Poetry ; ಅವಿತ ಕವಿತೆ : ಅಡಿಗೆ ಆಟದ ಕಲ್ಲು ಎಲೆಚೂರು ಹೂವಿನ ಚಟ್ನಿ ಇಂದೇ ನಿಮ್ಮ ಅಂಗೈಯಲ್ಲಿ

‘ಜಯಂತ ಕಾಯ್ಕಿಣಿ ತಮ್ಮ ಹುಡುಗಾಟದ ಕಾಲದಲ್ಲೇ  ‘ರಂಗದೊಂದಿಷ್ಟು ದೂರʼ ಕವನಸಂಕಲನವನ್ನು ಪ್ರಕಟಿಸಿ ಪ್ರಸಿದ್ಧಿಗೆ ಬಂದವರು. ಈಗಲೂ ಹುಡುಗಾಟಿಕೆಯ ಹುಡುಗನಾಗಿಯೇ ಇರುವ ಅವರು ತಮ್ಮ ಕವನಕ್ಕಾಗಿ ಎಂದೂ ಹುಡುಕಾಟ ನಡೆಸಿದ್ದೇ ಇಲ್ಲ. ನಡೆದಲ್ಲೆಲ್ಲ ಅವರಿಗೆ ಕವನಗಳು ಗೋಚರಿಸುತ್ತವೆ. ಅವರ ಮಾತು, ಕಥೆ, ನಡೆ-ನುಡಿ ಎಲ್ಲದರಲ್ಲೂ ಕವನಪ್ರತಿಭೆ ಪ್ರತಿಫಲಿಸುತ್ತಿರುತ್ತದೆ. ಕೌದಿ ನೇಯ್ಗೆಯಲ್ಲಿ ಪರಿಣತಿ ಪಡೆದವರಿಗೆ ಒಂದೊಂದು ತುಣುಕು ಬಟ್ಟೆ ಚೂರೂ ನಾಳಿನ ಸುಂದರ ಕೌದಿಯಾಗಿ ಕಾಣುವಂತೆ ಕಾಯ್ಕಿಣಿಯವರ ಇಂದ್ರಿಯಗಳನ್ನು ತಟ್ಟುವ ಎಲ್ಲವೂ ಕವನಗಳಾಗುತ್ತವೆ.‘ ನಾಗೇಶ ಹೆಗಡೆ

Poetry ; ಅವಿತ ಕವಿತೆ : ಅಡಿಗೆ ಆಟದ ಕಲ್ಲು ಎಲೆಚೂರು ಹೂವಿನ ಚಟ್ನಿ ಇಂದೇ ನಿಮ್ಮ ಅಂಗೈಯಲ್ಲಿ
ಕವಿ ಜಯಂತ ಕಾಯ್ಕಿಣಿ
Follow us
|

Updated on:Mar 28, 2021 | 10:15 AM

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ.

ಪರಿಕಲ್ಪನೆ : ಶ್ರೀದೇವಿ ಕಳಸದ

ಇಂದು ಹಿರಿಯ ಕವಿ, ಕಥೆಗಾರ ಜಯಂತ ಕಾಯ್ಕಿಣಿ ಅವರ ‘ಅನಾರ್ಕಲಿಯ ಸೇಫ್ಟಿ ಪಿನ್​’ ಕಥಾ ಸಂಕಲನ ಮತ್ತು ‘ವಿಚಿತ್ರಸೇನನ ವೈಖರಿ’ ಕವನ ಸಂಕಲನ ಅಂಕಿತ ಪುಸ್ತಕದಿಂದ ವರ್ಚ್ಯುವಲ್ ಕಾರ್ಯಕ್ರಮದ ಮೂಲಕ ಬಿಡುಗಡೆಗೊಳ್ಳುತ್ತಿವೆ. ಈ ಸಂದರ್ಭದಲ್ಲಿ ಅವರ ಹೊಸ ಕವಿತೆ ‘ಆಟ’ ನಿಮ್ಮ ಓದಿಗೆ.

