ತಯಾರಾಗುತ್ತೇವೆ. ಹೀಗೆ ನಾವು ಆಲಿಸಬಹುದಾದ ನಮ್ಮ ನಡುವಿನ ಕವಿ ಚೊಕ್ಕಾಡಿಯವರು ಗೋಪಾಲಕೃಷ್ಣ ಅಡಿಗರ ನಂತರ ಬರೆಯುತ್ತಿರುವ ಮುಖ್ಯ ಕವಿಗಳಲ್ಲಿ ಒಬ್ಬರೆಂದು ಗುರುತಿಸಲು ನನಗೆ ಸಂತೋಷವಾಗುತ್ತದೆ. ಡಾ. ಯು. ಆರ್. ಅನಂತಮೂರ್ತಿ, ಹಿರಿಯ ಸಾಹಿತಿ

achchigoo modhalu

ಡಾ. ಯು. ಆರ್. ಅನಂತಮೂರ್ತಿ ಮತ್ತು ಚೊಕ್ಕಾಡಿ

ನನ್ನ ಕಾವ್ಯಯಾತ್ರೆಯ ಇನ್ನೊಂದು ಕವಲೆಂದರೆ ಭಾವಗೀತೆಗಳ ರಚನೆ ಮತ್ತು ಗಾಯನ. ಈ ಭಾವಗೀತೆಗಳ ಯಾತ್ರೆ ನನ್ನನ್ನು ಅಂತಿಮ ಹಂತಕ್ಕೆ ತಲುಪಿಸಿದ್ದು ಸುಗಮ ಸಂಗೀತದ ಬೃಹತ್ ಕ್ಷೇತ್ರಕ್ಕೆ. ಈ ಯಾತ್ರೆಯಲ್ಲಿ ನನ್ನನ್ನು ಕೈಹಿಡಿದು ಕರೆದುಕೊಂಡು ಹೋದವರಲ್ಲಿ ಮುಖ್ಯರಾದವರೆಂದರೆ ವಿದ್ಯಾಭೂಷಣರು, ಪುತ್ತೂರು ನರಸಿಂಹ ನಾಯಕ್, ಸಿ ಅಶ್ವತ್ಥ್ ಹಾಗೂ ಉಪಾಸನಾ ಮೋಹನ್ ಅವರು. ಇವರುಗಳ ಜೊತೆಗೆ ಆಕಾಶವಾಣಿ ನನಗೆ ನೀಡಿದ ಬೆಂಬಲವನ್ನೂ ನಾನು ಸ್ಮರಿಸಬೇಕು. ನಾನು ಆರಂಭದಲ್ಲಿ ಗೀತೆಗಳನ್ನು ಬರೆಯುತ್ತಲೇ ಇದ್ದೆ. ಯಾವುದೋ ನಾಟಕಕ್ಕೆ, ಇನ್ಯಾವುದೋ ಧಾಟಿಯಲ್ಲಿ ಹಾಡು ಬರೆಯುವುದು, ಮತ್ತೆ ಯಾವುದೋ ಕಾರ್ಯಕ್ರಮಗಳಿಗೆ ಬರೆದು ಕೊಡುವುದು ಈ ರೀತಿಯಾಗಿ ಬಾಲಿಶವೆನ್ನಿಸಬಹುದಾದ ಗೀತೆಗಳನ್ನು ಬರೆಯುತ್ತಿದ್ದೆ. ಅದರ ಬಗ್ಗೆ ಜಾಸ್ತಿ ತಿಳಿವಳಿಕೆಯಿಲ್ಲದೇ ಇದ್ದ ಕಾರಣ, ಮನೆಯಲ್ಲಿದ್ದ ಯಕ್ಷಗಾನದ ರಾಗ-ತಾಳಗಳ ಹಿನ್ನೆಲೆಯಲ್ಲಿ ಹಾಡುಗಳನ್ನು ಬರೆಯುತ್ತಿದ್ದೆ. ಆಗ ಬರೆಯುತ್ತಿದ್ದದ್ದು ಬಹುತೇಕ ಪರಿಸರ ಗೀತೆಗಳು. ಆದರೆ ನಾನು ನವ್ಯ ಚಳುವಳಿಯಲ್ಲಿ ಸೇರಿಕೊಂಡ ಮೇಲೆ ಹಾಗೂ ನವ್ಯದ ಪ್ರಭಾವಕ್ಕೆ ಒಳಗಾದ ಮೇಲೆ ಅಲ್ಲಿ ಹಾಡು ಬರೆಯುವುದು ಅಪರಾಧ ಎನ್ನುವ ಅಭಿಪ್ರಾಯವಿತ್ತು. ಹಾಡು ಬರೆಯುವವರನ್ನು ಕೆಸೆಟ್ ಕವಿಗಳು ಎಂದು ತಮಾಷೆ ಮಾಡುತ್ತಿದ್ದರು. ಹಾಗಾಗಿ ನಾನು ಹಾಡು ಬರೆಯುವುದನ್ನು ನಿಲ್ಲಿಸಿಬಿಟ್ಟೆ. ಆ ಸಂದರ್ಭದಲ್ಲಿ ನನಗೆ ಪರಿಚಯ ಆದವರು ವಿದ್ಯಾಭೂಷಣರು. ಆಗ ಅವರು ಸುಬ್ರಹ್ಮಣ್ಯ ಮಠದ ಮಠಾಧೀಶರಾಗಿದ್ದರು. ಸ್ವಾಮೀಜಿಯಾಗಿದ್ದರೂ ಕೂಡಾ ಅವರು ಸಾಹಿತ್ಯಾಸಕ್ತರು ಹಾಗೂ ಸಂಗೀತದ ವಿದ್ವಾಂಸರಾಗಿದ್ದರು. ಅವರು ಮಠದಲ್ಲಿ ಪ್ರತಿ ತಿಂಗಳೂ ಸಾಹಿತ್ಯದ ಗೋಷ್ಠಿಗಳನ್ನು ನಡೆಸುತ್ತಿದ್ದರು. ಲಕ್ಷ್ಮೀಶ ತೋಳ್ಪಾಡಿ, ನಾನು ಹೀಗೆ ಸ್ವಲ್ಪ ಜನ ಅದರಲ್ಲಿ ಯಾವಾಗಲೂ ಭಾಗವಹಿಸುತ್ತಿದ್ದೆವು. ವಿದ್ಯಾಭೂಷಣರು ಪಶ್ಚಿಮ ಘಟ್ಟದ ಚಳುವಳಿಯ ಕುರಿತಾಗಿ ಹಾಡುಗಳನ್ನು ಬರೆದು ಕೊಡಲು ಹೇಳಿದಾಗ ಅನೇಕ ವರ್ಷಗಳ ನಂತರ ನಾನು ಮತ್ತೆ ಹಾಡುಗಳನ್ನು ಬರೆಯಲು ಆರಂಭಿಸಿದೆ. ಅದಾದ ನಂತರ ಆಗಾಗ ಹಾಡುಗಳನ್ನು ಬರೆಯುತ್ತಿದ್ದೆ.

ಆ ಸಮಯದಲ್ಲಿ ನನಗೆ ಪರಿಚಯವಾದವರು ಪುತ್ತೂರು ನರಸಿಂಹ ನಾಯಕ್ ಅವರು. ಕೆಲವು ಸಾಹಿತ್ಯ ಹಾಗೂ ಸಂಗೀತಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿ ನಮ್ಮ ಭೇಟಿ ಆಗುತ್ತಿತ್ತು. ಆಕಾಶವಾಣಿಯವರು ನನ್ನ ಹಾಡುಗಳನ್ನು ಹಾಡಿಸುತ್ತಿದ್ದಾಗ ನರಸಿಂಹ ನಾಯಕ್ ಅವರು ಕೂಡಾ ನನ್ನ ಹಾಡುಗಳನ್ನು ಹಾಡಿದ್ದರು. ಆಕಾಶವಾಣಿ ಮಂಗಳೂರು, ಬೆಂಗಳೂರು, ಭದ್ರಾವತಿ, ಹಾಸನ ಈ ಎಲ್ಲ ಕೇಂದ್ರಗಳಲ್ಲೂ ನನ್ನ ಹಾಡುಗಳನ್ನು ಹಾಡಿಸಿದ್ದರು. ನರಸಿಂಹ ನಾಯಕ್ ಅವರು ಒಮ್ಮೆ ನನಗೆ ಪತ್ರ ಬರೆದು ‘ನಾನು ನಿಮಗೆ ಕೆಲವು ಟ್ಯೂನ್ ಗಳನ್ನು ಕಳುಹಿಸಿಕೊಡುತ್ತೇನೆ, ಗುಲಾಂ ಅಲಿ ಮುಂತಾದವರ ಪ್ರಖ್ಯಾತ ಗಝಲ್ಗಳು ಅವು, ನೀವು ಅವುಗಳನ್ನು ಕನ್ನಡಕ್ಕೆ ಮಾಡಿಕೊಡಲು ಸಾಧ್ಯ ಉಂಟಾ?’ ಎಂದು ಕೇಳಿದರು. ನಾನು ಅದಕ್ಕೆ ‘ಟ್ಯೂನ್ ಗಳನ್ನು ನಾನು ಬಳಸಿಕೊಳ್ಳಬಲ್ಲೆ, ಸಾಹಿತ್ಯ ನನ್ನದೇ ಆಗಿರ್ತದೆ, ಅನುವಾದ ನಾನು ಮಾಡೋದಿಲ್ಲ, ಅದು ಸಾಧ್ಯವೂ ಇಲ್ಲ, ಸರಿಯೂ ಅಲ್ಲ, ನನ್ನದೇ ಸಾಹಿತ್ಯ ಅದೇ ಟ್ಯೂನ್ ಗೆ ಆಗುವುದಾದರೆ ಬರೆದುಕೊಡ್ತೇನೆ’ ಎಂದು ನಾನು ಹೇಳಿದೆ. ಅದಕ್ಕೆ ಅವರು ‘ಧಾರಾಳವಾಗಿ ಆಗಬಹುದು, ಇನ್ನೂ ಒಳ್ಳೆದಾಯ್ತು, ಗೀತೆ ನಮ್ಮದೇ ಆಗಿರ್ತದೆ, ಟ್ಯೂನ್ ಅವರದ್ದಾಗಿರ್ತದೆ, ಪರವಾಗಿಲ್ಲ’ ಎಂದು ಹೇಳಿದರು. ಅದು ಕೂಡಾ ಆ ಕಾಲದಲ್ಲಿ ತಪ್ಪು ಎನ್ನುವ ಅಭಿಪ್ರಾಯವೇ ಇತ್ತು. ಆದರೆ ಅದಕ್ಕೆ ನಾನು ಹೆದರಲಿಲ್ಲ. ಸುಮಾರು ಮೂವತ್ತೈದು ಗಝಲ್ ಹಾಗೂ ಭಜನೆಗಳನ್ನು ಬರೆದುಕೊಟ್ಟೆ. ಬಿ ಆರ್ ಛಾಯಾ, ರತ್ನಮಾಲಾ ಪ್ರಕಾಶ್, ಮೊದಲಾದವರು ಅವುಗಳನ್ನು ಹಾಡಿದರು. ‘ಮಿಲನ’, ‘ಮಾನಸ’, ಹಾಗೂ ‘ಬೆಣ್ಣೆ ಕದ್ದ ನಮ್ಮ ಕೃಷ್ಣ’ ಈ ಮೂರು ಕೆಸೆಟ್ಟುಗಳಾಗಿ ಆ ಹಾಡುಗಳು ಸಾಕಷ್ಟು ಪ್ರಸಿದ್ಧಿಯನ್ನು ಪಡೆದವು. ಈಗಲೂ ಅವುಗಳನ್ನು ಬೇರೆಬೇರೆ ಸಂದರ್ಭಗಳಲ್ಲಿ ಬೇರೆ ಗಾಯಕ-ಗಾಯಕಿಯರು ಹಾಡಿದ್ದನ್ನು ನಾನು ಕೇಳಿದ್ದೇನೆ ಮತ್ತು ಆ ಹಾಡುಗಳು ಚೆನ್ನಾಗಿರುವುದಾಗಿಯೂ ತುಂಬಾ ಜನರು ನನಗೆ ಹೇಳಿದ್ದಾರೆ.

