ಮಾರಿಕಾಂಬೆಯನ್ನು ಶಿರಸಿಗೆ ಪರಿಚಯಿಸಿ, ಬಲಿಯಾದ ಬೇಡನ ಕಥೆಯೇ ಈ ಬೇಡರ ವೇಷ: ಜೀವನದ ಹಂಗು ತೊರೆದು ಬಡವರಿಗೆ ಸಹಾಯ ಮಾಡಿ

Bedara vesha 2021: ಬೇಡರ ಭರಮನು ರೌದ್ರ ರೂಪದಿ ವೀರಾವೇಶದಿಂದ ಸೈನಿಕರ ಬಳಿ ಇದ್ದ ಖಡ್ಗ ಹಿಡಿದು ನನಗೆ ಮೋಸ ಮಾಡಿ ಹಿಡಿದು ಕೊಡ್ತೀಯಾ ನಿನ್ನನ್ನು ಬಿಡಲಾರೆ ಕೊಂದೇ ಹಾಕುವೆ ಎಂದು ಆವೇಶದಲ್ಲಿ ಸೈನಿಕರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತ ಮುದುಕಿಯ ಕಡೆ ಹೋಗಲಾರಂಭಿಸುತ್ತಾನೆ. ಈ ಸನ್ನಿವೇಶವನ್ನೇ ಬೇಡರ ವೇಷವೆಂದು ಆಚರಿಸಲಾಗುವುದು....

ಮಾರಿಕಾಂಬೆಯನ್ನು ಶಿರಸಿಗೆ ಪರಿಚಯಿಸಿ, ಬಲಿಯಾದ ಬೇಡನ ಕಥೆಯೇ ಈ ಬೇಡರ ವೇಷ: ಜೀವನದ ಹಂಗು ತೊರೆದು ಬಡವರಿಗೆ ಸಹಾಯ ಮಾಡಿ
ಬೇಡರ ವೇಷ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Mar 27, 2021 | 10:46 AM

ರಕ್ತಕೆಂಪಿನ ಬಣ್ಣದ ಉದ್ದ ತೋಳಿನ ಅಂಗಿ, ಮೊಣಕಾಲು ಮುಟ್ಟುವ ದೊಗಲೆ ಚಡ್ಡಿ, ಕಾಲಿಗೆ ಗೆಜ್ಜೆ, ಬೆನ್ನಿಗೆ ವಿಶಾಲವಾಗಿ ಹಬ್ಬಿದ ನವಿಲು ಗರಿಗಳ ಪದರು, ಕುತ್ತಿಗೆಗೆ ಕಾಂಚನ (ನೋಟಿನ) ಮಾಲೆ, ರೋಷ ಉಕ್ಕಿ ತೋರಿಸುವ ಕಣ್ಣು, ಮೂಗಿನ ಮೇಲೊಂದು ಹತ್ತಿ ಉಂಡೆ, ಕೆಂಡ ಉಗುಳುವ ಕೆಂಪು ಮುಖದ ಮೇಲೆ ಬಿಳಿ-ಹಳದಿ ಬಣ್ಣದ ಗೆರೆಗಳ ನಡುವೆ ಕಡುಗಪ್ಪಿನ ದಪ್ಪ ಮೀಸೆ. ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ಗುರಾಣಿ ಹಿಡಿದು ಬೀದಿಯಲ್ಲಿ ಹೆಜ್ಜೆ ಹಾಕಿದರೆ ಸುತ್ತ ನಿಂತಿದ್ದ ಜನರ ಎದೆಯಲ್ಲಿ ನಡುಕ ಶುರುವಾಗಿ ಮನ ಕಂಪಿಸುತ್ತೆ. ಇದೇ ನಮ್ಮ ಜನಪದ ಶೈಲಿಯ ಬೇಡರ ವೇಷದ ರುದ್ರ ನರ್ತನ.

