Tirath Singh Rawat Controversy; ತೀರಥ್ ಸಿಂಗ್ ಅವರಿಗೊಂದು ಪತ್ರ: ಕೇಳಿಸಿಕೊಳ್ಳಿ ಇದು ನೆಲಮಟ್ಟದ ರೊಚ್ಚು!

ಸಹಜ ಮತ್ತು ಸಾಮಾನ್ಯ ಬದುಕಿಗೆ ತೆರೆದುಕೊಳ್ಳುವ ಪ್ರಯತ್ನದಲ್ಲಿಯೇ ನಮ್ಮ ದೇಶದ ಹೆಣ್ಣುಮಕ್ಕಳು ಈತನಕವೂ ಹೆಚ್ಚೇ ಶ್ರಮಪಡಬೇಕಾದ ಅನಿವಾರ್ಯವಿದೆ. ಇಂಥ ಪರಿಸ್ಥಿತಿಯಲ್ಲಿ ನಿಮ್ಮ ಮತ್ತು ನಿಮ್ಮಂಥವರ ಪುರುಷ ಪಾರಮ್ಯದ ಹೇಳಿಕೆಗಳು ಸಮಾಜವನ್ನು ಮತ್ತಷ್ಟು ‘ಅಂಧಶ್ರದ್ಧೆ’ಗೆ ನೂಕುವ ಅಪಾಯವಿದೆ. ಆದ್ದರಿಂದ ಸಮಾಜದ ವಾಸ್ತವಿಕ ನೋಟಗಳ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಈವತ್ತೂ ಈ ಪತ್ರ ಅಭಿಯಾನ ಜಾರಿಯಲ್ಲಿರುತ್ತದೆ.  

Tirath Singh Rawat Controversy; ತೀರಥ್ ಸಿಂಗ್ ಅವರಿಗೊಂದು ಪತ್ರ: ಕೇಳಿಸಿಕೊಳ್ಳಿ ಇದು ನೆಲಮಟ್ಟದ ರೊಚ್ಚು!
ಜಯಶ್ರೀ ಜಗನ್ನಾಥ
Follow us
|

Updated on:Mar 23, 2021 | 1:11 PM

ಉತ್ತರಾಖಂಡದ ಮಾನ್ಯ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರೇ, ಇತ್ತೀಚೆಗೆ ಹರಿದ್ವಾರದಲ್ಲಿ ನಡೆಯಲಿರುವ ಕುಂಭಮೇಳದ ಸಂದರ್ಭದಲ್ಲಿ ಸುರಕ್ಷತಾ ಮಾನದಂಡಗಳನ್ನು ಸಡಿಲಿಸುವುದನ್ನು ಸಮರ್ಥಿಸಿಕೊಳ್ಳುತ್ತಾ ನಂಬಿಕೆ, ಶ್ರದ್ಧೆ, ಆಸ್ಥೆ ಇದ್ದಲ್ಲಿ ಎಂಥ ವೈರಸ್​ ಅನ್ನೂ ಸೋಲಿಸಬಹುದು ಎಂದಿದ್ದಿರಿ. ಇರಲಿ, ಸ್ವತಃ ಕೋವಿಡ್​ಗಾಗಿ ಚಿಕಿತ್ಸೆ ಪಡೆಯುತ್ತಿರುವ ನಿಮಗೀಗಾಗಲೇ ಈ ಹೇಳಿಕೆಯ ಪರಿಣಾಮ ಮನವರಿಕೆ ಆಗಿರುತ್ತದೆ ಎಂದು ಭಾವಿಸಲಾಗುವುದು. ‘Ripped Jeans ಪತ್ರ ಅಭಿಯಾನ’ವನ್ನು ನಿನ್ನೆಗೇ ಮುಗಿಸೋಣವೆಂದರೆ ಮತ್ತೆರಡು ಅಸಂಬದ್ಧ ಹೇಳಿಕೆಗಳನ್ನು ಕೊಟ್ಟಿರಿ; ಮೊದಲನೆಯದು, ನಮ್ಮ ದೇಶವನ್ನು ಇನ್ನೂರು ವರ್ಷಗಳ ಕಾಲ ಅಮೆರಿಕನ್ನರು ಆಳಿದರು. ಎರಡನೆಯದು, ಕೋವಿಡ್ ಸಮಯದಲ್ಲಿ ಹೆಚ್ಚು ಪಡಿತರ ಪಡೆಯಲು ಹೆಣ್ಣುಮಕ್ಕಳು ಹೆಚ್ಚೆಚ್ಚು ಹೆರಬೇಕು. ಇರಲಿ, ಸದ್ಯಕ್ಕೆ ನಿಮಗೆ ಚಿಕಿತ್ಸೆ ಮತ್ತು ವಿಶ್ರಾಂತಿಯ ಅಗತ್ಯವಿದೆ. ಆದಷ್ಟು ಬೇಗ ಎಲ್ಲ ರೀತಿಯಿಂದಲೂ ನೀವು ಚೇತರಿಸಿಕೊಳ್ಳಿ. 

