RCB IPL Victory Stampede: ಕಾಲ್ತುಳಿತ ಪ್ರಕರಣದ ತನಿಖೆ ಮ್ಯಾಜಿಸ್ಟ್ರೇಟ್ ಹೆಗಲಿಗೆ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ವಿಜಯೋತ್ಸವದ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದಾರೆ ಮತ್ತು 47 ಜನರು ಗಾಯಗೊಂಡಿದ್ದಾರೆ. ಮುಖ್ಯಮಂತ್ರಿಗಳು ದುರಂತಕ್ಕೆ ಸಂತಾಪ ವ್ಯಕ್ತಪಡಿಸಿ, 10 ಲಕ್ಷ ರೂಪಾಯಿ ಪರಿಹಾರ ಮತ್ತು ಉಚಿತ ಚಿಕಿತ್ಸೆಯನ್ನು ಘೋಷಿಸಿದ್ದಾರೆ. ಪ್ರಕರಣದ ತನಿಖೆಯನ್ನು ಸರ್ಕಾರ ಮ್ಯಾಜಿಸ್ಟ್ರೇಟ್ಗೆ ನೀಡಿದೆ.

ಬೆಂಗಳೂರು, ಜೂನ್ 04: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ವಿಜಯೋತ್ಸವದ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದಾರೆ ಮತ್ತು 47 ಜನರು ಗಾಯಗೊಂಡಿದ್ದಾರೆ. ಆರ್ಸಿಬಿ (RCB) ವಿಜಯ ಸಂಭ್ರಮಾಚರಣೆ ವೇಳೆ ಸಂಭವಿಸಿದ ಈ ಕಾಲ್ತುಳಿತ ಪ್ರಕರಣವನ್ನು ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ನೀಡಿ, ಆದೇಶ ಹೊರಡಸಿದೆ. ಪ್ರಕರಣದ ವಿಚಾರಣಾಧಿಕಾರಿಯಾಗಿ ಜಿಲ್ಲಾಧಿಕಾರಿ ಜಗದೀಶ್.ಜಿ ಅವರನ್ನು ಸರ್ಕಾರ ನೇಮಕ ಮಾಡಿದೆ.
ಆದೇಶ ಪತ್ರದಲ್ಲಿ ಏನಿದೆ?
“ಆರ್ಸಿಬಿ ತಂಡದ ವಿಜಯೋತ್ಸವದ ಅಭಿನಂದನಾ ಸಮಾರಂಭವು ನಡೆಯುವ ಸಂದರ್ಭದಲ್ಲಿ ವಿಧಾನಸೌಧದ ಮುಂಭಾಗ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾವಿರಾರು ಸಂಖ್ಯೆಯಲ್ಲಿ ಏಕಾಏಕಿ ಕ್ರಿಕೆಟ್ ಅಭಿಮಾನಿಗಳು ಜಮಾಯಿಸಿದ್ದರು. ಈ ಕಾರ್ಯಕ್ರಮವು ಅಲ್ಪ ಕಾಲದಲ್ಲಿ ನಿರ್ಧರಿತವಾಗಿದ್ದರಿಂದ, ತಕ್ಷಣಕ್ಕೆ ಸಾಧ್ಯವಾದ ಎಲ್ಲ ಬಂದೋಬಸ್ತ್ ವ್ಯವಸ್ಥೆಗಳನ್ನು ಏರ್ಪಡಿಸಲಾಗಿತ್ತು. ಆದರೂ, ಏಕಾಏಕಿ ಸಾವಿರಾರು ಅಭಿಮಾನಿಗಳು ಸೇರಿದ್ದರಿಂದ ಮಧ್ಯಾಹ್ನ 3.30 ಗಂಟೆಯಿಂದ 4:30 ಗಂಟೆಯ ಸಮಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಒಳಗೆ ನುಗ್ಗುವಾಗ ಬ್ಯಾರಿಕೇಡ್ ಮುರಿದು ಒಬ್ಬರ ಮೇಲೆ ಒಬ್ಬರು ಬಿದ್ದು ಉಂಟಾದ ನೂಕು ನುಗ್ಗಲಿನಿಂದ ಕಾಲ್ತುಳಿತ ಉಂಟಾಗಿದೆ. ಈ ಘಟನೆಯಲ್ಲಿ 11 ಮಂದಿ ಮೃತರಾಗಿದ್ದಾರೆ. 47 ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.”
“ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತ ಹಾಗೂ ಮೃತಪಟ್ಟರ ಸಾವಿಗೆ ಕಾರಣಗಳು, ಘಟನಾವಳಿಗಳ ಸರಣಿ ಹಾಗೂ ಸನ್ನಿವೇಶಗಳ ಬಗ್ಗೆ ಮತ್ತು ಈ ಪ್ರಕರಣದಲ್ಲಿ ಲೋಪ ಉಂಟಾಗಿದ್ದಲ್ಲಿ ಉಂಟಾಗಿರಬಹುದಾದ ಲೋಪಗಳ ಕುರಿತು, ಈ ಲೋಪಕ್ಕೆ ಕಾರಣರಾದವರ ಬಗ್ಗೆ ಹಾಗೂ ನಿರ್ಲಕ್ಷ್ಯತೆಯಿಂದ ಉಂಟಾಗಿದೆಯೇ ಎಂಬ ಬಗ್ಗೆ ಸಮಗ್ರವಾಗಿ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಲು ಸರ್ಕಾರ ನಿರ್ಧರಿಸಿದೆ” ಎಂದು ಆದೇಶ ಪತ್ರದಲ್ಲಿ ಉಲ್ಲೇಖವಾಗಿದೆ.
ಮೃತರಿಗೆ 10 ಲಕ್ಷ ಪರಿಹಾರ
ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದಾರೆ. 47 ಜನ ಗಾಯಗೊಂಡಿದ್ದಾರೆ. ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಲಾಗುವುದು. ಮತ್ತು ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ ಎಂದು ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಇದನ್ನೂ ಓದಿ: KSCA ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದುರಂತ ಸಂಭವಿಸಿದೆ: ಸಿಎಂ ಪರೋಕ್ಷ ಹೇಳಿಕೆ
ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ದುರಂತ ಸಂಭವಿಸಿದೆ: ಡಿಸಿಎಂ
ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ 6 ಜನ ಮೃತಪಟ್ಟಿದ್ದಾರೆ. ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಅತಿಹೆಚ್ಚು ಜನರು ಬಂದಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಆಗಲಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ದುರಂತ ಸಂಭವಿಸಿದೆ. ಇದು ಆಗಬಾರದಿತ್ತು, ಆದರೂ ದುರಂತ ನಡೆದುಹೋಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ವರದಿ: ಈರಣ್ಣ ಬಸವ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:34 pm, Wed, 4 June 25








