World Theatre Day ; ಕೇಳ್ರಪ್ಪೋ ಕೇಳ್ರಿ ಹೊಸಾ ನಾಟಕ ಬಂದೇತಿ : ‘ಬಲ‘ವಂತದ ಆತ್ಮಭರ್ಜರಿ
‘ಸೂತ್ರಾ, ಎಲ್ಲರೂ ನನ್ನನ್ನ ಯಾವಾಗಲೂ ಹಸಿದವರ, ಒದ್ದಾಡುತ್ತಿರುವವರ ಕಣ್ಣೀರಿನ ಕಥೆ ಹೇಳಿಕೊಂಡು ಜನಪ್ರಿಯಳಾಗ್ತಾಳೆ ಅಂತಾರೆ. ಈ ಸಲ ಬರೀ ‘ಬಲ’ವಾದ ಸುಖಸಮೃದ್ಧಿಯ ಕಥೆಗಳ ಬಗ್ಗೆ ಗಮನ ಕೊಡೋಣ. ನನ್ನ ಮತ್ತು ನಿನ್ನಾಣೆಗೂ ಯಾವುದೇ ರೀತಿಯ ಕ್ರಾಂತಿಯಂತೂ ಇರಲೇಬಾರದು. ಇರೋಬರೋ ಶೋಷಣೆ, ಹಸಿವು, ಊಟಕ್ಕಾಗಿ ವಲಸೆ, ಕಾರ್ಮಿಕರು, ರೋಗರುಜಿನ ಈ ಸುತ್ತ ಹೆಣೆದ ಕಥೆಗಳನ್ನೆಲ್ಲಾ ರಂಗದಡಿಯಲ್ಲಿ ಹುದುಗಿಸಿಟ್ಟು, ಧೂಪ, ದೀಪ, ಗಂಧ, ಮಂತ್ರಗಳ, ಮಂದಿರಗಳ ಕಥೆಯನ್ನೋ, ವಿಶ್ವದಲ್ಲೇ ಹೆಚ್ಚು ಶ್ರೀಮಂತರಾದ ನಮ್ಮ ಜನರ ಮದುವೆಗಳ ಮಾಯಾಲೋಕವನ್ನೋ ರಂಗದಲ್ಲಿ ಆಡಿ ತೋರಿಸು. ಆಗ ನೀನು ಮಹಾ‘ಬಲ’ ಎನಿಸಿಕೊಳ್ಳುತ್ತೀಯಾ.‘ ಜಯಶ್ರೀ ಜಗನ್ನಾಥ
ಕೊರೊನಾದಿಂದ ಈವತ್ತು ಮೂಗು ಬಾಯಿ ಮುಚ್ಚಿಕೊಂಡೇ ಜೀವನ ಸಾಗಿಸುತ್ತಿದ್ದೇವೆ. ರೂಪಾಂತರಗೊಂಡ ವೈರಸ್ನಿಂದಾಗಿ ಮುಂದೊಂದು ದಿನ ಕಣ್ಣು, ಕಿವಿಯನ್ನೂ ಮುಚ್ಚಿಕೊಂಡು ಓಡಾಡಬೇಕು ಎಂದು ಫರಮಾನು ಹೊರಡಿಸುವಂತಾದರೆ? ಹೀಗೊಂದು ಎಳೆಯನ್ನು ನಮ್ಮ ಬರಹಗಾರರಿಗೆ ತಲುಪಿಸಿ, ನಿಮ್ಮಲ್ಲಿ ಮೊಳೆತ ಆಲೋಚನೆಗಳಿಗೆ ಸಂಭಾಷಣೆಯ ರೂಪು ಕೊಡಿ ಎಂದು ಕೇಳಿಕೊಳ್ಳಲಾಯಿತು. ಇನ್ನು ನೀವುಂಟು ಅವರು ಸೃಷ್ಟಿಸಿದ ಪಾತ್ರಗಳುಂಟು ಮತ್ತು ‘ವಿಶ್ವ ರಂಗಭೂಮಿ ದಿನ’ವೂ ಉಂಟು.
