ಚಿನ್ನಸ್ವಾಮಿ ದುರಂತಕ್ಕೂ ಮುನ್ನವೇ ಆರ್‌ಸಿಬಿ ಬಳಿ ಇದ್ದ ಟ್ರೋಫಿ ಹಿಂಪಡೆದ ಐಪಿಎಲ್ ಆಡಳಿತ ಮಂಡಳಿ
IPL 2025 Trophy Swap: ಐಪಿಎಲ್ ಚಾಂಪಿಯನ್ ತಂಡಕ್ಕೆ ಮೂಲ ಟ್ರೋಫಿ ನೀಡುವುದಿಲ್ಲ . ಬದಲಾಗಿ, ತದ್ರೂಪಿ ಟ್ರೋಫಿಯನ್ನು ನೀಡಲಾಗುತ್ತದೆ. ಆರ್‌ಸಿಬಿ ತಂಡಕ್ಕೆ ಆರಂಭದಲ್ಲಿ ಮೂಲ ಟ್ರೋಫಿಯನ್ನು ನೀಡಿದ್ದರೂ, ನಂತರ ಅದನ್ನು ಹಿಂಪಡೆದು ತದ್ರೂಪಿ ಟ್ರೋಫಿಯನ್ನು ನೀಡಲಾಗಿದೆ. ಇದು ಆರ್‌ಸಿಬಿಗೆ ಮಾತ್ರವಲ್ಲ. ಪ್ರತಿ ಆವೃತ್ತಿಯಲ್ಲೂ ಚಾಂಪಿಯನ್ ಆಗುವ ತಂಡಕ್ಕೆ ತದ್ರೂಪಿ ಟ್ರೋಫಿಯನ್ನು ಮಾತ್ರ ನೀಡಲಾಗುತ್ತದೆ.

ಐಪಿಎಲ್ 2025 (IPL 2025) ರಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಆರ್‌ಸಿಬಿ (RCB) ಅಂತಿಮವಾಗಿ ಚಾಂಪಿಯನ್ ಪಟ್ಟಕ್ಕೇರಿತು. 17 ವರ್ಷಗಳ ಕಾಲ ಈ ಟ್ರೋಫಿಗಾಗಿ ಶತಪ್ರಯತ್ನ ಮಾಡಿದ್ದ ಆರ್‌ಸಿಬಿ ಅಂತಿಮವಾಗಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸುವ ಮೂಲಕ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಆ ಬಳಿಕ ಟ್ರೋಫಿಯೊಂದಿಗೆ ಇಡೀ ಆರ್‌ಸಿಬಿ ತಂಡ ಬೆಂಗಳೂರಿನಲ್ಲಿ ಮೆರವಣಿಗೆ ನಡೆಸಲು ತಯಾರಿ ನಡೆಸಿತ್ತಾದರೂ ಅದು ಸಾಧ್ಯವಾಗಲಿಲ್ಲ. ಏಕೆಂದರೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಅವಘಡದಲ್ಲಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಆರ್ಸಿಬಿಯ ಎಲ್ಲಾ ಸಂಭ್ರಮಕ್ಕೂ ಬ್ರೇಕ್ ಬಿದ್ದಿತ್ತು. ಇದೀಗ ಆರ್‌ಸಿಬಿಗೆ ನೀಡಿದ್ದ ಟ್ರೋಫಿಯನ್ನು ಹಿಂದಕ್ಕೆ ಪಡೆಯಲಾಗಿದೆ.
ಆದರೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರಂತಕ್ಕೂ ಆರ್‌ಸಿಬಿ ಬಳಿ ಇದ್ದ ಟ್ರೋಫಿಯನ್ನು ಹಿಂಪಡೆಯುವುದಕ್ಕೂ ಯಾವುದೇ ಸಂಬಂಧವಿಲ್ಲ. ಆರ್‌ಸಿಬಿ ಮಾತ್ರವಲ್ಲ ಈ ಹಿಂದೆ ಟ್ರೋಫಿ ಗೆದ್ದಿದ್ದ ಎಲ್ಲಾ ತಂಡಗಳ ಬಳಿಯಿಂದಲೂ ಟ್ರೋಫಿಯನ್ನು ಹಿಂಪಡೆಯಲಾಗಿದೆ. ಇದಕ್ಕೆ ಕಾರಣ ಐಪಿಎಲ್ ನಿಯಮ.
ಮೂಲ ಟ್ರೋಫಿ ತಂಡಕ್ಕೆ ಸೇರಿದ್ದಲ್ಲ
ಐಪಿಎಲ್ ಚಾಂಪಿಯನ್ ಆಗುವ ತಂಡಕ್ಕೆ ಮೂಲ ಟ್ರೋಫಿಯನ್ನು ನೀಡಲಾಗುವುದಿಲ್ಲ. ವಿಜೇತ ತಂಡಗಳಿಗೆ ತದ್ರೂಪಿ ಟ್ರೋಫಿಯನ್ನು ನೀಡಲಾಗುತ್ತದೆ. ಪ್ರಶಸ್ತಿ ಸಮಾರಂಭದಲ್ಲಿ ಆರ್‌ಸಿಬಿಗೆ ಮೂಲ ಐಪಿಎಲ್ ಟ್ರೋಫಿಯನ್ನು ನೀಡಲಾಯಿತ್ತಾದರೂ ಆ ಬಳಿಕ ಮೂಲ ಟ್ರೋಫಿಯನ್ನು ಹಿಂಪಡೆದು, ಆ ಟ್ರೋಫಿಯನ್ನೇ ಹೊಲುವ ತದ್ರೂಪಿ ಟ್ರೋಫಿಯನ್ನು ಆರ್‌ಸಿಬಿಗೆ ನೀಡಲಾಗಿದೆ. ಆರ್‌ಸಿಬಿ ತಂಡ ಆ ಟ್ರೋಫಿಯನ್ನು ತೆಗೆದುಕೊಂಡು ಬೆಂಗಳೂರಿಗೆ ಬಂದಿಳಿದಿದೆ.
ಆರ್‌ಸಿಬಿ ಸಂಭ್ರಮಾಚರಣೆ ದುರಂತ; ನಮ್ಮ ಪಾತ್ರವಿಲ್ಲ ಎಂದ ಐಪಿಎಲ್, ಬಿಸಿಸಿಐ
ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಅವಘಡ
ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿದ್ದ ಆರ್‌ಸಿಬಿ, ಅಭಿಮಾನಿಗಳನ್ನು ಇನ್ನಷ್ಟು ರಂಜಿಸಲು ಯೋಜನೆ ಹಾಕಿಕೊಂಡಿತ್ತು. ಆದರೆ ಭದ್ರತಾ ವೈಫಲ್ಯದಿಂದಾಗಿ ಮನರಂಜನಾ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳದಲ್ಲಿ ಸೂತಕದ ಛಾಯೆ ಮೂಡಿತು. ಅಭಿಮಾನಿಗಳ ನೂಕು ನುಗ್ಗಲು ಹಾಗೂ ಕಾಲ್ತುಳಿತದಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಮಹಾ ಅವಘಡವೊಂದು ನಡೆದು ಹೋಗಿದೆ. ಈ ಅವಘಡದಲ್ಲಿ 11 ಜನರು ಪ್ರಾಣ ಬಿಟ್ಟಿದ್ದಾರೆ. ಆದಾಗ್ಯೂ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಗಾಗಿ ಆರ್‌ಸಿಬಿ 15 ನಿಮಿಷಗಳ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದಾಗ್ಯೂ ಈ ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಕರ್ನಾಟಕದ ಮುಖ್ಯಮಂತ್ರಿ ಘೋಷಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:24 pm, Wed, 4 June 25
