RCB IPL Victory Stampede: ಐಪಿಎಲ್ ಗೆದ್ದ ಬೇರೆ ತಂಡಗಳೂ ವಿಜಯೋತ್ಸವ ನಡೆಸಿವೆ; ಆದರೆ ಆರ್ಸಿಬಿಗೆ ಯಡವಟ್ಟಾಗಿದ್ದು ಎಲ್ಲಿ? ಯಾರು ಹೊಣೆ?
Reasons for stampede incident during RCB victory celebration: ಆರ್ಸಿಬಿ ತಂಡದ ಐಪಿಎಲ್ ಗೆಲುವಿನ ಸಂಭ್ರಮಾಚರಣೆಗೆಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನೂಕುನುಗ್ಗುಲಾಗಿ ಹಲವರು ಬಲಿಯಾದ ದುರಂತ ಸಂಭವಿಸಿದೆ. ಹತ್ತಕ್ಕೂ ಹೆಚ್ಚು ಜನರು ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆ. ಬೇರೆ ತಂಡಗಳು ಐಪಿಎಲ್ ಗೆದ್ದಾಗ ಸಂಭ್ರಮಾಚರಣೆ ನಡೆಸಿವೆ. ಎಂದೂ ಈ ರೀತಿ ದುರಂತ ಆಗಿದ್ದಿಲ್ಲ. ಆರ್ಸಿಬಿ ವಿಚಾರದಲ್ಲಿ ಯಡವಟ್ಟಾಗಿದ್ದು ಎಲ್ಲಿ?

ಬೆಂಗಳೂರು, ಜೂನ್ 4: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) 18 ವರ್ಷದ ನಂತರ ಚೊಚ್ಚಲ ಐಪಿಎಲ್ ಗೆದ್ದ ಸಂಭ್ರಮ ಇತ್ತು. ಅದಾಗಿ ಒಂದೇ ದಿನದೊಳಗೆ ಆ ಸಂಭ್ರಮವೆಲ್ಲವೂ ನಿಂತು ಬೆಂಗಳೂರಿನಲ್ಲಿ ಸೂತಕ ಛಾಯೆ ಹರಡಿದೆ. ಆರ್ಸಿಬಿ ಗೆಲುವಿನ ಸಂಭ್ರಮಾಚರಣೆಯು ಶೋಕಾಚರಣೆಯಾಗಿ ಮಾರ್ಪಟ್ಟಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಸೆಲಬ್ರೇಶನ್ ಕಾರ್ಯಕ್ರಮದಲ್ಲಿ ನೂಕುನುಗ್ಗಲಿನ ದುರಂತ ಸಂಭವಿಸಿದೆ. ಈ ವರದಿ ಬರೆಯುವ ವೇಳೆಗೆ ಸಾವಿನ ಸಂಖ್ಯೆ 10 ದಾಟಿತ್ತು. ಇನ್ನೂ ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅವರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿರುವುದು ತಿಳಿದುಬಂದಿದೆ.
ಈ ದುರಂತಕ್ಕೆ ಯಾರು ಹೊಣೆ? ಸಾಲು ಸಾಲು ಪ್ರಶ್ನೆಗಳಿಗೆ ಸಿಗಬೇಕಿದೆ ಉತ್ತರ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ವಿಜಯೋತ್ಸವ ಆಚರಣೆಯನ್ನು ಆಯೋಜಿಸಿದ್ದು ಸರ್ಕಾರವೇ. ಫ್ರಾಂಚೈಸಿಗೆ ತಿಳಿಸಿ ಈ ಕಾರ್ಯಕ್ರಮ ನಡೆಸಲಾಯಿತಾ ಗೊತ್ತಿಲ್ಲ. ಆರ್ಸಿಬಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಾರೆ ಎಂದು ಸರ್ಕಾರಕ್ಕೆ ಗೊತ್ತಾಗಲಿಲ್ಲವಾ? ಯಾವ ಮುನ್ನೆಚ್ಚರಿಕೆಯನ್ನೂ ತೆಗೆದುಕೊಳ್ಳದೇ ಕಾರ್ಯಕ್ರಮ ಆಯೋಜಿಸಿದ್ದು ಎದ್ದು ಕಾಣುತ್ತದೆ.
ಇದನ್ನೂ ಓದಿ: Bangalore Stampede: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 10 ಸಾವು
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಹಿಂದೆ ಲೆಕ್ಕವಿಲ್ಲದಷ್ಟು ಪಂದ್ಯಗಳು ನಡೆದಿವೆ. ಜನರು ಕಿಕ್ಕಿರಿದು ಸೇರಿದ್ದಾರೆ. ಆದರೆ, ಎಂದೂ ಈ ರೀತಿ ಭೀಕರ ಎನಿಸುವಂತಹ ದುರಂತ ಸಂಭವಿಸಿದ್ದಿಲ್ಲ.
ಇತರ ಐಪಿಎಲ್ ತಂಡಗಳೂ ವಿಜಯೋತ್ಸವ ನಡೆಸಿವೆ… ಆದರೆ…
ಈ ಹಿಂದೆ ಐಪಿಎಲ್ ಗೆದ್ದ ವಿವಿಧ ತಂಡಗಳು ತಮ್ಮ ನಗರಗಳಲ್ಲಿ ವಿಜಯೋತ್ಸವ ಆಚರಿಸಿರುವುದುಂಟು. ಕೆಕೆಆರ್, ಮುಂಬೈ, ಸಿಎಸ್ಕೆ ಮೊದಲಾದ ತಂಡಗಳ ಸಂಭ್ರಮಾಚರಣೆ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದಿದ್ದವು. ಸಾಮಾನ್ಯವಾಗಿ ಐಪಿಎಲ್ ಗೆದ್ದು ಒಂದೆರಡು ಮೂರು ದಿನಗಳ ಬಳಿಕ ವಿಜಯೋತ್ಸವ ಆಚರಿಸಿವೆ.
ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ; ಕಬ್ಬನ್ ಪಾರ್ಕ್, ವಿಧಾನಸೌಧ ಮೆಟ್ರೋ ಸ್ಟೇಷನ್ ಬಂದ್
ಆದರೆ, ಆರ್ಸಿಬಿ ವಿಚಾರದಲ್ಲಿ ಯಾಕೆ ಆತುರ ಮಾಡಲಾಯಿತೋ ಗೊತ್ತಿಲ್ಲ. ಈ ಆತುರದ ಕ್ರಮದಲ್ಲಿ ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿಯ ಪಾತ್ರ ಇಲ್ಲ. ರೋಡ್ಶೋ ನಡೆಸಲು ಮಾತ್ರವೇ ಫ್ರಾಂಚೈಸಿ ನಿರ್ಧರಿಸಿತು. ಆದರೆ ಸರ್ಕಾರವೇ ಉತ್ಸಾಹದಲ್ಲಿ ಈ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಿದೆ. ಈಗಷ್ಟೇ ಐಪಿಎಲ್ ಗೆದ್ದ ಸಂಭ್ರಮದಲ್ಲಿರುವ ಅಭಿಮಾನಿಗಳನ್ನು ನಿಯಂತ್ರಿಸುವುದು ಸಾಮಾನ್ಯದ ಕೆಲಸವಲ್ಲ. ಆ ಕಾರ್ಯಕ್ರಮವನ್ನು ವ್ಯವಸ್ಥಿತ ರೀತಿಯಲ್ಲಿ ಆಯೋಜಿಸದೇ ಇರುವುದು ಘೋರ ದುರಂತಕ್ಕೆ ಎಡೆ ಮಾಡಿಕೊಟ್ಟಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
