Tirath Singh Rawat Controversy ; ತೀರಥ್ ಸಿಂಗ್ ಅವರಿಗೊಂದು ಪತ್ರ : ದಿನಕ್ಕೊಂದು ನೌಟಂಕಿ ಆಯಿತಲ್ಲ ನಿಮ್ಮದು!

‘ಕಾಯಿಪಲ್ಲೆ ಮಾರುವ ಸಂತೆಗೆ ಹೋಗಿಬನ್ನಿ ಕೊತ್ತಂಬರಿ ಸೊಪ್ಪು, ನಿಂಬೆಹಣ್ಣು, ಪುದಿನಾ ಮಾರುವ ಎಳೆಯ ಮಕ್ಕಳನ್ನೊಮ್ಮೆ ನೋಡಿ ನಿಮ್ಮ ಮಕ್ಕಳನ್ನೂ ಆನ್‍ಲೈನ್ ಓದುವ ಉಳ್ಳವರ ಮಕ್ಕಳನ್ನೂ ಕೆಲಹೊತ್ತು ನೆನೆಯಿರಿ. ಗಢವಾಲದ ಪನೀರು ಅಷ್ಟು ಪ್ರಸಿದ್ಧವಿದ್ದರೆ ಅಲ್ಲಿನ ನಿವಾಸಿಗಳು ಹೆಚ್ಚು ಹೆಚ್ಚು ಪಶುಸಾಕಾಣಿಕೆಯನ್ನು ಹೈನುಗಾರಿಕೆಯನ್ನು ಮಾಡುವಂತೆ ಪ್ರೊತ್ಸಾಹಿಸುವ ಸವಲತ್ತುಗಳನ್ನು ಕೊಡಿ ರಾವತರೇ. ಏನೇನೋ ಮಾತಾಡಿ ನಗೆಪಾಟಲಾಗಬೇಡಿ, ಅಂತಷ್ಟೇ ಹೇಳೋದು.’ ರೇಣುಕಾ ನಿಡಗುಂದಿ

Tirath Singh Rawat Controversy ; ತೀರಥ್ ಸಿಂಗ್ ಅವರಿಗೊಂದು ಪತ್ರ : ದಿನಕ್ಕೊಂದು ನೌಟಂಕಿ ಆಯಿತಲ್ಲ ನಿಮ್ಮದು!
ರೇಣುಕಾ ನಿಡಗುಂದಿ
Follow us
ಶ್ರೀದೇವಿ ಕಳಸದ
|

Updated on: Mar 23, 2021 | 3:25 PM

ಉತ್ತರಾಖಂಡದ ಮಾನ್ಯ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರೇ, ಇತ್ತೀಚೆಗೆ ಹರಿದ್ವಾರದಲ್ಲಿ ನಡೆಯಲಿರುವ ಕುಂಭಮೇಳದ ಸಂದರ್ಭದಲ್ಲಿ ಸುರಕ್ಷತಾ ಮಾನದಂಡಗಳನ್ನು ಸಡಿಲಿಸುವುದನ್ನು ಸಮರ್ಥಿಸಿಕೊಳ್ಳುತ್ತಾ ನಂಬಿಕೆ, ಶ್ರದ್ಧೆ, ಆಸ್ಥೆ ಇದ್ದಲ್ಲಿ ಎಂಥ ವೈರಸ್​ ಅನ್ನೂ ಸೋಲಿಸಬಹುದು ಎಂದಿದ್ದಿರಿ. ಇರಲಿ, ಸ್ವತಃ ಕೋವಿಡ್​ಗಾಗಿ ಚಿಕಿತ್ಸೆ ಪಡೆಯುತ್ತಿರುವ ನಿಮಗೀಗಾಗಲೇ ಈ ಹೇಳಿಕೆಯ ಸತ್ಯಾಸತ್ಯದ ಬಗ್ಗೆ ಮನವರಿಕೆ ಆಗಿರುತ್ತದೆ ಎಂದು ಭಾವಿಸಲಾಗುವುದು. ‘Ripped Jeans ಪತ್ರ ಅಭಿಯಾನ’ವನ್ನು ನಿನ್ನೆಗೇ ಮುಗಿಸೋಣವೆಂದರೆ ಮತ್ತೆರಡು ಅಸಂಬದ್ಧ ಹೇಳಿಕೆಗಳನ್ನು ಕೊಟ್ಟಿರಿ; ಮೊದಲನೆಯದು, ನಮ್ಮ ದೇಶವನ್ನು ಇನ್ನೂರು ವರ್ಷಗಳ ಕಾಲ ಅಮೆರಿಕನ್ನರು ಆಳಿದರು. ಎರಡನೆಯದು, ಕೋವಿಡ್ ಸಮಯದಲ್ಲಿ ಹೆಚ್ಚು ಪಡಿತರ ಪಡೆಯಲು ಹೆಣ್ಣುಮಕ್ಕಳು ಹೆಚ್ಚೆಚ್ಚು ಹೆರಬೇಕು. ಇರಲಿ, ಸದ್ಯಕ್ಕೆ ನಿಮಗೆ ಚಿಕಿತ್ಸೆ ಮತ್ತು ವಿಶ್ರಾಂತಿಯ ಅಗತ್ಯವಿದೆ. ಆದಷ್ಟು ಬೇಗ ಎಲ್ಲ ರೀತಿಯಿಂದಲೂ ನೀವು ಚೇತರಿಸಿಕೊಳ್ಳಿ. 