ಪರಿಕಲ್ಪನೆ : ಶ್ರೀದೇವಿ ಕಳಸದ
ನಾಟಕ : ‘ಬಲ’ವಂತದ ಆತ್ಮಭರ್ಜರಿ
ರಚನೆ : ಜಯಶ್ರೀ ಜಗನ್ನಾಥ, ಮೈಸೂರು.
ಕೆಂಪು ಮಖ್ಮಲ್ ಪರದೆ ಝಗಮಗಿಸುವ ರಂಗದ ಮುಂಭಾಗದಿಂದ ಮೇಲೇಳುತ್ತಿದ್ದಂತೆ ‘ತ್ರಿಭುವನಜನನೀ ಜಗನ್ಮೋಹಿನೀ’ ಮಂಡಳಿಯ ನಾಂದಿಗೀತೆ ಹಾರ್ಮೋನಿಯಂನೊಂದಿಗೆ ಶುರುವಾಗುತ್ತದೆ. ಪ್ರೇಕ್ಷಕರೆಲ್ಲರೂ ಕುತೂಹಲದಿಂದ ಕತ್ತೆತ್ತಿ ಕುಳಿತುಕೊಳ್ಳುತ್ತಾರೆ.
ತಲೆಗೆ ಬಣ್ಣದ ರುಮಾಲು, ಹಣೆಯಲ್ಲಿ ಚಂದನದ ತಿಲಕ, ಕೊರಳಲ್ಲಿ ಸೇವಂತಿಗೆ ಹೂವಿನ ಹಾರ, ಕಾಲಿಗೆ ಗೆಜ್ಜೆಕಟ್ಟಿದ ಸೂತ್ರಧಾರ ಹಿನ್ನೆಲೆ ವಾದ್ಯಸಂಗೀತದ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ಬಲಭಾಗದಿಂದ ಆಗಮಿಸುತ್ತಾನೆ.
ಸೂತ್ರಧಾರ : (ಎಡಕ್ಕೆ ತಿರುಗಿ) ಸಖೀ, ಸಖೀ ಎಲ್ಲಿದ್ದೀಯೆ? ನಾಟಕವನ್ನುಆರಂಭಿಸಬೇಕು ಪ್ರೇಕ್ಷಕರೆಲ್ಲಾ ಉತ್ಸುಕರಾಗಿದ್ದಾರೆ. ಎಲ್ಲಿದ್ದೀಯೆ, ಆಗಮಿಸು.
ಸಖೀ : (ನೇಪಥ್ಯದಿಂದ) ನೋ ಐ ಕ್ಯಾನ್ ನಾಟ್. ಇಲ್ಲಿ ಪ್ರಜೆಗಳಿಲ್ಲ, ನಾಗರಿಕರು. ಅಲ್ಲದೆ, ಎಡದಿಂದ ಪ್ರವೇಶಿಸಿದರೆ ಮತ್ತೆ ನನ್ನನ್ನು ಎಲ್ಲರೂ ಲೆಫ್ಟಿಸ್ಟ್ ಅಂತಾರೆ. ಸಿಕ್ಯೂಲರ್ ಅಂತಾನೂ ಅನ್ನಬಹುದು. ಲಿಬರಲ್ ಅಂದುಬಿಟ್ರೆ ಹೀನಾಮಾನ ಬೈದ ಹಾಗೆ ಗೊತ್ತಾ? ಎಡಭಾಗದಿಂದ ನಾ ಬರೋಲ್ಲಾ.
ಸೂತ್ರಧಾರ : ಆದರೆ ಸಖೀ, ನಾಟಕದ ಮೊದಲನೇ ದೃಶ್ಯ ತೆರೆದುಕೊಳ್ಳುವ ತನಕ ನಾವೇ ಸೃಷ್ಟಿಕರ್ತರಂತೆ ಜಗನ್ನಿಯಾಮಕರಾದ ಶಿವ ಪಾರ್ವತಿಯರಂತೆ, ಇಲ್ಲಿ ನಾವೇ ಪಾತ್ರಗಳ ಜನನ ಮರಣವನ್ನು ನಿಯಂತ್ರಿಸುವವರು. ಹಾಗಾಗಿ ನೀನು ನನ್ನ ವಾಮಭಾಗದಲ್ಲಿ ರಾರಾಜಿಸಬೇಕು.
ಸಖೀ: ನೋಡಿದ್ಯಾ ನೋಡಿದ್ಯಾ, ಮತ್ತೆಎಡ! ಊಂಹೂ ನಾನು ಈ ಬಾರಿ ಬಲದಿಂದಲೇ ಬರುತ್ತೇನೆ. (ಬರುತ್ತಾಳೆ. ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಹರಿದ ಜೀನ್ಸ್ ಮತ್ತು ಕುರ್ತಾ ತೊಟ್ಟು ಕನ್ನಡಕಧಾರಿಯಾಗಿ)
ಸೂತ್ರಧಾರ : ಅಂತೂ ನನ್ನ ಮೇಲೆ ಕರುಣೆ ತೋರಿ ಆಗಮಿಸಿದೆಯಲ್ಲಾ, ಸದ್ಯಕ್ಕೆ ಅಷ್ಟು ಸಾಕು. ಯಾವ ನಾಟಕ ಆಡಿಸೋಣ ಪ್ರಿಯೇ?
ಸಖೀ : ವಿಷಯ ಏನು, ಎನಿ ಆಪ್ಷನ್ಸ್? ಸರಿ ಶುರು ಮಾಡೋಣ. ಆದರೆ ಎಲ್ಲರೂ ನನ್ನನ್ನ ಯಾವಾಗಲೂ ಹಸಿದವರ, ಒದ್ದಾಡುತ್ತಿರುವವರ ಕಣ್ಣೀರಿನ ಕಥೆ ಹೇಳಿಕೊಂಡು ಜನಪ್ರಿಯಳಾಗ್ತಾಳೆ, ಪ್ರಶಸ್ತೀನೂ ತೆಗೆದುಕೊಳ್ತಾಳೆ ಅಂತಾರೆ. ಈ ಸಲ ಬರೀ ‘ಬಲ’ವಾದ ಸುಖಸಮೃದ್ಧಿಯ ಕಥೆಗಳ ಬಗ್ಗೆ ಗಮನ ಕೊಡೋಣ. ನನ್ನ ಮತ್ತು ನಿನ್ನಾಣೆಗೂ ಯಾವುದೇ ರೀತಿಯ ಕ್ರಾಂತಿಯಂತೂ ಇರಲೇಬಾರದು. ಇರೋಬರೋ ಶೋಷಣೆ, ಹಸಿವು, ಊಟಕ್ಕಾಗಿ ವಲಸೆ, ಕಾರ್ಮಿಕರು, ರೋಗರುಜಿನ ಈ ಸುತ್ತ ಹೆಣೆದ ಕಥೆಗಳನ್ನೆಲ್ಲಾ ರಂಗದಡಿಯಲ್ಲಿ ಹುದುಗಿಸಿಟ್ಟು, ಧೂಪ, ದೀಪ, ಗಂಧ, ಮಂತ್ರಗಳ, ಮಂದಿರಗಳ ಕಥೆಯನ್ನೋ, ವಿಶ್ವದಲ್ಲೇ ಹೆಚ್ಚು ಶ್ರೀಮಂತರಾದ ನಮ್ಮ ಜನರ ಮದುವೆಗಳ ಮಾಯಾಲೋಕವನ್ನೋ ರಂಗದಲ್ಲಿ ಆಡಿ ತೋರಿಸು. ಆಗ ನೀನು ಮಹಾ‘ಬಲ’ ಎನಿಸಿಕೊಳ್ಳುತ್ತೀಯಾ.
