West Bengal Assembly Elections 2021: ಚುನಾವಣೆ ಸಮೀಪಿಸುತ್ತಿದ್ದಂತೆ ಕೊಲ್ಕತ್ತಾ ಮತದಾರನಾದ ನಟ ಮಿಥುನ್ ಚಕ್ರವರ್ತಿ
Mithun Chakraborty: ಈ ಹಿಂದೆ ಮುಂಬೈ ಮತದಾರರಾಗಿದ್ದ ಮಿಥುನ್ ಚಕ್ರವರ್ತಿ ಮತ್ತು ಅವರ ಕುಟುಂಬ ಪಶ್ಚಿಮ ಬಂಗಾಳದ ಕಾಶೀಪುರ್ ಬೆಲ್ಗಾಚಿಯಾ ಚುನಾವಣಾ ಕ್ಷೇತ್ರದ ಮತದಾರರಾಗಿ ನೋಂದಣಿ ಮಾಡಿಕೊಂಡಿದ್ದಾರೆ.
ಕೊಲ್ಕತ್ತಾ: ಇತ್ತೀಚೆಗೆ ಬಿಜೆಪಿ ಸೇರಿದ್ದ ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಇದೀಗ ಕೊಲ್ಕತ್ತಾದ ಮತದಾರರಾಗಿದ್ದಾರೆ. ಈ ಹಿಂದೆ ಮುಂಬೈ ಮತದಾರರಾಗಿದ್ದ ಮಿಥುನ್ ದಾದಾ ಮತ್ತು ಅವರ ಕುಟುಂಬ ಪಶ್ಚಿಮ ಬಂಗಾಳದ ಕಾಶೀಪುರ್ ಬೆಲ್ಗಾಚಿಯಾ ಚುನಾವಣಾ ಕ್ಷೇತ್ರದ ಮತದಾರರಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಪಶ್ಚಿಮಬಂಗಾಳದ ಮತದಾರ ಆಗಿರುವುದರಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮಿಥುನ್ ಚಕ್ರವರ್ತಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ.
ನಮ್ಮ ಮನೆಯ ಮತದಾರರಾಗಿ ಅವರು ನೋಂದಣಿ ಮಾಡಿಕೊಂಡಿದ್ದಾರೆ. ವೈಯಕ್ತಿಕ ವಿಷಯಕ್ಕಾಗಿ ಅವರು ಕೊಲ್ಕತ್ತಾಗೆ ಬಂದರೆ ನಮ್ಮ ಮನೆಯಲ್ಲಿಯೇ ಉಳಿದುಕೊಳ್ಳುತ್ತಾರೆ ಎಂದು ಮಿಥುನ್ ಅವರ ಸಂಬಂಧಿ ಶರ್ಮಿಷ್ಠಾ ಸರ್ಕಾರ್ ಮಾಧ್ಯಮದವರಲ್ಲಿ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭಾ ಮಾಜಿ ಸಂಸದರಾಗಿದ್ದ ಮಿಥುನ್, ಮಾರ್ಚ್ 7ರಂದು ಪ್ರಧಾನಿ ನರೇಂದ್ರ ಮೋದಿ ಕೊಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆಸಿದ ರ‍್ಯಾಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ಮಿಥುನ್ ಚಕ್ರವರ್ತಿ ಸ್ಪರ್ಧಿಸುತ್ತಿದ್ದಾರೆಯೇ ಎಂದು ಕೇಳಿದಾಗ, ದಾದಾ ಅವರು ಸೂಪರ್ ಸ್ಟಾರ್. ಅವರು ಯಾವ ಸ್ಥಾನಕ್ಕೂ ಸೂಕ್ತವಾಗಿರುತ್ತಾರೆ. ಅವರು ಮತ್ತೆ ಸಕ್ರಿಯವಾಗಿರುವುದನ್ನು ನೋಡಿ ಖುಷಿಯಾಗುತ್ತಿದೆ ಎಂದಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಪಕ್ಷ ಹೇಳಿದರೆ ನಾನು ಸ್ಪರ್ಧಿಸುವೆ ಎಂದು ಸಂದರ್ಶನವೊಂದರಲ್ಲಿ ಮಿಥುನ್ ಚಕ್ರವರ್ತಿ ಹೇಳಿದ್ದರು. ಅದೇ ವೇಳೆ ಚುನಾವಣೆ ಸ್ಪರ್ಧಿಸಲು ಮಿಥುನ್ ಚಕ್ರವರ್ತಿ ನಿರಾಕರಿಸಿದ್ದರು. ಆದರೆ ಪಕ್ಷ ಹೇಳಿದರೆ ನಾನು ಅವರ ಜತೆ ಮಾತನಾಡುವೆ ಎಂದು ಬಿಜೆಪಿಯ ಕಾರ್ಯದರ್ಶಿ ಮತ್ತು ಪಶ್ಚಿಮ ಬಂಗಾಳದ ಉಸ್ತುವಾರಿ ಕೈಲಾಶ್ ವಿಜಯ್ ವರ್ಗೀಯ ಹೇಳಿದ್ದರು.
ಕಳೆದ ವಾರ ಬಿಜೆಪಿ ಕಾಶೀಪುರ್ ಬೆಲ್ಗಾಚಿಯಾ ವಿಧಾನಸಭಾ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರು ಪ್ರಕಟಿಸಿತ್ತು. ಈ ಪೈಕಿ ಕಾಶೀಪುರ್ ಬೆಲ್ಗಾಚಿಯಾದ ಅಭ್ಯರ್ಥಿ ತಪನ್ ಸಾಹಾ, ಚುನಾವಣೆಯಲ್ಲಿ ನಾನು ಸ್ಪರ್ಧಿಸಲಾರೆ. ನಾನು ಬಿಜೆಪಿ ಪಕ್ಷಕ್ಕೆ ಸೇರಿಲ್ಲ ಎಂದು ಹೇಳಿದ್ದರು. ಈ ಬೆಳವಣಿಗೆ ಬಿಜೆಪಿಗೆ ಮುಜುಗರವನ್ನುಂಟು ಮಾಡಿತ್ತು. ಮಿಥುನ್ ಚಕ್ರವರ್ತಿ ಅವರು ಇದೀಗ ಅದೇ ಕ್ಷೇತ್ರದ ಮತದಾರರಾಗಿರುವ ಕಾರಣ ಖಾಲಿಯಿರುವ ಅಭ್ಯರ್ಥಿ ಸ್ಥಾನ ಮಿಥುನ್ ಅವರಿಗೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮಿಥುನ್ ದಾ ಅವರು ಕೊಲ್ಕತ್ತಾದ ಮತದಾರರಾಗಿದ್ದಾರೆ ಎಂದ ಮಾತ್ರಕ್ಕೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದರ್ಥವಲ್ಲ. ಈ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ ಎಂದು ಬಿಜೆಪಿಯ ಹಿರಿಯ ನೇತಾರ, ರಾಜ್ಯಸಭೆಯ ಮಾಜಿ ಸದಸ್ಯ ಸ್ವಪನ್ ದಾಸ್ ಗುಪ್ತಾ ಹೇಳಿದ್ದಾರೆ.
ಇದನ್ನೂ ಓದಿ: West Bengal Elections 2021: ಮೇ 2ರಂದು ಮಮತಾ ಬ್ಯಾನರ್ಜಿಯನ್ನು ಜನರು ಬಂಗಾಳದಿಂದ ಹೊರಗೆ ಕಳಿಸಲಿದ್ದಾರೆ: ನರೇಂದ್ರ ಮೋದಿ