ಮಳೆನಾಡಿನ ಹೆಬ್ಬಾಗಿಲು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅತ್ಯಂತ ವಿಶಿಷ್ಟ ಹಾಗೂ ಪುಳಕಿತಗೊಳಿಸುವ ಜನಪದ ಕಲೆಯೊಂದಿದೆ. ಅದುವೇ ಬೇಡರ ವೇಷ ಅಥವಾ ಬೇಡರ ಕುಣಿತ (Bedara Vesha – Hunter Dance – Sirsi Marikamba Temple). ಇಡೀ ದೇಶ ಹೋಳಿ ಹಬ್ಬವನ್ನು ಬಣ್ಣಗಳಿಂದ ಮಿಂದು ಆಚರಿಸಿದ್ರೆ, ಶಿರಸಿಯಲ್ಲಿ ಒಂದು ವಾರದ ಹಿಂದೆಯಿಂದಲೇ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿರುತ್ತೆ. ಜನರೆಲ್ಲ ಚಂದ್ರನ ಆಗಮನಕ್ಕಾಗಿ ಕಾಯುತ್ತಿರುತ್ತಾರೆ. ಕತ್ತಲಾಗುತ್ತಿದ್ದಂತೆ ಬೇರೆಯ ಪ್ರಪಂಚವೇ ತೆರೆದುಕೊಳ್ಳುತ್ತೆ. ಬೇಡರ ವೇಷಧಾರಿಯ ರುದ್ರ ನರ್ತನ ನಗರವನ್ನು ರಂಗುಗೊಳಿಸುತ್ತೆ. ಬೇಡರ ವೇಷದ ಮೂಲಕ ಐತಿಹಾಸಿಕ, ಸಾಂಸ್ಕೃತಿಕ ಜಾನಪದ ಸೊಬಗಿನ ವೈಶಿಷ್ಟ್ಯ ಆಚರಣೆಯ ವೇದಿಕೆ ತೆರೆದುಕೊಳ್ಳುತ್ತೆ.

Bedara Vesha

ಬೇಡರ ನೃತ್ಯ

300 ವರ್ಷಗಳ ಇತಿಹಾಸವಿರುವ ಬೇಡರ ವೇಷ 2 ವರ್ಷಗಳಿಗೆ ಒಮ್ಮೆ ನಡೆಯುತ್ತೆ. ಇನ್ನು ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಿಯ ಜಾತ್ರೆ (Marikamba Temple) ಕೂಡ ಎರಡು ವರ್ಷಗಳಿಗೊಮ್ಮೆ ನಡೆಯುತ್ತೆ. ಜಾತ್ರೆ ಇಲ್ಲದ ವರ್ಷ ಇಲ್ಲಿ ಬೇಡರ ವೇಷ ನಡೆದರೆ, ಬೇಡರ ವೇಷ ನಡೆಯದ ವರ್ಷ ಜಾತ್ರೆ ನಡೆಯುತ್ತೆ.  ಹೋಳಿ ಹಬ್ಬದ ನಾಲ್ಕು ದಿನ ಹಿಂದೆಯಿಂದಲೇ ಶುರುವಾಗುವ ಬೇಡರ ಕುಣಿತ ಹೋಳಿ ಹಬ್ಬದಂದು ಬಣ್ಣಗಳ ಹಬ್ಬದ ಮೂಲಕ ಮುಕ್ತಾಯಗೊಳ್ಳುತ್ತೆ. ರಾತ್ರಿ 10ರಿಂದ ಬೆಳಗಿನ ಜಾವ 4 ಅಥವಾ 5ರ ವರೆಗೆ ಪ್ರತಿ ಬೀದಿ ಬೀದಿಗಳಲ್ಲಿ ಸಂಚರಿಸಿ ಬೇಡರ ವೇಷಧಾರಿ ನೃತ್ಯ ಮಾಡಿ ತನ್ನ ರೌದ್ರ ರೂಪದ ದರ್ಶನ ಮಾಡಿಸುತ್ತಾರೆ. ಕೊರೊನಾ ಹಿನ್ನೆಲೆ ಈ ಬಾರಿ ಕೆಲವು ನಿರ್ಬಂಧನೆಗಳನ್ನು ಹಾಕಲಾಗಿದ್ದು ಮಾರ್ಚ್ 24ದಿಂದ 27ರ ವರೆಗೆ ಬೇಡರ ವೇಷ ಆಚರಣೆ ನಡೆದಿದೆ.

Bedara Vesha

ಬೇಡರ ವೇಷಧಾರಿ

ತಿಂಗಳುಗಳ ಕಾಲ ನಡೆಯುತ್ತೆ ತಾಲೀಮು ಝೇಂಕರಿಸುತ್ತ, ರೌದ್ರ ರೂಪ ತೋರಿಸುವ ಬೇಡ ವೇಷಧಾರಿ ನಗರವಿಡೀ ಸಂಚರಿಸಿ ಗಲ್ಲಿ ಗಲ್ಲಿಯಲ್ಲಿ ನೃತ್ಯ ಮಾಡುವುದು ಕಷ್ಟಕರವಾದ ಕೆಲಸ. ಹೀಗಾಗಿ ಒಂದು ತಿಂಗಳ ಹಿಂದೆಯಿಂದಲೇ ಇದಕ್ಕೆ ತಾಲೀಮು ಶುರುವಾಗುತ್ತೆ. ಬೇಡ ವೇಷಧಾರಿ, ಆತನಿಗೆ ಹಗ್ಗ ಕಟ್ಟಿ ನಿಯಂತ್ರಿಸಲು ಇಬ್ಬರು, ಬೇಡನ ಎದುರು ಸ್ತ್ರೀ ವೇಷಧಾರಿ, ಸಿಳ್ಳೆ ಹೊಡೆಯುವವ, ಪಕ್ಕದಲ್ಲಿ ನಿಂತು ಹಲಗೆ ಬಡಿಯುವ ನಾಲ್ವರ ತಂಡ ದಿನ ನಿತ್ಯ ಕುಣಿತದ ಅಭ್ಯಾಸ ಮಾಡ್ತಾರೆ. ರಾತ್ರಿ 10ಕ್ಕೆ ಶುರುವಾಗುವ ಹಲಗೆ ಬಡಿತ ನಡುರಾತ್ರಿವೆರೆಗೆ ಮೊಳಗುತ್ತೆ.

ಬೇಡರ ವೇಷದ ದಿನದಂದು ನವಿಲು ಗರಿಗಳ ಪದರು, ಗೆಜ್ಜೆ. ದಪ್ಪ ಮೀಸೆ, ಕೆಂಪು ಬಟ್ಟೆ, ಕತ್ತಿ, ಕೈಗೆ ನಿಂಬೆ ಹಣ್ಣು ಕಟ್ಟಿಕೊಂಡು ನಗರದ ಬೀದಿಗಳಲ್ಲಿ ಢನ್ಕ ನಕ ಢನ್ಕ ನಕ ಶಬ್ಧ ಕೇಳುತ್ತದೆ. ಪ್ರೇಕ್ಷಕರ ಮಧ್ಯೆ ಕತ್ತಿ ಬೀಸುತ್ತ ಬೇಡರ ವೇಷ ತೊಟ್ಟಿಕೊಂಡ ವ್ಯಕ್ತಿ ವಿಶಿಷ್ಟವಾಗಿ ಕುಣಿಯುತ್ತಾನೆ. ಹಾಗೂ ಹಿಂಬದಿ ಇರುವ ಇಬ್ಬರು ಬೇಡರ ವೇಷಧಾರಿಯನ್ನು ಹಿಡಿದುಕೊಂಡು ನಿಯಂತ್ರಣ ಮಾಡುತ್ತಾರೆ.

ಬೇಡರ ವೇಷಧಾರಿ ಕುಣಿಯೋದನ್ನು ಜನರು ರಾತ್ರಿಯಿಡಿ ನೋಡಿ ಕಣ್ತುಂಬಿಕೊಳ್ಳುತ್ತಾರೆ. ಬೇಡರ ನೃತ್ಯ ಪ್ರದರ್ಶಿಸಿ ಜನರನ್ನು ವಿಸ್ಮಯಗೊಳಿಸುತ್ತಾರೆ. ಇನ್ನು ಬೇಡರ ವೇಷಕ್ಕೆ ಸಿದ್ಧವಾಗುವುದು ಸುಲಭದ ಕೆಲಸವಲ್ಲ. ಮುಸ್ಸಂಜೆಯಿಂದ ರಾತ್ರಿಯ ವರೆಗೆ ಅಪ್ಪಟ ಜನಪದ ಶೈಲಿಯ ಈ ವೇಷಕ್ಕೆ ಬಣ್ಣ ಹಚ್ಚಲಾಗುತ್ತೆ. ಬಹಳ ವರ್ಷಗಳಿಂದ ಬಣ್ಣ ಹಚ್ಚುವ ಕಲಾವಿದರು ಮಾತ್ರ ಈ ಕೆಲಸವನ್ನು ಮಾಡಲು ಸಾಧ್ಯ.

