Sign In

By signing in or creating an account, you agree with Associated Broadcasting Company's Terms & Conditions and Privacy Policy.

Tirath Singh Rawat Controversy: ತೀರಥ್ ಸಿಂಗ್ ಅವರಿಗೊಂದು ಪತ್ರ : ಜಾಸ್ತಿ ಮಕ್ಕಳನ್ನು ಹೆತ್ತು ಅವರನ್ನೂ ಕೂಲಿಗೆ ಕರೆದುಕೊಂಡು ಹೋಗಬೇಕೇನು?

‘ನಮ್ಮೆಲ್ಲ ಕಷ್ಟಗಳಿಗೆ ನಾನು ಮೂರು ಮಕ್ಕಳನ್ನು ಮಾಡಿಕೊಂಡಿದ್ದೇ ಕಾರಣ. ಒಂದೇ ಮಗು ಮಾಡಿಕೊಂಡಿದ್ದರೆ ಇಷ್ಟು ಕಷ್ಟ ಬರುತ್ತಿರಲಿಲ್ಲ ಅಂತ ಅಮ್ಮ ಹೇಳಿದ್ದನ್ನು ನಾನೇ ಕೇಳಿಸಿಕೊಂಡಿದ್ದೇನೆ. ಶಾಲೆಗೆ ಹೋಗದ ಅವರೇ, ಹೆಚ್ಚು ಮಕ್ಕಳನ್ನು ಹಡೆದು ಕುಟುಂಬ ದೊಡ್ಡದಾಗಲು ಕಾರಣರಾದೆವು, ಅದೇ ಹೊರೆಯಾಯಿತು ಎಂದು ಅರ್ಥ ಮಾಡಿಕೊಂಡರು. ಆದರೆ ಸಮಾಜಶಾಸ್ತ್ರ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಉತ್ತರಾಖಂಡದ ಮುಖ್ಯಮಂತ್ರಿಗಳು ಕೊಟ್ಟ ಈ ಹೇಳಿಕೆಯನ್ನು ಹೇಗೆ ಗ್ರಹಿಸುವುದು?’ ರೇಣುಕಾ ಚಿತ್ರದುರ್ಗ

Tirath Singh Rawat Controversy: ತೀರಥ್ ಸಿಂಗ್ ಅವರಿಗೊಂದು ಪತ್ರ : ಜಾಸ್ತಿ ಮಕ್ಕಳನ್ನು ಹೆತ್ತು ಅವರನ್ನೂ ಕೂಲಿಗೆ ಕರೆದುಕೊಂಡು ಹೋಗಬೇಕೇನು?
ರೇಣುಕಾ ಚಿತ್ರದುರ್ಗ
Follow us
ಶ್ರೀದೇವಿ ಕಳಸದ
|

Updated on:Mar 23, 2021 | 1:30 PM

ಉತ್ತರಾಖಂಡದ ಮಾನ್ಯ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರೇ, ಇತ್ತೀಚೆಗೆ ಹರಿದ್ವಾರದಲ್ಲಿ ನಡೆಯಲಿರುವ ಕುಂಭಮೇಳದ ಸಂದರ್ಭದಲ್ಲಿ ಸುರಕ್ಷತಾ ಮಾನದಂಡಗಳನ್ನು ಸಡಿಲಿಸುವುದನ್ನು ಸಮರ್ಥಿಸಿಕೊಳ್ಳುತ್ತಾ ನಂಬಿಕೆ, ಶ್ರದ್ಧೆ, ಆಸ್ಥೆ ಇದ್ದಲ್ಲಿ ಎಂಥ ವೈರಸ್​ ಅನ್ನೂ ಸೋಲಿಸಬಹುದು ಎಂದಿದ್ದಿರಿ. ಇರಲಿ, ಸ್ವತಃ ಕೋವಿಡ್​ಗಾಗಿ ಚಿಕಿತ್ಸೆ ಪಡೆಯುತ್ತಿರುವ ನಿಮಗೀಗಾಗಲೇ ಈ ಹೇಳಿಕೆಯ ಸತ್ಯಾಸತ್ಯದ ಬಗ್ಗೆ ಮನವರಿಕೆ ಆಗಿರುತ್ತದೆ ಎಂದು ಭಾವಿಸಲಾಗುವುದು. ‘Ripped Jeans ಪತ್ರ ಅಭಿಯಾನ’ವನ್ನು ನಿನ್ನೆಗೇ ಮುಗಿಸೋಣವೆಂದರೆ ಮತ್ತೆರಡು ಅಸಂಬದ್ಧ ಹೇಳಿಕೆಗಳನ್ನು ಕೊಟ್ಟಿರಿ; ಮೊದಲನೆಯದು, ನಮ್ಮ ದೇಶವನ್ನು ಇನ್ನೂರು ವರ್ಷಗಳ ಕಾಲ ಅಮೆರಿಕನ್ನರು ಆಳಿದರು. ಎರಡನೆಯದು, ಕೋವಿಡ್ ಸಮಯದಲ್ಲಿ ಹೆಚ್ಚು ಪಡಿತರ ಪಡೆಯಲು ಹೆಣ್ಣುಮಕ್ಕಳು ಹೆಚ್ಚೆಚ್ಚು ಹೆರಬೇಕು. ಇರಲಿ, ಸದ್ಯಕ್ಕೆ ನಿಮಗೆ ಚಿಕಿತ್ಸೆ ಮತ್ತು ವಿಶ್ರಾಂತಿಯ ಅಗತ್ಯವಿದೆ. ಆದಷ್ಟು ಬೇಗ ಎಲ್ಲ ರೀತಿಯಿಂದಲೂ ನೀವು ಚೇತರಿಸಿಕೊಳ್ಳಿ. 