ಸೂತ್ರಧಾರ : ಸ್ವಸ್ಥಿಶ್ರೀಮತ್ಸುರಾಸುರೇಂದ್ರ ನರೇಂದ್ರ ಮಣಿಮಕುಟತಟಘಟಿತ
ಸಖೀ : ಅಯ್ಯೋ ಅಯ್ಯೋ ಅಯ್ಯೋ ಬೇಡಾ! (ಕಿಟಾರನೆ ಕಿರಿಚುತ್ತಾಳೆ)
ಸೂತ್ರಧಾರ : ಯಾಕೆ, ಇದು ಮುದ್ದಣ ಮನೋರಮೆಯರ ಸಲ್ಲಾಪದ ಪ್ರಾರಂಭ ಅಲ್ಲವೇ?
ಸಖೀ : ಯಾಕೆ ಅಂತ ಕೇಳಬೇಡ, ಸುಮ್ಮನೆ ಆ ಹೆಸರಿನ ಹತ್ತಿರಕ್ಕೂ ಹೋಗಬೇಡ. ಅಪವಾದ ಬರೋದು ಬೇಡ. ಬದಲಾಯಿಸು!
ಸೂತ್ರಧಾರ : ಆಯ್ತು. ವಸಂತಋತುವಿನ ಒಂದು ಮುಂಜಾನೆ ಶಿವ ಪಾರ್ವತಿಯರು ಉದ್ಯಾನದಲ್ಲಿ ಅಡ್ಡಾಡುತ್ತಿರುವಾಗ ಒಂದೆರಡು ಮಯೂರಗಳು…
ಸಖೀ : ಅಯ್ಯೋ ಬೇಡಾ ಬೇಡಾ… ನವಿಲುಗಳು ಕಥೆಯಲ್ಲಿಇರಲೇಬಾರದು. ನವಿಲು ಗಿಣಿ ಬಿಟ್ಟು ಬೇರೆ ಪ್ರಾಣಿ ಹಾಕು.
ಸೂತ್ರಧಾರ : ಹಾಗಿದ್ದರೆ ಗಣೇಶನ ಹುಟ್ಟಿದ ಕಥೆ ಇರಲಿಯಲ್ವಾ?
ಸಖೀ : ಪ್ಲಾಸ್ಟಿಕ್ ಸರ್ಜನ್ ಪಾತ್ರಾ ಸೇರಿಸೋದಕ್ಕೆ ತಯಾರಿದ್ದೀಯಾ? ಆನೆ ತಲೇನ ದೇಹಕ್ಕೆ ಹೊಲಿಯೋದಕ್ಕೆ ಧನ್ವಂತರಿ ಬರ್ತಾನಾ? ದೊಡ್ಡವರು ಹೇಳಿಬಿಟ್ಟಿದ್ದಾರೆ. ಕಥೆ ಹಾಗೇ ಆಗಬೇಕು. ಇಲ್ಲದಿದ್ದರೆ ನಾವು ರಾಷ್ಟ್ರದ್ವೇಶಿಗಳು ಅಂತ ಅನ್ನಿಸಿಕೊಳ್ಳಬಹುದು.
ಸೂತ್ರಧಾರ : ಛೆ, ನನಗೊಂದೂ ಅರ್ಥವಾಗುತ್ತಿಲ್ಲ. ನೀನು ನನ್ನ ಕಥೆಗೆ ಅಡ್ಡಿಯಾಗುತ್ತಿರುವೆ ಸಖೀ. ಅದರ ಬದಲು ನೀನೇ ಸೂತ್ರಧಾರಿಣಿಯಾಗು, ನಾನು ಸಖನಾಗುತ್ತೇನೆ.
ಸಖೀ : ಬೇಡ ಬೇಡಾ. ನಾನು ಸ್ತ್ರೀಸಮಾನತೆಯನ್ನು ಪ್ರತಿಪಾದಿಸುವ ಜೆಎನ್ಯೂ ರೀಸರ್ಚರ್ ಅಂದುಕೊಂಡುಬಿಡುತ್ತಾರೆ. ಈ ದಿನ ನಾನು ಬರೀ ‘ಬಲ’ವಂತಳು ಮಾತ್ರಾ.
