- TV9 Kannada Kannada News Photos Cricket Photos Shimron Hetmyer Shatters T20 World Cup Sixes Record in India-WI Clash
IND vs WI: ಅತಿ ಹೆಚ್ಚು ಸಿಕ್ಸರ್; ವಿಶ್ವದಾಖಲೆ ಬರೆದ ಶಿಮ್ರಾನ್ ಹೆಟ್ಮೈಯರ್
T20 World Cup 2026: 2026ರ ಟಿ20 ವಿಶ್ವಕಪ್‌ನಲ್ಲಿ ಶಿಮ್ರಾನ್ ಹೆಟ್ಮೈಯರ್ ಸಿಕ್ಸರ್‌ಗಳ ವಿಶ್ವದಾಖಲೆ ನಿರ್ಮಿಸಿದ್ದಾರೆ. ಭಾರತ ವಿರುದ್ಧದ ಸೂಪರ್ 8 ಪಂದ್ಯದಲ್ಲಿ, ಅವರು ಒಂದು ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು 19 ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಮೂಲಕ ಸಾಹಿಬ್‌ಜಾದಾ ಫರ್ಹಾನ್ ಮತ್ತು ನಿಕೋಲಸ್ ಪೂರನ್ ದಾಖಲೆಗಳನ್ನು ಮುರಿದು ಮೊದಲ ಸ್ಥಾನಕ್ಕೇರಿದರು. ಅವರ ಸ್ಫೋಟಕ ಆಟ ವೆಸ್ಟ್ ಇಂಡೀಸ್‌ಗೆ ನೆರವಾಯಿತು.
Updated on: Mar 01, 2026 | 9:25 PM

2026 ರ ಟಿ20 ವಿಶ್ವಕಪ್ನ ಸೂಪರ್ 8 ಸುತ್ತಿನ ಕೊನೆಯ ಪಂದ್ಯ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡದ ಪರ ಶಿಮ್ರಾನ್ ಹೆಟ್ಮೈಯರ್ ದೊಡ್ಡ ಇನ್ನಿಂಗ್ಸ್ ಆಡಲಿಲ್ಲವಾದರೂ ಅತಿ ಹೆಚ್ಚು ಸಿಕ್ಸರ್‌ಗಳ ವಿಚಾರದಲ್ಲಿ ವಿಶ್ವದಾಖಲೆಯನ್ನು ನಿರ್ಮಿಸಿದರು.

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಿತು. ರೋಸ್ಟನ್ ಚೇಸ್ ಮತ್ತು ನಾಯಕ ಶೈ ಹೋಪ್ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡು ವೆಸ್ಟ್ ಇಂಡೀಸ್‌ಗೆ ಉತ್ತಮ ಆರಂಭವನ್ನು ನೀಡಿದರು. ಮೊದಲ ವಿಕೆಟ್ ಪತನದ ನಂತರ ಬಂದ ಹೆಟ್ಮೈಯರ್ ಸ್ಫೋಟಕ ಆರಂಭವನ್ನು ಕಂಡರು.

ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಸಿಕ್ಸರ್ ಬಾರಿಸಿದರು ಹೆಟ್ಮೈಯರ್, ವರುಣ್ ಚಕ್ರವರ್ತಿ ಬೌಲಿಂಗ್ನಲ್ಲೂ ಮತ್ತೊಂದು ಬೃಹತ್ ಸಿಕ್ಸರ್ ಬಾರಿಸಿದರು. ಈ ಎರಡನೇ ಸಿಕ್ಸರ್ನೊಂದಿಗೆ ಹೆಟ್ಮೈಯರ್ ಒಂದು ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಪ್ರಸ್ತುತ ಹೆಟ್ಮೈಯರ್ ಈ ವಿಶ್ವಕಪ್‌ನಲ್ಲಿ ಆಡಿರುವ ಏಳು ಇನ್ನಿಂಗ್ಸ್ಗಳಲ್ಲಿ 19 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಇದರೊಂದಿಗೆ ಹೆಟ್ಮೈಯರ್, ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಅವರ ದಾಖಲೆಯನ್ನು ಮುರಿದರು. 18 ಸಿಕ್ಸರ್‌ಗಳ ಬಾರಿಸಿದ್ದ ಫರ್ಹಾನ್ ಇದುವರೆಗೆ ಅಗ್ರಸ್ಥಾನದಲ್ಲಿದ್ದರು. ಇದೀಗ ಹೆಟ್ಮೈಯರ್ ಮೊದಲ ಸ್ಥಾನಕ್ಕೇರಿದ್ದಾರೆ. ಹಾಗೆಯೇ 2024 ರ ವಿಶ್ವಕಪ್‌ನಲ್ಲಿ 17 ಸಿಕ್ಸರ್‌ಗಳನ್ನು ಬಾರಿಸಿದ್ದ ವೆಸ್ಟ್ ಇಂಡೀಸ್‌ನ ಮಾಜಿ ದಿಗ್ಗಜ ನಿಕೋಲಸ್ ಪೂರನ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಆದಾಗ್ಯೂ ಹೆಟ್ಮೆಯರ್ ಈ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್ ಆಡಲಿಲ್ಲ. ಜಸ್ಪ್ರೀತ್ ಬುಮ್ರಾಗೆ ಬಲಿಯಾದ ಹೆಟ್ಮೈಯರ್ ಕೇವಲ 12 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಸೇರಿದಂತೆ 27 ರನ್ ಬಾರಿಸಿ ಔಟಾದರು. ವಾಸ್ತವವಾಗಿ ಆಡಿರುವ ಎಂಟು ಟಿ20 ಪಂದ್ಯಗಳಲ್ಲಿ ಬುಮ್ರಾ, ಹೆಟ್ಮೈಯರ್ ಅವರನ್ನು ಐದನೇ ಬಾರಿಗೆ ಔಟ್ ಮಾಡಿದರು.

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



