- TV9 Kannada Kannada News Photos Davangere Duggamma Jatre: International Wrestling Spectacle and Cultural Feast
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ದಾವಣಗೆರೆ ಕೆಂಪು ಮಣ್ಣಿನ ಕುಸ್ತಿ: ಬೆಣ್ಣೆನಗರಿಯಲ್ಲಿ ಮಿಂಚಿದ ವಿದೇಶಿ ಪೈಲ್ವಾನ್ಗಳು
ದಾವಣಗೆರೆಯ ದುಗ್ಗಮ್ಮ ಜಾತ್ರೆಯು ಭಕ್ತಿ, ಪರಂಪರೆ ಮತ್ತು ಶೌರ್ಯದ ಪ್ರತೀಕ. ಈ ಬಾರಿಯ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯು ಜನಮನ ಸೆಳೆಯಿತು. ದೇಶ-ವಿದೇಶಗಳ ಪೈಲ್ವಾನ್‌ರು ಭಾಗವಹಿಸಿ ರೋಚಕ ಸೆಣಸಾಟ ನಡೆಸಿದರು. ಇರಾನ್, ಮಹಾರಾಷ್ಟ್ರದ ನಡುವಿನ ಅಂತಿಮ ಪಂದ್ಯ ಡ್ರಾ ಆಯಿತು. ಈ ಜಾತ್ರೆಯು ದೇಸಿ ಹಾಗೂ ಜಾಗತಿಕ ಕುಸ್ತಿ ಕಣವಾಗಿ ಖ್ಯಾತಿ ಗಳಿಸಿದೆ. ಫೋಟೋಸ್ ಇಲ್ಲಿವೆ.
Updated on: Mar 02, 2026 | 5:10 PM

ದಾವಣಗೆರೆಯ ದುಗ್ಗಮ್ಮ ಜಾತ್ರೆ ಭಕ್ತಿ, ಪರಂಪರೆ ಮತ್ತು ಶೌರ್ಯದ ಸಂಗಮ. ಇನ್ನು ಜಾತ್ರೆ ಪ್ರಯುಕ್ತ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿ ಎಲ್ಲರ ಗಮನ ಸೆಳೆಯಿತು. ಪೈಲ್ವಾನರ ಬಿಗಿಪಟ್ಟು ನೋಡುಗರ ಎದೆ ಝಲ್ ಎನಿಸುವಂತಿತ್ತು. ದೇಶ-ವಿದೇಶಗಳಿಂದ ಆಗಮಿಸಿದ ಪೈಲ್ವಾನರ ದಂಗಲ್ ರೋಚಕವಾಗಿತ್ತು.

ದಾವಣಗೆರೆ ಎಂದರೆ ದೇಸಿ ಕುಸ್ತಿಗೆ ಹೆಸರುವಾಸಿ. ಇಲ್ಲಿನ ಗರಡಿಗಳಲ್ಲಿ ಪಳಗಿರುವ ಪೈಲ್ವಾನ್‌ರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ಉದಾಹರಣೆಗಳಿವೆ. ಅದರಂತೆ ದಾವಣಗೆರೆಯಲ್ಲಿ ನಡೆಯುವ ಕೆಂಪು ಮಣ್ಣಿನ ಕುಸ್ತಿ ಅಖಾಡ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ದುರ್ಗಾಂಭಿಕ ದೇವಿ ಜಾತ್ರೆ ಪ್ರಯುಕ್ತ ಮೂರು ದಿನಗಳ ಕಾಲ ಜರಗುವ ಕುಸ್ತಿ ಅಖಾಡದಲ್ಲಿ ಸೆಣಸಾಟ ನಡೆಸಲು ದೇಶ-ವಿದೇಶಗಳಿಂದ ಪೈಲ್ವಾನರು ಆಗಮಿಸುತ್ತಾರೆ.

