RCB IPL Victory Stampede: ಕಾಲ್ತುಳಿತದಲ್ಲಿ 10 ಮಂದಿ ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಗೆಲುವಿನ ಸಂಭ್ರಮಾಚರಣೆ ವೀಕ್ಷಿಸಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ವೇಳೆ ಭೀಕರ ಕಾಲ್ತುಳಿತ ಸಂಭವಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಈ ಘಟನೆಯಲ್ಲಿ 10 ಜನರು ಮೃತಪಟ್ಟಿದ್ದಾರೆ ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ. ಈ ದುರಂತ ಘಟನೆಯಿಂದಾಗಿ ಬೆಂಗಳೂರು ನಗರ ಆಘಾತಕ್ಕೀಡಾಗಿದೆ.
ಬೆಂಗಳೂರು, ಜೂನ್ 04: 18ನೇ ಆವೃತ್ತಿಯ ಐಪಿಎಲ್ (IPL) ಫೈನಲ್ ಗೆದ್ದು ಚಾಂಪಿಯನ್ ಆಗಿರುವ ಸಂಭ್ರಮದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರರು ನಗರಕ್ಕೆ ಬಂದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಚರಣೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ವೀಕ್ಷಿಸಲು ಬಂದಿದ್ದ 10 ಮಂದಿ ಆರ್ಸಿಬಿ ಅಭಿಮಾನಿಗಳು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ.
ಕಾಲ್ತುಳಿತದಲ್ಲಿ 50ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಆರಕ್ಕೂ ಹೆಚ್ಚು ಆರ್ಸಿಬಿ ಅಭಿಮಾನಿಗಳ ಸ್ಥಿತಿ ಗಂಭೀರವಾಗಿದೆ.
ಕಾಲ್ತುಳಿತದಲ್ಲಿ ಅಸ್ವಸ್ಥಗೊಂಡವರನ್ನು ಬೆಂಗಳೂರಿನ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಲ್ತುಳಿತದಲ್ಲಿ ಬೆಂಗಳೂರಿನ ಯಲಹಂಕದ ಓರ್ವ ಮಗು ಮೃತಪಟ್ಟಿದೆ. ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಮಗುವಿನ ಮೃತದೇಹವಿದೆ.
ಅಸ್ವಸ್ಥಗೊಂಡ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದ ಓರ್ವ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಬೌರಿಂಗ್ ಆಸ್ಪತ್ರೆಯಲ್ಲಿ ಮೂವರು ಮಹಿಳೆಯರು, ಮೂವರು ಪುರುಷರು ಸೇರಿದಂತೆ ಆರು ಮಂದಿ ಅಭಿಮಾನಿಗಳ ಮೃತದೇಹಗಳಿವೆ.
ಮೃತರ ಸಂಬಂಧಿಕರ ಆಕ್ರಂದನ ಆಸ್ಪತ್ರೆಗಳ ಎದುರು ಮುಗಿಲು ಮುಟ್ಟಿದೆ.