ರಂಗದೊಂದಿಷ್ಟು ದೂರ ಎನ್ನುವ ಕಾವ್ಯಗುಚ್ಛದೊಂದಿಗೆ ತಮ್ಮ ಹದಿನೇಳನೆ ವಯಸ್ಸಿಗೆ ಕಾವ್ಯಯಾನ ಆರಂಭಿಸಿದ ಜಯಂತರು ಸಂತೆಯ ಗೌಜುಗದ್ದಲದ ನಡುವೆ ನಿಂತು ಗಾಳಿಯ ಲಯ ಹಿಡಿಯಬಲ್ಲರು, ಘಮವನ್ನು ಬೊಗಸೆಯಲ್ಲಿ ಹೆಕ್ಕಿ ಹಂಚಬಲ್ಲರು, ಹಾರುವ ಹಕ್ಕಿಯ ಕಣ್ಣುಗಳಲ್ಲಿ ಕನಸುಗಳ ಎಣಿಸಬಲ್ಲರು ಮನಸ್ಸಿನ ಗೀರುಗಳಿಗೆ ಮುಲಾಮು ಹಚ್ಚಬಲ್ಲರು. ಹೀಗಾಗಿಯೇ ಅವರ ಬಹುತೇಕ ಕವಿತೆಗಳು‌ ಮನುಷ್ಯ ಸಹಜ ಪ್ರೀತಿಯನ್ನು ಕಾಳಜಿಯನ್ನು ಸ್ಫುರಿಸುತ್ತವೆ. ಜೀವನ ಪ್ರೀತಿಯ ತೇರಿನಲ್ಲಿ ಕೂತು ಯಾವ ಉತ್ಪ್ರೇಕ್ಷೆಯ ಹಂಗಿಗೆ ಒಳಪಡದೆ ಅತ್ಯಂತ ಸೂಕ್ಷ್ಮವಾಗಿ ಮತ್ತು ಆತ್ಯಂತಿಕವಾಗಿ ತಾವು ಹೇಳಬೇಕಾದ್ದನ್ನು‌ ತುಸು ಮೆಲ್ಲದನಿಯಲ್ಲೇ ಹೇಳುತ್ತವೆ. ಗಮನವಿಟ್ಟು ಕೇಳಿದರೆ ಕಡಲ ತೀರದ ಅಲೆಗಳಿಗೆ ಇರಬಹುದಾದ ಖಾಸಗಿ ಒಳಾಂಗಣ ಸದ್ದೊಂದು ಅವರ ಕವಿತೆಗಳಲ್ಲಿ ಅನಾವರಣಗೊಳ್ಳುತ್ತ ಹೋಗುತ್ತದೆ. ರಾಶಿ ರಾಶಿ ರೂಪಕಗಳ ಮೊಗೆಮೊಗೆದು ಕೊಡುವ ಇವರ ಕಾವ್ಯ, ತಕರಾರುಗಳನ್ನು ಕೂಡ ಹೂಪಕಳೆಗಳನ್ನು ಬಿಡಿಸಿದಷ್ಟೇ ಎಚ್ಚರದಲ್ಲಿ ತಣ್ಣಗೆ ದಾಖಲಿಸುತ್ತವೆ. ‘ಹೀಗೆ ನಾನಾ ರೀತಿಯ ಕಿಚಿಪಿಚಿ, ಪ್ರಭುತ್ವ, ನ್ಯಾಯ ನಡದೇ ಇದೆ ಈ ನಗ್ನ ವೇದಶಾಲೆಯಲ್ಲಿ’ (ಬಟ್ಟಬಯಲು). ‘ಪಾದ ಧೂಳಿಯಲ್ಲೇ ಬೀಜ ನೆನೆಸಿ ಹದ ಬೆಳೆಸಿ ಹಸಿರು ಉಸಿರುವಾಸೆ ಮೊಳಕೆ ಮೂಕಭಾಷೆ’ (ಮೊಳಕೆ) ಎನ್ನುವುದನ್ನು ಒಟ್ಟೊಟ್ಟಿಗೆ ಕಟ್ಟಿಕೊಡುತ್ತದೆ. ದೀಪ್ತಿ ಭದ್ರಾವತಿ, ಕವಿ, ಕಥೆಗಾರರು