ಆದರೆ ನೆನಪಿಡಿ, ಸಹಜ ಮತ್ತು ಸಾಮಾನ್ಯ ಬದುಕಿಗೆ ತೆರೆದುಕೊಳ್ಳುವ ಪ್ರಯತ್ನದಲ್ಲಿಯೇ ನಮ್ಮ ದೇಶದ ಹೆಣ್ಣುಮಕ್ಕಳು ಈತನಕವೂ ಹೆಚ್ಚೇ ಶ್ರಮಪಡಬೇಕಾದ ಅನಿವಾರ್ಯವಿದೆ. ಇಂಥ ಪರಿಸ್ಥಿತಿಯಲ್ಲಿ ನಿಮ್ಮ ಮತ್ತು ನಿಮ್ಮಂಥವರ ಪುರುಷ ಪಾರಮ್ಯದ ಹೇಳಿಕೆಗಳು ಸಮಾಜವನ್ನು ಮತ್ತಷ್ಟು ‘ಅಂಧಶ್ರದ್ಧೆ’ಗೆ ನೂಕುವ ಅಪಾಯವಿದೆ. ಆದ್ದರಿಂದ ಸಮಾಜದ ವಾಸ್ತವಿಕ ನೋಟಗಳ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಈವತ್ತೂ ಈ ಪತ್ರ ಅಭಿಯಾನ ಜಾರಿಯಲ್ಲಿರುತ್ತದೆ.  

ಪರಿಕಲ್ಪನೆ : ಶ್ರೀದೇವಿ ಕಳಸದ

ಲೇಖಕಿ, ಕವಿ ರೇಣುಕಾ ನಿಡಗುಂದಿ ಅವರು ತಮ್ಮ ಸಹೋದ್ಯೋಗಿಯೊಂದಿಗೆ ಈ ಸಂದರ್ಭವನ್ನೆಳೆದು ಮಾತಿಗಾರಂಭಿಸಿದರು. ನಂತರ ಅವರ ಮನಸ್ಸಿನಲ್ಲಿ ಯಾವೆಲ್ಲ ವಿಚಾರಗಳು ಎದ್ದವು? ಓದಿ. 

ರಾವತರೇ,

ಇವತ್ತು ಬೆಳಿಗ್ಗೆ ಆಫೀಸಿನಲ್ಲಿ ನನ್ನ ಉತ್ತರಾಖಂಡದ ಕೊಲೀಗ್ ದೀಪಚಂದ್ರ ದೊಬ್ರಿಯಾಲ್‍ಗೆ, ‘ಅರೆ ದೀಪಕ್ ಯೆಹ್ ತೀರಥ್ ಸಿಂಗ್ ರಾವತ್ ಯಾರಪಾ, ಏನೇನೋ ಹೇಳಿಕೆ ಕೊಟ್ಟು ಲಫಡಾದಲ್ಲಿ ಬೀಳ್ತಾನೆ’ ಅಂದಿದ್ದಕ್ಕೆ ಅವನ ಉತ್ತರ ಕೇಳಿ ನಾನು ಗಪ್ಚುಪ್ ಆಗಬೇಕಾಯ್ತು.