Bedara Vesha

ಬೇಡರ ವೇಷ

ಬೇಡರ ವೇಷದ ಹಿಂದಿದೆ ರೌದ್ರ ರೂಪದ ಕಥೆ ಇನ್ನು 300 ವರ್ಷ ಇತಿಹಾಸವಿರುವ ಬೇಡರ ವೇಷದ ಹಿಂದೆ ಅನೇಕ ಕಥೆಗಳಿವೆ. ಒಬ್ಬಬ್ಬರು ಒಂದೊಂದು ರೀತಿಯ ಕಥೆ ಹೇಳುತ್ತಾರೆ. ವಿಜಯನಗರ ಅರಸರ ಆಡಳಿತದ ನಂತರ ಸೋಂದಾ ರಾಜರ(ಸಾಮಂತರು) ಆಡಳಿತ ಶುರುವಾಗುತ್ತೆ. ಅಂದು ಕಲ್ಯಾಣ ಪಟ್ಟಣವಾಗಿದ್ದ ಇಂದಿನ ಶಿರಸಿಯ ಮೇಲೆ ಮುಸ್ಲಿಂರ ದಾಳಿ ನಡೆಯಬಾರದೆಂದು ಬೇಡ ಜನಾಂಗದ ಮಲ್ಲೇಶಿ ಎಂಬ ಯುವ ವೀರಾಧಿವೀರನನ್ನು ರಕ್ಷಣೆಗಾಗಿ ನೇಮಿಸುತ್ತಾರೆ.

ಮೊದಲು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲೇಶಿ ನಂತರ ಅಧಿಕಾರದ ಸೊಕ್ಕಿನಿಂದ ದುರಾಡಳಿತ ಆರಂಭಿಸಿದ. ಬಳಿಕ ಆತ ರುದ್ರಾಂಬಿಕಾ ಎಂಬ ಸುಂದರಿಯನ್ನು ಲಗ್ನವಾಗಬೇಕೆಂದುಕೊಂಡಿರುತ್ತಾನೆ. ಆದರೆ ಆಕೆಗೆ ಮಲ್ಲೇಶಿಯನ್ನು ವರಿಸುವುದು ಇಷ್ಟವಿರಲಿಲ್ಲ. ಆದರೂ ಮಲ್ಲೇಶಿಗೆ ಪಾಠ ಕಲಿಸಬೇಕೆಂದು ತನ್ನ ಜೀವನವನ್ನೇ ತ್ಯಾಗ ಮಾಡಿ ಮದುವೆಯಾಗುತ್ತಾಳೆ.

ಹೋಳಿ ರಾತ್ರಿಯಂದು ಬೇಡ ವೇಷಧಾರಿಯಾಗಿ ಕುಣಿಯುತ್ತಿದ್ದ ಗಂಡನ ಕಣ್ಣಿಗೆ ಆಸಿಡ್ ಎರಚುತ್ತಾಳೆ. ಆಗ ಆಕೆಯನ್ನು ಕೊಲ್ಲಲು ಬಂದ ಗಂಡನನ್ನು ಜನರು ಹಿಡಿದು ಸಜೀವವಾಗಿ ಸುಟ್ಟುಬಿಡುತ್ತಾರೆ. ಬಳಿಕ ಹೆಂಡತಿ ರುದ್ರಾಂಬಿಕೆ ಗಂಡನ ಚಿತೆಯೇರಿ ಪ್ರಾಣತ್ಯಾಗ ಮಾಡಿಕೊಳ್ಳುತ್ತಾಳೆ. ಆಕೆಯ ತ್ಯಾಗದ ಸಂಕೇತವಾಗಿ ಬೇಡರವೇಷ ಹಾಕಿ ಕುಣಿಯುವ ಸಂಪ್ರದಾಯವಿದೆ ಎಂದು ಕೆಲವರು ಹೇಳುತ್ತಾರೆ.