ಜಯಂತ ಕಾಯ್ಕಿಣಿ ತಮ್ಮ ಹುಡುಗಾಟದ ಕಾಲದಲ್ಲೇ  ‘ರಂಗದೊಂದಿಷ್ಟು ದೂರʼ ಕವನಸಂಕಲನವನ್ನು ಪ್ರಕಟಿಸಿ ಪ್ರಸಿದ್ಧಿಗೆ ಬಂದವರು. ಈಗಲೂ ಹುಡುಗಾಟಿಕೆಯ ಹುಡುಗನಾಗಿಯೇ ಇರುವ ಅವರು ತಮ್ಮ ಕವನಕ್ಕಾಗಿ ಎಂದೂ ಹುಡುಕಾಟ ನಡೆಸಿದ್ದೇ ಇಲ್ಲ. ನಡೆದಲ್ಲೆಲ್ಲ ಅವರಿಗೆ ಕವನಗಳು ಗೋಚರಿಸುತ್ತವೆ. ಅವರ ಮಾತು, ಕಥೆ, ನಡೆ-ನುಡಿ ಎಲ್ಲದರಲ್ಲೂ ಕವನಪ್ರತಿಭೆ ಪ್ರತಿಫಲಿಸುತ್ತಿರುತ್ತದೆ. ಕೌದಿ ನೇಯ್ಗೆಯಲ್ಲಿ ಪರಿಣತಿ ಪಡೆದವರಿಗೆ ಒಂದೊಂದು ತುಣುಕು ಬಟ್ಟೆ ಚೂರೂ ನಾಳಿನ ಸುಂದರ ಕೌದಿಯಾಗಿ ಕಾಣುವಂತೆ ಕಾಯ್ಕಿಣಿಯವರ ಇಂದ್ರಿಯಗಳನ್ನು ತಟ್ಟುವ ಎಲ್ಲವೂ ಕವನಗಳಾಗುತ್ತವೆ. ನಾಗೇಶ ಹೆಗಡೆ, ಲೇಖಕ, ಪತ್ರಕರ್ತರು

avitha kavithe

‘ವಿಚಿತ್ರಸೇನನ ವೈಖರಿ’ ಮತ್ತು ‘ಕೋಟಿತೀರ್ಥ’ದ ನಡುವೆ

ಆಟ ಚಮೇಲಿ ಹೂವಿನ ಮಂಟಪ ಮನೆಯ ದಣಪೆಯಲ್ಲಿ ಒಣ ಬಂಗಡೆಯ ಹುರಿದಾಟ ಹಂಡೆಯೊಲೆಯ ಕೆಂಡದಲ್ಲಿ ತಂಗಾಳಿಗೆ ಬೇರೆ ಕೆಲಸವೇ ಇಲ್ಲ ಹೊರಗಿಂದ ಒಳಗೆ ಒಳಗಿಂದ ಹೊರಗೆ ಚಾಡಿ ಹೇಳುವುದೆ ಆಟ

ಇನ್ನು ಕಾರ್ಗಾಲದಲ್ಲಿ ಹದಾ ಕುದಿಗೆ ಬಂದ ಹುರುಳಿ ಕಟ್ಟಿನ ಸಾರಿಗೆ ಘಮ್ಮೆಂದು ಬಿದ್ದು ಬೆಳ್ಳುಳ್ಳಿ ಒಗ್ಗರಣೆ ಮನೆಗೆ ತಾಗಿಕೊಂಡೆ ಅಲೆಗಳ ಮುಟ್ಟಾಟ ಕಿಟಕಿಗೇ ಬಂದು ಹಣೆ ಹಣೆ ಬಡಿದುಕೊಂಡಂತೆ ಉಲ್ಬಣಿಸುವ ಕಡಲು ಹಗಲಿರುಳು ಉಡಿಗೆ ಬಂದ ಕಸಕಡ್ಡಿಯನೆಲ್ಲ ಪೂರ ತೀರಕೆಸೆಯುವ ನಿಷ್ಕಲ್ಮಷ ನಿಗೂಢ ನಿರ್ಲಿಪ್ತ ಜಲಸಮಾಧಿ