‘ಯಾರಿವನು, ಯಾರು ಮುಖ್ಯಮಂತ್ರಿ ಮಾಡಿದ್ರೋ’ ಅಂತ ಮುಖಕಿವುಚಿ ಹಳೆಯ ಮುಖ್ಯಮಂತ್ರಿಗಳ ಘನತೆ ಗೌರವವನ್ನು ಬಣ್ಣಿಸಿದ. ಪೂರ್ವ ಮಂತ್ರಿಗಳಾಗಿದ್ದ ಮೇಜರ್ ಜನರಲ್ ಖಂಡೂರಿ, ದಿವಂಗತ ಎನ್. ಡಿ. ತಿವಾರಿ, ಹರೀಶ್ ರಾವತ್, ತ್ರಿವೇಂದ್ರ ಸಿಂಗ್ ರಾವತ್​ ಎಂತೆಂಥಾ ಒಳ್ಳೆಯ ಮಂತ್ರಿಗಳನ್ನು ಜನರು ನೆನಪಿಟ್ಟುಕೊಳ್ತಾರಲ್ಲವೇ? ದೀಪಕನಿಗೆ ಇವರೆಲ್ಲ ಗೊತ್ತು, ನೀವು ಯಾರಪ್ಪಾ ಅಂತ ಅವನಿಗೂ ಗೊತ್ತಿಲ್ಲವಂತೆ.

ಹೌದಲ್ಲವಾ ರಾವತರೇ ಯಾಕಿಂಗೆ ನೀವು ಉಪದ್ವ್ಯಾಪಿ ಹೇಳಿಕೆ ಕೊಟ್ಟು ಜನ ನಗುವಂತೆ ಮಾಡುತ್ತಿದ್ದಿರಿ? ಪಾಪ ಇಲ್ಲಿನ ಗಢವಾಲಿಗಳಿಗೆ ನಿಮ್ಮ ಹೆಸರು ಹೇಳಲೂ ಕೇಳಿಸಿಕೊಳ್ಳಲೂ ಮುಜಗರವಾಗ್ತಿದೆ. ಹೊಟ್ಟೆಪಾಡಿಗೆ ಎಲ್ಲೆಲ್ಲೋ ಹೋಗಿ ದುಡಿವ ಜನರಿಗೆ ಮನೆಯ ಬಗ್ಗೆ ಊರುಕೇರಿಯ ಬಗ್ಗೆ ಯೋಚಿಸಲೇ ಪುರಸೊತ್ತಿಲ್ಲ. ಇನ್ನು ನೀವೊಬ್ರು ಹೀಗೆ ಮಾತಾಡಿ ಅವರ ತಲೆನೂ ಕೆಡಸ್ತಿದಿರಿ. ಎಂತಾ ತಲೆಬಿಸಿ ಇದು. ಎಲ್ಲರಿಗೂ ತಮ್ಮೂರೆಂದರೆ ಚೆಂದವೇ. ಅದೆಷ್ಟು ಅಭಿಮಾನವಿರುತ್ತದೆ ನಮಗೆ ಅದೆಲ್ಲ ಹೇಳಿಕೊಳ್ಳಲು ಇಲ್ಲಿನವರ ಮುಂದೆ. ಹೀಗೆ ಪಹಾಡಿಗಳ ಮರ್ಯಾದೆ ತೆಗೆಯುವಂತೆ ಮಾತಾಡಬೇಡಿ. ನಿಮ್ಮ ಹಿನ್ನೆಲೆ ಅವರಿಗೆ ಎಳ್ಳಷ್ಟೂ ಗೊತ್ತಿಲ್ಲವಂತೆ. ಈಗಷ್ಟೇ 2021 ರ ಮಾರ್ಚ 10ರಂದು ಮುಖ್ಯಮಂತ್ರಿಯ ಶಪಥವನ್ನು ತೆಗೆದುಕೊಂಡಿದ್ದೀರಿ. ಇನ್ನೂ ಹತ್ತೇ ತಿಂಗಳಿದೆ ನಿಮ್ಮ ಆಡಳಿತಾವಧಿ. ನಂತರದ ಚುನಾವಣೆಯಲ್ಲಿ ನೀವು ಗೆಲ್ತಿರೋ ಬಿಡ್ತೀರೋ ಆದರೆ ನಿಮ್ಮ ಜನರ ಮುಂದೆ ನಗೆಪಾಟಲಾಗಬೇಡಿ. ಇರುವಷ್ಟು ಅವಧಿಯಲ್ಲಿಯೇ ಒಳ್ಳೆಯ ಕೆಲಸ ಮಾಡಿರಿ.