Bedara Vesha

ಬೇಡರ ವೇಷ

ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದಾದ ಯುವರಿಂದ ಸೃಷ್ಟಿಯಾಯ್ತು ಇತಿಹಾಸ ಇನ್ನು ಇದೇ ರೀತಿ ಬೇಡರ ವೇಷದ ಹಿಂದೆ ಮತ್ತೊಂದು ಜನ ಪ್ರಿಯ ಕಥೆ ಇದೆ. ಸುಮಾರು ವರ್ಷಗಳ ಹಿಂದೆ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಬಾಕಿ ಊರುಗಳಂತೆ ಶಿರಸಿ ಸಹ ಬ್ರಿಟಿಷರ ದಬ್ಬಾಳಿಕೆಯಿಂದಾಗಿ ಕುಗ್ಗಿ ಹೋಗಿತ್ತು. ಊರಿನ ಜನ ಕಷ್ಟದ ಪರಿಸ್ಥಿತಿಯನ್ನು ಎದುರಿಸುವಂತಾಗಿತ್ತು. ಬಡವರನ್ನು ತಮ್ಮ ಜೀವವನ್ನು ಅಂಗೈಯಲ್ಲಿಟ್ಟು ಜೀವನ ನಡೆಸುವಂತಾಗಿತ್ತು.

ಈ ಕಷ್ಟವನ್ನು ಕಂಡ ನಾಲ್ವರು ಯುವಕರ ಗುಂಪೊಂದು ಒಂದಾಗಿ ಶ್ರೀಮಂತರನ್ನು ಲೂಟಿ ಮಾಡಿ ಅದರಿಂದ ಬಡವರಿಗೆ ತುತ್ತು ಅನ್ನಕ್ಕಾದರೂ ಸಹಾಯ ಮಾಡಬೇಕೆಂಬ ಆಸೆ ಹೊಂದಿದ್ದರು. ಹೀಗಾಗಿ ಆ ನಾಲ್ವರು ಸಿರಿವಂತರ ಮನೆಗೆ ಕನ್ನ ಹಾಕಲು ಮುಂದಾದ್ರು. ಹೀಗಿರುವಾಗ ಶಿರಸಿ ಬಳಿಯ ಹಾನಗಲ್ ಎಂಬಲ್ಲಿ ಪ್ರತಿ ವರ್ಷದಂತೆ ದೇವಿಯ ಜಾತ್ರೆ ನಡೆಯುತ್ತಿತ್ತು. ಅಲ್ಲಿಗೆ ಹೋದ ಯುವಕರು ದೇವಿಯ ಮೇಲಿದ್ದ ಚಿನ್ನಾಭರಣಗಳನ್ನು ನೋಡಿ ಅದನ್ನು ಕದಿಯಬೇಕೆಂದು ಕೊಂಡರು.

ಶಿರಸಿಗೆ ಶ್ರೀ ಮಾರಿಕಾಂಬೆಯ ಆಗಮನ ದೇವಿಯ ಜಾತ್ರೆ ಮುಗಿದಾಕ್ಷಣ ದೇವಿಯ ವಿಗ್ರಹದ ಅಂಗಾಂಗಗಳನ್ನು ಬೇರೆ ಮಾಡಿ ಪೆಟ್ಟಿಗೆಯೊಂದರಲ್ಲಿ ದೇವಿಯ ವಿಗ್ರಹವನಿಟ್ಟು. ಮತ್ತೊಂದು ಪೆಟ್ಟಿಗೆಯಲ್ಲಿ ದೇವಿಯ ಆಭರಣಗಳನ್ನು ಇಟ್ಟು ಇವೆರಡನ್ನೂ ಬೇರೆ ಬೇರೆ ಜಾಗದಲ್ಲಿ ಭದ್ರವಾಗಿ ಇಡಲಾಗುತ್ತಿತ್ತು. ಇದನ್ನು ಅರಿತ ಯುವಕರು ತಮ್ಮಲ್ಲೇ ಮಾತನಾಡಿಕೊಂಡು ರಾತ್ರಿ ದೇವಿಯ ಆಭರಣದ ಪೆಟ್ಟಿಗೆಯನ್ನು ಕದ್ದು ತಂದರು. ಆದರೆ ಹಿಂದಿನ ದಿನ ಹೊಸ ಮಾಕ್ತೇಸರರು ಆಭರಣದ ಪೆಟ್ಟಿಗೆಯನ್ನು ತಮಗೆ ಅರಿಯದೆ ಅದಲು ಬದಲು ಜಾಗದಲ್ಲಿ ಇರಿಸಿದ್ದರು.