ನಿದ್ದೆ ಹೋಗಿದ್ದಾರೆ ಎಲ್ಲರೂ ಊರಿನಲ್ಲಿ ಕನಸಿನ ಪಟ್ಟೆ ಹುಲಿಯ ತೆರೆದ ಬಾಯಲ್ಲಿ ತಲೆಯಿಟ್ಟು ಸರ್ಕಸ್ಸಿನ ಬಾಲಿಕೆಯಂತೆ

ನಿದ್ರೆ ಹೋದಾಗ ಎಲ್ಲರೂ ಮಕ್ಕಳೆ ಹಠಾತ್ ಕತ್ತಲಾವರಿಸಿದ ಭಯದಲ್ಲಿ ಎಲ್ಲರೂ ಮಕ್ಕಳೆ ಸಂತೆಯಲ್ಲಿ ಬತ್ತಲಾದರೆ ಎಲ್ಲರೂ ಮಕ್ಕಳೆ ಮಜ್ಜನಕೆ ನಿಂತ ಗೊಮ್ಮಟನಂತೆ ನೀರು ನೆಲ ನೆಲ ನೀರು- ಆಟವಾಡುವ ಪುಟಾಣಿ ಏಡಿಗಳ ಭ್ರಮಿತ ಓಡಾಟ ಬೇಲೆ ತುಂಬ ಉಳಿದವರ್ಯಾರಿಗೂ ತಿಳಿಯದ ಮಹಾ ಏನೋ ಈಗಷ್ಟೆ ಅವಕೆ ಮಾತ್ರ ತಿಳಿದು ಹೋದಂತೆ

ಪೇರಲೆ ಮರದ ಕೆಳಗೆ ಅಡಿಗೆ ಆಟದ ಕಲ್ಲು ಎಲೆಚೂರು ಹೂವಿನ ಚಟ್ನಿ ದಾಸಾಳ ಜಜ್ಜಿದ ಲಾಲಗಂಧ ಕೆಸುವಿನೆಲೆಯ ಸುರುಳಿ ಹಚ್ಚಗೆ ಹೆಚ್ಚಿದಂತೆ ಈಳಿಗೆಯಲ್ಲಿ ಮನೆಮನೆಗಳ ಮುಂದೆ ಚಕ್ಕಡಿಯಿಂದ ಇಳಿಸಿದ ರಾಶಿ ರಾಶಿ ಸೌದೆ ಒಡೆಯುವ ರಟ್ಟೆಗಳೇ ಕೊಡಲಿ ನಡುಬಿಸಿಲಲ್ಲಿ ಬೆಲ್ಲ ತಿಂದು ಮೇಲಿಂದ ನೀರು ಕುಡಿಯುವ ಆಟ ಕೈಗೆ ಬಿದ್ದ ಚಿಲ್ಲರೆ ಎಣಿಸುವ ಆಟ ತೂಫಾನಿನ ಸಮುದ್ರದಲಿ ದೋಣಿ ಹಿಡಿಯುವ ಆಟ ಸೊಂಟ ಮಟ ಹೊಳೆಯಲಿ ನಿಂತು ಚಿಪ್ಪು ತೆಗೆಯುವ ಆಟ ಬಟ್ಟೆ ಒಗೆಯುವ ಆಟ ಮದುವೆಯ ಆಟ ದೇವರ ಆಟ

ಪುಟ್ಟ ಬೆರಳುಗಳ ಪಾಲಿಗೆ ಬಂದ ಬೆಣಚುಗಲ್ಲು ಬಳೆಚೂರು ಕವಡೆ ಹಲಸಿನ ಬೀಜ ಪೆನ್ನಿನ ಟಾಪು ಬ್ಯಾಟರಿ ಸೆಲ್ಲು ಎಲ್ಲವೂ ಆಟಿಗೆಯಾಗಿಬಿಡುವ ಜೈವಿಕ ಪವಾಡ

