Bangalore Stampede: ಕಾಲ್ತುಳಿತಕ್ಕೆ ಸರ್ಕಾರದ ವೈಫಲ್ಯವೇ ಕಾರಣ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ
Bengaluru RCB Victory Celebrations Stampede: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದಾರೆ ಮತ್ತು 47 ಜನರು ಗಾಯಗೊಂಡಿದ್ದಾರೆ. ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರು, ಜೂನ್ 04: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಆರ್‌ಸಿಬಿ ವಿಜಯೋತ್ಸವದ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ (RCB Victory Celebrations Stampede) 11 ಜನರು ಮೃತಪಟ್ಟಿದ್ದಾರೆ ಮತ್ತು 47 ಜನರು ಗಾಯಗೊಂಡಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದು, “ಕರ್ನಾಟಕ ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಯನ್ನು ನಿಭಾಯಿಸುವುದರಲ್ಲಿ ವಿಫಲವಾಗಿದೆ” ಎಂದು ವಾಗ್ದಾಳಿ ಮಾಡಿದ್ದಾರೆ.
“ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 10 ಜನರು ಸಾವನ್ನಪ್ಪಿರುವುದು ಹಾಗೂ ಸುಮಾರು 30 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವುದು ನಿಜಕ್ಕೂ ದುರಂತದ ವಿಷಯ. ಸೂಕ್ತ ವ್ಯವಸ್ಥೆಗಳು, ಯೋಜನೆ ಮತ್ತು ಜನಸಂದಣಿಯ ನಿರ್ವಹಣೆ ಮಾಡದ ಪರಿಣಾಮ ಇಂತಹ ಹೃದಯವಿದ್ರಾವಕ ಘಟನೆ ನಡೆದಿದೆ. ಕರ್ನಾಟಕ ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಯನ್ನು ನಿಭಾಯಿಸುವುದರಲ್ಲಿ ವಿಫಲವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸಂಭ್ರಮಾಚರಣೆಗಳು ನಡೆಯುತ್ತದೆ, ಆದರೆ ರಾಜ್ಯ ಸರ್ಕಾರವು ಸರಿಯಾದ ರೂಪುರೇಷ ಹಾಗೂ ತಯಾರಿ ಮಾಡಿಕೊಳ್ಳದೇ ಇರುವುದು ಇಂತಹ ದುರಂತಕ್ಕೆ ಕಾರಣವಾಗಿದೆ. ತುರ್ತು ಸೇವೆಗಳನ್ನು ನಿಯೋಜಿಸದೆ ಇರುವುದು ಅತ್ಯಂತ ಬೇಜವಾಬ್ದಾರಿ. ಈ ಕೆಟ್ಟ ಘಟನೆಯನ್ನು ತಪ್ಪಿಸಬಹುದಿತ್ತು. ಆದರೆ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ ಮತ್ತು ಹೊಣೆಗಾರಿಕೆಯನ್ನು ಸರ್ಕಾರವೇ ತಗೆದುಕೊಳ್ಳಬೇಕಿದೆ” ಎಂದಿದ್ದಾರೆ.
ದುರಂತದ ಹೊಣೆಯನ್ನು ಸರಕಾರವೇ ಹೊತ್ತುಕೊಳ್ಳಬೇಕು: ಕುಮಾರಸ್ವಾಮಿ
“ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನೂಕುನುಗ್ಗಲುನಿಂದ ಉಂಟಾದ ಕಾಲ್ತುಳಿತಕ್ಕೆ ಹತ್ತಕ್ಕೂ ಹೆಚ್ಚು ಜನರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ” ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
“ಗೆಲುವಿನ ಸಂಭ್ರಮಕ್ಕೆ ಮುನ್ನವೇ ಮುಗ್ಧರ ಜೀವ ನಷ್ಟವಾಗಿರುವುದು ನನಗೆ ಅತೀವ ದುಃಖ ತಂದಿದೆ. ಸರಿಯಾದ ಪೂರ್ವಸಿದ್ಧತೆ ಮಾಡಿಕೊಳ್ಳದೆ, ಯಾವುದೇ ಮುನ್ನೆಚ್ಚರಿಕೆ ವಹಿಸದಿರುವುದೇ ಈ ಮಹಾದುರಂತಕ್ಕೆ ನೇರ ಕಾರಣ. ದುರಂತದ ಹೊಣೆಯನ್ನು ರಾಜ್ಯ ಸರಕಾರವೇ ಹೊತ್ತುಕೊಳ್ಳಬೇಕು. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸುವುದರ ಜತೆಗೆ ಮೃತರ ಕುಟುಂಬಗಳ ನೆರವಿಗೆ ಸರಕಾರ ಕೂಡಲೇ ಧಾವಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಕ್ರೀಡಾಂಗಣ ಹಾಗೂ ವಿಧಾನಸೌಧದ ಬಳಿ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಕ್ರಿಕೆಟ್ ಪ್ರೇಮಿಗಳು ಗಾಬರಿ, ಆತುರಕ್ಕೆ ಒಳಗಾಗದೆ ಕ್ಷೇಮವಾಗಿ ಮನೆ ತಲುಪಬೇಕು ಎಂಬುದು ನನ್ನ ಕಳಕಳಿ. ಪೊಲೀಸರು ಈ ನಿಟ್ಟಿನಲ್ಲಿ ತುರ್ತುಕ್ರಮ ವಹಿಸಿ ಜನರಿಗೆ ನೆರವಾಗಬೇಕು” ಎಂದು ಮನವಿ ಮಾಡಿದ್ದಾರೆ.