ಸೂತ್ರಧಾರ : ಅರೆ, ನೀನ್ಯಾವಾಗ ಜೇನು ಸಂಶೋಧನೆ ನಡೆಸಿದೆ ಸಖೀ? ಇರಲಿ. ನಾಟಕಕ್ಕೆ ಕಥೆಯನ್ನು ಹುಡುಕೋಣ. ಸಮಯ ಮೀರ್ತಾ ಇದೆ. ಇಲ್ಲಿ ಕೇಳು, ಹಿಂದೆ ಉಜ್ಜಯಿನೀ ನಗರದಲ್ಲಿಒಬ್ಬ ವರ್ತಕನಿದ್ದನು. ಒಂದು ದಿನ ಅವನು ತನ್ನ ಭವ್ಯ ಭವನದ ತನ್ನ ಮಲಗುವ ಮನೆಯಲ್ಲಿ
ಸಖೀ : ಬೇಡಾ ಬೇಡಾ… ಈಗ ನೀನು ಖಂಡಿತಾ ಸಿ.ಡಿ ಪ್ರಕರಣದ ಬಗ್ಗೆ ನಾಟಕ ಮಾಡುತ್ತೀಯಾ ಅಂದುಕೊಳ್ಳುತ್ತಾರೆ. ವಿಶ್ರಾಂತಿ ಗೃಹ, ಪಲ್ಲಂಗ ಯಾವುದೂ ಬೇಡವೇ ಬೇಡ. ಅದ್ಯಾವುದನ್ನೂ ಒಳಗೊಳ್ಳದಂಥ ನಾಟಕದ ಕಥೆ ಹುಡುಕು.
ಸೂತ್ರಧಾರ : ಅಂದರೆ? ಕಣ್ಣೀರು ಬೇಡ, ಕಾರ್ಪಣ್ಯ ಬೇಡ ಎನ್ನುತ್ತಿದ್ದೀಯೇ?
ಸಖೀ : ಹೌದು. ಅವೆಲ್ಲಾ ಎಡಾ ಎಡಾ ಎಡಾ.
ಸೂತ್ರಧಾರ : ಮತ್ತೆ ವರ್ತಕರು, ಶ್ರೀಮಂತರು, ರಾಜರುಗಳ ಕಥೆಯಲ್ಲಿ ವಸಂತ, ಮಯೂರ ಶುಕಪಿಕಗಳು, ಪ್ರಾಣಸಖಿಯರು… ಪಲ್ಲಂಗ…
ಸಖೀ : ಛೆಛೆಛೆಛೆ ಬೇಡಾ ಬೇಡಾ.
ಸೂತ್ರಧಾರ : ಹಾಗಿದ್ದರೆ ಮೊದಲನೆಯ ದೃಶ್ಯದಲ್ಲಿ ವರ್ತಕನು ಸಂಜೆಯಲ್ಲಿ ರಾಜಮಾರ್ಗದಲ್ಲಿ ನಡೆಯುತ್ತಿದ್ದಾನೆ. ಬದಿಯ ಖಾನಾವಳಿಯಲ್ಲಿ ಬಾಣಸಿಗರು ನಾನಾ ಬಗೆಯ ಸ್ವಾದವುಳ್ಳ ಖಾದ್ಯಗಳನ್ನು ತಯಾರಿಸುತ್ತಿದ್ದಾರೆ.