ಆದರೆ ನೆನಪಿಡಿ, ಸಹಜ ಮತ್ತು ಸಾಮಾನ್ಯ ಬದುಕಿಗೆ ತೆರೆದುಕೊಳ್ಳುವ ಪ್ರಯತ್ನದಲ್ಲಿಯೇ ನಮ್ಮ ದೇಶದ ಹೆಣ್ಣುಮಕ್ಕಳು ಈತನಕವೂ ಹೆಚ್ಚೇ ಶ್ರಮಪಡಬೇಕಾದ ಅನಿವಾರ್ಯವಿದೆ. ಇಂಥ ಪರಿಸ್ಥಿತಿಯಲ್ಲಿ ನಿಮ್ಮ ಮತ್ತು ನಿಮ್ಮಂಥವರ ಪುರುಷ ಪಾರಮ್ಯದ ಹೇಳಿಕೆಗಳು ಸಮಾಜವನ್ನು ಮತ್ತಷ್ಟು ‘ಅಂಧಶ್ರದ್ಧೆ’ಗೆ ನೂಕುವ ಅಪಾಯವಿದೆ. ಆದ್ದರಿಂದ ಸಮಾಜದ ವಾಸ್ತವಿಕ ನೋಟಗಳ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಈವತ್ತೂ ಈ ಪತ್ರ ಅಭಿಯಾನ ಜಾರಿಯಲ್ಲಿರುತ್ತದೆ.  

ಪರಿಕಲ್ಪನೆ : ಶ್ರೀದೇವಿ ಕಳಸದ

ನಿತ್ಯವೂ ಚಿತ್ರದುರ್ಗದಿಂದ ಚಳ್ಳಕೆರೆಗೆ ಪ್ರಯಾಣಿಸುತ್ತಾರೆ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೇಣುಕಾ ಚಿತ್ರದುರ್ಗ. ಅವರು ಬಸ್ಸಿನಲ್ಲಿ ಕುಳಿತೇ ಪತ್ರಿಸಿದ್ದು ಇಲ್ಲಿದೆ. 

ತೀರಥ್ ಸಿಂಗ್ ರಾವತ್ ಅವರೇ,

ಮೊನ್ನೆ ಹರಿದ ಜೀನ್ಸ್ ತೊಟ್ಟರೆ ಅದು ಕತ್ತರಿ ಸಂಸ್ಕೃತಿ ಅಂತ ಹೇಳಿಕೆ ಕೊಟ್ಟಿರಿ. ಈವತ್ತು ನೋಡಿದ್ರೆ ಜಾಸ್ತಿ ಮಕ್ಕಳನ್ನು ಮಾಡಿಕೊಳ್ಳಿ ಅಂತ ಕರೆ ಕೊಟ್ರಿ. ಅದಕ್ಕೇ ಯಾಕೆ ನಿಮ್ಮ ಹಿನ್ನೆಲೆಯನ್ನೊಮ್ಮೆ ತಿಳಿದುಕೊಳ್ಳಬಾರದು ಅನ್ನಿಸಿತು. ಮಹನೀಯ ತೀರಥ್ ಸಿಂಗ್ ರಾವತರು, ಸಮಾಜಶಾಸ್ತ್ರದಲ್ಲಿ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂದು ಗೂಗಲ್ ಹೇಳಿತು. ಉತ್ತರಾಖಂಡಕ್ಕೆ ಮುಖ್ಯಮಂತ್ರಿ ಆಗುವ ಮೊದಲು ಅಲ್ಲಿ ಶಿಕ್ಷಣ ಮಂತ್ರಿ ಆಗಿದ್ದಿರಿ ನೀವು. ನೀವೇ ಹೀಗೆ ಮಾತನಾಡಿದರೆ ಜನಸಾಮಾನ್ಯರ ಪಾಡೇನು? ಅಲ್ಲಿಗೆ ವಿದ್ಯೆಗೂ ಬುದ್ಧಿಗೂ ಸಂಬಂಧವಿಲ್ಲ ಅಂತಾಯಿತಲ್ಲ?