ಈ ಬಾರಿ ಬೀರಲಿಂಗೇಶ್ವರ ಕುಸ್ತಿ ಅಖಾಡ ತುಸು ಜೋರಾಗಿದೆ. ಎಲ್ಲಿ ನೋಡಿದರೂ ಕಟ್ಟು ಮಸ್ತ್ ಆದ ಪೈಲ್ವಾನರು ಕಾಣಸಿಗುತ್ತಿದ್ದರು. ಅಖಾಡದಲ್ಲಿ ಜಂಗ್ಗಿ ಕುಸ್ತಿ ಮಾಡಲು ತಮ್ಮ ಹೆಸರು ನೊಂದಾಯಿಸುತ್ತಿದ್ದರು. ಈ ಅಖಾಡದಲ್ಲಿ ಹೆಸರು ಮಾಡಲು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಪೈಲ್ವಾನರು ಆಗಮಿಸಿದ್ದು ವಿಶೇಷ.

ಹರಿಯಾಣದಿಂದ ಶೇರಾ ಗುಜ್ಜರ್, ವಿಕ್ಕಿ , ಪಂಜಾಬ್ನಿಂದ ಶಾನ್ ವೀರ್ ಕೊಹಾಲಿ, ಮಹಾರಾಷ್ಟ್ರದಿಂದ ಶಿವ, ಕಾಲಿಚರಣ್ ಸೋಲಂಕರ್, ವಿಕ್ರಮ್ ಘೋರಪಡೆ, ಯುಪಿಯಿಂದ ಅಭಿ ನಾಯಕ್, ರೋಹಿತ್ ಘೋಜಿ, ಕುಹಲಿಯಿಂದ ಲಕ್ಕಿ, ಮತ್ತು ಕರ್ನಾಟಕದಿಂದ ಸಂಜು ಹಾಗೂ ಗಣೇಶ್ ಪೈಲ್ವಾನ್, ಕಾರ್ತಿಕ್ ಕಾಟೆ ಭಾಗಿಯಾಗಿದ್ದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರಾನ್ನಿಂದ ಜಲಾಲ್ ಹಾಗೂ ಮಿರ್ಜಾ ಪೈಲ್ವಾನ್ ಸೇರಿದಂತೆ ಸೌತ್ ಆಫ್ರಿಕಾದಿಂದ ಒಬ್ಬರು, ಈಜಿಪ್ಟ್ನಿಂದ ಒಬ್ಬರು, ಖಜಕಿಸ್ತಾನ್ನಿಂದ ಇಬ್ಬರು ಪೈಲ್ವಾನರು ಸೆಣಸಾಡಲು ಆಗಮಿಸಿದ್ದು ವಿಶೇಷವಾಗಿತ್ತು. ಕೊನೆಯ ಪಂದ್ಯದಲ್ಲಿ ಇರಾನ್ ಮಿರ್ಜಾ ಹಾಗೂ ಮಹಾರಾಷ್ಟ್ರದ ರವಿರಾಜ್ ಮಧ್ಯೆ ತೀವ್ರ ಪೈಪೋಟಿ ಏರ್ಪಟಿತ್ತು. ಆದರೆ ಸಮಬಲದಲ್ಲಿ ಪಂದ್ಯ ಅಂತ್ಯವಾಯಿತು.

ದಾವಣಗೆರೆ ದುರ್ಗಾಂಭಿಕಾ ದೇವಿ ಜಾತ್ರೆಯ ಜಂಗಿ ಕುಸ್ತಿ ಇಷ್ಟು ದಿನ ರಾಷ್ಟ್ರೀಯ ಕುಸ್ತಿಯಾಗಿತ್ತು. ಆದರೆ ಇದೀಗ ಅಂತಾರಾಷ್ಟ್ರೀಯ ಕುಸ್ತಿ ಕಣವಾಗಿ ಮಾರ್ಪಟ್ಟಿದೆ. ಕಳೆದ ಮೂರು ವರ್ಷಗಳಿಂದ ಫೈನಲ್ ಪಂದ್ಯ ಮಾತ್ರ ಡ್ರಾ ಆಗುತ್ತಿದ್ದು, ಬೆಳ್ಳಿ ಗದೆಯನ್ನು ಯಾರು ತೆಗುಕೊಂಡು ಹೋಗುತ್ತಿಲ್ಲ. ಒಟ್ಟಾರೆ ದಾವಣಗೆರೆಯ ದುಗ್ಗಮ್ಮನ ಜಾತ್ರೆ ಭಕ್ತಿಯ ಜೊತೆ ಶೌರ್ಯಕ್ಕೆ ಸಾಕ್ಷಿಯಾಗಿತ್ತು.

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.
Read More