ಪತ್ರಿಕೋದ್ಯಮ ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದಿದ್ದೀರಂತೆ. ನಮ್ಮ ಭಾರತವನ್ನು ಆಳಿದವರು ಬ್ರಿಟಿಷರು ಅಂತಾ ಶಾಲೆಗೆ ಹೋಗದವರೂ ಹೇಳಬಲ್ಲರು. ಆದರೆ ನೀವು ಅಮೆರಿಕಾ ನಮ್ಮನ್ನು ಇನ್ನೂರು ವರ್ಷ ಆಳಿತು, ನಮ್ಮನ್ನು ಗುಲಾಮರನ್ನಾಗಿಸಿತ್ತು ಅಂತಿದ್ರೆ ನಾವು ಎಲ್ಲಿ ಹೋಗಿ ಸಾಯಬೇಕು ಹೇಳಿ? ಸದ್ಯ ನಿಮ್ಮ ಗಢವಾಲದ ಜನ ಮುಗ್ಧರು. ಭೋಳೆ ಸ್ವಭಾವದವರು ಅವರೇನೂ ಅನ್ನೋದಿಲ್ಲ. ಆದರೆ ಇಲ್ಲಿದ್ದಾರಲ್ಲಾ ಮಹಾನಗರದಲ್ಲಿ ಅವರಿಗೆಷ್ಟು ಇರಿಸು ಮುರಿಸಾಗುತ್ತಿದೆ ನಿಮಗೇನು ಅಂದಾಜಿಲ್ಲ ಬಿಡಿ.

ಎರಡು ದಶಕಗಳ ಹಿಂದಷ್ಟೇ ದೇವಭೂಮಿ ಉತ್ತರಾಂಚಲ ಉತ್ತರಾಖಂಡವಾಗಿ ಬದಲಾಗಿತ್ತು. ಆ ಹೊಸ ರಾಜ್ಯದ ಮೊದಲ ಶಿಕ್ಷಣ ಮಂತ್ರಿ ನೀವೇ ಆಗಿದ್ದಿರಿ. ಎಬಿವಿಪಿಯ ಸದಸ್ಯರು, ಮತ್ತು ಸಾಂಸ್ಥಿಕ ಸದಸ್ಯರಾಗಿ ರಾಜಕೀಯಕ್ಕೆ ಬಂದವರು. ಉತ್ತರ ಪ್ರದೇಶದ ಭಾರತೀಯ ಜನತಾ ಯುವ ಮೋರ್ಚಾದ ಉಪಾಧ್ಯಕ್ಷರಾಗಿದ್ದೀರಿ. 1997ರಲ್ಲಿ ಉತ್ತರಪ್ರದೇಶದ ವಿಧಾನ ಪರಿಷತ್ತಿನ ಸದಸ್ಯರಾಗಿ ಮತ್ತು ಶಾಸಕಾಂಗ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ. 1983 ರಿಂದ 1988ರವರೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಪ್ರಮುಖ ಕಾರ್ಯಕರ್ತರಾಗಿ ಕೆಲಸ ಮಾಡಿದ್ದೀರಿ. ಇದು ನಿಮ್ಮ ಸಂಸ್ಕಾರದ ಪಾಠಶಾಲೆ.