ಸಖೀ : ನೀನೀಗ ಚರಂಡಿಯಿಂದ ಪೈಪ್ ಇಟ್ಟು ಒಲೆ ಉರಿಸುತ್ತಿದ್ದಾರೆ ಅಂತೀಯಾ ಮತ್ತೆ ತಕರಾರು ಶುರು ಆಗತ್ತೆ. ರಸ್ತೆ ಬದಿಯ ಖಾದ್ಯ ಪಾನೀಯ ಯಾವುದನ್ನೂ ತರಬೇಡ. ಪಕೋಡಾ ಚಹಾ ಅಂತೂ ನಾಟಕದಲ್ಲಿಎಲ್ಲೂ ಸುಳಿಯಬಾರದು. ಬೇಕಿದ್ರೆ ಹೀಗೆ ಮಾಡು. ತುಂಬಾ ‘ಬಲ’ವಾಗಿರತ್ತೆ. ಅಲ್ಲೊಂದು ಕೌ ನಿಂತಿದೆ. ಅದು ಮೂತ್ರ ಮಾಡತ್ತೆ. ಓಡಿ ಬಂದ ಜನರು ಅದನ್ನು ಬೆಳ್ಳಿಯ ಲೋಟದಲ್ಲಿ ಹಿಡಿದು ಎಲ್ಲರಿಗೂ ಪ್ರೋಕ್ಷಿಸಿ ಮತ್ತೆಅದನ್ನು ಕುಡಿಯಲು ಶ್ರೀಮಂತನಿಗೆ ನೀಡುತ್ತಾರೆ.
ಸೂತ್ರಧಾರ : ಸಾಧು ಸಾಧು… ಈ ಭಾಗ ಯಾವ ಕಾಳಿದಾಸ, ಭಾಸ ಬಾಣ, ವಾಲ್ಮೀಕಿ ವ್ಯಾಸರಲ್ಲೂಇಲ್ಲವಲ್ಲಾ.
ಸಖೀ : ಇಲ್ಲದಿದ್ರೆ ಅವರೂ ಎಡಚರು ಅಂತಾರೆ. ಇದು ಪ್ರ‘ಬಲ’ ಸಂಸ್ಕೃತಿ. ನಮ್ಮ ಪ್ರಾಚೀನ ಸಂಸ್ಕೃತಿ. ಅದರಲ್ಲೂ ಕನಕಾಂಬರ ಬಣ್ಣದ ಬಟ್ಟೆ ತೊಟ್ಟು ತಲೆ ಕೆಳಗೆ ಕಾಲು ಮೇಲೆ ಮಾಡಿ ದಿನಾ ಕುಡಿದರೆ ಸರ್ವರೋಗ ನಿವಾರಣವಂತೆ.
ಸೂತ್ರಧಾರ : ನನಗ್ಯಾಕೋ ಗಾಬರಿಯಾಗುತ್ತಿದೆ ಸಖೀ. ಕಥೆ ಏಕೋ ಕೈಕಾಲು ಬೆಳೆಸಿಕೊಂಡು ಎಲ್ಲೆಲ್ಲೋ ಹಾರುತ್ತಿದೆ. ಸಂಕೋಚದಿಂದ ಕೇಳುತ್ತಿದ್ದೇನೆ, ಈ ನಾಟಕದಲ್ಲಿ ಮಹಿಳಾಮಣಿಗಳು ಇರಬಹುದೇ?
ಸಖೀ : ಖಂಡಿತ! ಅವರು ಸ‘ಬಲ’ದವರಾಗಿದ್ದರೆ ಮಾತ್ರಾ. ನನ್ನಂತೆ ಅಲ್ಲಲ್ಲಿ ಹರಿದ ಜೀನ್ಸ್ ತೊಡಬಾರದು. ಅದರಿಂದ ಅಮಾತ್ಯರುಗಳು ಅಲ್ಲಲ್ಲಿಇಣುಕಿ ಸಂಸ್ಕೃತಿಯ ‘ಬಲ’ಆತ್ಕಾರವಾಗುತ್ತಿದೆ ಎಂದು ಗುಡುಗಬಹುದು. ಮಹಿಳಾ ಪಾತ್ರಧಾರಿಗಳು ಕಂಚುಕಗಳನ್ನು ತೊಟ್ಟು ಸುಳಿದಾಡಬಹುದು, ಅದು ನಮ್ಮ ಸಂಸ್ಕೃತಿಯ ‘ಬಲ’ವರ್ಧಿಸುತ್ತದೆ.
