Lunar Eclipse: ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರಗ್ರಹಣ: ಮಾರ್ಚ್ 3ರಂದು ಸಂಭವಿಸುವ ವರ್ಷದ ಮೊದಲ ಚಂದ್ರಗ್ರಹಣದ ಹಿನ್ನೆಲೆಯಲ್ಲಿ, ಮಂತ್ರಾಲಯದ ರಾಯರ ಮಠದಲ್ಲಿ ಭಕ್ತರಿಗೆ ಯಾವುದೇ ನಿರ್ಬಂಧಗಳಿರುವುದಿಲ್ಲ. ಗ್ರಹಣದ ಅವಧಿಯಲ್ಲೂ ಭಕ್ತರಿಗೆ ರಾಯರ ದರ್ಶನಕ್ಕೆ ಮುಕ್ತ ಅವಕಾಶವಿದ್ದು, ಎಂದಿನಂತೆ ಮಠದ ಸಮಯಕ್ಕನುಗುಣವಾಗಿ ದರ್ಶನ ಪಡೆಯಬಹುದು. ವಿಶೇಷ ಪೂಜೆಗಳು ಮತ್ತು ಪ್ರಸಾದ ವಿತರಣೆಯಲ್ಲಿ ಕೆಲವು ಬದಲಾವಣೆಗಳಿದ್ದು, ಜಲಾಭಿಷೇಕ ಮಾತ್ರ ನಡೆಯಲಿದೆ.
ರಾಯಚೂರು, ಮಾರ್ಚ್ 1: ವರ್ಷದ ಮೊದಲ ಚಂದ್ರಗ್ರಹಣ ಇದೇ ಮಾರ್ಚ್ 3ರಂದು ಸಂಭವಿಸಲಿದೆ. ಸಾಮಾನ್ಯವಾಗಿ ಗ್ರಹಣದ ಸಮಯದಲ್ಲಿ ಧಾರ್ಮಿಕ ಕೇಂದ್ರಗಳು ಮತ್ತು ದೇವಸ್ಥಾನಗಳನ್ನು ಮುಚ್ಚಿ, ಧಾರ್ಮಿಕ ಕೈಂಕರ್ಯಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಆದರೆ, ಮಂತ್ರಾಲಯದ ರಾಯರ ಮಠ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಭಕ್ತರಿಗೆ ಯಾವುದೇ ನಿರ್ಬಂಧ ಅಥವಾ ನಿಷೇಧಗಳು ಇರುವುದಿಲ್ಲ ಎಂದು ತಿಳಿಸಿದೆ. ಚಂದ್ರಗ್ರಹಣದ ಸಂದರ್ಭದಲ್ಲಿಯೂ ಭಕ್ತರು ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆಯಬಹುದು. ಬೆಳಗಿನ ಸೂರ್ಯೋದಯದ ನಂತರ ಯಾವುದೇ ವಿಶೇಷ ಸೇವೆಗಳು, ರಾಯರ ಅಲಂಕಾರ ಅಥವಾ ವಿಶೇಷ ಪೂಜೆಗಳು ಇರುವುದಿಲ್ಲ. ಕೇವಲ ಜಲಾಭಿಷೇಕದ ಮೂಲಕ ರಾಯರನ್ನು ಅರ್ಪಿಸಲಾಗುತ್ತದೆ. ಭಕ್ತರು ಮಠದ ನಿಗದಿತ ಸಮಯದ ಅವಧಿಯಲ್ಲೇ ಎಂದಿನಂತೆ ರಾಯರ ದರ್ಶನ ಪಡೆಯಲು ಅವಕಾಶವಿದೆ. ಗ್ರಹಣದ ಅವಧಿಯಲ್ಲಿಯೂ ದರ್ಶನಕ್ಕೆ ಮುಕ್ತ ಅವಕಾಶ ನೀಡಲಾಗಿದೆ.
ಗ್ರಹಣ ಮುಗಿಯುವವರೆಗೆ ಯಾವುದೇ ಸಾಮಾನ್ಯ ಪ್ರಸಾದ ವಿತರಣೆ ಇರುವುದಿಲ್ಲ. ಬದಲಾಗಿ ತೀರ್ಥ ಪ್ರಸಾದವನ್ನು ಮಾತ್ರ ನೀಡಲಾಗುತ್ತದೆ. ಗ್ರಹಣದ ಸಂದರ್ಭದಲ್ಲಿ ವಿಶೇಷ ಹೋಮಗಳನ್ನು ಸಹ ಆಯೋಜಿಸಲಾಗಿದ್ದು, ಭಕ್ತರು ಅದರಲ್ಲಿ ಭಾಗವಹಿಸಬಹುದು ಎಂದು ಮಠದ ಆಡಳಿತ ತಿಳಿಸಿದೆ.