ಸಿದ್ದರಾಮಣ್ಣ ಬಡವರ ಮನೆ ಮಂದಿಗೆಲ್ಲ ಅಕ್ಕಿ, ತೊಗರಿಬೇಳೆ, ಎಣ್ಣೆ, ಉಪ್ಪು ಕೊಡುತ್ತೇವೆ ಅಂದಾಗ ನಾನಂತೂ ಸಂಭ್ರಮಿಸಿದ್ದೆ. ಆದರೆ ಕೆಲವರಿಗೆ ಈ ಯೋಜನೆ ಇಷ್ಟ ಆಗಿರಲಿಲ್ಲ. ಜನರಿಗೆ ಅಕ್ಕಿ, ಬೇಳೆ, ಉಪ್ಪು, ಎಣ್ಣೆ ಫ್ರೀಯಾಗಿ ಕೊಟ್ಟರೆ ಜನ ಸೋಮಾರಿ ಆಗುತ್ತಾರೆ. ಕೆಲಸಕ್ಕೆ ಹೋಗಲ್ಲ. ಫ್ರೀ ರೇಷನ್ ಸಿಗುತ್ತೆ, ಗ್ರ್ಯಾಂಟ್ ಮನೆ, ಫ್ರೀ ವಿದ್ಯುತ್, ಫ್ರೀ ನೀರು, ಶಾಲೆ ಫ್ರೀ ಎಲ್ಲವೂ ಫ್ರೀ ಆದಾಗ ಜನ ಸಿದ್ದರಾಮಣ್ಣ ಕೊಟ್ಟ ಅಕ್ಕಿ ಉಂಡು ಅರಾಮ ಮಲಗ್ತಾರೆ ಅಂತ ಕೆಲವು ಕಾರ್ಪೋರೇಟ್ ಮಂದಿ ತಗಾದೆ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಅಲ್ಲಾ ಸ್ವಾಮಿ… ವಿಜಯ್ ಮಲ್ಯ, ನೀರವ್ ಮೋದಿ ಮುಂತಾದ ದೊಡ್ಡ ಜನಗಳಿಗೆ ಕೋಟಿ ಸಾಲ ಕೊಟ್ಟು ನಂತರ ಮನ್ನಾ ಮಾಡುವುದನ್ನು ನೋಡಿ ಸುಮ್ಮನಿರುವ ನೀವು ಸಾಮಾನ್ಯ ಜನತೆಗೆ ಮೂಲಭೂತ ಸೌಕರ್ಯ ಕಲ್ಪಿಸಿದರೆ ಸೋಮಾರಿ ಆಗ್ತಾನೆ ಅಂತೀರಲ್ಲ! ಬರೀ ಅಕ್ಕಿ, ಎಣ್ಣೆ, ಉಪ್ಪು, ಬೇಳೆಯಿಂದ ಮನೆ ನಡೆಯುತ್ತಾ? ಎಂದು ಆಶ್ಚರ್ಯಪಟ್ಟದ್ದೂ ಉಂಟು. ಹಳ್ಳಿಯಲ್ಲಿ ಒಮ್ಮೆ ಭೇಟಿ ಕೊಟ್ಟರೆ ಕಡುಬಡವರಿಗೆ ಈ ಯೋಜನೆಯಿಂದ ಅದೆಷ್ಟು ಉಪಯೋಗವಿದೆ ಗೊತ್ತಾಗುತ್ತೆ. ಕೆಲವು ಕಡೆ ಈ ಯೋಜನೆ ದುರುಪಯೋಗ ಆಗಿದ್ರೂ ಶೇ. 80 ರಷ್ಟು ಬಡವರಿಗೆ ಉಪಯೋಗ ಆಗಿದೆ.

