West Bengal Elections 2021: ಚುನಾವಣಾ ಕ್ಷೇತ್ರಗಳಲ್ಲಿ ಕಟ್ಟೆಚ್ಚರ, ಮೊದಲ ಹಂತದ ಮತದಾನಕ್ಕೆ ಮುನ್ನ ಕೇಂದ್ರ ಭದ್ರತಾ ಪಡೆಯ 650 ತಂಡ ನಿಯೋಜನೆ
ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಭದ್ರತಾ ಪಡೆಗಳ ಒಟ್ಟು 944 ತಂಡ ನಿಯೋಜನೆಯಾಗಲಿದೆ. ಇದು 2016ರ ವಿಧಾನಸಭೆ ಚುನಾವಣೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ನಿಯೋಜನೆಯಾದ ಭದ್ರತಾ ಪಡೆ ತಂಡಗಳ ಸಂಖ್ಯೆಗಿಂತ ಇದು ಅಧಿಕವಾಗಿದೆ.
ಕೊಲ್ಕತ್ತಾ: ಮಾರ್ಚ್ 27ರಂದು ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಲಿದ್ದು, ಮತಗಟ್ಟೆ ಮತ್ತು ಚುನಾವಣಾ ಕ್ಷೇತ್ರಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಮತದಾನ ನಡೆಯುವ ವಿಧಾನಸಭಾ ಕ್ಷೇತ್ರಗಳಲ್ಲಿ ಭದ್ರತೆಗಾಗಿ ಮಾರ್ಚ್ 25ಕ್ಕೆ ಮುನ್ನ ಕೇಂದ್ರ ಭದ್ರತಾ ಪಡೆಯ 650ಕ್ಕೂ ಹೆಚ್ಚು ತಂಡಗಳು ಪಶ್ಚಿಮ ಬಂಗಾಳದಲ್ಲಿ ನಿಯೋಜನೆಯಾಗಲಿದೆ. ಈಗಾಗಲೇ 125 ತಂಡ ಇಲ್ಲಿ ನಿಯೋಜನೆಯಾಗಿದ್ದು, ವಾರಾಂತ್ಯಕ್ಕೆ ಮುನ್ನ 169 ತಂಡಗಳು ಆಗಮಿಸಲಿವೆ.
ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಭದ್ರತಾ ಪಡೆಗಳ ಒಟ್ಟು 944 ತಂಡ ನಿಯೋಜನೆಯಾಗಲಿದೆ. ಇದು 2016ರ ವಿಧಾನಸಭೆ ಚುನಾವಣೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ನಿಯೋಜನೆಯಾದ ಭದ್ರತಾ ಪಡೆ ತಂಡಗಳ ಸಂಖ್ಯೆಗಿಂತ ಇದು ಅಧಿಕವಾಗಿದೆ. ಚುನಾವಣೆಗೆ ಮುನ್ನ ರಾಜ್ಯದಲ್ಲಿ ಇಷ್ಟೊಂದು ಭದ್ರತಾ ಪಡೆಗಳ ನಿಯೋಜನೆಯಾಗಿದ್ದು ಇದೇ ಮೊದಲು ಎಂದು ಮೂಲಗಳು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮೂಲಗಳ ಪ್ರಕಾರ 169 ತಂಡಗಳು ಈ ವಾರ ಪಶ್ಚಿಮ ಬಂಗಾಳಕ್ಕೆ ಬಂದು ತಲುಪಲಿವೆ. ಇದರಲ್ಲಿ 70 ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು 13 ಗಡಿ ಭದ್ರತಾ ಪಡೆ (BSF) ತಂಡ ಇರಲಿದೆ. 20 ಇಂಡೊ ಟಿಬೆಟಿಯನ್ ಗಡಿ ಪೊಲೀಸ್ (ITBP), 25 ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಮತ್ತು 41 ಸಶಸ್ತ್ರ ಸೀಮಾ ಬಲ (SSB) ತಂಡ ಇರಲಿದೆ.
ಮೊದಲ ಹಂತದ ಚುನಾವಣೆಯಲ್ಲಿ 650 ತಂಡಗಳನ್ನು ನಿಯೋಜನೆ ಮಾಡುವ ನಿರೀಕ್ಷೆ ಇದೆ ಎಂದು ಚುನಾವಣಾ ಆಯೋಗ ಹೇಳಿದೆ. 30 ವಿಧಾನಸಭಾ ಕ್ಷೇತ್ರಗಳ 10288 ಮತಗಟ್ಟೆಗಳಲ್ಲಿ ಮೊದಲ ಹಂತದ ಮತದಾನ ನಡೆಲಿದೆ. ಪ್ರತಿಯೊಂದು ಮತಗಟ್ಟೆಯಲ್ಲಿ 6 ಅರೆ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಮತಗಟ್ಟೆಯ ನಿರ್ವಹಣೆಗೆ ಭದ್ರತಾ ಪಡೆಯ ಸಿಬ್ಬಂದಿಗಳನ್ನು ಮಾತ್ರ ನಿಯೋಜಿಸಲಾಗುವುದು. ಅಲ್ಲಿ ಪ್ಲೈಯಿಂಗ್ ಸ್ವ್ಕಾಡ್ ಆಗಿಯೂ ಅವರನ್ನು ನಿಯೋಜನೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವಾರ ಬಂಗಾಳದಲ್ಲಿ ನಿಯೋಜನೆಯಾಗುವ 294 ಭದ್ರತಾ ಪಡೆಗಳಿಗೆ ಮತದಾನ ಇಲ್ಲದಿರು ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯವನ್ನು ನೀಡಲಾಗಿದೆ.
ಚುನಾವಣಾ ಆಯೋಗದ ಮೂಲಗಳ ಪ್ರಕಾರ ಬಂಗಾಳದಲ್ಲಿ 2019ರ ಲೋಕಸಭೆ ಚುನಾವಣೆಗೆ ಭದ್ರತಾ ಪಡೆಯ 842 ತಂಡಗಳನ್ನು ನಿಯೋಜಿಸಲಾಗಿತ್ತು. 2021 ಮಾರ್ಚ್ 18ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿಸಿ ಸಿಆರ್ ಪಿಎಫ್ ಮುಖ್ಯ ನಿರ್ದೇಶಕ ಕುಲದೀಪ್ ಸಿಂಗ್ ಅವರು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪೂರ್ವ ಕರ್ತವ್ಯಕ್ಕಾಗಿ 725 ತಂಡಗಳನ್ನು ನಿಯೋಜಿಸುವುದಾಗಿಹೇಳಿದ್ದಾರೆ. 725 ತಂಡಗಳ ಪೈಕಿ 415 ತಂಡಗಳು ಈಗಾಗಲೇ ಅಲ್ಲಿಗೆ ತಲುಪಿವೆ ಎಂದಿದ್ದರು ಸಿಂಗ್.
ಈ ಪೈಕಿ 350-370 ಸಿಆರ್ಪಿಎಫ್ ತಂಡಗಳಿರಲಿದ್ದು, ಯಾವ ಹಂತದ ಮತದಾನಕ್ಕೆ ಹೆಚ್ಚು ಭದ್ರತೆ ಒದಗಿಸಬೇಕು ಎಂಬುದರ ಬಗ್ಗೆ ಚುನಾವಣಾ ಆಯೋಗ ನಿರ್ಧರಿಸಲಿದೆ. ಕೇಂದ್ರ ಪಡೆಗಳ ಪ್ರತಿ ತಂಡದಲ್ಲಿ 100 ಸಿಬ್ಬಂದಿಗಳಿದ್ದು, ಮತದಾನ ಪೂರ್ವ ಕರ್ತವ್ಯಕ್ಕಾಗಿ 70,000ಕ್ಕಿಂತಲೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ತಿಂಗಳ ಆರಂಭದಲ್ಲಿ ಚುನಾವಣಾ ಆಯೋಗವು ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡ ಎಲ್ಲ ವೀಕ್ಷಕರೊಂದಿಗೆ ಸಭೆ ನಡೆಸಿತ್ತು. 1,600 ಕ್ಕೂ ಹೆಚ್ಚು ವೀಕ್ಷಕರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಭದ್ರತಾ ನಿರ್ವಹಣೆ ಮತ್ತು ಕೊವಿಡ್ -19 ಮಾರ್ಗಸೂಚಿಗಳನ್ನು ಒಳಗೊಂಡಂತೆ ವ್ಯವಸ್ಥಿತ ಮತದಾರರರಿಗೆ ಶಿಕ್ಷಣ ಮತ್ತು ಮತದಾರರ ಭಾಗವಹಿಸುವುಕೆ (SVEEP ) ಅಂಶಗಳ ಮೇಲೆ ಕೇಂದ್ರೀಕರಿಸುವಂತೆ ಚುನಾವಣಾ ಆಯೋಗ ವೀಕ್ಷಕರಿಗೆ ಹೇಳಿತ್ತು.
ಕಳೆದ ತಿಂಗಳು, ಸಿಆರ್‌ಪಿಎಫ್‌ನ 9 ತಂಡಗಳನ್ನು ಪುರುಲಿಯಾ ಮತ್ತು ಝಾರ್ ಗ್ರಾಮ್ ಜಿಲ್ಲೆಗಳಲ್ಲಿ ನಿಯೋಜಿಸಲು ಯೋಚಿಸಲಾಗಿತ್ತು. ಚುನಾವಣಾ ಆಯೋಗವು ಕೊಲ್ಕತ್ತಾದ ಸಶಸ್ತ್ರ ಸೀಮಾಬಲ್ (ಎಸ್‌ಎಸ್‌ಬಿ) ಮೂರು ತಂಡ, ಹೌರಾ ಪೊಲೀಸ್ ಕಮಿಷನರೇಟ್ ಪ್ರದೇಶದಲ್ಲಿ ಸಿಆರ್‌ಪಿಎಫ್‌ನ ನಾಲ್ಕು ತಂಡಗಳನ್ನು ಮತ್ತು ಗ್ರಾಮೀಣ ಹೌರಾದಲ್ಲಿ ಎರಡು ಕಂಪನಿಗಳನ್ನು ನಿಯೋಜಿಸಲು ಯೋಜನೆ ನಡೆಸಿದೆ ಎಂದು ಮಿಂಟ್ ವರದಿ ಮಾಡಿದೆ.
ಇದನ್ನೂ ಓದಿ: West Bengal Assembly Elections 2021: ಚುನಾವಣೆ ಸಮೀಪಿಸುತ್ತಿದ್ದಂತೆ ಕೊಲ್ಕತ್ತಾ ಮತದಾರನಾದ ನಟ ಮಿಥುನ್ ಚಕ್ರವರ್ತಿ
ವಿಶ್ಲೇಷಣೆ | ಪಶ್ಚಿಮ ಬಂಗಾಳ ಕದನ ಕಣ; ಮೊದಲ ಹಂತದಲ್ಲಿ ಬಿಜೆಪಿಗೆ ಅನುಕೂಲಕರ ಪರಿಸ್ಥಿತಿ