ಆದರೆ ನೆನಪಿಡಿ, ಸಹಜ ಮತ್ತು ಸಾಮಾನ್ಯ ಬದುಕಿಗೆ ತೆರೆದುಕೊಳ್ಳುವ ಪ್ರಯತ್ನದಲ್ಲಿಯೇ ನಮ್ಮ ದೇಶದ ಹೆಣ್ಣುಮಕ್ಕಳು ಈತನಕವೂ ಹೆಚ್ಚೇ ಶ್ರಮಪಡಬೇಕಾದ ಅನಿವಾರ್ಯವಿದೆ. ಇಂಥ ಪರಿಸ್ಥಿತಿಯಲ್ಲಿ ನಿಮ್ಮ ಮತ್ತು ನಿಮ್ಮಂಥವರ ಪುರುಷ ಪಾರಮ್ಯದ ಹೇಳಿಕೆಗಳು ಸಮಾಜವನ್ನು ಮತ್ತಷ್ಟು ‘ಅಂಧಶ್ರದ್ಧೆ’ಗೆ ನೂಕುವ ಅಪಾಯವಿದೆ. ಆದ್ದರಿಂದ ಸಮಾಜದ ವಾಸ್ತವಿಕ ನೋಟಗಳ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಈವತ್ತೂ ಈ ಪತ್ರ ಅಭಿಯಾನ ಜಾರಿಯಲ್ಲಿರುತ್ತದೆ.  

ಪರಿಕಲ್ಪನೆ : ಶ್ರೀದೇವಿ ಕಳಸದ

ಲೇಖಕಿ, ಅನುವಾದಕಿ ಜಯಶ್ರೀ ಜಗನ್ನಾಥ ಅವರು ಮೈಸೂರಿನಲ್ಲಿರುವ ಕೆಲ ಕೆಳವರ್ಗದ ಮಹಿಳೆಯರೊಂದಿಗೆ ಈ ವಿಷಯದ ಕುರಿತು ಮಾತನಾಡುವಾಗ ರಾಚಿದ ಥಣ್ಣಗಿನ ಸತ್ಯಗಳು ಇಲ್ಲಿವೆ.  

ತೀರಥ್ ಸಿಂಗ್ ಅವರೇ,

ನಿಮಗೆ ಮಹಿಳೆಯರ ಕಟುವಾಸ್ತವದ ಅರಿವಿದೆಯೇ? ಪ್ರಾಣಹಿಂಡುವ ಅವರ ಸಮಸ್ಯೆಗಳಿಗೆ ನಿಮ್ಮ ಸಹಾನುಭೂತಿ ಎಲ್ಲಿದೆ? ನಿಮ್ಮ ಮಾತುಗಳಿಗೆ ಹೃದಯವಿಲ್ಲವೇ?