ಅದರ ನಂತರ ನನಗೆ ಪರಿಚಯ ಆದವರು ಸಿ ಅಶ್ವತ್ಥ್ ಅವರು. ಅವರ ಪರಿಚಯ ನನಗೆ ತೀರ ಅನಿರೀಕ್ಷಿತವಾಗಿ ಆಯಿತು. ಚೊಕ್ಕಾಡಿಯಂಥ ಹಳ್ಳಿಯಲ್ಲಿದ್ದ ನನಗೆ ಬೆಂಗಳೂರಿನಲ್ಲಿದ್ದ ಅವರು ಒಂದು ರೀತಿಯ ಆಕಾಶದಲ್ಲಿದ್ದ ಚಂದ್ರ ಆಗಿದ್ದರು. ನನಗೆ ಅಶ್ವತ್ಥ್ ಅವರ ಪರಿಚಯವಾಗಿದ್ದು ನನ್ನ ಗೆಳೆಯರಾಗಿದ್ದ ಎಚ್ ಎಸ್ ವೆಂಕಟೇಶಮೂರ್ತಿಯವರ ಮೂಲಕ. ವೆಂಕಟೇಶಮೂರ್ತಿಯವರು ನನಗೆ ಒಂದು ಪತ್ರ ಬರೆದು ‘ಅಶ್ವತ್ಥ್ ಅವರು ಕನ್ನಡದ ಹೊಸ ಕವಿಗಳ ಕೆಸೆಟ್ ತರಬೇಕು ಎಂದು ನಿಶ್ಚಯ ಮಾಡಿದ್ದಾರೆ, ಆ ಹಾಡುಗಳನ್ನು ಡಾ ರಾಜಕುಮಾರ್ ಅವರ ಹತ್ತಿರ ಹಾಡಿಸ್ತಾರೆ, ಅದರಲ್ಲಿ ನಿಮ್ಮ ಒಂದೂ ಹಾಡು ಇರ್ಬೇಕು ಎಂದು ಅಶ್ವತ್ಥ್ ಬಯಸಿದ್ದಾರೆ, ಆ ಹಾಡಿನ ಟ್ಯೂನ್ ಜೊತೆಗೆ ಕಳಿಸ್ತಾ ಇದೇನೆ, ಆದಷ್ಟು ಬೇಗ ಹಾಡನ್ನು ಬರೆದುಕೊಡಿ’ ಎಂದು ಹೇಳಿದರು. ಅದರ ಜೊತೆಗೆ ಆ ಹಾಡಿನ ರಿಹರ್ಸಲ್ ಗೆ ಇಂಥ ದಿನ ಬೆಂಗಳೂರಿಗೆ ಬರಬೇಕು ಎಂದೂ ಸೂಚಿಸಿದ್ದರು. ಆ ಟ್ಯೂನ್ ಕೆಸೆಟ್ಟಿನಲ್ಲಿ ರೆಕಾರ್ಡ್ ಮಾಡಿದ್ದ ಟ್ಯೂನ್ ಆಗಿರಲಿಲ್ಲ. ಅದನ್ನು ಅಕ್ಷರಗಳಲ್ಲಿ, ಅಂದರೆ ತನನಾನನಾನ ತನನಾ ತನನಾನನಾ ಎಂದು ಬರೆದು ಕಳುಹಿಸಿಕೊಟ್ಟಿದ್ದರು. ನಾನು ಈ ರೀತಿಯಲ್ಲಿ ಇದ್ದ ಟ್ಯೂನ್ ಗೆ ಅಲ್ಲಿಯವರೆಗೂ ಹಾಡನ್ನು ಬರೆದು ಅಭ್ಯಾಸವಿರಲಿಲ್ಲ. ಹಾಡಿನ ಭಾವ ಮತ್ತು ರಾಗದ ಸ್ವರೂಪ ಸ್ಪಷ್ಟವಾಗದೆ ಕವಿತೆ ಬರೆಯುವುದು ಕಷ್ಟದ ಕೆಲಸವಾಗಿತ್ತು. ಅಶ್ವತ್ಥ್ ಹಾಗೂ ರಾಜಕುಮಾರ್ ಅವರೆಡೆಗಿನ ಆಕರ್ಷಣೆಯಿಂದಾಗಿ, ಗೊಂದಲದ ನಡುವೆಯೇ ಯಾವುದೋ ಒಂದು ಹಾಡನ್ನು ಬರೆದು ಕಳುಹಿಸಿಕೊಟ್ಟೆ. ಆ ಹಾಡಿನ ಬಗ್ಗೆ ನನಗೆ ಅಷ್ಟು ವಿಶ್ವಾಸವಿರಲಿಲ್ಲ. ಅಶ್ವತ್ಥ್ ಅವರು ಏನು ಹೇಳುತ್ತಾರೋ ಎನ್ನುವ ಅಳುಕು ನನ್ನಲ್ಲಿತ್ತು. ಆ ಹಾಡಿನ ರಿಹರ್ಸಲ್ ನಲ್ಲಿಯೂ ನನಗೇನೂ ಕೆಲಸವಿಲ್ಲ, ಅದು ಸ್ವರ ಸಂಯೋಜನೆ ಮತ್ತು ಹಾಡುವವರ ಕೆಲಸ ಎಂದು ನಾನು ಭಾವಿಸಿ ನಾನು ಬೆಂಗಳೂರಿಗೂ ಹೋಗಲಿಲ್ಲ. ಹಾಡಿನ ರಿಹರ್ಸಲ್ ಮುಗಿದಮೇಲೆ ಎಚ್ ಎಸ್ ವಿ ಅವರು ಪತ್ರ ಬರೆದು ‘ನೀವು ಬರದೇ ಇದ್ದಿದ್ದಕ್ಕೆ ಅಶ್ವತ್ಥ್ ತುಂಬಾ ಬೇಸರ ಪಟ್ಟುಕೊಂಡರು’ ಎಂದು ತಿಳಿಸಿದರು. ಅಶ್ವತ್ಥ್ ಅವರ ಕೋಪದ ಬಗ್ಗೆ ಕೇಳಿದ್ದ ನನಗೆ ಆಗ ಬೇಸರವಾಯಿತು. ಇನ್ನು ನನ್ನ ಹತ್ತಿರ ಅಶ್ವತ್ಥ್ ಅವರು ಹಾಡುಗಳನ್ನು ಕೇಳಲಿಕ್ಕಿಲ್ಲ ಎಂದು ನಾನು ಅಂದುಕೊಂಡೆ.