ಸೂತ್ರಧಾರ : ನೀನೆಂಥಾ ಬುದ್ಧಿವಂತೆ ಸಖೀ. ಮುಂದಿನ ಕಥೆಯನ್ನೂಅಲೋಚಿಸು.
ಸಖೀ : ಇಲ್ಲಾ… ಸಾಧ್ಯವಿಲ್ಲ. ನಾನು ಯೋಚಿಸಲೇಬಾರದು! ಯೋಚಿಸಿದರೆ ನಮ್ಮನ್ನು ‘ರದ್ದಿಜೀವಿಗಳೆಂದು’ ಕರೆದುಬಿಡುತ್ತಾರೆ. ಯೋಚಿಸದೆ, ಆಲೋಚಿಸದೆ ಬೇಕಾದಷ್ಟು ಮಕ್ಕಳನ್ನು ಮಾಡಿಕೊಳ್ಳುತ್ತಿದ್ದರೆ ಅನ್ನ ಸಿಗುತ್ತದೆ.
ಸೂತ್ರಧಾರ : ಛೀ! ಸಖಿ ಇದೆಂಥಾ ಮಾತು. ಇದೇನು ಅನ್ನಕ್ಕಾಗಿ ಬಸಿರೇ, ಇದ್ಯಾವ ಕಾಮರಾಜ್ಯ? ಹೋಗಲಿ ಪಾತ್ರಧಾರಿಗಳನ್ನಾದರೂ ಪರಿಚಯಿಸೋಣವೇ?
ಸಖೀ : ಪಾತ್ರಧಾರಿಗಳ ‘ಬಲಾಬಲ’ಗಳನ್ನು ನಿರ್ಣಯಿಸಲು ಇಲ್ಲಿನ ಒಂದು ವಿಶ್ರಾಂತಿಧಾಮಕ್ಕೆ ಕರೆದೊಯ್ದು ಅವರನ್ನುಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಹಾರಲು ಕೇಳಿಕೊಳ್ಳಲಾಗುವುದು. ತತ್ವಗಳನ್ನು ತ್ಯಜಿಸಿ ನಾಚಿಕೆ ಬಿಟ್ಟು ಹಾರಿದವರನ್ನು‘ಬಲ’ಶಾಲಿಗಳೆಂದು ನಿರ್ಣಯಿಸಿ ಪಾತ್ರ ನೀಡಲಾಗುವುದು.
ಸೂತ್ರಧಾರ : ಹಾಗೆ ಬೆಂ‘ಬಲ’ ಪಡೆದವರ ಹೆಸರು ಹೇಳು ನೋಡೋಣ? ನಮ್ಮ ನಾಯಕ ನಾಯಕಿಯರು ಸಿಗಬಹುದು.
ಸಖೀ : ಆಲ್ರೆಡೀ ಸಿಕ್ಕಿದ್ದಾರೆ ಸೂತ್ರಾ! ಭುಶ್ಕೂ ಎಂಬ ನಾಯಕಿ, ವಕ್ರಬರ್ತಿ ಎಂಬ ನಾಯಕ. ಅಜ್ಜನ ಪಾತ್ರಕ್ಕೆ ಒಬ್ಬ ನೆಲದೊಳಗೆ ಉಗಿಬಂಡಿಯನ್ನು ಬಲಕ್ಕೆ ತಿರುಗಿಸಿದ ಬಲಾಢ್ಯನೊಬ್ಬನಿದ್ದಾನೆ.
ಸೂತ್ರಧಾರ : ಸಖೀ ಪಾತ್ರಧಾರಿಯೊಬ್ಬನು ಆತ್ಮಹತ್ಯೆ ಮಾಡಿಕೊಂಡರೆ ಹೇಗೆ?