‘ಈ ಸೋಂಕುರೋಗದ ದೆಸೆಯಿಂದ ನಿಮಗೆಲ್ಲಾ ಪಡಿತರ ಅಕ್ಕಿ ಸಿಕ್ತು ಅಲ್ವಾ? ಹೆಚ್ಚು ಮಕ್ಕಳಿದ್ದಿದ್ರೆ ಹೆಚ್ಚು ಅಕ್ಕಿ ಸಿಕ್ತಾ ಇತ್ತು ಅಲ್ವಾ ಅಂತ ಯಾರೋ ಕೇಳ್ತಿದಾರೆ. ನೀವೇನಂತೀರಿ?’ ಮೈಸೂರಿನಲ್ಲಿ ಒಂದು ಸ್ಥಳೀಯ ಸ್ವಸಹಾಯ ಸಂಘ ಮಹಿಳಾ ಸಾಬಲ್ಯಕ್ಕೆಂದು ಏರ್ಪಡಿಸಿದ್ದ ಸಾಕ್ಷ್ಯಚಿತ್ರ ಪ್ರದರ್ಶನದ ನಂತರ ನನ್ನ ಸುತ್ತ  ಮಾತುಕತೆ ಮತ್ತು ಚರ್ಚೆಗಾಗಿ ಕುಳಿತಿದ್ದ ಮಹಿಳೆಯರನ್ನು ಕೇಳಿದೆ. ಒಬ್ಬ ಮಹಿಳೆ ಕೈಯೆತ್ತಿದಳು. ವಯಸ್ಸು ಸುಮಾರು ಐವತ್ತು. ದುಡಿದು ಒರಟಾಗಿದ್ದ ಕೈಕಾಲುಗಳು. ಮೆತ್ತಗಿನದನಿ. ‘ಸಿಕ್ತು ಮೇಡಮ್, ಸಿಕ್ತು. ಆದ್ರೆ ಅದೆಷ್ಟು ದಿನ ನಡಿಯತ್ತೆ? ಕೆಲ್ಸ ಬೇಕು ಮೇಡಮ್. ಮಕ್ಕಳು ಹೆಚ್ಚಾದ್ರೆ ತಿನ್ನೋ ಬಾಯಿಗಳೂ ಹೆಚ್ಚಾಗಲ್ವಾ ಮೇಡಮ್? ಆವಪ್ಪನಿಗೆ ಅಷ್ಟೂ ಅರ್ಥಆಗಲ್ವಾ?’; ತೀರಥ್ ಸಿಂಗ್ ಅವರೇ ಕೇಳಿಸ್ಕೊಳ್ಳಿ. ಇದು ಸಾಮಾನ್ಯಜ್ಞಾನ.

ತಲಾ ಇಷ್ಟಿಷ್ಟು ಅಂತ ಕೊಟ್ರು ಅಲ್ವಾ? ಒಬ್ರು ಉತ್ತರಾಖಂಡ ರಾಜ್ಯದ ಮಂತ್ರಿ ಹೇಳ್ತಾ ಇದಾರೆ. ತುಂಬಾ ಮಕ್ಕಳಿದ್ರೆ ತುಂಬಾ ಅಕ್ಕಿ ಸಿಗ್ತಿತ್ತಂತೆ. ಏನಂತೀರಿ? ಆಕೆ ಎದ್ದು ನಿಂತಳು. ಬಟ್ಟಲಗಲದ ಕಣ್ಣುಗಳು. ಕಣ್ಣಿನಿಂದಿಳಿಯುತ್ತಿದ್ದ ದ್ರಾಕ್ಷಿಗಾತ್ರದ ಕಣ್ಣೀರಹನಿಗಳು. ವಯಸ್ಸು ಇಪ್ಪತ್ತರ ಆಸುಪಾಸು. ‘ಮೇಡಮ್, ಗಂಡುಮಗು ಆಗಬೇಕು ಅಂತ ನಾಲ್ಕು ಅಬಾರ್ಶನ್ ಮಾಡಿಸಿದಾರೆ ನನ್ನಗಂಡ ಮತ್ತು ಅತ್ತೆ ಸೇರಿಕೊಂಡು. ಈಗ ಗರ್ಭ ನಿಲ್ಲೋದೇ ಇಲ್ಲ ಮೇಡಮ್, ನನಗೆ ಸದಾ ಸ್ರಾವ ಆಗ್ತಿರತ್ತೆ. ನನ್ನ ಗಂಡ ಇನ್ನೊಬ್ಬಳನ್ನು ಬಸಿರು ಮಾಡಿ , ಅದು ಗಂಡು ಅಂತ ಸ್ಕ್ಯಾನ್ ಮಾಡಿಸಿ ಗ್ಯಾರಂಟೀ ಆದ ಮೇಲೆ ಅವಳನ್ನು ಕಟ್ಟಿಕೊಂಡಿದಾನೆ. ಇಂಥಾ ಸಮಸ್ಯೆಯಲ್ಲಿ ನಮ್ಮಂಥವರು ಇದೀವಿ, ಮಕ್ಕಳು ಮಾಡಿಕೊಳ್ಳಿ ಅಕ್ಕಿಗೋಸ್ಕರ ಅಂದವ್ರ್ಯಾರು? ಒಂದು ಅಬಾರ್ಶನ್ ಮಾಡಿಸ್ಕೊಳ್ಳೋ ನೋವು ಸಂಕಟ, ಭ್ರೂಣಾನ ಎಳೆದು ಹಾಕೋವಾಗ ಆಗುವ ಯಾತನೆ ಇವರಿಗೆ ಗೊತ್ತಾ ಮೇಡಮ್?’ ; ತೀರಥ್ ಸಿಂಗ್ ಅವರೇ ಕೇಳಿಸಿಕೊಳ್ಳಿ, ಇದು ವಾಸ್ತವ ವೇದನೆ.