tirath singh rawat controversy

ಸೌಜನ್ಯ : ಅಂತರ್ಜಾಲ

ನೋಡಿದ್ರಾ ರಾವತರೇ, ನಿಮ್ಮ ಊರಿನ  ನನ್ನ ಸಹೋದ್ಯೋಗಿಯ ಪ್ರತಿಕ್ರಿಯೆಯಿಂದಾಗಿ ನಿಮ್ಮ ಪ್ರವರಗಳನ್ನು ಜಾಲಾಡಿ ಅರ್ಥಮಾಡಿಕೊಂಡು ಅದನ್ನವರಿಗೆ ಹೇಳಬೇಕಾಯಿತು. ದಿಲ್ಲಿಗೆ ಬಂದರೆ ಸಮಯ ತೆಗೆದು ನಾಲ್ಕಾರು ದಿನವಿದ್ದು ಕೇಜರಿವಾಲರಂತೆ ದಿಲ್ಲಿಯ ಜನರನ್ನು ಹತ್ತಿರದಿಂದ ನೋಡಿ ಮಾತಾಡಿಸಿ ಬನ್ನಿ. ಓಖಲಾ, ಸಂಗಮ್ ವಿಹಾರ್, ಖಾನ್‍ಪುರ್, ತುಘಲಕಾಬಾದ್, ಜೆಜೆ ಕಾಲೊನಿ ಏರಿಯಾಗಳಲ್ಲಿ ಸುತ್ತಾಡಿ ಇಲ್ಲಿನ ಜನರ ಬದುಕು ಬವಣೆಗಳ ಬಗ್ಗೆ ತುಸುವಾದರೂ ಅರ್ಥವಾಗುತ್ತದೆ. ಓಖಲಾಕ್ಕೆ ಸುತ್ತಮುತ್ತಲಿನ ಝುಗ್ಗಿಜೋಪಡಿಗಳ ಜನರನ್ನು ತಪ್ಪದೇ ವಿಚಾರಿಸಿಕೊಳ್ಳಿ ಅವರಿಗೆಷ್ಟು ಜನ ಮಕ್ಕಳು, ಎಷ್ಟೆಷ್ಟು ರೇಶನ್ ಅಕ್ಕಿ, ಗೋಧಿ, ಸಕ್ಕರೆ ಸಿಕ್ಕಿದೆ ಎಂಬ ದತ್ತಾಂಶಗಳನ್ನು ಪಟ್ಟಿಮಾಡಲು ನಿಮ್ಮ ವಂದಿಮಾಗಧರಿಗೆ ಹೇಳಿ. ಸ್ವಾಮಿ ಇಲ್ಲಿನ ಪಡಿತರ ವ್ಯಾಪಾರಿಗಳ ಭ್ರಷ್ಟತನ ನೋಡಿದರೆ ಕಣ್ಣೀರು ಕಪಾಳಕ್ಕೆ ಬರಬಹುದು.

ಭಕ್ತರೆಲ್ಲ ‘ಹರ್ ಹರ್ ಮೋದಿ ಘರ್ ಘರ್ ಮೋದಿ, ಮೋದಿ ಹೈ ತೋ ಮುಮಕಿನ್ ಹೈ’ ಅಂತ ಕುಣಿದಾಡುತ್ತಾರೆ ಹೊರತು ಅವರಿಗೆ ಮೈಮುರಿದು ದುಡಿಯುವುದು, ಹಸಿವೆ ಎಂದರೇನೇಂದು ಗೊತ್ತಿಲ್ಲದವರು. ಲಾಕ್​ಡೌನಿನ ತಮ್ಮ ಭಾಷಣದಲ್ಲಿ ಪ್ರಧಾನಿಗಳು ತಮಟೆ ಬಾರಿಸಿರಿ ಎಂದಾಗ ಜನರು ಶಂಖವನ್ನೂ ಊದಿದರು ತಮಟೆಯ ಜೊತೆಗೆ ಅದೇ ರೀತಿ ರೇಶನ್ ಕಾರ್ಡ್ ಇಲ್ಲದಿದ್ದರೂ, ಇಲ್ಲದವರಿಗೂ ಆಧಾರ್ ಕಾರ್ಡ್ ಇದ್ದರೂ ಆಯ್ತು, ರೇಶನ್ ಕೊಡ್ರಪ್ಫಾ, ನನ್ನ ದೇಶದ ಯಾವೊಬ್ಬರು ಹಸಿದ ಹೊಟ್ಟೆಯಲ್ಲಿ ಮಲಗಬಾರದು’ ಅಂತ ಪ್ರಧಾನಿಯವರು ಗದ್ಗದಿತರಾಗಿ ರೇಶನ್ ಹಂಚಲು ಹೇಳಿದ್ದು ಈ ವ್ಯಾಪಾರಿಗಳಿಗೆ ಅರ್ಥವೇ ಆಗಲಿಲ್ಲವೇ ಯಾರಿಗೂ! ನೀವೇ ನೋಡಿ ಇದನ್ನು ದಡ್ದತನ ಅಂತಿರೋ ನೀಚತನ ಅಂತಿರೋ! ಇನ್ನು ವಾಸ್ತವ ಏನಂತ ಗೊತ್ತಾ ನಿಮಗೇ ?