ಸಿದ್ದರಾಮಣ್ಣ ಒಮ್ಮೆ ಝೀ ಟಿವಿಯ ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮಕ್ಕೆ ಬಂದಾಗ ಈ ಕಥೆ ಹೇಳಿದ್ದರು; ಒಮ್ಮೆ ಅವರಿಗೆ ಜ್ವರ ಬಂದಾಗ ಅವರಮ್ಮ ಹಿಡಿ ಅನ್ನವನ್ನು ಮಗನಿಗೆ ತಿನ್ನಿಸಲು ಇಡೀ ಊರಿನ ಮನೆಗಳಿಗೆ ಅನ್ನ ಬೇಡಿ ಹೋದದ್ದನ್ನು ನೆನೆಸಿಕೊಂಡು ಗದ್ಗದಿತರಾಗಿದ್ದರು. ಆಗ ನಮ್ಮ ಮನೆಯಲ್ಲಿ ನಾ ಚಿಕ್ಕವಳಿದ್ದಾಗ ನಡೀತಿದ್ದ ಪ್ರಸಂಗ ನೆನಪಾಯಿತು. ಹೌದು. ನಮ್ಮನೇಲಿ ಆಗ ಆರು ಜನ ಇದ್ದೆವು.ಆದರೆ ದುಡಿಯೋರು ಅಪ್ಪ ಮಾತ್ರ, ಅದರಲ್ಲೂ ದುಡಿದ ಮುಕ್ಕಾಲು ಭಾಗ ಕುಡಿತಕ್ಕೆ ಹೋಗುತ್ತಿದ್ದ ಕಾಲ. ಅಪ್ಪ ಸಂತೆ ಮಾಡಿ ತಂದ ರಾಗಿಯೇ ಮುಖ್ಯ ಆಹಾರ. ಬೆಳಿಗ್ಗೆ ಶಾಲೆಗೆ ಹೋಗುವ ಮೊದಲು ಮುದ್ದೆ ಉಂಡು ಹೊರಡಬೇಕಿತ್ತು. ‌ಆರು ಜನಕ್ಕೆ ಕಾಲು ಕೇಜಿ ಅಕ್ಕಿಯ ಅನ್ನ ಅಷ್ಟೇ ಸಿದ್ದವಾಗುತ್ತಿತ್ತು. ನಾನು ಅಕ್ಕನಿಗೆ ‘ಅನ್ನ ಇಕ್ಕು’ ಅಂತ ಕೇಳಿದ್ರೆ, ‘ಮದ್ಯಾನ ಬಂದಾಗ ತಣ್ಣನ್ನ ಮುದ್ದೆ ಉಣ್ಣಕಾಗಲ್ಲ ಅದಕ್ಕೆ ಈಗ ಬಿಸೆ ಮುದ್ದೆ ಉಣ್ಣು, ಮದ್ಯಾನಕೆ ಅನ್ನ ಉಣ್ಣವಂತೆ ಅನ್ನೋಳು.’ ಆಗ  ಮಧ್ಯಾಹ್ನ ಆ ಮುದ್ದೆ ಒಳ್ಳೆ ಗಟ್ಟಿ ಚೆಂಡಿನಂತಾಗಿ ನುಂಗಲು ಕೊಡುವ ಕಷ್ಟ ನೆನೆದು ಬೆಳಗಿನ ಹೊತ್ತು ಬರಿ ಮುದ್ದೆ ಉಂಡು ಮೇಲೇಳುತ್ತಿದ್ದೆ.

ಇರಲಿ ಬಿಡಿ ಈಗ ಕಾಲ ಬದಲಾಗಿದೆ. ಅನ್ನಕ್ಕೆ ಶುಗರ್ ಕಾಯಿಲೆಯ ಶಾಪ ತಗುಲಿ ಸಿರಿವಂತರೂ ರಾಗಿ ಮುದ್ದೆಯ ಮೊರೆ ಹೋಗಿದ್ದಾರೆ. ನಮ್ಮನೆಯಲ್ಲಿ ಈಗ ಒಮ್ಮೊಮ್ಮೆ  ಅನ್ನ ಉಳಿದು ಹೊರಗೆ ಚೆಲ್ಲುವಾಗ ಅಥವಾ ನಾಯಿಗೆ ಹಾಕುವಾಗ ಈ ತುತ್ತು ಅನ್ನಕ್ಕಾಗಿ ಪರಿತಪಿಸಿದ ಕಾಲ ನೆನಪಾಗಿ ಹೊರಗೆ ಹಾಕುವಾಗ ಹೊಟ್ಟೆ ಉರಿಯುತ್ತದೆ.