ಇದನ್ನು ಅರಿಯದ ಯುವಕರು ಆಭರಣವಿದ್ದ ಪೆಟ್ಟಿಗೆ ಬಿಟ್ಟು ದೇವಿಯಿದ್ದ ಪೆಟ್ಟಿಗೆಯನ್ನು ಕಳ್ಳತನ ಮಾಡಿದ್ದರು. ಬೆಳಗಿನ ಜಾವ ಆಭರಣ ಪೆಟ್ಟಿಗೆ ಎಂದು ಕದ್ದ ಪೆಟ್ಟಿಗೆಯನ್ನು ಶಿರಸಿಗೆ ತಂದರು. ಆಗ ಶಿರಸಿ ಕಾಡಿನಂತಿತ್ತು. ಶಿರಸಿಯ ಈಗಿನ ದೇವಿಕೆರೆಯ (ಈ ದೇವಿ ವಿಗ್ರಹ ಕೆರೆಯಲ್ಲಿ ಸಿಕ್ಕಿದಕ್ಕೆ ಅದಕ್ಕೇ ದೇವಿಕೆರೆ ಎಂದು ಹೆಸರು) ತಟಿಯಲ್ಲಿ ಕೂತು ಆಭರಣದ ಪೆಟ್ಟಿಗೆಯನ್ನು ತೆಗೆದಾಗ ಅವರಿಗೆ ದೇವಿಯ ವಿಗ್ರಹ ಕಾಣಿಸುತ್ತೇ ಇದನ್ನು ಕಂಡ ಒಂದು ಕ್ಷಣ ಬೆಚ್ಚಿಬೀಳ್ತಾರೆ.

Bedara Vesha

ಬೇಡರ ವೇಷ

ಅಷ್ಟರಲ್ಲಿ ಜನರ ಬರುವಂತೆ ಭಾಸವಾಗಿ ದೇವಿಯ ವಿಗ್ರಹವನ್ನು ಅಲ್ಲೇ ಬಿಟ್ಟು ನಾಲ್ಕು ಮಂದಿ ದಿಕ್ಕಾಪಾಲಾದರು. ಬಳಿಕ ನಾಡಿಗೇರ್ ಎಂಬುವವರು ಆಗ ಶಿರಸಿ ಆಳ್ವಿಕೆ ಮಾಡುತ್ತಿದ್ದ ಸೋದೆಯ ರಾಜರಲ್ಲಿ ಈ ವಿಷಯವನ್ನು ಮುಟ್ಟಿಸಿದರು. ಈ ಘಟನೆ ನಡೆದ ಮೂರು ದಿನಗಳ ಹಿಂದೆ ಅಸಾದಿ ಬಸವ ಎಂಬವರು ರಾಜರಲ್ಲಿ ದೇವಿ ತಾನಾಗಿ ಶಿರಸಿಗೆ ಬರುತ್ತಾಳೆ. ಅವಳನ್ನು ಅಲ್ಲಿ ಪ್ರತಿಷ್ಠಾಪನೆ ಮಾಡಬೇಕಂತೆ ಎಂದು ತನ್ನ ಕನಸಿನಲ್ಲಿ ಪದೇ ಪದೇ ಬಂದು ದೇವಿ ಹೇಳುತ್ತಿದ್ದಾಳೆ ಎಂದು ಹೇಳಿದ್ದು ರಾಜರಿಗೆ ನೆನಪಾಯಿತು. ಅದರಂತೆಯೇ ಸೋದೆ ರಾಜರ ಸಮಕ್ಷಮದಲ್ಲಿ ಈಗಿನ ನಮ್ಮ ಶಿರಸಿಯ ಗ್ರಾಮ ದೇವತೆ ಶ್ರೀ ಮಾರಿಕಾಂಬೆಯ ಪ್ರತಿಷ್ಟಾಪನೆ ಮಾಡಿದ್ರು.