achchigoo modhalu

ಹಿರಿಯ ಕವಿ ಎಚ್​. ಎಸ್.​ವೆಂಕಟೇಶಮೂರ್ತಿಯವರೊಂದಿಗೆ ಚೊಕ್ಕಾಡಿ.

ಕೆಲವು ದಿನಗಳ ಮೇಲೆ ‘ಅನುರಾಗ’ ಎನ್ನುವ ಆ ಹಾಡಿನ ಕೆಸೆಟ್ಟನ್ನು ನನಗೆ ಕಳುಹಿಸಿಕೊಟ್ಟಿದ್ದರು. ಅದನ್ನು ಕೇಳಿದ ನನಗೆ ಪರವಾಗಿಲ್ಲ ಚೆನ್ನಾಗಿಯೇ ಬಂದಿದೆ ಎನ್ನುವ ಸಮಾಧಾನವಾಯಿತು. ಅದಾದ ಸ್ವಲ್ಪ ಸಮಯದ ನಂತರ ಅಶ್ವತ್ಥ್ ನನಗೆ ಕಾಗದ ಬರೆದು ಒಂದಿಷ್ಟು ಹಾಡುಗಳನ್ನು ಬರೆದುಕೊಡಬೇಕೆಂದು ಹೇಳಿದರು. ಅದರ ಜೊತೆಗೆ ಟ್ಯೂನ್ ಗಳನ್ನು ಕೆಸೆಟ್ಟಿಗೆ ಹಾಕಿ ಅದನ್ನು ನನಗೆ ಕಳುಹಿಸಿಕೊಟ್ಟಿದ್ದರು. ‘ಇದರಲ್ಲಿ ಹನ್ನೆರಡು ಟ್ಯೂನ್ ಗಳಿವೆ, ಆರು ಟ್ಯೂನ್ ಗಳಿಗೆ ನೀವು ಹಾಡುಗಳನ್ನು ಬರೀಬೇಕು, ಉಳಿದ ಆರು ಹಾಡುಗಳನ್ನು ಡುಂಡಿರಾಜ್ ಅವರು ಬರೀತಾರೆ, ನನ್ನ ಉದ್ದೇಶ ದಕ್ಷಿಣ ಕನ್ನಡದ ಇಬ್ಬರು ಕವಿಗಳನ್ನ ಪರಿಚಯ ಮಾಡಿಸುವುದು ಮತ್ತು ದಕ್ಷಿಣ ಕನ್ನಡದ ಪುತ್ತೂರು ನರಸಿಂಹ ನಾಯಕರಿಂದ ಅವುಗಳನ್ನ ಹಾಡಿಸುವುದು ನನ್ನ ಆಸೆ’ ಎಂದು ಪತ್ರದಲ್ಲಿ ಹೇಳಿದ್ದರು. ನನ್ನ ಹತ್ತಿರ ಆಗ ಆ ಟ್ಯೂನ್ ಗಳನ್ನು ಕೇಳಲು ಟೇಪ್ ರೆಕಾರ್ಡರ್ ಕೂಡಾ ಇರಲಿಲ್ಲ. ಬೇರೆ ಯಾರಿಂದಲೋ ಟೇಪ್ ರೆಕಾರ್ಡರ್ ತಂದುಕೊಂಡು, ಆ ಟ್ಯೂನ್ ಗಳನ್ನು ಕೇಳಿಸಿಕೊಂಡು, ರಾಗಗಳನ್ನು ಗುರುತಿಸಿಕೊಂಡು, ಮೊದಲಿಗಿಂತ ಜಾಸ್ತಿ ಆತ್ಮವಿಶ್ವಾಸದಲ್ಲಿ ಹಾಡುಗಳನ್ನು ಬರೆದು ಅಶ್ವತ್ಥ್ ಅವರಿಗೆ ಕಳುಹಿಸಿಕೊಟ್ಟೆ. ಕೆಲವು ದಿನಗಳ ನಂತರ ಅವರು ಪತ್ರ ಬರೆದು ಹಾಡುಗಳು ತಲುಪಿರುವುದಾಗಿಯೂ, ನೀವು ಇಂಥ ದಿನ ಮಿನರ್ವ ಸರ್ಕಲ್ಲಿನಲ್ಲಿರುವ ಕಾಮತ್ ಹೊಟೆಲಿನಲ್ಲಿರುವ ರಿಹರ್ಸಲ್ ಗೆ ತಪ್ಪದೇ ಬರಬೇಕು ಎಂದು ತಿಳಿಸಿದರು. ಅವರು ಅಷ್ಟು ಹೇಳಿದ ಮೇಲೆ ತಪ್ಪಿಸುವಂತೆಯೇ ಇರಲಿಲ್ಲ. ಹಾಗಾಗಿ ಆ ದಿನ ನಾನು ಬೆಂಗಳೂರಿಗೆ ಹೋದೆ. ನಾನು ಅಲ್ಲಿಗೆ ಹೋದಾಗ ಅಶ್ವತ್ಥ್ ಅವರು ಹಾರ್ಮೋನಿಯಂ ಎದುರಿಗೆ ಇಟ್ಟುಕೊಂಡು ರೂಮಿನಲ್ಲಿ ಕುಳಿತಿದ್ದರು. ಅವರ ಪಕ್ಕದಲ್ಲಿ ರಿದಂ ಮಾಸ್ಟರ್ ಬಾಲಿ ಹಾಗೂ ಮ್ಯಾಂಡೊಲಿನ್ ಪ್ರಸಾದ್ ಅವರೂ ಇದ್ದರು. ಜೊತೆಗೆ ಎಚ್ ಎಸ್ ವಿ, ಲಕ್ಷ್ಮಣ ರಾವ್, ಡುಂಡಿರಾಜ್ ಎಲ್ಲರೂ ಅಲ್ಲಿ ಇದ್ದರು. ಈ ಘಟಾನುಘಟಿಗಳ ಮಧ್ಯದಲ್ಲಿ ನನಗೆ ಸ್ವಲ್ಪ ಭಯದ ಅನುಭವವಾಯಿತು. ಪರೀಕ್ಷಾ ಕೊಠಡಿಗೆ ನುಗ್ಗುವ ವಿದ್ಯಾರ್ಥಿಯಂತೆಯೇ ನಾನು ಕೊಠಡಿಯ ಒಳಗೆ ಹೋದೆ.

ಆಗ ರಿಹರ್ಸಲ್ ಎನ್ನುವ ಕವಿತೆಯ ಗಾಯನದ ಕಾರ್ಯ ಆರಂಭವಾಯಿತು. ಸ್ಥೂಲರೂಪದಲ್ಲಿದ್ದ ಟ್ಯೂನ್ ಗೆ ಸೂಕ್ಷ್ಮತೆಯ ನವಿರು ಸ್ಪರ್ಶವನ್ನು ನೀಡುವ ಬಗೆ ಯಾವುದು ಎಂದು ಚಿಂತಿಸುವ ಕಾರ್ಯ ಅದಾಗಿತ್ತು. ಕವಿಯನ್ನು ಎದುರಿಗೆ ಕೂರಿಸಿಕೊಂಡು ಕವಿತೆಯ ಬಗ್ಗೆ ಚರ್ಚೆ ಮಾಡುತ್ತ, ಅಲ್ಲಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುತ್ತ ಸ್ವರ ಸಂಯೋಜನೆಯ ಸಮಯದಲ್ಲಿ ಹೊರಹೊಮ್ಮುವ ಭಾವನೆಗಳನ್ನು ಹಾಡುವವರ ಹಾಗೂ ಇತರ ಪಕ್ಕವಾದ್ಯಗಳಿಗೆ ಜೋಡಿಸುತ್ತ, ಅತೃಪ್ತಿಯ ಹಾಗೂ ಕೆಲವೊಮ್ಮೆ ಮೆಚ್ಚುಗೆಯ ಸನ್ನೆಗಳ ಜೊತೆಯಲ್ಲಿ ಕವಿತೆಯ ಗಾಯನದ ಒಂದು ಪೂರ್ಣರೂಪವನ್ನು ಸಾಕ್ಷಾತ್ಕಾರಗೊಳಿಸಲು ಯತ್ನಿಸುವ ಕಾರ್ಯ ಅದು ಎಂದು ನನಗೆ ಅರಿವಾಯಿತು. ತೃಪ್ತಿಯ ಒಂದು ಹಂತಕ್ಕೆ ಇದು ತಲುಪಿದ ಮೇಲೆ ಅಶ್ವತ್ಥ್ ಅಲ್ಲಿಂದ ಹೊರಟುಹೋದರು. ಅವರಿಗೆ ಕವಿತೆಯ ಗಾಯನ ಎನ್ನುವುದು ಕವಿತೆಯ ವಾಚನದ ಮುಂದುವರಿಕೆಯೆನ್ನುವ ಭಾವನೆಯಿತ್ತು. ಆ ಕವಿತೆಯ ಅರ್ಥ ಹಾಗೂ ಭಾವಗಳನ್ನು ಹೆಚ್ಚು ಸ್ಪುಟಗೊಳಿಸುವುದಕ್ಕೆ ಮಾತ್ರ ರಾಗಗಳ ಬಳಕೆಯನ್ನು ಅವರು ಮಾಡಿಕೊಳ್ಳುತ್ತಿದ್ದರು. ಅವರ ದೃಷ್ಟಿಯಲ್ಲಿ ಅದು ರಾಗ ಸಂಯೋಜನೆಯಾಗಿರದೆ, ಸ್ವರ ಸಂಯೋಜನೆಯಾಗಿತ್ತು. ಅವರ ಗಾಯನದಲ್ಲಿ ರಾಗ ಮತ್ತು ಅದರ ಆಲಾಪಕ್ಕಿಂತ ಕವಿತೆಯೇ ಮುಖ್ಯ. ಶಾಸ್ತ್ರೀಯ ಗಾಯನಕ್ಕಿಂತ ಕವಿತಾ ಗಾಯನ ತೀರಾ ಭಿನ್ನವಾದದ್ದು ಎಂದು ಅವರು ನಂಬಿದ್ದರು. ಕವಿತೆಯ ಪದಗಳ ಒಳಹೊಕ್ಕು, ಮೌನದ ಸ್ಥಾನಗಳನ್ನು ನವಿರಾಗಿ ಸ್ಪರ್ಶಿಸಿ, ಅವುಗಳ ವಿವಿಧಾರ್ಥಗಳನ್ನು ಸ್ವರಗಳ ಏರಿಳಿತಗಳ ಹಾಗೂ ವಿವಿಧ ಸಂಚಾರಗಳ ಮೂಲಕ ಸೆರೆಹಿಡಿಯುವುದು ಅವರ ಗಾಯನದ ರೀತಿಯಾಗಿತ್ತು. ಅವರ ಗಾಯನ ಶೈಲಿಯನ್ನು ಅಶ್ವತ್ಥ್ ಘರಾನಾದ ಶೈಲಿಯೆಂದು ಯಾರಾದರೂ ಗುರುತಿಸಬಹುದಾಗಿತ್ತು. ಇಂತಹ ರಸಯಾತ್ರೆಯ ಮೊದಲ ಮುಖ್ಯ ಹಂತವೇ ರಿಹರ್ಸಲ್.

ಆ ಸಂದರ್ಭದಲ್ಲಿ ಅವರ ಏಕಾಗ್ರತೆಗೆ ಸಣ್ಣ ಭಂಗವುಂಟಾದರೂ ಅವರಿಗೆ ಕೋಪ ಬರುತ್ತಿತ್ತು. ಆಗ ಅವರು ಹಾರ್ಮೋನಿಯಂನ್ನು ಅಲ್ಲಿಯೇ ಬಿಟ್ಟು ಎದ್ದು, ಊಟ ಮಾಡಿ ಮಲ್ಕೊಳಿ ಎಂದು ಹೇಳಿ ಹೊರಟುಹೋಗುತ್ತಿದ್ದರು. ಆಗ ಅವರಿಗೆ ಏನೋ ಅಸಮಾಧಾನವಾಗಿದೆ ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿತ್ತು. ನಾವು ರಿಹರ್ಸಲ್ ಮಾಡುತ್ತಿದ್ದ ರಾತ್ರಿಯೂ ಸುಮಾರು ಹತ್ತೂವರೆಯ ಹೊತ್ತಿಗೆ ಯಾವುದೋ ಕಾರಣಕ್ಕೆ ಹಾಡನ್ನು ಅರ್ಧದಲ್ಲಿಯೇ ನಿಲ್ಲಿಸಿ ಎದ್ದು ಹೊರಟುಹೋಗಿಬಿಟ್ಟರು. ಮರುದಿನ ಬೆಳಗ್ಗೆ ಮತ್ತೆ ಎಂದಿನಂತೆ ನಮ್ಮ ರೂಮಿಗೆ ಬಂದು ಉಳಿದ ಕೆಲಸವನ್ನು ಪೂರ್ತಿ ಮಾಡಿದರು. ಹಾಗೆ ನಾನು ಬರೆದಿದ್ದ ಐದು ಹಾಡುಗಳು ಹಾಗೂ ಡುಂಡಿರಾಜ್ ಅವರ ಮೂರು ಹಾಡುಗಳ ರಿಹರ್ಸಲ್ ಮುಗಿಸಿದ ಅವರು ಅವುಗಳನ್ನು ‘ಸಲ್ಲಾಪ’ ಎನ್ನುವ ಕ್ಯಾಸೆಟ್ ಮೂಲಕ ಬಿಡುಗಡೆ ಮಾಡಿದರು. ಅದು ತುಂಬಾ ಪ್ರಸಿದ್ಧಿಯನ್ನು ಪಡೆಯಿತು. ನನ್ನ ಪ್ರಸಿದ್ಧವಾದ ಹಾಡುಗಳಾದ ‘ಮುನಿಸು ತರವೇ’, ‘ಸಂಜೆಯ ರಾಗ’, ‘ದಿನ ಹೀಗೆ ಜಾರಿ ಹೋಗಿದೆ’, ‘ಪ್ರೀತಿಯ ಲೋಕ ತೋರಿಸಿ’ ಮೊದಲಾದವುಗಳು ಆ ಕ್ಯಾಸೆಟ್ಟಿನಲ್ಲಿಯೇ ಇವೆ. ಅವುಗಳನ್ನು ಕೇಳಿದ ಮೇಲೆಯೇ ನನಗೆ ರಿಹರ್ಸಲ್ ಎನ್ನುವುದು ಎಷ್ಟು ಮುಖ್ಯವಾದ ಕೆಲಸ ಎಂದು ಅರ್ಥವಾಯಿತು. ಕವಿ, ಸ್ವರ ಸಂಯೋಜಕ ಮತ್ತು ಹಿನ್ನೆಲೆಗಳ ಸುಮಧುರವಾದ ಹಾಗೂ ಅರ್ಥಪೂರ್ಣವಾದ ಸಂಯೋಜನೆಯೇ ರಿಹರ್ಸಲ್ ಎನ್ನುವುದು ಆಗ ನನ್ನ ಅರಿವಿಗೆ ಬಂತು. ಆ ಸಂಯೋಜನೆಯಲ್ಲಿ ಎಲ್ಲರೂ ಭಾಗವಹಿಸುವುದು ಅಗತ್ಯ ಎನ್ನುವುದನ್ನು ಖಚಿತವಾಗಿ ಹೇಳಿ ಮನದಟ್ಟು ಮಾಡಿಸಿದವರು ಅಶ್ವತ್ಥ್ ಅವರು. ಅದರ ಹಿನ್ನೆಲೆ ಸಂಗೀತದ ಸಂಯೋಜನೆ ಈಗ ಸಾಧುಕೋಕಿಲ ಎಂದು ಪ್ರಸಿದ್ಧರಾಗಿರುವ ಸಾಧು ಸಹಾಯಶೀಲನ್ ಅವರು. ಹಿನ್ನೆಲೆಯ ವಾದ್ಯಗಾರರು ಬಾಲಿ ಎಂದು ಕರೆಯಲ್ಪಡುವ ರಿದಂ ಮಾಸ್ಟರ್ ಬಾಲಸುಬ್ರಹ್ಮಣ್ಯಂ ಅವರು, ಮ್ಯಾಂಡಲಿನ್ ಪ್ರಸಾದ್ ಅವರು ಹಾಗೂ ಕೊಳಲು ಮುರಳಿಯವರು. ಆಮೇಲೆ ನನ್ನ ಯಾವುದೇ ಹಾಡಿನ ರಿಹರ್ಸಲ್ ಗಳಿದ್ದರೂ ನಾನು ತಪ್ಪದೇ ಭಾಗವಹಿಸುತ್ತಿದ್ದೆ.

ಪೂರ್ಣ ಓದಿಗೆ ಮತ್ತು ಪುಸ್ತಕ ಖರೀದಿಗೆ ಸಂಪರ್ಕಿಸಿ : ವಿಕಾಸ ಪ್ರಕಾಶನ – 9900095204, Booksloka – 9886856364 ankitapustaka.com  |  navakarnatakaonline.com

ಇದನ್ನೂ ಓದಿ : ಅಚ್ಚಿಗೂ ಮೊದಲು : ‘ಅನಾರ್ಕಲಿಯ ಸೇಫ್ಟಿ ಪಿನ್​‘ ಬಿಡಿಸಿಕೊಂಡು ಬಂದ ‘ಎವರ್​ಗ್ರೀನ್​‘ನ ಒಂದು ಎಸಳು 

Published On - 6:49 pm, Sat, 27 March 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