ಈ ನುಂಗಪ್ಪಗಳು ಏನಾದರೊಂದು ಒಣ ಕಾರಣ ಹೇಳಿ ರೇಶನ್ ಕಾರ್ಡ್ ಇಲ್ಲದ ನಮ್ಮ ಜಾಡಮಾಲಿಗೆ ರೇಶನ್ ಕೊಡಲಿಲ್ಲ. ಇದೇ ಪ್ರಧಾನಿಗಳು ‘ಒಂದು ದೇಶ ಒಂದು ರೇಶನ್ ಕಾರ್ಡ್’ ಮಾಡಹೊರಟಿದ್ದಾರಲ್ಲ, ನಮ್ಮ ಜಾಡಮಾಲಿ ಸುನೀಲನ ಹೆಂಡತಿಗೆ ಆಧಾರ್ ಕಾರ್ಡ್, ರೇಶನ್ ಕಾರ್ಡ್ ಇದ್ದರೂ ಅದು ಇಲ್ಲಿನದಲ್ಲ, ಎಲ್ಲಿದೆಯೋ ಅಲ್ಲಿಗೇ ಹೋಗಿ ತಗೊಳ್ಳಿ’ ಅಂತ ಅಂಗಡಿಯವರು ನಾಯಿಯನ್ನು ಅಟ್ಟುವಂತೆ ಅಟ್ಟಿದ್ದರು. ಇವತ್ತಿಗೂ ಅವರು ರೇಶನ್ ಅಕ್ಕಿ, ಗೋಧಿಯ ಮುಖ ಕೂಡ ಕಂಡಿಲ್ಲ. ಫ್ರೀ ರೇಶನ್ ಈಗ ಯಾರಿಗೂ ಸಿಗುತ್ತಿಲ್ಲ ಅಂತ ನನ್ನ ಮನೆಗೆಲಸದವಳೂ ಹೇಳಿದಳು. ಲಾಕ್​ಡೌನಿನಲ್ಲಿ ಸಾವಿರಾರು ದಾನಿಗಳು, ಸಹೃದಯರು ತಮ್ಮ ಸಂಪರ್ಕದಲ್ಲಿನ ಬಡವರಿಗೆ ಹತ್ತು ಕೇಜಿ, ಇಪ್ಪತ್ತು ಕೇಜಿ ಅಕ್ಕಿ, ಗೋಧಿ ಹಿಟ್ಟು, ಎಣ್ಣೆ, ಉಪ್ಪು ಕೊಟ್ಟಿದ್ದಾರೆ. ನೀವು ಹೇಳಿದಂತೆ ಅವರಿಗೇನಾದರೂ ಹತ್ತು ಮಕ್ಕಳಿದಿದ್ದರೆ ಯಾವತ್ತೋ ನೇಣು ಹಾಕಿಕೊಂಡಿರುತ್ತಿದ್ದರು ಉಣ್ಣಲು ಇರದೇ.