ಆಕೆ ಮುಂದೆ ಬಂದಳು. ವಯಸ್ಸು ಮೂವತ್ತಿರಬಹುದು. ಮೂಳೆಚಕ್ಕಳದ ಮೈ. ‘ಮೇಡಮ್‍ ಯಾರು ಹೆಚ್ಚು ಮಕ್ಕಳು ಮಾಡ್ಕಳಿ ಅಂದಿದ್ದು? ಈಗಾಗ್ಲೇ ಎಚ್.ಐವಿ. ತಂದು ಅಂಟಿಸಿದ್ದಾನೆ ಗಂಡ ಅನ್ನಿಸ್ಕೊಂಡಿರೋ ಪ್ರಾಣಿ. ರೋಗ ಮಕ್ಕಳಿಗೂ ಬರಲ್ವಾ? ಅಂಥಾ ಮಕ್ಕಳನ್ನ ಅಕ್ಕಿ ಆಸೆಗೋಸ್ಕರ ಹೆತ್ತುಕೊಳ್ಳಿ ಅಂತಾನಲ್ಲಾ ಯಾರವರು ದೊಡ್ಡ ಮನುಷ್ಯರು? ; ತೀರಥ್ ಸಿಂಗ್ ಅವರೇ ಕೇಳಿಸಿಕೊಳ್ಳಿ, ಇದು ನೈಜ ನರಕ.

ವಯಸ್ಸು 18 ಇರಬಹುದು. ತೆಳು ದೇಹ. ಕಣ್ಣಲ್ಲಿ ಮಿಂಚು. ‘ಮೇಡಮ್, ನಾನು ಡ್ರೈವರ್ ಆಗಬೇಕು. ಬಸ್ಸು ರೈಲು ಎಲ್ಲಾ ಓಡಿಸ್ಬೇಕು. ಬೈಕಿನ ಮೇಲೆ ಕುಂತು ಊರಿಂದೂರಿಗೆ ಹಾರಬೇಕು. ಬರೀ ಅಕ್ಕಿ ಗಳಿಸೋದೇನೇ ಹೆಣ್ಮಕ್ಕಳ ಜೀವನ ಆಗಬೇಕಾ ಮೇಡಮ್? ಮೇಲಿಂದ ಮೇಲೆ ಬರೀ ಅನ್ನಕ್ಕೋಸ್ಕರ ಬಸ್ರಿ ಆಗ್ತಿದ್ರೆ ಹೊಸಹೊಸ ಕೆಲಸ ಮಾಡೋದು ಹ್ಯಾಗೆ? ನಮ್ಮನ್ನ ಮನೆಗೆ ಕಟ್ಟಿಹಾಕಿ, ಅನ್ನಕ್ಕೆ ಲೈನಲ್ಲಿ ನಿಲ್ಲಿಸಿ ಗಂಡಸರು ಊರೆಲ್ಲಾ ತಿರುಗ್ಬೇಕಾ?’ ; ತಿರಥ್ ಸಿಂಗ್ ಅವರೇ ಕೇಳಿಸಿಕೊಳ್ಳಿ, ಇವು ಯುವಕನಸುಗಳು.

