ಓಡಿಬಂದು ಮುಳ್ಳಿನ ಪೊದೆಗೆ ಹಾರ್ತಾರೆ, ಆದ್ರೂ ಏನಾಗಲ್ಲ! ಚಾಮರಾಜನಗರ ಗೂಳಿಪುರದಲ್ಲಿ ವಿಶೇಷ ಹಬ್ಬ, ವಿಡಿಯೋ ಇಲ್ಲಿದೆ ನೋಡಿ
ಒಂದೆಡೆ ತಮಟೆ ಬಾರಿಸುವವರು, ಮತ್ತೊಂದೆಡೆ ಸಾಲಾಗಿ ಓಡಿಬಂದು ಮುಳ್ಳಿನ ಪೊದೆಗಳಿಗೆ ಜಿಗಿಯುವ ಜನ! ಈ ದೃಶ್ಯ ಕಂಡುಬಂದಿದ್ದು, ಚಾಮರಾಜನಗರ ತಾಲೂಕಿನ ಗೂಳಿಪುರ ಗ್ರಾಮದಲ್ಲಿ. ಗ್ರಾಮ ದೇವತೆ ಬಿಸಿಲು ಮಾರಮ್ಮ ಜಾತ್ರೆ ಸಂದರ್ಭ ಈ ಗ್ರಾಮದಲ್ಲಿ ವಿಶಿಷ್ಟ ಹಬ್ಬ ಆಚರಣೆ ಮಾಡಲಾಗುತ್ತದೆ. ಇದು ಪೀಳಿಗೆಯಿಂದ ಪೀಳಿಗೆ ಮುಂದುವರಿಯುತ್ತಿದೆ. ವಿಡಿಯೋ ಇಲ್ಲಿದೆ.
ಚಾಮರಾಜನಗರ, ಮಾರ್ಚ್ 3: ಚಾಮರಾಜನಗರ ತಾಲೂಕಿನ ಗೂಳಿಪುರ ಗ್ರಾಮದಲ್ಲಿ ಗ್ರಾಮ ದೇವತೆ ಬಿಸಿಲು ಮಾರಮ್ಮ ಜಾತ್ರೆ ಸಂಭ್ರಮ ಸಡಗರದಿಂದ ನಡೆಯಿತು. ಈ ಜಾತ್ರೆಯ ಪ್ರಮುಖ ವಿಶೇಷತೆ ಎಂದರೆ ಭಕ್ತರು ಮುಳ್ಳಿನ ಪೊದೆಗಳ ಮೇಲೆ ಹಾರುವುದು. ಈ ವಿಶೇಷ ಆಚರಣೆ ಪ್ರಕಾರ, ದೇವಿಗೆ ಪೂಜೆ ಸಲ್ಲಿಸಿದ ಬಳಿಕ ತಮಟೆ ನಾದದ ನಡುವೆ ಭಕ್ತರು ವೇಗವಾಗಿ ಓಡಿಬಂದು ಮುಳ್ಳಿನ ಪೊದೆಗಳ ಮೇಲೆ ಹಾರುತ್ತಾರೆ. ಆಶ್ಚರ್ಯಕರ ಸಂಗತಿ ಏನೆಂದರೆ, ಹೀಗೆ ಹಾರಿದರೂ ಯಾರಿಗೂ ಯಾವುದೇ ಗಾಯವಾಗುವುದಿಲ್ಲ ಎಂಬುದು ಗ್ರಾಮಸ್ಥರ ನಂಬಿಕೆ.
ಈ ರೀತಿಯ ಆಚರಣೆ ಮಾಡಿದರೆ ಗ್ರಾಮದೇವತೆ ಸಂತೃಪ್ತರಾಗುತ್ತಾಳೆ ಎಂಬ ನಂಬಿಕೆ ಹಾಗೂ ಭಕ್ತಿಭಾವದಿಂದ ವರ್ಷಂಪ್ರತಿ ಗ್ರಾಮಸ್ಥರು ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಮಾರಿಯಮ್ಮ ದೇವಿಗೆ ಬೇವು, ಹೂವು ಹಾಗೂ ತಂಬಿಟ್ಟಿನ ಆರತಿ ಸಮರ್ಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಜಾತ್ರೆ ನೋಡಲು ಅಕ್ಕಪಕ್ಕದ ನೂರಾರು ಗ್ರಾಮಗಳಿಂದ ಜನರು ಆಗಮಿಸಿದ್ದರು. ಮುಳ್ಳಿನ ಪೊದೆಗಳಿಗೆ ಹಾರುವ ವಿಶಿಷ್ಟ ದೃಶ್ಯವನ್ನು ಕಣ್ತುಂಬಿಕೊಂಡ ಭಕ್ತರು ದೇವಿಗೆ ಪ್ರಾರ್ಥನೆ ಸಲ್ಲಿಸಿದರು.