‘ಮಕ್ಕಳಿರಲವ್ವ ಮನೆ ತುಂಬ’ ಅಂತ ಹರಸುವ, ಬಯಸುವ ಕಾಲವಿದ್ದಾಗ ಮನೆಗೆ ಹೊಲ, ಗದ್ದೆಗಳಿಂದ ಧಾರಳವಾಗಿ ಉಂಡು ಮಿಗಿಸುವಷ್ಟು ಕಾಳುಕಡಿ ಸಿಗುತ್ತಿತ್ತು. ಎಷ್ಟು ಮಕ್ಕಳಿದ್ದರೂ ಉಣ್ಣಲು ಕೊರತೆಯಿದ್ದಿಲ್ಲ. ರುಪಾಯಿ ಇಷ್ಟು ಕುಸಿದಿರಲಿಲ್ಲ. ಈಗ ಎಷ್ಟು ದುಡಿದರೂ ಸಾಕಾಗುವುದಿಲ್ಲ, ಎಷ್ಟು ಗಳಿಸಿದರೂ ಹಾಳುಬಾವಿಗೆ ಹಾಕಿದಂತೆ ತಳವೇ ಹತ್ತುವುದಿಲ್ಲ. ಬದುಕೇ ದುರ್ಭರವಾಗಿದೆ. ಜನಸಂಖ್ಯೆ ಹೆಚ್ಚಾಗಿದೆ, ಬೆಲೆಗಳು ಗಗನಕ್ಕೇರಿವೆ. ಕಳೆದ ವರ್ಷ ಲಾಕ್ಡೌನಿನ ಕಾಲದಲ್ಲಿ ಇದ್ದ ಉದ್ಯೋಗವನ್ನೂ ಕಳಕೊಂಡು ಸಾವಿರಾರು ಮೈಲು ನಡೆದುಕೊಂಡೇ ಹೊರಟ ವಲಸೆ ಕಾರ್ಮಿಕರು ಕೆಲವರು ಊರಲ್ಲಿಯೇ ಇದ್ದಾರೆ, ಇನ್ನು ಕೆಲವರು ಸರಿಯಾದ ದುಡಿಮೆ ಇಲ್ಲದೇ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಕಾರ್ಮಿಕರ ಈ ಅಸಹಾಯಕತೆಯನ್ನು ದೊಡ್ದದೊಡ್ದ ಕಂಪನಿಗಳು ದುರ್ಬಳಕೆ ಮಾಡಿಕೊಂಡು ಕಡಿಮೆ ವೇತನ ಕೊಟ್ಟು ಎಂಟು ತಾಸಿಗಿಂತಲೂ ಹೆಚ್ಚು ದುಡಿಸಿಕೊಳ್ಳುತ್ತಿವೆ. ಸರಕಾರ ನಿರ್ಧರಿಸಿದ ವೇತನವನ್ನೂ ಕೊಡುತ್ತಿಲ್ಲ ಈ ಕಂಪನಿಗಳು. ಇನ್ನು ಮಹಿಳೆಯರ ಪಾಡು ಹೇಗಿದೆಯೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸರಕಾರಿ ಇಲಾಖೆಗಳಲ್ಲಿ, ಕಚೇರಿಗಳಲ್ಲಿ ಯಾವ ಸ್ಥಾನಗಳೂ ಭರ್ತಿಯಾಗುತ್ತಿಲ್ಲ. ಔಟ್ ಸೋರ್ಸ್  ಗುತ್ತಿಗೆದಾರರಿಂದ ದುಡಿಸಿಕೊಳುತ್ತಿವೆ. ಇನ್ನು ಮೋದಿಯವರು ಸೃಷ್ಟಿಸುವ ಲಕ್ಷ ಉದ್ಯೋಗಗಳು ಎಲ್ಲಿವೆ ಸ್ವಾಮಿ? ಹೆಚ್ಚು ಮಕ್ಕಳನ್ನು ಹೆತ್ತವರೆಂದು ರೇಶನ್ ಒಂದು ಕೊಟ್ಟರೆ ಮುಗೀತಾ? ಅವಕ್ಕೆ ಸರಿಯಾದ ಶಿಕ್ಷಣ, ಉದ್ಯೋಗ ಬೇಡವೇ? ಲಾಕ್ಡೌನಿನಲ್ಲಿ ಲಕ್ಷಾಂತರ ಮಕ್ಕಳು ಶಾಲೆಬಿಟ್ಟು ಬೀದಿಗೆ ಬಿದ್ದಿವೆ. ಬಡವರ ಮಕ್ಕಳು ದುಡಿಮೆಗೆ ಬಿದ್ದಿವೆ. ಕಾಯಿಪಲ್ಲೆ ಮಾರುವ ಸಂತೆಗೆ ಹೋಗಿಬನ್ನಿ ಕೊತ್ತಂಬರಿ ಸೊಪ್ಪು, ನಿಂಬೆಹಣ್ಣು, ಪುದಿನಾ ಮಾರುವ ಎಳೆಯ ಮಕ್ಕಳನ್ನೊಮ್ಮೆ ನೋಡಿ ನಿಮ್ಮ ಮಕ್ಕಳನ್ನೂ ಆನ್‍ಲೈನ್ ಓದುವ ಉಳ್ಳವರ ಮಕ್ಕಳನ್ನೂ ಕೆಲಹೊತ್ತು ನೆನೆಯಿರಿ.