ನಗುಮರೆತ ಕಣ್ಣುಗಳಲ್ಲಿ ಆತಂಕ ಎದ್ದು ಕಾಣುತ್ತಿತ್ತು. ಅವಳು ಸಿಟ್ಟಿನಿಂದ ಮಾತನಾಡಿದಳು. ಅಸಹಾಯಕತೆಯ ಕೋಪ ಮಾತುಗಳಲ್ಲಿ ಹೊಗೆಯಾಡುತ್ತಿತ್ತು. ‘ನಮ್ಮನ್ನೆಲ್ಲಾಅಕ್ಕಿಗೋಸ್ಕರ ಮಕ್ಳು ಮಾಡ್ಕೊಂಡು ಪಡಿತರ ಅಕ್ಕಿನೇ ನಂಬಿಕೊಂಡು ಬಾಳೆಲ್ಲಾ ಕಳಿಯೋ ಹಾಗೆ ಮಾಡಕ್ಕೆ ಇವರ್ಯಾಕೆ ಸರ್ಕಾರದಲ್ಲಿಇರಬೇಕು ಮೇಡಮ್? ನಮಗೆ ಕೆಲ್ಸ ಕಲಿಯಕ್ಕೆ ಅವಕಾಶ ಮಾಡಿಕೊಡಿ, ಬದುಕಕ್ಕೆ ಕಲಿಸಿ. ಅದು ಬಿಟ್ಟುಬೇಡಿ ಬಿಟ್ಟಿ ಅಕ್ಕಿ ತೊಗೊಂಡು ಸಾಯ್ತಾ ಇದ್ರೆ ಇವರಿಗೆ ವೋಟು ಹಾಕಕ್ಕೆ ಹೆಚ್ಚು ಹಸಿದ ಹೊಟ್ಟೆಗಳು ಇರತ್ತೆ ಅಂತಾನಾ ಈವಯ್ಯನ ಯೋಚ್ನೆ? ಅವನಿಗೇ ಹೆಚ್ಚುಮಕ್ಕಳು ಮಾಡಿಕೊಂಡು ಅಲ್ಲಲ್ಲಿ ವೋಟು ಬೇಡಕ್ಕೆ ಕಳಿಸು ಅನ್ನಿ. ಆವಯ್ಯನ ಹೆಂಡ್ತಿ ಏನೇಳ್ತಾಳೆ ಕೇಳಿ. ಎಲ್ಲಾರೂ ನಕ್ಕರು. ನಗುವಲ್ಲೂ ನೋವಿತ್ತು. ; ತೀರಥ್ ಸಿಂಗ್ ಅವರೇ ಕೇಳಿಸಿಕೊಳ್ಳಿ, ಇದು ನೆಲಮಟ್ಟದರೊಚ್ಚು.

ಅಧಿಕಾರದಲ್ಲಿರುವವರಿಗೆ ಅಧಿಕಾರವೇನೋ ಇರುತ್ತದೆ. ಅದಕ್ಕೆ ಬೇಕಾದ ಜವಾಬ್ದಾರಿ ಇರುತ್ತದೆಯೇ? ಅದಕ್ಕೂ ಹೆಚ್ಚಾಗಿ, ತಾವು ಬಾಯಿ ತೆರೆದು ಮಾತನಾಡುವ ಸಮಸ್ಯೆಗಳನ್ನು ಎದುರಿಸುತ್ತಿರುವ ನಾಗರಿಕರ ಸಲುವಾಗಿ ಹೃದಯವಂತಿಕೆ ಇರುತ್ತದೆಯೇ? ಬಾಯಿಗೆ ಬಂದಂತೆ ಮಾತನಾಡುವವರನ್ನು ತಡೆಯುವವರು ಯಾರು?

ಇದನ್ನೂ ಓದಿ :ಹೆಚ್ಚು ಪ್ರಮಾಣದಲ್ಲಿ ಪಡಿತರ ಪಡೆಯಲು 20 ಮಕ್ಕಳನ್ನು ಯಾಕೆ ಹೆರಬಾರದು: ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್  ಪ್ರಶ್ನೆ

Published On - 12:52 pm, Tue, 23 March 21