AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI campaign: ಜ. 1ರಿಂದ ಬ್ಯಾಂಕ್ ಗ್ರಾಹಕರ ದೂರುಗಳ ಶೀಘ್ರ ವಿಲೇವಾರಿಗೆ ಎರಡು ತಿಂಗಳ ಅಭಿಯಾನ

RBI to start 2 month campaign from Jan 1st to resolve ombudsman grievances: ಆರ್​ಬಿಐನ ಒಂಬುಡ್ಸ್​ಮನ್ ಬಳಿ ಒಂದು ತಿಂಗಳಿಗಿಂತ ಹೆಚ್ಚು ಕಾಲದಿಂದ ಬಾಕಿ ಇರುವ ದೂರುಗಳನ್ನು ಇತ್ಯರ್ಥಪಡಿಸಲು ಅಭಿಯಾನ ನಡೆಯಲಿದೆ. ಜನವರಿ 1ರಿಂದ ಫೆಬ್ರುವರಿ 28ರವರೆಗೆ ಎರಡು ತಿಂಗಳ ಅಭಿಯಾನ ನಡೆಸುವುದಾಗಿ ಆರ್​ಬಿಐ ಹೇಳಿದೆ. ಆರ್​ಬಿಐ ಎಂಪಿಸಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಗವರ್ನರ್ ಸಂಜಯ್ ಮಲ್ಹೋತ್ರಾ ಈ ವಿಚಾರ ತಿಳಿಸಿದ್ದಾರೆ.

RBI campaign: ಜ. 1ರಿಂದ ಬ್ಯಾಂಕ್ ಗ್ರಾಹಕರ ದೂರುಗಳ ಶೀಘ್ರ ವಿಲೇವಾರಿಗೆ ಎರಡು ತಿಂಗಳ ಅಭಿಯಾನ
ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 05, 2025 | 1:20 PM

Share

ನವದೆಹಲಿ, ಡಿಸೆಂಬರ್ 5: ಆರ್​ಬಿಐ ಈಗ ಗ್ರಾಹಕರ ಸೇವೆಗೆ ಅತಿಹೆಚ್ಚು ಅದ್ಯತೆ ಕೊಡಲು ನಿರ್ಧರಿಸಿದೆ. ಆರ್​ಬಿಐ ಒಂಬುಡ್ಸ್​ಮೆನ್ (RBI Ombudsman) ಬಳಿ ಒಂದು ತಿಂಗಳಿಗಿಂತ ಹೆಚ್ಚು ಕಾಲದಿಂದ ಬಾಕಿ ಉಳಿದಿರುವ ಎಲ್ಲಾ ದೂರುಗಳನ್ನು (grievances) ಶೀಘ್ರ ಇತ್ಯರ್ಥ ಪಡಿಸಲು ಎರಡು ತಿಂಗಳ ಅಭಿಯಾನ (campaign) ಕೈಗೊಳ್ಳಲಿದೆ. 2026ರ ಜನವರಿಯಿಂದ ಫೆಬ್ರುವರಿವರೆಗೆ ಎರಡು ತಿಂಗಳ ಕಾಲ ಈ ಅಭಿಯಾನ ಇರಲಿದೆ. ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಎಂಪಿಸಿ ಸಭೆಯ (RBI MPC Meet) ನಿರ್ಧಾರಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

‘ನಾವು ಗ್ರಾಹಕ ಸೇವೆಗಳನ್ನು ಸುಧಾರಿಸಲು ಗಮನ ಹರಿಸಿದ್ದೇವೆ. ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಮರು ಕೆವೈಸಿ, ಹಣಕಾಸು ಒಳಗೊಳ್ಳುವಿಕೆ ಮತ್ತು ನಿಮ್ಮ ಹಣ ನಿಮ್ಮ ಅಧಿಕಾರ ಅಭಿಯಾನಗಳು ಇಂಥ ಕೆಲ ಕ್ರಮಗಳಾಗಿವೆ. ಈ ವರ್ಷದ ಆರಂಭದಲ್ಲಿ ನಮ್ಮ ಸಿಟಿಜನ್ ಚಾರ್ಟರ್ ಅನ್ನೂ ಪರಾಮರ್ಶಿಸಿದ್ದೇವೆ. ನಮ್ಮ ಎಲ್ಲಾ ಸೇವೆಗಳಿಗೆ ಅರ್ಜಿಗಳನ್ನು ಆನ್​ಲೈನ್​ನಲ್ಲೇ ನೀಡಿದ್ದೇವೆ. ಸಮಸ್ಯೆ ಇತ್ಯರ್ಥಪಡಿಸಲಾಗಿರುವುದರ ವಿವರವನ್ನು ಪ್ರತೀ ತಿಂಗಳು ನೀಡುತ್ತಿದ್ದೇವೆ. ಬಾಕಿ ಉಳಿದಿರುವ ಅರ್ಜಿಗಳನ್ನು ಪ್ರತೀ ತಿಂಗಳ ಮೊದಲ ತಾರೀಖಿನಿಂದು ಪ್ರಕಟಿಸುತ್ತಿದ್ದೇವೆ’ ಎಂದು ಸಂಜಯ್ ಮಲ್ಹೋತ್ರಾ ಅವರು ಆರ್​ಬಿಐನಿಂದ ತೆಗೆದುಕೊಳ್ಳಲಾಗಿರುವ ಗ್ರಾಹಕ ಕೇಂದ್ರಿತ ಕ್ರಮಗಳ ವಿವರ ನೀಡಿದ್ದಾರೆ