tirath singh rawat controversy

ಈ ನಗುವಿನ ಭವಿಷ್ಯ?                             ಸೌಜನ್ಯ : ಅಂತರ್ಜಾಲ

‘ಪ್ರಧಾನಮಂತ್ರಿ ಮೋದಿ ಇಲ್ಲದೇ ಹೋಗಿದ್ದರೆ ನಮ್ಮ ದೇಶದ ಗತಿ ಏನಾಗಿರುತ್ತಿತ್ತೋ’ ಎಂದು ಸಾರ್ವಜನಿಕ ಸ್ಥಾನಗಳಲ್ಲಿ ಹೇಳುವುದನ್ನು ಬಿಡಿ. ಇದು ‘ಓವರ್ ಆಕ್ಟಿಂಗ್’ ಅಂತ ನಗು ಬರುತ್ತದೆ. ಅವರಿಲ್ಲದಿದ್ದರೂ ದೇಶ ಇರುತ್ತದೆಂಬ ಸತ್ಯ ಗೊತ್ತಿರಲಿ. ನೈನಿತಾಲ್, ಪೌರಿ, ಗಢವಾಲದ ಹುಡುಗರು ಉದ್ಯೋಗ ಸಿಗದೇ ಇಲ್ಲಿನದೇ ಮದರ್ ಡೈರಿಯ ಪನೀರು, ಸೋಯಾಬೀನ್ ಚಾಪ್ಸ್ ಖರೀದಿಸಿ ‘ಗಢವಾಲದ ಪನೀರು’ ಅಂತ ಬೋರ್ಡ್​ ಹಾಕಿ ವ್ಯಾಪಾರ ಮಾಡುತ್ತಾರೆ. ಗಢವಾಲದ ಪನೀರು ಅಷ್ಟು ಪ್ರಸಿದ್ಧವಿದ್ದರೆ ಅಲ್ಲಿನ ನಿವಾಸಿಗಳು ಹೆಚ್ಚು ಹೆಚ್ಚು ಪಶುಸಾಕಾಣಿಕೆಯನ್ನು ಹೈನುಗಾರಿಕೆಯನ್ನು ಮಾಡುವಂತೆ ಪ್ರೊತ್ಸಾಹಿಸುವ ಸವಲತ್ತುಗಳನ್ನು ಕೊಡಿ ರಾವತರೇ. ನಮ್ಮ ಆಫೀಸಿನಲ್ಲೇ ಸುಮಾರು ಗಢವಾಲಿಗಳಿದ್ದಾರೆ. ಎಲ್ಲರೂ ಒಳ್ಳೆಯವರು. ತಾವು ಊರಿನಿಂದ ತರುವ ಸಣ್ಣ ಸಣ್ಣ ಸಕ್ಕರೆ ಗುಳಿಗೆ ಅಂಟಿಸಿರುವ ಬಾಲ್ ಮಿಠಾಯಿ, ಒಗ್ಗರಣೆಗೆ ‘ಜೋಖ್ಯಾ’ ಎಂಬ ಸಣ್ಣಸಣ್ಣ ಸಾಸಿವೆ ತರಹದ ಕಾಳುಗಳನ್ನು ತಂದುಕೊಡ್ತಾರೆ. ನನಗಂತೂ ನಮ್ಮ ಮನವರ್ ಸಿಂಗ್ ರಾವತನ ಹೆಂಡತಿ ಮಾಡುವ ‘ಸರಸೋಂ ಕಾ ಸಾಗ್’ ಅಂದರೆ ಜೀವ. ಪಹಾಡಿ ಶುಂಠಿ, ಪಹಾಡಿ ಬೆಳ್ಳುಳ್ಳಿ ಎಷ್ಟು ತೀಕ್ಷ್ಣ ಎಷ್ಟು ರುಚಿ. ಇಲ್ಲಿನ ಜನ ಪಹಾಡಿ ಆಲೂಗಡ್ದೆಯನ್ನಂತೂ ಹುಚ್ಚರಂತೆ ಕೊಳ್ತಾರೆ. ಆದ್ದರಿಂದ ‘ಗಢವಾಲ್ ಸ್ಟೋರ್’ ಎಂದು ಯುವಜನರು ಅಂಗಡಿಗಳನ್ನು ವ್ಯಾಪಾರವನ್ನೂ ಆರಂಭಿಸುವಂತೆ ಪ್ರೋತ್ಸಾಹಿಸಿರಿ. ಹಿಮಾಲಯದ ಸೆರಗಿನಲ್ಲಿರುವ ದೇವಭೂಮಿ ಎನ್ನುವ ಉತ್ತರಾಖಂಡ ಬಹಳ ಇಷ್ಟ ನಮಗೆಲ್ಲ. ಏನೇನೋ ಮಾತಾಡಿ ನಗೆಪಾಟಲಾಗಬೇಡಿ, ಅಂತಷ್ಟೇ ಹೇಳೋದು.

ಇದನ್ನೂ ಓದಿ : Tirath Singh Rawat Controversy: ತೀರಥ್ ಸಿಂಗ್ ಅವರಿಗೊಂದು ಪತ್ರ : ಜಾಸ್ತಿ ಮಕ್ಕಳನ್ನು ಹೆತ್ತು ಅವರನ್ನೂ ಕೂಲಿಗೆ ಕರೆದುಕೊಂಡು ಹೋಗಬೇಕೇನು?

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್