ಇದಾದ ಬಳಿಕ ಆ ನಾಲ್ವರು ಯುವಕರಲ್ಲಿ ಓರ್ವ ಕಳ್ಳನಾಗುತ್ತಾನೆ. ಆತನೇ ಬೇಡರ ಭರಮ. ಈತ ಸೋದೆಯ ಕಡೆಗೆ ಓಡಿ ಹೋಗಿರುತ್ತಾನೆ. ಅಲ್ಲಿಯ ಜನರ ಕಷ್ಟಗಳನ್ನು ಕಂಡು ಮತ್ತೆ ಮನ ಕರಗಿ ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಮತ್ತೆ ಸಿರಿವಂತರನ್ನು ಕೊಳ್ಳೆ ಹೊಡೆಯಲು ಮುಂದಾಗುತ್ತಾನೆ. ಯಾರ ಕೈಗೂ ಸಿಗದ ಬೇಡರ ಭರಮ ಸೋದೆಯ ಮಹಾರಾಜರ ಬೊಕ್ಕಸದಿಂದಲೂ ಹಣ ಕೊಳ್ಳೆ ಹೊಡೆದು ಬಡವರಿಗೆ ಹಂಚುತ್ತಾನೆ.

ಇದೇ ರೀತಿ ಸಿರಿಮಂತರನ್ನು ದೋಚಿತ್ತಿದ್ದ ಬೇಡರ ಭರಮನ ಕಾಟ ಹೆಚ್ಚಾಗುತ್ತೆ. ಇದು ಮಹಾರಾಜರಿಗೆ ತಲೆ ನೋವಾಗಿ ಪರಿಣಮಿಸುತ್ತೆ. ಆಗ ಮಹಾರಾಜರು ಅವನಿಗಾಗಿ ಗೂಢಚಾರರನ್ನು ನೇಮಿಸುತ್ತಾರೆ. ಬೇಡರ ಭರಮನು ಊರ ಹೊರಗಿನ ಕಾಡಲ್ಲಿ ಒಬ್ಬ ಮದುಕಮ್ಮನ ಮನೆಯಲ್ಲಿ ಆಶ್ರಯ ಪಡೆದಿರುತ್ತಾನೆ. ಅಜ್ಜಿಗೆ ಕಳ್ಳತನ ಮಾಡಿದ ಹಣವನ್ನು ನೀಡಿ ಊಟಕ್ಕಾಗಿ ವ್ಯವಸ್ಥೆ ಮಾಡಿಕೊಂಡಿರುತ್ತಾನೆ. ಇದನ್ನು ಗೂಢಚಾರರಿಂದ ಅರಿತ ಮಹಾರಾಜರು ಅಜ್ಜಿಗೆ ಹಣದ ಆಸೆ ತೋರಿಸಿ ಬೇಡರ ಭರಮ ಮನೆಗೆ ಊಟಕ್ಕೆ ಬಂದರೆ ಆತನಿಗೆ ಮತ್ತು ಬರುವ ಮದ್ದಿನ ಪುಡಿಯನ್ನು ಅವನ ಆಹಾರದಲ್ಲಿ ಹಾಕುವಂತೆ ಹೇಳುತ್ತಾರೆ. ಇದರಂತೆಗೆ ಬೇಡರ ಭರಮ ಆಹಾರ ಸೇವಿಸಿ ಎಚ್ಚರ ತಪ್ಪುತ್ತಾನೆ.