ವಿ ಸೋಮಣ್ಣ ಸಂತಾಪ
“ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ದುರ್ಘಟನೆಗೆ ಸಂತಾಪ ಸೂಚಿಸುತ್ತೇನೆ. ಸಂಭ್ರಮಾಚರಣೆಯನ್ನು ಸೂತಕವನ್ನಾಗಿ ಮಾಡಿದ ರಾಜ್ಯ ಸರ್ಕಾರಿ ವ್ಯವಸ್ಥೆಗೆ ಧಿಕ್ಕಾರ. ಕಪ್ ಗೆದ್ದ ಕ್ಷಣಗಳನ್ನು ಸಂಭ್ರಮಿಸಲು ಬಂದಿದ್ದ ಅಭಿಮಾನಿಗಳಿಗೆ ಸರ್ಕಾರದ ವೈಫಲ್ಯ ಸಾವು ನೀಡಿದ್ದು ದುರ್ದೈವ” ಎಂದು ಕೇಂದ್ರ ಸಚಿವ ವಿ ಸೋಮಣ್ಣ ಸಂತಾಪ ಸೂಚಿಸಿದ್ದಾರೆ.
ಸಂಭ್ರಮಾಚರಣೆ ತರಾತುರಿಯಲ್ಲಿ ಇಂದೇ ಮಾಡುವ ಉದ್ದೇಶ ಏನಿತ್ತು: ಆರ್ ಅಶೋಕ್ ಪ್ರಶ್ನೆ
“ಆಟಗಾರರ ಅಭಿನಂದನಾ ಸಮಾರಂಭ, ತೆರೆದ ವಾಹನದ ಮೆರವಣಿಗೆ ಮಾಡುವ ಬಗ್ಗೆ ನಿನ್ನೆ ರಾತ್ರಿಯೇ ನಿರ್ಧರಿಸಲಾಗಿದ್ದರೂ, ಸರ್ಕಾರ, ಗೃಹ ಇಲಾಖೆ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳದೆ ತರಾತುರಿಯಲ್ಲಿ ಇಂದೇ ಮಾಡುವ ಉದ್ದೇಶ ಏನಿತ್ತು?” ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ.
“ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಿಂದ ಇಂದು ಸಂಜೆ ಸಂಭವಿಸಿದ ಸಾವುಗಳು ಸರ್ಕಾರಿ ಪ್ರಾಯೋಜಿತ ಕೊಲೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ನಡುವಿನ ಮುಸುಕಿನ ಗುದ್ದಾಟ ಇಂದು ಕ್ರೆಡಿಟ್ ವಾರ್ ರೂಪ ತಾಳಿದ್ದೇ ಇಂದಿನ ಅವ್ಯವಸ್ಥೆಗೆ ಕಾರಣ ಎನ್ನುವ ಅನುಮಾನುಗಳು ಮೂಡುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: KSCA ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದುರಂತ ಸಂಭವಿಸಿದೆ: ಸಿಎಂ ಪರೋಕ್ಷ ಹೇಳಿಕೆ
“ಸ್ಥಳದಲ್ಲಿದ್ದು ವ್ಯವಸ್ಥೆಯ ಮೇಲುಸ್ತುವಾರಿ ನೋಡಿಕೊಳ್ಳಬೇಕಾದ ಡಿಸಿಎಂ ಹಾಗು ಬೆಂಗಳೂರು ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಅವರು ಫೋಟೋ ತೆಗೆಸಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೋಗುತ್ತಾರೆ. ಕಡೆಯ ಕ್ಷಣದವರೆಗೂ ಮೆರವಣಿಗೆ ಮಾಡಬೇಕೋ ಬೇಡವೋ ಎನ್ನುವ ಸ್ಪಷ್ಟತೆಯೇ ಪೊಲೀಸರಿಗೆ ಇರುವುದಿಲ್ಲ. ಲಕ್ಷಾಂತರ ಜನ ಸೇರುವ ಕ್ರೀಡಾಂಗಣದ ಬಳಿ ಆಂಬುಲೆನ್ಸ್ ವಾಹನಗಳು, ಅಗ್ನಿಶಾಮಕ ವಾಹನ ಸೇರಿದಂತೆ ಯಾವುದೇ ಮುಂಜಾಗ್ರತಾ ವ್ಯವಸ್ಥೆ ಇರುವುದಿಲ್ಲ. ಇದಕ್ಕೆಲ್ಲಾ ಯಾರು ಹೊಣೆ? ತಮ್ಮ ಪ್ರಚಾರದ ತೆವಲಿಗೆ ಅಮಾಯಕ ಸಾರ್ವಜನಿಕರನ್ನ ಬಲಿ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಕಿಂಚಿತ್ತಾದರೂ ಮಾನವೀಯತೆ ಇದ್ದರೆ, ಆತ್ಮಸಾಕ್ಷಿ ಇದ್ದರೆ ಈ ಕೊಡಲೇ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು” ಎಂದು ಒತ್ತಾಯಿಸಿದ್ದಾರೆ.