ಆಟಕ್ಕೆ ಅದೇನನ್ನೋ ತರುವೆನೆಂದು ಹೋದ ಅವನು ಅದ್ಯಾವಾಗ ಆದನೋ ಮಾಯ ಅವಳಿಗಂತೂ ಅದು ಎಳವೆಯಲ್ಲೆ ಈಳಿಗೆ ಮಣೆಯಿಂದ ಆದ ಗಾಯ

avitha kavithe

ಕೈಬರಹದೊಂದಿಗೆ ಜಯಂತ ಕಾಯ್ಕಿಣಿ

ಪುಸ್ತಕ : ವಿಚಿತ್ರಸೇನನ ವೈಖರಿ (ಕವನ ಸಂಕಲನ) ಕವಿ : ಜಯಂತ ಕಾಯ್ಕಿಣಿ ಮುಖಪುಟ ಕಲೆ : ರಾವ್ ಬೈಲ್ ಮುಖಪುಟ ವಿನ್ಯಾಸ : ಅಪಾರ ಬೆಲೆ : ರೂ. 130 ಪ್ರಕಾಶನ : ಅಂಕಿತ ಪುಸ್ತಕ

ಈ ಕವನ ಸಂಕಲನವನ್ನು ಇಲ್ಲಿ ಖರೀದಿಸಿ  : ankitapustaka.com ಫೋನ್ : 080-26617100/26617755

***

ಪರಿಚಯ : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಅವರು ನೆಲೆಸಿರುವುದು ಬೆಂಗಳೂರಿನಲ್ಲಿ. ತಾಯಿ ಶಾಂತಾ, ತಂದೆ ಗೌರೀಶ. ಜಯಂತ ಅವರ ಶ್ರಾವಣ ಮಧ್ಯಾಹ್ನ, ನೀಲಿಮಳೆ, ಒಂದು ಜಿಲೇಬಿ (ಕವನ ಸಂಕಲನಗಳು), ತೆರೆದಷ್ಟೇ ಬಾಗಿಲು, ದಗಡೂ ಪರಬನ ಅಶ್ವಮೇಧ, ಅಮೃತಬಳ್ಳಿ ಕಷಾಯ, ಬಣ್ಣದ ಕಾಲು, ತೂಫಾನ್ ಮೇಲ್, ಚಾರ್ ಮಿನಾರ್ (ಕಥಾ ಸಂಕಲನಗಳು), ಸೇವಂತಿ ಪ್ರಸಂಗ, ಜತೆಗಿರುವನು ಚಂದಿರ, ಇತಿ ನಿನ್ನ ಅಮೃತಾ (ನಾಟಕಗಳು), ಬೊಗಸೆಯಲ್ಲಿ ಮಳೆ, ಶಬ್ದತೀರ (ಅಂಕಣಗಳು) ಪ್ರಕಟಿತ ಕೃತಿಗಳು. ಹಲವಾರು ಕನ್ನಡ ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ಮತ್ತು ಗೀತೆಗಳನ್ನು ಬರೆದಿರುವ ಅವರಿಗೆ ‘ಫಿಲಂಫೇರ್’ ಸೇರಿ ಅನೇಕ ಪ್ರಶಸ್ತಿಗಳು ಸಂದಿವೆ. ‘ನೋ ಪ್ರೆಸೆಂಟ್ಸ್‌ ಪ್ಲೀಸ್‌’ ಕೃತಿಗೆ ಪ್ರತಿಷ್ಠಿತ ಡಿಎಸ್‌ಸಿ ಪ್ರಶಸ್ತಿ ಲಭಿಸಿದೆ.

ಇದನ್ನೂ ಓದಿ : ಅಚ್ಚಿಗೂ ಮೊದಲು : ‘ಅನಾರ್ಕಲಿಯ ಸೇಫ್ಟಿ ಪಿನ್​‘ ಬಿಡಿಸಿಕೊಂಡು ಬಂದ ‘ಎವರ್​ಗ್ರೀನ್​‘ನ ಒಂದು ಎಸಳು

Published On - 9:48 am, Sun, 28 March 21