ನಮ್ಮೆಲ್ಲ ಕಷ್ಟಗಳಿಗೆ ನಾನು ಮೂರು ಮಕ್ಕಳನ್ನು ಮಾಡಿಕೊಂಡಿದ್ದೇ ಕಾರಣ. ಒಂದೇ ಮಗು ಮಾಡಿಕೊಂಡಿದ್ದರೆ ಇಷ್ಟು ಕಷ್ಟ ಬರುತ್ತಿರಲಿಲ್ಲ ಅಂತ ಅಮ್ಮ ಹೇಳಿದ್ದನ್ನು ನಾನೆ ಕೇಳಿಸಿಕೊಂಡಿದ್ದೇನೆ. ಶಾಲೆಗೆ ಹೋಗದ ಅವರೇ, ಹೆಚ್ಚು ಮಕ್ಕಳನ್ನು ಹಡೆದು ಕುಟುಂಬ ದೊಡ್ಡದಾಗಲು ಕಾರಣರಾದೆವು. ಅದೇ ಹೊರೆಯಾಯಿತು ಎಂದು ಅರ್ಥ ಮಾಡಿಕೊಂಡರು. ಆದರೆ ಸಮಾಜಶಾಸ್ತ್ರ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮುಖ್ಯಮಂತ್ರಿಗಳು ಕೊಟ್ಟ ಈ ಹೇಳಿಕೆ ಹಾಸ್ಯಾಸ್ಪದಕ್ಕೂ ಮಿಗಿಲಾದುದು. ಅಲ್ಲ ಸ್ವಾಮಿ, ಅಗ್ಗದ ಆಸೆಗೆ ಮುಗ್ಗಿದ ಜೋಳ ಎನ್ನುವ ಗಾದೆ ಕೇಳಿಲ್ಲವೇ? ನೀವು ರೇಷನ್ ಕೊಡುತ್ತೀರಿ ಎಂದು ಜಾಸ್ತಿ ಮಕ್ಕಳನ್ನು ಮಾಡಿಕೊಂಡರೆ ಬಾಕಿ ಜವಾಬ್ದಾರಿ ನಿಭಾಯಿಸುವವರು ಯಾರು? ಅವರ ಬಟ್ಟೆಬರೆ, ಶಿಕ್ಷಣ ಇವುಗಳ ಹೊಣೆ ಯಾರಿಗೆ? ಜಾಸ್ತಿ ಮಕ್ಕಳನ್ನು ಹೆತ್ತುಕೊಂಡು ಅವರನ್ನೂ ನಮ್ಮ ಜೊತೆ ಕೂಲಿಗೆ ಕರೆದುಕೊಂಡು ಹೋಗಲೇ ಎಂದು ಬಡಜನರು ಕೇಳಬೇಕಷ್ಟೆ.

ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು ಈ ಥರ ಬೀಡುಬೀಸು ಹೇಳಿಕೆಗಳನ್ನು ಖಂಡಿತಾ ಕೊಡಬೇಡಿ. ಭಾರತದ ಜನಸಂಖ್ಯೆ ಈಗಾಗಲೇ ಮುಗಿಲು ಮುಟ್ಟಿದೆ. ಮಹಾನಗರಗಳಲ್ಲಿ ಜನಗಳು ಪಿತಪಿತಗುಟ್ಟುತ್ತಿದ್ದಾರೆ. ಅತೀ ಜನಸಂಖ್ಯೆಯಿಂದ ಜನಗಳಿಗೆ ಮೂಲಭೂತ ಸೌಕರ್ಯಗಳೇ ಸಿಗುತ್ತಿಲ್ಲ. ಸಂಪತ್ತು ಕೆಲವೇ ಜನರ ಪಾಲಾಗಿದೆ. ನಿಮ್ಮ ಮಾತು ಕಟ್ಟಿಕೊಂಡು ನೀವು ಕೊಡುವ ರೇಷನ್ ಗಾಗಿ ಮತ್ತೆ ಮಕ್ಕಳನ್ನು ಹೆತ್ತರೆ ಆ ಕುಟುಂಬದ ಪಾಡೇನು? ದೇಶದ ಗತಿಯೇನು! ಸ್ವಲ್ಪ ಯೋಚಿಸಿ ಹೇಳಿಕೆ ಕೊಡಿ ಮಾರಾಯ್ರೇ.

ಇದನ್ನೂ ಓದಿ :Tirath Singh Rawat Controversy; ತೀರಥ್ ಸಿಂಗ್ ಅವರಿಗೊಂದು ಪತ್ರ: ಕೇಳಿಸಿಕೊಳ್ಳಿ ಇದು ನೆಲಮಟ್ಟದ ರೊಚ್ಚು! 

Published On - 1:08 pm, Tue, 23 March 21

ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