ಸಖೀ : (ಓಡಿಬಂದು ಅವನ ಬಾಯಿ ಮುಚ್ಚಿಸುತ್ತಾಳೆ) ಸಾಧ್ಯವೇ ಇಲ್ಲ ಸಖ. ಆಗ ಮುಂದೆ ತಿಂಗಳುಗಳಗಟ್ಟಲೆ ನಮ್ಮ ಅಂಗನೆಯರೆಲ್ಲಾ ಅದೇ ಗುಂಗಿನಲ್ಲಿ ಆ ಸಾವನ್ನು ದೇಶದ ಅತಿ ಮುಖ್ಯ ವಿಷಯವನ್ನಾಗಿ ಮಾಡಿ ವಲಸೆ ಕಾರ್ಮಿಕರ ಕಷ್ಟ ಮುಚ್ಚುವ ಪ್ರಯತ್ನ ಮಾಡಬೇಕಾಗುತ್ತದೆ, ಖಂಡಿತಾ ಬೇಡ.
ಸೂತ್ರಧಾರ : ಸಖೀ ಮತ್ತಿನ್ನೇನು? ಪ್ರಾರಂಭಿಸಿಯೇ ಬಿಡೋಣ. ಕಥೆ ಕಟ್ಟುತ್ತಾ ಹೋಗೋಣ. ಸತ್ಯವು ಜೂಮ್ಲಾ ಎಂಬ ವೇಶ ತೊಟ್ಟು ನೈಜವನ್ನು ಮರೆಮಾಚುತ್ತದೆ. ಗಾಳಿಯಲ್ಲಿ ವಿಮಾನವನ್ನು ಹಾರಿಸಿಯೇ ಬಿಡೋಣ. ಇನ್ನೇನು ಜನ ಸಮುದಾಯವು ಹುಚ್ಚೆದ್ದು ಕುಣಿಯುವ ಪಚ್ಚೆದಿನಗಳು ಮುಂದಿವೆ. ವೀಣೆಗಳು ಝೇಂಕರಿಸಲಿ, ಮೃದಂಗಗಳು ನುಡಿಯಲಿ, ಸಾರಂಗಿಗಳು ಉಲಿಯಲಿ, ತಬಲಗಳು…
ಸಖೀ : ನೋ ನೋ ನೋ ಬೇಡಾ! ತಬಲಾ ಘೀಳಿಡುವುದೇ ಬೇಡ. ಅದು ವರ್ಜ್ಯ. ಬರೇ ಜಾಗಟೆಗಳನ್ನು ಹೊಡೆದು ತಟ್ಟೆಗಳನ್ನು ಬಡಿದು ಗೋ-ಕರ್ನಾ ಗೋ-ಕರ್ನಾ ಅರಚಾಡಿದರೆ ಸಾಕು.
ಸೂತ್ರಧಾರ : ಸಖೀ ನಿನ್ನ ನಿಯಮಗಳಿಂದ ನಮ್ಮ ನಾಟಕ ಏನಾಗಬಹುದು.
ಸಖೀ : ಆತಂಕ ಬೇಡ ಸೂತ್ರಾ. ಇದು ಆತ್ಮಭರ್ಜರಿ ನಾಟಕವಾಗುತ್ತದೆ.
(ನೇಪಥ್ಯದಲ್ಲಿ ಗೋ-ಕರ್ನಾ ಗೋ-ಕರ್ನಾ ಎಂಬ ಅರಚಾಟಗಳೊಂದಿಗೆ ಜನರೆಲ್ಲಾ ತಟ್ಟೆ ಬಡಿದು ಪಾತ್ರೆಗಳನ್ನು ಕುಟ್ಟುತ್ತಿರುವ ಶಬ್ದ ಕೇಳಿಬರುತ್ತಿದ್ದಂತೆ ರಂಗಕ್ಕೆ ತೆರೆ)
ಇದನ್ನೂಓದಿ : Tirath Singh Rawat Controversy; ತೀರಥ್ ಸಿಂಗ್ ಅವರಿಗೊಂದು ಪತ್ರ: ಕೇಳಿಸಿಕೊಳ್ಳಿ ಇದು ನೆಲಮಟ್ಟದ ರೊಚ್ಚು!
Published On - 11:26 am, Sat, 27 March 21