ಮುದುಕಿಯ ಹಣದ ಆಸೆಗೆ ಬೇಡನ ರೌದ್ರ ರೂಪ ವಾಯ್ತು ಬೇಡರ ವೇಷ ಬಳಿಕ ಸೈನಿಕರು ಬೇಡನನ್ನು ಹಗ್ಗದಿಂದ ಕಟ್ಟಿ ರಾಜನ ಬಳಿ ಎಳೆದುಕೊಂಡು ಹೋಗುತ್ತಾರೆ. ರಾಜ ಬೇಡನಿಗೆ ಘಾಸಿ ಶಿಕ್ಷೆ ವಿಧಿಸುತ್ತಾನೆ. ಅದರಂತೆ ತಮಟೆಯೊಂದಿಗೆ ಊರಿನಲ್ಲಿ ಬೇಡರ ಸಿಕ್ಕಿಬಿದ್ದ ವಿಷಯ ಸಾರಲಾಗುತ್ತೆ. “ಸಿಕ್ಕಿಬಿದ್ದ ಕಳ್ಳ ಬೇಡರ ಭರಮನಿಗೆ ಘಾಸಿ ಹಾಕ್ತಾರೆ. ಎಲ್ಲರೂ ನೋಡ್ರಪ್ಪೋ ಬನ್ನಿ ಬನ್ನಿ” ಎಂದು ಜನರನ್ನು ಕರೆಯುತ್ತಾರೆ. ಹೀಗೆ ಎಳೆದೊಯ್ಯುವಾಗ ತನ್ನನ್ನು ಬೇಡ ಭರಮ ಕೊಂದೇ ಬಿಟ್ಟರೆ ಎಂಬ ಭಯದಲ್ಲಿ ಆ ಮುದುಕಿಯು ಅವನನ್ನು ಬಿಡಬೇಡ್ರಪ್ಪೋ ಕೊಂದು ಹಾಕಿ ಎಂದು ಬಾಯಿ ಬಾಯಿ ಬಡಿದು ಕೊಂಡು ಕೂಗಲಾರಂಭಿಸುತ್ತಾಳೆ.

ಅದನ್ನು ಕಂಡಿದ್ದೆ.. ಬೇಡರ ಭರಮನು ರೌದ್ರ ರೂಪದಿ ವೀರಾವೇಶದಿಂದ ಸೈನಿಕರ ಬಳಿ ಇದ್ದ ಖಡ್ಗ ಹಿಡಿದು ನನಗೆ ಮೋಸ ಮಾಡಿ ಹಿಡಿದು ಕೊಡ್ತೀಯಾ ನಿನ್ನನ್ನು ಬಿಡಲಾರೆ ಕೊಂದೇ ಹಾಕುವೆ ಎಂದು ಆವೇಶದಲ್ಲಿ ಸೈನಿಕರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತ ಮುದುಕಿಯ ಕಡೆ ಹೋಗಲಾರಂಭಿಸುತ್ತಾನೆ. ಈ ಸನ್ನಿವೇಶವನ್ನೇ ಬೇಡರ ವೇಷವೆಂದು ಆಚರಿಸಲಾಗುವುದು. ತನ್ನ ಜೀವನದ ಹಂಗು ತೊರೆದು ಬಡ ಜನರಿಗೆ ಸಹಾಯ ಮಾಡುತ್ತಿದ್ದ ಮತ್ತು ತಿಳಿದೋ ತಿಳಿಯದೆಯೋ ಶ್ರೀ ಮಾರಿಕಾಂಬೆಯನ್ನು ಶಿರಸಿಗೆ ತಂದುಕೊಟ್ಟ ಬೇಡರ ಭರಮನ ನೆನಪಿಗಾಗಿ ಅಂದಿನಿಂದ ಇಂದಿನವರಿಗೂ ಬೇಡರ ವೇಷ ಮಾಡಲಾಗುತ್ತೆ. ಜಗತ್ತಿನಲ್ಲೇ ಬೇರೆಲ್ಲೂ ಕಾಣದ ವಿಶಿಷ್ಟ ಅದ್ಭುತವಾದ ಜಾನಪದ ಕಲೆ ಇದಾಗಿದೆ.

ಇದನ್ನೂ ಓದಿ: ಕೊರೊನಾ ಭೀತಿ ನಡುವೆಯೂ ಕೂಲಹಳ್ಳಿಯಲ್ಲಿ ಅದ್ದೂರಿ ಜಾತ್ರೆ: ರಥೋತ್ಸವದ ಸೊಬಗನ್ನು ಕಣ್ತುಂಬಿಕೊಂಡ ಭಕ್ತಸಾಗರ

Published On - 10:36 am, Sat, 27 March 21

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