ಇದನ್ನೂ ಓದಿ: ಆರ್​ಬಿಐನಿಂದ ಲಕ್ಷ ಕೋಟಿ ರೂ ಒಎಂಒ ಖರೀದಿ; 5 ಬಿಲಿಯನ್ ಡಾಲರ್ ಕರೆನ್ಸಿ ಖರೀದಿಗೆ ನಿರ್ಧಾರ; ಏನಿದರ ಮಹತ್ವ

ಎರಡು ತಿಂಗಳ ಅಭಿಯಾನ

‘ಆರ್​ಬಿಐ ನಿಯಂತ್ರಿತವಾಗಿರುವ ಎಲ್ಲಾ ಹಣಕಾಸು ಸಂಸ್ಥೆಗಳೂ ಕೂಡ ತಮ್ಮ ನೀತಿ ಮತ್ತು ಕಾರ್ಯಾಚರಣೆಗಳಲ್ಲಿ ಗ್ರಾಹಕರಿಗೆ ಆದ್ಯತೆ ಕೊಡಬೇಕು. ಗ್ರಾಹಕ ಸೇವೆ ಸುಧಾರಿಸಬೇಕು ಮತ್ತು ಸಮಸ್ಯೆಗಳನ್ನು ಕಡಿಮೆಗೊಳಿಸಬೇಕು. ಮುಂದಿನ ವರ್ಷದ ಜನವರಿ 1ರಿಂದ ಎರಡು ತಿಂಗಳ ಅಭಿಯಾನ ನಡೆಸಲು ಉದ್ದೇಶಿಸಿದ್ದೇವೆ. ಆರ್​ಬಿಐ ಒಂಬುಡ್ಸ್​ಮೆನ್ (ಸಾರ್ವಜನಿಕ ತನಿಖಾಧಿಕಾರಿ) ಬಳಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಬಾಕಿ ಇರುವ ದೂರುಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲಾ ಸಂಸ್ಥೆಗಳೂ ಸಹಕರಿಸಬೇಕು ಎಂದು ನಿರೀಕ್ಷಿಸುತ್ತೇನೆ’ ಎಂದು ಆರ್​ಬಿಐ ಗವರ್ನರ್ ಹೇಳಿದ್ದಾರೆ.

ಆರ್​ಬಿಐ ಒಂಬುಡ್ಸ್ಮನ್ ಎಂಬುದು ಬ್ಯಾಂಕ್ ಗ್ರಾಹಕರು ನೀಡುವ ದೂರುಗಳನ್ನು ತನಿಖೆ ನಡೆಸಿ ನ್ಯಾಯ ಕೊಡಿಸಲು ಇರುವ ಒಂದು ನ್ಯಾಯವ್ಯವಸ್ಥೆ. ಗ್ರಾಹಕರ ಸಮಸ್ಯೆ ಬಗೆಹರಿಸಲು ಬ್ಯಾಂಕು ವಿಫಲವಾದರೆ, ಅಥವಾ ಬ್ಯಾಂಕ್ ಕ್ರಮದಿಂದ ಸಮಾಧಾನ ಸಿಗದ ಗ್ರಾಹಕರು ಆರ್​ಬಿಐನ ಒಂಬುಡ್ಸ್​ಮನ್​ಗೆ ದೂರು ಕೊಡುವ ಅವಕಾಶ ಇರುತ್ತದೆ. ಈ ಒಂಬುಡ್ಸ್​ಮನ್​ಗೆ ಸ್ವಾಯತ್ತ ಅಧಿಕಾರ ಇರುತ್ತದೆ. ಬ್ಯಾಂಕುಗಳ ವಿರುದ್ಧ ಗ್ರಾಹಕರು ನೀಡುವ ದೂರನ್ನು ಪರಿಶೀಲಿಸಿ, ನ್ಯಾಯಯುತವಾಗಿ ವ್ಯಾಜ್ಯಕ್ಕೆ ಪರಿಹಾರ ಕೊಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